ಚಿತ್ರದುರ್ಗ: ಧೋ ಅಂತಾ ಸುರಿಯುತ್ತಿರುವ ಮಳೆ ಜೀವನವನ್ನೇ ಅಲ್ಲೋಲ-ಕಲ್ಲೋಲ ಮಾಡಿದೆ. ತಲೆ ಮೇಲಿನ ಸೂರನ್ನೇ ಕಸಿದುಕೊಂಡು ನಡು ಬೀದಿಗೆ ತಂದು ನಿಲ್ಲಿಸಿದೆ. ಇಂದು ಬಂದು ನಾಳೆ ನಿಂತು ಹೋಗೋ ಮಳೆ ಅಂತಾ ಅಂದುಕೊಂಡ್ರೆ ಜೀವಗಳನ್ನೇ ಕಸಿಯೋ ಮರಣ ಮಳೆಯಾಗಿಬಿಟ್ಟಿದೆ.
ಅಕಾಲಿಕವಾಗಿ ಸುರಿಯುತ್ತಿರುವ ಮಳೆ ಚಿತ್ರದುರ್ಗದಲ್ಲಿ ಸಾವನ್ನೇ ತಂದು ಬಿಟ್ಟಿದೆ. ಒಂದೇ ದಿನ ಚಿತ್ರದುರ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಮೂವರು ಕೊನೆಯುಸಿರೆಳೆದಿದ್ದಾರೆ. ಹಿರಿಯೂರು ತಾಲೂಕಿನ ಬ್ಯಾಡರಹಳ್ಳಿಯಲ್ಲಿ ಗೋಡೆ ಕುಸಿದು 24 ವರ್ಷದ ತ್ರಿವೇಣಿ ಅನ್ನೋರು ಉಸಿರು ಚೆಲ್ಲಿದ್ರೆ, ಇತ್ತ, ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ಗೋಡೆ ಕುಸಿದು, ಕಂಪ್ಲೇಶ್ ಹಾಗೂ ತಿಪ್ಪಮ್ಮ ದಂಪತಿ ಸಾವನ್ನಪ್ಪಿದ್ದಾರೆ. ಈ ಮೂರು ಸಾವು ಸೇರಿ ಈ ವಾರದಲ್ಲಿ ಒಟ್ಟು 6 ಮಂದಿ ಉಸಿರುಚೆಲ್ಲಿದಂತಾಗಿದೆ.
ಮನೆ ಕುಸಿತ, ಪ್ರಾಣಾಪಾಯದಿಂದ ಐವರು ಪಾರು!
ಮೈಸೂರಿನಲ್ಲಿ ಮಳೆ ಅವಾಂತರದಿಂದ ಮಂಡಿ ಮೊಹಲ್ಲಾದಲ್ಲಿ ಮನೆಯೊಂದು ಕುಸಿದು ಬಿದ್ದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಮನೆಯ ಅವಶೇಷಗಳಡಿ ಸಿಲುಕಿದ್ದ ಐವರನ್ನ ರಕ್ಷಿಸಿದ್ದಾರೆ. ಗೃಹ ಉಪಯೋಗಿ ವಸ್ತುಗಳೆಲ್ಲಾ ಅವಶೇಷಗಳಡಿ ಸಿಲುಕಿ ಸಂಪೂರ್ಣ ನಾಶವಾಗಿವೆ.
ಇತ್ತ, ನಿರಂತರ ಮಳೆಯಿಂದ ಹೆಚ್.ಡಿ.ಕೋಟೆ ತಾಲೂಕಿನ ಶಿಂಡೇಹಳ್ಳಿ ಗ್ರಾಮದಲ್ಲಿ ಮನೆಗೋಡೆ ಕುಸಿತವಾಗಿದೆ. ಸದ್ಯ ಪ್ರಾಣಪಾಯದಿಂದ ಕುಟುಂಬವೊಂದು ಪಾರಾಗಿದೆ. ಚಿಕ್ಕಬಳ್ಳಾಪುರದಲ್ಲಿ ಮಳೆಯ ಅಬ್ಬರಕ್ಕೆ ಮನೆ ಕುಸಿದು ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಸಂತೇಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೀರೇಪಾಳ್ಯ ಗ್ರಾಮದಲ್ಲಿ ಹದಿನೈದು ಮನೆಗಳು ಮಳೆಯಿಂದಾಗಿ ನೆಲಕಚ್ಚಿವೆ. ಚಿತ್ರದುರ್ಗದಲ್ಲಿ ಭಾರೀ ಮಳೆಗೆ ಶಾಲೆಯ ಮೇಲ್ಛಾವಣಿ ಕುಸಿದು ಅವಾಂತರ ಸೃಷ್ಟಿಸಿದೆ. ಹೊಸದುರ್ಗ ತಾಲೂಕಿನ ವೆಂಗಳಾಪುರ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯ ಗೋಡೆ ಕುಸಿತವಾಗಿದೆ.
ಮತ್ತೊಂದ್ಕಡೆ ಕಲ್ಪತರುನಾಡು ತುಮಕೂರಿನ ಗುಬ್ಬಿ ಅರಣ್ಯ ಇಲಾಖೆಯ ವಸತಿ ಗೃಹ ಹಾಗೂ ಕಚೇರಿಗೆ ಜಲದಿಗ್ಬಂಧನವಾಗಿದೆ. ರಾತ್ರಿ ಸುರಿದ ಭಾರೀ ಮಳೆಗೆ ಕಟ್ಟಡಗಳು ಜಲಾವೃತವಾಗಿದ್ದು, ರಾತ್ರಿಯಿಡೀ ಮಕ್ಕಳೊಂದಿಗೆ ಕುಟುಂಬಸ್ಥರು ನಿದ್ದೆಗೆಟ್ಟು ಪರದಾಡಿದ್ದಾರೆ.
ಧಾರಾಕಾರ ಮಳೆಗೆ ತುಂಬಿ ಹರಿಯುತ್ತಿದ್ದ ಕೆರೆಯಲ್ಲಿ ಸಂಚರಿಸಲು ಹೋಗಿ ಬೈಕ್ ಕೊಚ್ಚಿಕೊಂಡು ಹೋಗಿದೆ. ತುಮಕೂರಿನ ಕೊರಟಗೆರೆ ತಾಲೂಕಿನ ಮಲಪ್ಪನಹಳ್ಳಿಯ ಕೆರೆಯಲ್ಲಿ ಬೈಕ್ ಉಳಿಸಿಕೊಳ್ಳಲು ಮೂವರು ಹರಸಾಹಸ ಪಟ್ರೂ ನೀರಿನ ರಭಸಕ್ಕೆ ಬೈಕ್ವೊಂದು ಕೊಚ್ಚಿ ಹೋಗಿದೆ.
ಇದು ಮಳೆಗಾಲ ಹೋಗೋ ಹೊತ್ತು. ಆದ್ರೆ, ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ನೋಡಿದ್ರೆ ಹೋಗೋ ಮುನ್ನವೇ ಮಳೆ ತರಬಾರದ ಸಂಕಷ್ಟ ತಂದಿಡ್ತಿದೆ ಅಂತಾ ಕಾಣ್ಸುತ್ತೆ. ಜೀವ ಹೋಯ್ತು, ಸೂರೂ ಹೋಯ್ತು, ನೆಲೆಯಿಲ್ಲದೇ ಜನ, ನೆಂದು, ಮಳೆಯಲ್ಲೇ ನಡುಗುತ್ತಾ ನಿಲ್ಲುವಂತಾಗಿದೆ.