ಅಂತಾರಾಜ್ಯ ಕಳ್ಳತನ ಮಾಡುತ್ತಿದ್ದ ಖತರ್ನಾಕ್.. ಏರ್​ಫೋರ್ಸ್ ಕಾಂಪೌಂಡ್​​ ಹಾರಲು ಹೋಗಿ ಸಿಕ್ಕಿಬಿದ್ದ

ಅಂತಾರಾಜ್ಯ ಕಳ್ಳತನ ಮಾಡುತ್ತಿದ್ದ ಖತರ್ನಾಕ್.. ಏರ್​ಫೋರ್ಸ್ ಕಾಂಪೌಂಡ್​​ ಹಾರಲು ಹೋಗಿ ಸಿಕ್ಕಿಬಿದ್ದ

ಬೆಂಗಳೂರು: ಆತ ಕಳ್ಳತನ ಮಾಡೋದ್ರಲ್ಲಿ ಎಕ್ಸ್​ಪರ್ಟ್. ತಾನೆಲ್ಲಿ ಕಳ್ಳತನ ಮಾಡ್ತೀನಿ ಅನ್ನುವುದರ ಕಿಂಚಿತ್ತು ಸುಳಿವೂ ಕೂಡ ಆತನಿಗೇ ಇರ್ತಿರ್ಲಿಲ್ಲ. ಎಲ್ಲಿ ತನಗೆ ಹೊಳೆಯುತ್ತೋ ಅಲ್ಲಿಗೆ ಲಗ್ಗೆ ಇಟ್ಟು ಸಿಕ್ಕ ಸಿಕ್ಕದ್ದನ್ನೆಲ್ಲಾ ಕದಿಯುತ್ತಿದ್ದ. ಆದ್ರೆ ಈ ಬಾರಿ ಆ ಚಾಲಾಕಿ ಖದೀಮ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಅಂತಿಂತ ಸ್ಥಳವಲ್ಲ.. ನಿಷೇಧಿತ ಜಾಗ.

ಈತನ ಹೆಸರು ಸೈಯದ್ ಅಸ್ಲಾಂ. ಕಳ್ಳತನವನ್ನೇ ಕುಲಕಸುಬು ಮಾಡಿಕೊಂಡಿದ್ದ ಈತನ ಕೈಚಳಕ ನೋಡಿ. ಹೇಗೆ ಲಕ್ಷ ಲಕ್ಷ ಬೆಲೆ ಬಾಳೋ ಚಿನ್ನಾಭರಣ ಕದ್ದಿದ್ದಾನೆ ಅಂತ. ಅದಲ್ದೇ, ಲ್ಯಾಪ್​​ಟಾಪ್, ಮೊಬೈಲ್, ಕ್ಯಾಮೆರಾ ಸಹ ಈತನ ಕೈಚಳಕಕ್ಕೆ ಸಾಕ್ಷಿಯಾಗಿವೆ.
ಹೌದು, ಕಳೆದ ಮೇ 20ರಂದು ರಾತ್ರಿ 8 ಗಂಟೆ ಸುಮಾರಿಗೆ ಭಾರತೀಯ ವಾಯುಸೇನೆಯ ಆವರಣಕ್ಕೆ ಅತಿಕ್ರಮಣವಾಗಿ ಎಂಟ್ರಿ ಕೊಟ್ಟಿದ್ದ.

