ಕ್ರಿಕೆಟಿಗರು ಸಾಮಾನ್ಯವಾಗಿ ನಿವೃತ್ತಿ ಹೊಂದಿದ ಬಳಿಕ ಕೋಚ್​​, ಮೆಂಟರ್, ಆಡ್ಮಿನಿಸ್ಟ್ರೇಟರ್​ ಅಥವಾ ತಂಡದ ಯಾವುದಾದರೂ ಒಂದು ಹುದ್ದೆಯಲ್ಲಿ ಇರಲು ಬಯಸುತ್ತಾರೆ. ಅದರ ಹೊರತಾಗಿ ಬಿಸಿನೆಸ್​​ ಮಾಡೋದಕ್ಕೂ ಮುಂದಾಗುತ್ತಾರೆ. ಆದರೆ ಈ ಆಸ್ಟ್ರೇಲಿಯಾ ಕ್ರಿಕೆಟಿಗ ಎಲ್ಲರಿಗಿಂತ ವಿಭಿನ್ನ. ಹೌದು..! ಕ್ರಿಕೆಟ್​ ಬದುಕು ಮುಗಿಸಿದ ಬಳಿಕ ಮೇಲಿನ ಹುದ್ದೆಗಳಿಗೆ ಆಸೆ ಪಡದೆ ಕಾರ್ಪೆಂಟರ್​ ಆಗಿ ಮತ್ತೊಂದು ಇನ್ನಿಂಗ್ಸ್​ ಶುರು ಮಾಡಿದ್ದಾರೆ. ಆಸಿಸ್​​ ಕ್ರಿಕೆಟಿಗನ ಹೆಸರು ಕ್ಸೇವಿಯರ್​​ ಡೋಹಾರ್ಟಿ.

ಮೈದಾನದಲ್ಲಿ ಅಚ್ಚುಕಟ್ಟಿನ ಬೌಲಿಂಗ್​ ಮೂಲಕ ಎದುರಾಳಿ ಬ್ಯಾಟ್ಸ್​​​ಮನ್​​​ಗೆ ಕಾಡುತ್ತಿದ್ದ ಡೋಹಾರ್ಟಿ, ಇದೀಗ ಮನೆಯ ಅಲಂಕಾರಿಕ ವಸ್ತುಗಳು, ಫಿಠೋಪಕರಣಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಕುರ್ಚಿ, ಮಂಚ, ಮರದ ಪ್ಯಾಲೇಟ್​​, ಟೇಬಲ್​… ಹೀಗೆ ವಿವಿಧ ರೀತಿಯ ಫೀಠೋಪಕರಣಗಳ ತಯಾರಿಕೆ ಮಾಡುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಡೋಹಾರ್ಟಿ, ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಮುಂದಿನ ಭವಿಷ್ಯದ ಬಗ್ಗೆ ದಿಕ್ಕು ತೋಚಲಿಲ್ಲ. ಹೀಗೆ ಒಂದು ವರ್ಷದ ಸಮಯವನ್ನು ವ್ಯರ್ಥ ಮಾಡಿದೆ. ಸಿಕ್ಕ ಸಿಕ್ಕ ಕೆಲಸಗಳನ್ನೆಲ್ಲಾ ಮಾಡತೊಡಗಿದೆ. ಕ್ರಿಕೆಟ್​ಗೆ ಸಂಬಂಧಿಸಿದ, ಆಫೀಸ್​ ಕೆಲಸ, ಮನೆ ಕೆಲಸಗಳಲ್ಲಿ ತೊಡಗಿಸಿಕೊಂಡೆ. ಕೊನೆಯದಾಗಿ ಈ ಕೆಲಸಕ್ಕೆ ಬಂದು ನಿಂತೆ ಎಂದು ಸಂತಸ ವ್ಯಕ್ತಪಡಿಸಿದರು. ಹಾಗೆಯೇ ಮಾತು ಮುಂದುವರೆಸಿದ ಎಡಗೈ ಸ್ಪಿನ್ನರ್​​, ಕ್ರಿಕೆಟ್​​ ಅಂತಿಮಗೊಂಡಾಗ ನಿಜಕ್ಕೂ ಗೊಂದಲಕ್ಕೆ ಒಳಗಾಗಿದ್ದೆ. ನಂತರದ ದಿನಗಳಲ್ಲಿ ಸುಗಮ ಜೀವನ ನಡೆಸಲು ಮುಂದೇನು ಎಂಬ ಪ್ರಶ್ನೆ ಎದುರಾಗಿತ್ತು. ನನ್ನ ಆಲೋಚನಾ ಲಹರಿ ಕೂಡ ವಿಭಿನ್ನವಾಗಿ ಬದಲಾಯಿತು. ಒಂದೆಡೆ ಗೊಂದಲ, ಒಂದೆಡೆ ಆತಂಕ. ಹೀಗಾಗಿ ಸಂಕಷ್ಟಕ್ಕೆ ಒಳಗಾಗಿದ್ದೆ. ಸದ್ಯ ಕಾರ್ಪೆಂಟರ್​​ ಆಗಿ ಹಾಯಾಗಿ ಇದ್ದೇನೆ. ನನ್ನ ಕನಸಿನ ಕೆಲಸವಾಗಿದ್ದು, ಜೀವನಾಧಕ್ಕೆ ಬೇಕಾದ ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದರು.

ಆಸ್ಟ್ರೇಲಿಯಾ ರಾಷ್ಟ್ರೀಯ ತಂಡದ ಪರ 60 ಏಕದಿನ ಪಂದ್ಯಗಳನ್ನು ಆಡಿರುವ ಈ ಸ್ಪಿನ್ನರ್​​​, 55 ವಿಕೆಟ್​ ಕಬಳಿಸಿದ್ದಾರೆ. ಹಾಗೆಯೇ 4 ಟೆಸ್ಟ್​ಗಳಲ್ಲಿ 7 ವಿಕೆಟ್​​, ಟಿ20ಯಲ್ಲಿ 10 ವಿಕೆಟ್​ ಪಡೆದಿದ್ದಾರೆ. 2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕಾಲಿಟ್ಟಿದ್ದ ಡೋಹಾರ್ಟಿ, 2015ರಲ್ಲಿ ಕ್ರಿಕೆಟ್​​ ಬದುಕಿಗೆ ವಿದಾಯ ಹೇಳಿದರು.

The post ಅಂದು ಕ್ರಿಕೆಟರ್..ಇಂದು ಕಾರ್ಪೆಂಟರ್​ ಆದ ಆಸಿಸ್​​ ಸ್ಪಿನ್ನರ್​..! appeared first on News First Kannada.

Source: newsfirstlive.com

Source link