
ಶೇಕ್ಸಪಿಯರನ ಶ್ರೀಮತಿಯಾಗಿ ರಂಗಕಲಾವಿದೆ ಲಕ್ಷ್ಮೀ ಚಂದ್ರಶೇಖರ
Shakespeare and Anne Hathaway : 72ರ ಹರೆಯದ ರಂಗಕಲಾವಿದೆ ಪ್ರೊ. ಲಕ್ಷ್ಮೀ ಚಂದ್ರಶೇಖರ್, ಶೇಕ್ಸ್ಪಿಯರನ ಶ್ರೀಮತಿ ಆ್ಯನ್ ಹಾಥ್ವೇಯನ್ನು ಆವಾಹಿಸಿಕೊಳ್ಳುವ ಮೊದಲು ಅಂತರಂಗದೊಳಗೆ ಆಕೆ ಹೇಗೆಲ್ಲ ಕಾಡಿದಳು ಎಂಬುದನ್ನಿಲ್ಲಿ ಹಂಚಿಕೊಂಡಿದ್ದಾರೆ.
ಅಂಕಪರದೆ | Ankaparade : ‘ಲೇಡಿ ಮೈನಸ್ ಮ್ಯಾಕ್ಬೆತ್’ ಅಭಿನಯಿಸಿ ಐದಾರು ವರ್ಷಗಳ ಮೇಲಾಯಿತು. ನಂತರ ಮತ್ತೆ ಏಕವ್ಯಕ್ತಿ ರಂಗಪ್ರಯೋಗ ಮಾಡುತ್ತೇನೆ ಎಂದುಕೊಂಡಿರಲಿಲ್ಲ. ಆದರೆ ಲೇಖಕ ಉದಯ ಇಟಗಿ, ‘ ಏಕವ್ಯಕ್ತಿ ರಂಗಪ್ರಯೋಗಕ್ಕಾಗಿ ನಾಟಕ ಬರೆದಿದ್ದೇನೆ. ಅದನ್ನು ನೀವು ಮಾಡಬಹುದಾ? ಎಂದು ಫೇಸ್ಬುಕ್ನಲ್ಲಿ ಮೆಸೇಜ್ ಹಾಕಿದರು. ‘ಸ್ಕ್ರಿಪ್ಟ್ ಇಷ್ಟವಾದರೆ ಮಾಡುತ್ತೇನೆ’ ಎಂದೆ. ಆತನಕ ಎಷ್ಟೋ ವರ್ಷಗಳಿಂದ ಕಾಲೇಜಿನಲ್ಲಿ ಶೇಕ್ಸಪಿಯರನ ಬೇರೆ ಬೇರೆ ನಾಟಕಗಳನ್ನು ಮಕ್ಕಳಿಗೆ ಪಾಠ ಮಾಡುತ್ತಾ ಬಂದವಳು. ಎಷ್ಟೋ ಬಾರಿ ಸ್ತ್ರೀವಾದಿ ದೃಷ್ಟಿಕೋನದಿಂದ ಅವನು ಸೃಷ್ಟಿಸಿದ ಪಾತ್ರಗಳನ್ನು ವಿಶ್ಲೇಷಿಸುತ್ತ ಬಂದವಳು. ಶೇಕ್ಸಪಿಯರ್ ಒಬ್ಬ ಬರಹಗಾರನಾಗಿ ಎಷ್ಟೇ ಮಾನವತಾವಾದಿಯಾಗಿದ್ದರೂ ಮತ್ತು ಪ್ರಗತಿಪರ ದೃಷ್ಟಿಕೋನದಿಂದ ಆಲೋಚನೆ ಮಾಡಿದರೂ ಅವನು ಎಲಿಜಬೆತ್ ಯುಗದ ಒಬ್ಬ ಗಂಡಾಗಿ ಅವನ ಪೂರ್ವಗ್ರಹಗಳೇನಿರುತ್ತವೆಯೋ ಅವು ಅಲ್ಲಿ-ಇಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಉದಾಹರಿಸುತ್ತಲೇ ಬಂದವಳು. ಹಾಗಾಗಿ ನನಗೆ ಈ ಶೇಕ್ಸಪಿಯರನ ಸ್ತ್ರೀ ಪಾತ್ರಗಳ ವಿಶ್ಲೇಷಣೆ ಬಗ್ಗೆ ತುಂಬಾ ವಿಶೇಷವಾದ ಆಸಕ್ತಿ ಇತ್ತು. ಮತ್ತೀಗ ಇಲ್ಲಿ ಪಾತ್ರವಾಗಿ ಹರಿದೆ.
