ದೇಶ ಪ್ರೇಮ ಅನ್ನೋ ಶಕ್ತಿಗಿಂತ ಜಗತ್ತಿನಲ್ಲಿ ಯಾವ ಶಕ್ತಿಯೂ ದೊಡ್ಡದಿಲ್ಲ. ದೇಶ ಪ್ರೇಮ ಎದೆಯೊಳೆಗೆ ಇಳಿದು ಬಿಟ್ರೆ ಒಬ್ಬ ಸಾಮಾನ್ಯನು ಅಸಾಮಾನ್ಯ ವೀರಯೋಧನಾಗಿ ಬಿಡ್ತಾನೆ. 2019ರಲ್ಲಿ ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಯೋಧರೊಬ್ಬರ ಪತ್ನಿ ತನ್ನ ಪತಿಗೆ ಎರಡು ವರ್ಷದ ನಂತರ ಕೊಡ್ತಿರುವ ಉಡುಗೊರೆ ಎಂಥದ್ದು ಗೊತ್ತಾ.? ಆಕೆಯ ಉಡುಗೊರೆಗೆ ಇಡೀ ದೇಶವೇ ಸೆಲ್ಯೂಟ್ ಮಾಡ್ತಿದೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದರು ಮೇಜರ್ ವಿಭೂತಿ ಶಂಕರ್ ಧೌಂಡಿಯಾಲ್​. ಅಂದು ಅಳುತ್ತಾ ಮೌನದಲ್ಲೇ ಮಾತನಾಡುತ್ತಿದ್ದ ವಿಭೂತಿ ಶಂಕರ್ ಧೌಂಡಿಯಾಲ್ ಅವರ ಪತ್ನಿ ನಿತಿಕಾ ಕೌಲ್ ಈಗ ಬರಿ ಹೌಸ್ ವೈಫ್ ಅಲ್ಲ, ಭಾರತೀಯ ಸೇನೆಯ ಲೆಫ್ಟಿನೆಂಟ್.

Image

ಪತಿಯ ನೆನಪಿಗಾಗಿ ಸೈನ್ಯ ಸೇರಿದ ನಿತಿಕಾ ಕೌಲ್
ಅಂದು ಸಾಮಾನ್ಯ ಗೃಹಣಿ.. ಇಂದು ಲೆಫ್ಟಿನೆಂಟ್

ಅದು, ಫೆಬ್ರವರಿ 19 2019.. ಪಾಕಿಸ್ತಾನದ ನರಿ ಬುದ್ಧಿ ಉಗ್ರರ ಜೊತೆ ಕಾದಾಡಿ ವೀರ ಮರಣ ಹೊಂದಿದ ಪತಿಯ ಶವದ ಮುಂದೆ ಕಣ್ಣಿರಿಟ್ಟಿದ್ದರು ಆಕೆ. ತನ್ನ ಜೀವದ ಪ್ರೇಮಿ, ದೇಶ ಪ್ರೇಮಿಯಾಗಿ ಪ್ರಾಣತ್ಯಾಗ ಮಾಡಿದ್ನಲ್ಲ ಎಂದು ದುಃಖವಿದ್ದರೂ ಹೆಮ್ಮೆಯಿಂದಲೇ ಅವರು ನಿಂತಿದ್ದರು. ಹೂವಿನಿಂದ ಸಿಂಗರಿಸಿದ ಪೆಟ್ಟಿಗೆಯಲ್ಲಿ ಮೌನವಾಗಿ ಮಲಗಿದ್ದ ಹುತಾತ್ಮ ಪತಿಯನ್ನು ಕೆಲ ಕ್ಷಣಗಳ ಕಾಲ ನೋಡುತ್ತಲೇ ನಿಂತಿದ್ದರಾಕೆ. ಎಲ್ಲರಲ್ಲೂ ಕಣ್ಣೀರು ಕಡಲಾಗಿತ್ತು. ಮಳೆರಾಯ ಕೂಡ ಶೋಕಸಾಗರವನ್ನ ಹರಿಸುತ್ತಿದ್ದ. ಆಗ ಆಕೆ ಹೃದಯದಲ್ಲೇ ಆತನಿಗೆನೋ ಹೇಳುತ್ತಿದ್ದರು. ‘‘ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಪ್ರೀಯತಮ ನೀನು ಗ್ರೇಟ್​’’. ಬೊಗಸೆಯಲ್ಲಿ ಆತನ ಗಲ್ಲ ಹಿಡಿದು ಹಣೆಗೆ ಮುತ್ತಿಕ್ಕಿದ ಆಕೆ ಕಿವಿಯಲ್ಲಿ ನಿಧಾನಕ್ಕೆ ಹೇಳಿದ್ದರು – ವಿಭೂ ಐ ಲವ್ ಯೂ.. ಜೊತೆಗೆ ಘಟ್ಟಿಯಾಗಿ ಜೈಹಿಂದ್.. ಜೈ ಹಿಂದ್.. ಜೈ ಹಿಂದ್​​ ಎನ್ನುತ್ತಾ ಗಂಡನಿಗೆ ಅಂತಿಮ ನಮನ ಸಲ್ಲಿಸಿದ್ದರು. ಈ ದೃಶ್ಯ ನೋಡಿದ ಎಂಥವರಿಗೂ ಎದೆ ಝಲೆಂದು ದೇಶ ಪ್ರೇಮ ಉಕ್ಕಿ ಹರಿಯುತ್ತೆ.

ಪತಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೈನ್ಯ ಸೇರಿದ ಪತ್ನಿ
ಕಡಿಮೆ ಅವಧಿಯಲ್ಲಿ ಪರೀಕ್ಷೆ ಎದುರಿಸಿ ಗೆದ್ದ ಕೌಲ್

ಇದು ನಿಜವಾದ ದೇಶ ಪ್ರೇಮ. ಇದು ಪತಿಯ ಮೇಲೆ ಪತ್ನಿಗಿರುವ ಪ್ರೇಮ. ‘‘ನನ್ನ ಪತಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸುವ ಮಾರ್ಗ ಇದೊಂದೆ’’ ಎಂದುಕೊಂಡು ಕಳೆದ ವರ್ಷ ಭಾರತೀಯ ಸೈನ್ಯಕ್ಕೆ ಸೇರಲು ನಿರ್ಧರಿಸಿದ್ರು ನಿತಿಕಾ ಕೌಲ್. ಕಷ್ಟಪಟ್ಟು, ಪತಿಯ ಸಾವಿನ ನೋವನ್ನು ಮೆಟ್ಟಿನಿಂತು, ಛಲದಿಂದ ಅತಿ ಕಡಿಮೆ ಅವಧಿಯಲ್ಲಿ ಶಾರ್ಟ್‌ ಸರ್ವೀಸ್‌ ಕಮಿಷನ್‌ ಪರೀಕ್ಷೆ, ತರಬೇತಿ ಮುಗಿಸಿ ಸೇನೆಗೆ ಸೇರಿದ್ದಾರೆ ನಿತಿಕಾ ಕೌಲ್.

ನಿತಿಕಾ ಕೌಲ್ ಸ್ಫೂರ್ತಿದಾಯಕ ಸಾಹಸಗಾಥೆ
ಇದು ಹೆಮ್ಮೆಯ ಕ್ಷಣವೆಂದಿತು ಭಾರತೀಯ ಸೇನೆ

ತಮಿಳುನಾಡಿನ ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೇನಿಂಗ್‌ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ  ನಿತಿಕಾ ಅವರನ್ನು ಕಳೆದ ಶನಿವಾರ ಲೆಫ್ಟಿನೆಂಟ್‌ ಜನರಲ್‌ ವೈ.ಕೆ. ಜೋಶಿ ಅವರು ಸೇನೆಗೆ ಬರಮಾಡಿಕೊಂಡಿದ್ದಾರೆ. ಪತಿಯ ನೆನಪಿನಲ್ಲಿ ಸೇನೆ ಸೇರುವ ಸಾಧನೆಗೆ ಅಪಾರ ಮೆಚ್ಚುಗೆ ನಿಶಿಕಾ ಕೌಲ್‌ ಅವರನ್ನ ಹುಡುಕಿಕೊಂಡು ಬರುತ್ತಿದೆ. ಭಾರತೀಯ ಸೇನೆಯೂ ಇದು ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದೆ.

ನಮ್ಮ ದೇಶದ ಹೆಣ್ಣಿನ ಶಕ್ತಿ ಇದು. ದೇಶಪ್ರೇಮದ ಕೈಗನ್ನಡಿಯ ಕ್ಷಣವಿದು.”ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್​​ 2019ರಲ್ಲಿ ಪುಲ್ವಾಮಾದಲ್ಲಿ ಉಗ್ರರೊಂದಿಗೆ ಹೋರಾಟದ ವೇಳೆ ದೇಶಕ್ಕಾಗಿ ವೀರಮರಣ ಹೊಂದಿದ್ದರು. ಅವರಿಗೆ ಮರಣೋತ್ತರವಾಗಿ ಶೌರ್ಯಚಕ್ರ ನೀಡಿ ಗೌರವಿಸಲಾಗಿತ್ತು. ಈಗ ಅವರ ಪತ್ನಿ ನಿತಿಕಾ ಕೌಲ್‌ ಅವರು ಸೇನಾ ಸಮವಸ್ತ್ರ ತೊಡುವ ಮೂಲಕ ಪತಿಗೆ ನಿಜವಾದ ಗೌರವ ಸಲ್ಲಿಸಿದ್ದಾರೆ. ಮೇಜರ್ ಧೌಂಡಿಯಾಲ್ ಅವರು ಹುತಾತ್ಮರಾಗುವ ಒಂಭತ್ತು ತಿಂಗಳ ಮೊದಲು ನಿತಿಕಾ ಕೌಲ್ ಅವರನ್ನ ವಿವಾಹವಾಗಿದ್ದರು. ಪತಿ ಹುತಾತ್ಮರಾಗಿ ಆರು ತಿಂಗಳ ನಂತರ ಎಸ್​.ಎಸ್.ಸಿ.ಇ ಪರೀಕ್ಷಿಯಲ್ಲಿ ಪಾಸ್​​​​ ಆದ್ರು.  ನಂತರ ಸೇನಾ ತರಬೇತಿ ಪಡೆಯಲು ಆರಂಭಿಸಿದರು.

