ಕಲಬುರಗಿ: ಅಂತರರಾಜ್ಯ ಖತರ್ನಾಕ ಕಳ್ಳನನ್ನು ಬಂಧಿಸುವಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸೆಂಬರ್ 18 ರಂದು ಜಿಲ್ಲೆಯ ಸುಪ್ರಸಿದ್ಧ ಗಾಣಗಾಪುರದ ದತ್ತಾತ್ರೇಯ ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರ ಚಿನ್ನದ ಸರಗಳನ್ನು ಕದ್ದು ಎಸ್ಕೇಪ್ ಆಗಿದ್ದ ಕಿಲಾಡಿ ಕಳ್ಳನನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ.
ಮಹಾರಾಷ್ಟ್ರ ಮೂಲದ ವ್ಯಕ್ತಿ ನಾಥುಲಾಲ್ ಗಾಯಕವಾಡ್ (46) ಬಂಧಿತ ಆರೋಪಿ. ಈತ ಕಳೆದ ಡಿ.18 ರಂದು ದತ್ತ ಉತ್ಸವಕ್ಕೆ ಆಗಮಿಸಿದ್ದ. ಆಂಧ್ರ ಮೂಲದ ವೆಂಕಟೇಶ್ಗೆ ಸೇರಿದ ಎರಡು ಚಿನ್ನದ ಸರ ಮತ್ತು ಬಂಗಾರದ ಮಂಗಲಸೂತ್ರ ಹಾಗೂ ಮಹಾರಾಷ್ಟ್ರದ ಪುಣೆ ಮೂಲದ ವಿಕಾಸ್ ಎಂಬುವರಎರಡು ಚಿನ್ನದ ಚೈನ್ ಕಳ್ಳತನ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೋಲಿಸರು ನಿನ್ನೆ ಆರೋಪಿ ಗಾಯಕವಾಡನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ 8 ಲಕ್ಷ 20 ಸಾವಿರ ಮೌಲ್ಯದ 180 ಗ್ರಾಂ ಚಿನ್ನಾಭರಣ ವಶಪಡೆಸಿಕೊಂಡಿದ್ದಾರೆ. ಇಲಾಖೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್ಐ ರಾಜಶೇಖರ ರಾಠೋಡ್ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.