ಪ್ರೊ. ಲಕ್ಷ್ಮೀ ಚಂದ್ರಶೇಖರ, ಪ್ರಾಧ್ಯಾಪಕಿ, ರಂಗಕಲಾವಿದೆ (Lakshim Chandrashekhar)
‘ಬರೆಯುವಾಗ ಒಮ್ಮೊಮ್ಮೆ ಅತಿ ಗಂಭೀರವಾಗಿ ಯೋಚಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಏನನ್ನೋ ಗುನುಗುನಿಸುತ್ತಾ ಬರೆಯುತ್ತಿದ್ದ. ಒಮ್ಮೊಮ್ಮೆ ಬಿಟ್ಟ ಕಣ್ಣನ್ನು ಹಾಗೆ ಬಿಟ್ಟು ಎಲ್ಲೋ ನೋಡುತ್ತಾ ಕುಳಿತುಬಿಡುತ್ತಿದ್ದ. ನಾನು ಅಯ್ಯೋ, ದೇವರೆ! ಏನಾಯಿತು ಇವನಿಗೆ? ಎಂದು ಹತ್ತಿರ ಹೋಗಿ ಅವನ ಭುಜ ಅಲ್ಲಾಡಿಸಿದರೆ ಶ್! ಸುಮ್ಮನಿರು. ನಾನು ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದಿದ್ದೇನೆ. ಅದರ ಆಳಕ್ಕೆ ಇಳಿದು ನೋಡುತ್ತಿದ್ದೇನೆ. ಇನ್ನೇನು ಹೊಳೆದುಬಿಡುತ್ತೆ, ಬರೆದುಬಿಡುತ್ತೇನೆ ಸುಮ್ಮನಿರು. ಬರೆದಾದ ಮೇಲೆ ನಾನೊಬ್ಬನೇ ಅಲ್ಲ ಬರಹಗಾರರೆಲ್ಲಾ ಹೀಗೆ ಬರೆಯೋದು ಎಂದು ತನ್ನನ್ನು ಸಮರ್ಥಿಸಿಕೊಳ್ಳಲು ನೋಡುತ್ತಿದ್ದ. ನಾನದಕ್ಕೆ ಈ ಬರಹಗಾರರು ತಮ್ಮ ಪಾತ್ರಗಳೊಂದಿಗೆ ಸಂವಾದಕ್ಕಿಳಿಯೋ ಬದಲು, ಅವುಗಳಲ್ಲಿ ಇಣುಕಿ ನೋಡೋ ಬದಲು, ಒಮ್ಮೆ ತಮ್ಮೊಂದಿಗೆ ತಾವು ಸಂವಾದಕ್ಕಿಳಿಯಬಾರದೇಕೆ? ತಮ್ಮೊಳಗೆ ತಾವು ಇಣುಕಿ ನೋಡಿಕೊಳ್ಳಬಾರದೇಕೆ? ಎಂದು ಕೇಳಿದ್ದೆ. ಅದಕ್ಕವನು ಪ್ಯಾಲಿಯಂತೆ ನಕ್ಕಿದ್ದ.’
(‘ಶೇಕ್ಸಪಿಯರನ ಶ್ರೀಮತಿ’ಯಿಂದ)
ಆನ್ ಹ್ಯಾಥ್ವೇ ಬಗ್ಗೆ ಏನೇನೋ ಕಥೆಗಳಿದ್ದವು. ಅವಳು ಒಬ್ಬ ಘಾಟಿ ಹೆಂಗಸು. ಅವಳ ಜೊತೆ ಬಾಳಲಾರದೆ ಶೇಕ್ಸಪಿಯರ್ ಲಂಡನ್ಗೆ ಓಡಿಹೋದ ಅಂತೆಲ್ಲಾ ಈ ಪುರುಷ ವಿಮರ್ಶಕರು ಬರೆದಿದ್ದನ್ನೇ ನಂಬಿಕೊಂಡು ಬಂದವರು ನಾವೆಲ್ಲಾ. ಆದರೆ ಈ ನಾಟಕ ಓದಿದಾಗ ಹೌದಲ್ವಾ? ಅದನ್ಯಾಕೆ ಪ್ರಶ್ನೆ ಮಾಡಲಿಲ್ಲ ಅಂತಾ ನನಗೆ ಅನಿಸೋಕೆ ಶುರುವಾಯಿತು. ಅವನ ಪಾತ್ರಗಳನ್ನು ವಿಶ್ಲೇಷಣೆ ಮಾಡಿದವಳು ನಾನು, ಆದರೆ ಅವನ ಹೆಂಡತಿಯ ಬಗ್ಗೆ ಯಾಕೆ ವಿಶ್ಲೇಷಣೆ ಮಾಡಲಿಲ್ಲ ಅಂತ ಅನಿಸೋಕೆ ಶುರುವಾಯಿತು. ಆಮೇಲೆ ಉದಯ ಇಟಗಿ ಅವರ ನಾಟಕ ಓದಿದ ಮೇಲೆ ಶೇಕ್ಸಪಿಯರನ ಹೆಂಡತಿಯ ಮೇಲೆ ಬೇರೆ ಏನೇನು ಬರೆದಿದ್ದಾರೆ ಎಂದು ಗೂಗಲ್ನಲ್ಲಿ ನೋಡುವಾಗ ನನಗೆ ಜರ್ಮನ್ ಗ್ರೇರಳ ‘ಶೇಕ್ಸಪಿಯರ್ಸ್ ವೈಫ್’ ಪುಸ್ತಕ ಸಿಕ್ಕಿತು. ಅದನ್ನು ತರಿಸಿಕೊಂಡು ಓದಿದೆ. ಜರ್ಮನ್ ಗ್ರೇರ್ ಎಲಿಜಬೆತ್ನ ಕಾಲದ ಹೆಣ್ಣುಮಕ್ಕಳ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಅದರಲ್ಲೂ ಶೇಕ್ಸಪಿಯರನ ಹೆಂಡತಿಯ ಬಗ್ಗೆ ಹೆಚ್ಚು ಅಧ್ಯಯನ ಮಾಡಿ ಈ ಪುಸ್ತಕವನ್ನು ಬರೆದಿದ್ದಾಳೆ. ಅದರಲ್ಲಿ ಬಹಳ ಆಸಕ್ತಿದಾಯಕ ಸಂಗತಿಗಳಿದ್ದವು. ಜೊತೆಗೆ ಅಂದಿನ ಹೆಣ್ಣುಮಕ್ಕಳ ಜೀವನ ಹೇಗಿತ್ತು? ಅನ್ನುವುದನ್ನೂ ಸಹ ಹೇಳಿದ್ದಾಳೆ.