ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುವವರ ಮೇಲೆ ದಾಳಿ ಮಾಡಿದ ಖಾಕಿ ಡ್ರೆಸ್ ಗ್ಯಾಂಗ್ ಅರೆಸ್ಟ್, ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದ ಪೇದೆ | Constable arrested for cheating department by creating his own group and attack on red sandal smugglers


ಅಕ್ರಮವಾಗಿ ರಕ್ತ ಚಂದನ ಸಾಗಾಣಿಕೆ ಮಾಡುವವರ ಮೇಲೆ ದಾಳಿ ಮಾಡಿದ ಖಾಕಿ ಡ್ರೆಸ್ ಗ್ಯಾಂಗ್ ಅರೆಸ್ಟ್, ಖತರ್ನಾಕ್ ಐಡಿಯಾ ಮಾಡಿ ಸಿಕ್ಕಿಬಿದ್ದ ಪೇದೆ

ಗಲ್ ಪೇಟೆ ಪೊಲೀಸ್ ಠಾಣೆ

ಕೋಲಾರ: ರಾತ್ರೋ ರಾತ್ರಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡಬೇಕು ಬೇಗೆ ಶ್ರೀಮಂತರಾಗಬೇಕೆಂದು ನಿರ್ಧಾರ ಮಾಡಿದ ಖಾಕಿ ಡ್ರೆಸ್ ತೊಡುವ ಟೀಂ, ಪೊಲೀಸರ ಸೋಗಿನಲ್ಲಿ ರಕ್ತಚಂದನ ಅಕ್ರಮ ಸಾಗಾಟದ ಮೇಲೆ ಸಿನಿಮೀಯ ಸ್ಟೈಲ್ನಲ್ಲಿ ದಾಳಿ ಮಾಡಲು ಹೋಗಿ ಕೊನೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆಯೊಂದು ಆಂಧ್ರ ಹಾಗೂ ತಮಿಳುನಾಡಿನ ಗಡಿ ಜಿಲ್ಲೆ ಕೋಲಾರದಲ್ಲಿ ನಡೆದಿದೆ.

ಪೊಲೀಸ್ ಪೇದೆಯೊಬ್ಬ ಖಾಕಿ ಡ್ರೆಸ್ ಹಾಕಿಕೊಂಡು ಕೆಲಸ ಮಾಡುವವರದ್ದೇ ಒಂದು ಗ್ಯಾಂಗ್ ಕಟ್ಟಿಕೊಂಡು ಹೋಗಿ ಅಕ್ರಮವಾಗಿ ರಾತ್ರೋ ರಾತ್ರಿ ರಕ್ತಚಂದನ ಸಾಗಾಟ ಮಾಡುವವರ ಮೇಲೆ ದಾಳಿ ಮಾಡಲು ಹೋಗಿ ತಾವೇ ಸಿಕ್ಕಿಬಿದ್ದಿರುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ. ಕೋಲಾರದ ಡಿಎಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ಮಾಸ್ಟರ್ ಮೈಂಡ್ ವೇಣುಗೋಪಾಲ್ ಎಂಬಾತ ಆಂಧ್ರದಿಂದ ಹೊಸಕೋಟೆ ತಾಲೂಕು ಕಟ್ಟಿಗೇನಹಳ್ಳಿ ಗ್ರಾಮಕ್ಕೆ ರಕ್ತಚಂದನ ತುಂಡುಗಳನ್ನು ಸ್ಕಾರ್ಪಿಯೋ ಕಾರ್ನಲ್ಲಿ ಸಾಗಾಟ ಮಾಡುವ ಮಾಹಿತಿ ಪಡೆದು ಅದನ್ನು ದಾಳಿ ಮಾಡಿ ರಕ್ತ ಚಂದನ ತುಂಡುಗಳ ಜೊತೆಗೆ ಲಕ್ಷ ಲಕ್ಷ ಹಣ ಮಾಡುವ ಆಸೆಯಿಂದ ಖಾಕಿ ಡ್ರೆಸ್ ಹಾಕುವವರದ್ದೇ ಟೀಂ ಒಂದು ಕಟ್ಟಿಕೊಂಡು ಹೋಗಿ ದಾಳಿ ಮಾಡಿ ಕೊನೆಗೆ ತನ್ನ ಪ್ಲಾನ್ ಉಲ್ಟಾ ಹೊಡೆದಾಗಿ ಪೊಲೀಸರ ಅಥಿತಿಯಾಗಿದ್ದಾರೆ.