Image

ಎರಡು ವರ್ಷದ ಹಿಂದೆ ಭಾರತೀಯ ಸೇನೆಯ ಯುವ ಅಧಿಕಾರಿ ಮೇಜರ್‌ ವಿಭೂತಿ ಶಂಕರ್‌ ಅವರ ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಮದುವೆಯಾಗಿ ಒಂದು ವರ್ಷ ಕಳೆಯುವ ಮುನ್ನವೇ ಶಂಕರ್‌ ಅವರ ಪತ್ನಿ ನಿತಿಕಾ ಕೌಲ್‌ ಪಾಲಿಗೆ ಜೀವನವೇ ಶೂನ್ಯವಾಗಿ ಗೋಚರಿಸಿತ್ತು. ಮೇಜರ್‌ ವಿಭೂತಿ ಶಂಕರ್‌ ಧೌಂಡಿಯಾಲ್‌ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷೆ ಉಗ್ರರ ಜತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾಗಿದ್ದರು. ಮೊದಲ ವಿವಾಹ ವಾರ್ಷಿಕೋತ್ಸವಕ್ಕೆ ಮನೆಗೆ ಹೋಗಬೇಕೆಂದುಕೊಂಡಿದ್ದವರು ಶವವಾಗಿ ಮನೆಗೆ ತಲುಪಿದ್ದರು. ಆದರೆ ಎರಡು ವರ್ಷಗಳ ಬಳಿಕ ಇಡೀ ಕುಟುಂಬದ ಚಿತ್ರಣವೇ ಕಂಪ್ಲೀಟ್ ಚೇಂಜ್ ಆಗಿದೆ.

ಅಂದು ಪತಿಯ ಸಾವಿನಿಂದ ಆಘಾತಗೊಂಡಿದ ನಿತಿಕಾ ಕೌಲ್‌ ಇಂದು ಸ್ಫೂರ್ತಿಯ ಚಿಲುಮೆಯಾಗಿದ್ದರೆ. ಸೇನಾ ಸಮವಸ್ತ್ರ ತೊಟ್ಟು ದೇಶ ಸೇವೆಗೆ ಸಜ್ಜಾಗಿದ್ದಾರೆ. ಲೆ. ಜನರಲ್‌ ವೈಕೆ ಜೋಶಿ ಅವರು ನಿತಿಕಾ ಅವರ ತೋಳಿಗೆ ‘ಸ್ಟಾರ್‌’ ತೊಡಿಸಿದ ಕ್ಷಣ ನಿಜಕ್ಕೂ ಹೆಮ್ಮೆಯ ಕ್ಷಣ,” ಎಂದು ಉಧಾಂಪುರದ ನಾರ್ತರ್ನ್‌ ಕಮಾಂಡ್‌ ಟ್ವೀಟ್‌ ಮಾಡಿದೆ.

ಪುಲ್ವಾಮಾದಲ್ಲಿ ಅಮರನಾದ ಪತಿಗೆ ಎರಡು ವರ್ಷದಲ್ಲೇ ಪತ್ನಿ ದೊಡ್ಡ ಮಟ್ಟದ ಗೌರವವನ್ನ ಕೊಟ್ಟಿದ್ದಾರೆ. ಪ್ರೀತಿ ಅಂದ್ರೆ ದೇಶಪ್ರೇಮ ಅನ್ನೋದು ಇದಕ್ಕೇ ಅಲ್ವಾ. ಪತಿಯ ಸಾವಿನ ನೋವಿಗೆ ಸಾಧನೆಯ ಸಾಂತ್ವನ ನೀಡಿರುವ ನಿತಿಕಾ ಕೌಲ್ ಅವರನ್ನ ಇಡೀ ದೇಶ ಕೊಂಡಾಡಬೇಕು. ಅವರಿಗೊಂದು ಸಲಾಂ ಹೇಳಲೇಬೇಕು.

The post ಅಂದು ಸಾಮಾನ್ಯ ಗೃಹಿಣಿ, ಇಂದು ಲೆಫ್ಟಿನೆಂಟ್: ಇದು ಪುಲ್ವಾಮಾ ಹುತಾತ್ಮ ಯೋಧನ ಪತ್ನಿ ಸಾಹಸಗಾಥೆ appeared first on News First Kannada.

Source: newsfirstlive.com

Source link