ನಾಥೂರಾಂ ಗೋಡ್ಸೆ
ಗ್ವಾಲಿಯರ್: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಕೊಂದಿದ್ದ ನಾತೂರಾಮ್ ಗೋಡ್ಸೆಯನ್ನು 1949ರಲ್ಲಿ ಗಲ್ಲಿಗೇರಿಸಿದ್ದ ಹರಿಯಾಣದ ಅಂಬಾಲ ಸೆಂಟ್ರಲ್ ಜೈಲಿನಿಂದ ತಂದ ಮಣ್ಣಿನಿಂದ ನಾಥೂರಾಮ್ ಗೋಡ್ಸೆ ಪ್ರತಿಮೆಯನ್ನು ನಿರ್ಮಿಸುವುದಾಗಿ ಹಿಂದೂ ಮಹಾಸಭಾ ಹೇಳಿದೆ. ಸೋಮವಾರ ನಾಥೂರಾಮ್ ಗೋಡ್ಸೆಯ ಪುಣ್ಯತಿಥಿಯನ್ನು ಆಚರಿಸಿದ ಬಲಪಂಥೀಯ ಸಂಘಟನೆಗಳು ಈ ಬಗ್ಗೆ ಮಾಹಿತಿ ನೀಡಿವೆ.
“ನಾಥೂರಾಮ್ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಿದ ಅಂಬಾಲಾ ಜೈಲಿನಿಂದ ಕಳೆದ ವಾರ ಹಿಂದೂ ಮಹಾಸಭಾದ ಕಾರ್ಯಕರ್ತರು ಮಣ್ಣನ್ನು ತಂದಿದ್ದಾರೆ. ಈ ಮಣ್ಣನ್ನು ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ತಯಾರಿಸಲು ಬಳಸಲಾಗುವುದು. ಹಾಗೇ, ಆ ಪ್ರತಿಮೆಗಳನ್ನು ಗ್ವಾಲಿಯರ್ನಲ್ಲಿರುವ ಹಿಂದೂ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗುವುದು ಎಂದು ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ತಿಳಿಸಿದ್ದಾರೆ.
ಹಿಂದೂ ಮಹಾಸಭಾ ಕಾರ್ಯಕರ್ತರು ಸೋಮವಾರ ಮೀರತ್ನ (ಉತ್ತರ ಪ್ರದೇಶ) ‘ಬಲಿಧಾನ್ ಧಾಮ್’ನಲ್ಲಿ ಗೋಡ್ಸೆ ಮತ್ತು ಆಪ್ಟೆ ಅವರ ಪ್ರತಿಮೆಗಳನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ನಾವು ಪ್ರತಿ ರಾಜ್ಯದಲ್ಲೂ ಅಂತಹ ಬಲಿದಾನ್ ಧಾಮವನ್ನು ನಿರ್ಮಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಗ್ವಾಲಿಯರ್ ಜಿಲ್ಲಾಡಳಿತವು 2017ರಲ್ಲಿ ನಾಥೂರಾಮ್ ಗೋಡ್ಸೆಯ ಪ್ರತಿಮೆಯನ್ನು (ಇಲ್ಲಿನ ಮಹಾಸಭಾದ ಕಚೇರಿಯಲ್ಲಿ ಸ್ಥಾಪಿಸಲಾಗಿದೆ) ವಶಪಡಿಸಿಕೊಂಡಿದೆ. ಆದರೆ, ಅದನ್ನು ಇಲ್ಲಿಯವರೆಗೆ ಹಿಂತಿರುಗಿಸಿಲ್ಲ ಎಂದು ಅವರು ಹೇಳಿದ್ದಾರೆ. ದೇಶದ ವಿಭಜನೆಗೆ (1947ರಲ್ಲಿ) ಕಾಂಗ್ರೆಸ್ ಕಾರಣ ಎಂದು ಭಾರದ್ವಾಜ್ ಆರೋಪಿಸಿದರು, ಇದು ದೊಡ್ಡ ಪ್ರಮಾಣದಲ್ಲಿ ಜನರ ಹತ್ಯೆಗೆ ಕಾರಣವಾಯಿತು.
ಸೋಮವಾರ ಇಲ್ಲಿ ಹಿಂದೂ ಮಹಾಸಭಾದ ಯಾವುದೇ ಸಾರ್ವಜನಿಕ ಕಾರ್ಯಕ್ರಮವಿಲ್ಲ ಎಂದು ಗ್ವಾಲಿಯರ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸತ್ಯೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇದನ್ನೂ ಓದಿ: Gandhi Jayanti: ಮಹಾತ್ಮ ಗಾಂಧೀಜಿಯ 10 ಅಪರೂಪದ ಚಿತ್ರಣಗಳು ನಿಮಗಾಗಿ
ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ -ಅಸಾದುದ್ದೀನ್ ಒವೈಸಿ