ಪ್ರಕರಣ ಹಿನ್ನೆಲೆ
ಆಂಧ್ರದಿಂದ ಹೊಸಕೋಟೆ ತಾಲೂಕು ಕಟ್ಟಿಗೇನಹಳ್ಳಿಗೆ ರಕ್ತ ಚಂದನ ಸಾಗಿಸುವ ಮಾಹಿತಿ ಪಡೆದ ಕೋಲಾರ ಡಿಎಆರ್ ಪೊಲೀಸ್ ಪೇದೆ ವೇಣುಗೋಪಾಲ್ ಎಂಬಾತ ಎರಡು ಇನ್ನೋವಾ ಕಾರ್ಗಳನ್ನು ಬಾಡಿಗೆ ಪಡೆದು, ಡಿಎಆರ್ ಪೊಲೀಸ್ ಪೇದೆ ಬಸವರಾಜ್, ಸಾರಿಗೆ ಸಂಸ್ಥೆಯ ನೌಕರ ಉದಯ್, ಅರಣ್ಯ ಇಲಾಖೆ ಗಾರ್ಡ್ ನವೀನ್, ಬೆಸ್ಕಾಂ ಇಲಾಖೆಯ ಮಾರ್ಕೊಂಡ, ಹರ್ಷದ್, ಎಂಬುವರು ಒಟ್ಟು ಆರು ಜನರನ್ನು ಒಟ್ಟಿಗೆ ಕರೆದುಕೊಂಡು, ವೇಣುಗೋಪಾಲ್ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಚಿಕ್ಕಕುಂತೂರು ಗ್ರಾಮದ ಮಾರ್ಗವಾಗಿ ರಕ್ತಚಂದನ ಸಾಗಾಟ ಮಾಡುವ ಮಾಹಿತಿ ಮೇರೆಗೆ ಸ್ಕಾರ್ಪಿಯೋ ಕಾರ್ನ್ನು ಅಡ್ಡಗಟ್ಟಿದ್ದಾರೆ. ಕಾರ್ನಲ್ಲಿ ಹೊಸಕೋಟೆ ಮೂಲದ ಶಬ್ಬೀರ್ ಬೇಗ್ ಎಂಬಾತನ ಕಾರ್ ಅಡ್ಡಗಟ್ಟಿದ್ದ ಖಾಕಿ ಡ್ರೆಸ್ ಟೀಂ, ನಾವೆಲ್ಲಾ ಆಂಧ್ರದ ಪೊಲೀಸರು ಎಂದು ಹೇಳಿ ಕಾರ್ ತಪಾಸಣೆ ಮಾಡಿದ್ದಾರೆ.

ಕಾರ್ನಲ್ಲಿ ರಕ್ತಚಂದನಕ್ಕಾಗಿ ಹುಡುಕಾಟ ಮಾಡಿದ್ದಾರೆ ಆದರೆ ಇವರು ಅಡ್ಡಗಟ್ಟಿದ ವಾಹನದಲ್ಲಿ ರಕ್ತಚಂದನ ಸಿಗಲಿಲ್ಲ, ಅಷ್ಟಕ್ಕೆ ವಿಚಲಿತರಾದ ಖಾಕಿ ಡ್ರೆಸ್ ಟೀಂ ರಕ್ತಚಂದನ ಎಲ್ಲಿ ಬಚ್ಚಿಟ್ಟಿದ್ದೀಯ ಎಂದು ಅವನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ವೇಣುಗೋಪಾಲ್ ಅವನ ಬಳಿ ಇದ್ದ ರಿವಲ್ವಾರ್ ತೋರಿಸಿ ಹೆದರಿಸಿದ್ದಾರೆ. ನಂತರ ಶಬ್ಬೀರ್ ಬೇಗ್ ಸಂಬಂಧಿಯೊಬ್ಬರಿಗೆ ಫೋನ್ ಮಾಡಿ ರಕ್ತಚಂದನ ತುಂಡುಗಳನ್ನು ತಂದು ಕೊಡುವಂತೆ ಹೆದರಿಸಿದ್ದಾರೆ. ನಂತರ ಆತನ ಬಳಿಯಿದ್ದ 1700 ರೂಪಾಯಿ ಹಣ ಮೊಬೈಲ್ ಹಾಗೂ ಸ್ಕಾರ್ಪಿಯೋ ಕಾರ್ ಕಸಿದುಕೊಂಡು ರಕ್ತ ಚಂದನದ ಮಾಲ್ ತಂದು ಕೊಡುವಂತೆ ಹೇಳಿ ಕಳಿಸಿದ್ದಾರೆ.