ಏರ್​​ಫೋರ್ಸ್​ ​ಕಾಂಪೌಂಡ್​ ಜಿಗಿದು, ಒಳಗಿರೋ ಕಚೇರಿ ಹಾಗೂ ಮನೆಗಳಲ್ಲಿ ಕಳ್ಳತನ ಮಾಡೋಕೆ ಮುಂದಾಗಿದ್ದ. ಇದು ನಿಷೇಧಿತ ಜಾಗ ಅನ್ನೋ ಕಿಂಚಿತ್ತೂ ಸುಳಿವು ಕೂಡ ಈತನಿಗಿರಲಿಲ್ಲ. ಗೋಡೆ ಜಂಪ್ ಮಾಡೋ ಭರದಲ್ಲಿ ಕೆಳಗೆ ಬಿದ್ದ ಸೈಯದ್ ಅಸ್ಲಾಂ, ತನ್ನ ಬಲಗಾಲು ಹಾಗೂ ಸೊಂಟ ಮುರಿದುಕೊಂಡಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಮಿಲಿಟರಿ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ಸ್ಥಳಕ್ಕೆ ಬಂದ ಗಂಗಮ್ಮಗುಡಿ ಪೊಲೀಸ್ರು, ಗಾಯಾಳು ಆರೋಪಿಯನ್ನ ರಾಜಲಕ್ಷ್ಮೀ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಹಿಂದೆ 2016ರಲ್ಲಿ ಜೈಲು ಶಿಕ್ಷೆ ಅನುಭವಿಸಿ 2020ರಲ್ಲಿ ಸೈಯದ್ ಅಸ್ಲಾಂ ರಿಲೀಸ್ ಆಗಿದ್ದ. ಈ ಹಿಂದೆ ಬೆಂಗಳೂರಿನ ಜೆ.ಸಿ. ನಗರ, ಹಲಸೂರು, ಯಶವಂತಪುರ, ಮೈಕೋಲೇಔಟ್, ಫ್ರೇಜರ್ ಟೌನ್, ಉಪ್ಪಾರ ಪೇಟೆ, ಭಾರತೀನಗರ ಸೇರಿದಂತೆ ಹಲವು ಕಡೆ ತನ್ನ ಕೈಚಳಕ ತೋರಿಸಿದ್ದ. ಅದಲ್ದೇ ಬೆಂಗಳೂರು ಮಾತ್ರವಲ್ಲದೇ ಬಳ್ಳಾರಿ, ಕಲಬುರಗಿ, ಚಿತ್ರದುರ್ಗ, ಮೈಸೂರಿನ ಠಾಣೆಗಳಲ್ಲೂ ಈತನ ಮೇಲೆ ಕೇಸ್​ಗಳಿವೆ. ಇದೀಗ ಆರೋಪಿಯ ಬಂಧನದಿಂದ ಸಂಜಯನಗರದಲ್ಲಿ 3 ಕೇಸ್, ಆರ್​ಟಿ ನಗರದಲ್ಲಿ 1 ಕೇಸ್, ಮೈಸೂರು ನಗರದಲ್ಲಿ ಒಂದು ಕೇಸ್ ಸೇರಿದಂತೆ ಹೊಸ 5 ಪ್ರಕರಣಗಳು ದಾಖಲಾಗಿದೆ.

ಸದ್ಯ ಆರೋಪಿಯನ್ನ ಬಂಧಿಸಿರೋ ಗಂಗಮ್ಮಗುಡಿ ಪೊಲೀಸರು ಬಂಧಿತನಿಂದ 17 ಲಕ್ಷ ರೂಪಾಯಿ ಮೌಲ್ಯದ 342 ಗ್ರಾಂ. ಚಿನ್ನಾಭರಣ, ಒಂದು ಲ್ಯಾಪ್​​ಟ್ಯಾಪ್, 1 ಕ್ಯಾಮೆರಾ, 1 ಮೊಬೈಲ್ ಫೋನ್​ ವಶಪಡಿಸಿಕೊಂಡಿದ್ದಾರೆ. ಒಟ್ನಲ್ಲಿ ಉಪ್ಪು ತಿಂದವನು ನೀರು ಕುಡಿಯಲೇಬೇಕು ಅನ್ನೋ ಹಾಗೆ ಕಳ್ಳತನಕ್ಕೆ ಇಳಿದು ಇದೀಗ ನಡೆಯಲು ಆಗದೇ ಪರದಾಡುವಂತಾಗಿದೆ.

The post ಅಂತಾರಾಜ್ಯ ಕಳ್ಳತನ ಮಾಡುತ್ತಿದ್ದ ಖತರ್ನಾಕ್.. ಏರ್​ಫೋರ್ಸ್ ಕಾಂಪೌಂಡ್​​ ಹಾರಲು ಹೋಗಿ ಸಿಕ್ಕಿಬಿದ್ದ appeared first on News First Kannada.

Source: newsfirstlive.com

Source link