ಖಾಕಿ ಡ್ರೆಸ್ ಟೀಂ ಪ್ಲಾನ್ ಉಲ್ಟಾ ಹೊಡೆದಾಗ ತಂಡ ಹೊಡೆದ ಟೀಂ
ಸ್ಕಾರ್ಪಿಯೋ ಕಾರ್ನಲ್ಲೇ ರಕ್ತಚಂದನ ತರಿಸುವಂತೆ ಇಡೀ ರಾತ್ರಿ ಕಾರ್ನಲ್ಲಿ ಬೆಳಿಗ್ಗೆವರೆಗೂ ಸುತ್ತಾಡಿಸಿದ್ದ ಖಾಕಿ ಡ್ರೆಸ್ ಟೀಂ, ನಂತರ ಬೆಳಿಗ್ಗೆ ಆತನ ಬಳಿ ಇದ್ದ ಹಣ, ಮೊಬೈಲ್, ಎಲ್ಲವನ್ನು ಕಿತ್ತುಕೊಂಡು ಕೋಲಾರದ ಟಮಕಾ ಕೈಗಾರಿಕಾ ಪ್ರದೇಶದ ಬಳಿ ಇಳಿಸಿ ಸ್ಕಾರ್ಪಿಯೋ ಕಾರ್ನ್ನು ಕಸಿದುಕೊಂಡು ಕಳಿಸಿದ್ದಾರೆ. ಈ ವೇಳೆ ಹಲ್ಲೆಗೊಳಗಾಗಿದ್ದ ಶಬ್ಬೀರ್ ಬೇಗ್ ಸೀದಾ ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಗೆ ಬಂದು ಒಂದು ಖಾಕಿ ಡ್ರೆಸ್ ಧರಿಸಿದ್ದ ಟೀಂ ನನ್ನ ಮೇಲೆ ದಾಳಿ ಮಾಡಿ ರಾಬರಿ ಮಾಡಿರುವ ಬಗ್ಗೆ ದೂರು ನೀಡಿದ್ದರು, ಅವರು ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಸದ್ಯ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಏನಿದು ಖಾಕಿ ಡ್ರೆಸ್ ಟೀಂ, ಇದು ಕಟ್ಟಿದ್ದೇಗೆ
ಡಿಎಆರ್ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದ ವೇಣುಗೋಪಾಲ್ ಇಂಥಾದೊಂದು ಕೃತ್ಯ ಎಸಬೇಕು ಎನ್ನುವ ನಿಟ್ಟಿನಲ್ಲಿ ಒಂದು ಪ್ಲಾನ್ ಮಾಡಿದ್ದ. ಮೊದಲು ಖಾಕಿ ಡ್ರೆಸ್ ಗಳನ್ನು ಧರಿಸುವವರ ಒಂದು ಟೀಂ ಮಾಡಿದ್ದ. ಆ ಪೈಕಿ ಡಿಎಆರ್ ಪೊಲೀಸ್ ಪೇದೆ ಬಸವರಾಜ್, ಸಾರಿಗೆ ಸಂಸ್ಥೆಯ ನೌಕರ ಉದಯ್, ಅರಣ್ಯ ಇಲಾಖೆ ಗಾರ್ಡ್ ನವೀನ್, ಬೆಸ್ಕಾಂ ಇಲಾಖೆಯ ಮಾರ್ಕೊಂಡ, ಹರ್ಷದ್, ಎಂಬುವರನ್ನು ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ನಂತರ ಇಂಥಾದೊಂದು ಅಪರೇಷನ್ಗೆ ಇಳಿದಿದ್ದಾನೆ ಅನ್ನೋದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಎಲ್ಲರನ್ನೂ ಬಂಧಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಒಟ್ಟಾರೆ ರಾತ್ರೋ ರಾತ್ರಿ ಶ್ರೀಮಂತರಾಗಬೇಕು ಹಣ ಸಂಪಾದನೆ ಮಾಡಬೇಕೆಂದು ಹೊರಟ ಖಾಕಿ ಡ್ರೆಸ್ ಟೀಂಗೆ ಇಂದು ಕಂಬಿಗಳ ಹಿಂದೆ ಮುದ್ದೆ ಮುರಿಯುವ ಸ್ಥಿತಿ ಬಂದಿದೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

TV9 Kannada


Leave a Reply

Your email address will not be published. Required fields are marked *