ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಕೊರೊನಾ ವ್ಯಾಕ್ಸಿನ್ ಮಾರಾಟ ಮಾಡಿ ರೆಡ್​​ಹ್ಯಾಂಡ್​ ಆಗಿ ಸಿಕ್ಕಿಬಿದ್ದ ವೈದ್ಯೆ ಹಾಗೂ ಆಕೆಯ ಶಿಷ್ಯೆಯ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜನರಿಂದ ಹಣ ಪಡೆದು ಲಸಿಕೆ ಮಾರುತ್ತಿದ್ದ ಆರೋಪದ ಮೇಲೆ ನಿನ್ನೆಯಷ್ಟೇ ವೈದ್ಯೆ ಪುಷ್ಪಿತಾ ಹಾಗೂ ಆಕೆಯ ಸ್ನೇಹಿತೆ ಪ್ರೇಮಲತಾಳನ್ನ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಗಳ ಹೇಳಿಕೆ ಪಡೆದುಕೊಂಡು, ಐಪಿಸಿ ಸೆಕ್ಷನ್ 403, 409, 380, 420 ಹಾಗೂ NDMA-2005 ಅಡಿ ಎಫ್ಐಆರ್ ದಾಖಲು ಮಾಡಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪುಷ್ಪಿತಾ, ಲಸಿಕೆಯನ್ನ ಕದ್ದು ಅನ್ನಪೂರ್ಣೇಶ್ವರಿ ನಗರದ ಪ್ರೇಮ ಮನೆಯಲ್ಲಿ ದಾಸ್ತಾನು ಮಾಡಿಸುತ್ತಿದ್ದಳು ಅನ್ನೋ ಆರೋಪ ಕೇಳಿಬಂದಿದೆ. ಇಲ್ಲಿ ಪ್ರೇಮ ತಾನು ಕರೆಸಿದ ವ್ಯಕ್ತಿಗಳಿಂದ ಹಣ ಪಡೆದು ಅಕ್ರಮವಾಗಿ ವ್ಯಾಕ್ಸಿನೇಷನ್‌ ನೀಡಲಾಗುತ್ತಿತ್ತು. ಏ.23 ರಿಂದ ತಲಾ 500 ರೂಪಾಯಿ ಪಡೆದು ವ್ಯಾಕ್ಸಿನ್ ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಪಡೆಯುವ ನೆಪದಲ್ಲಿ ತೆರಳಿದ್ದ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ರೆಡ್ ಹ್ಯಾಂಡಾಗಿ ಆರೋಪಿಗಳನ್ನ ಬಂಧಿಸಿದ್ದಾರೆ.

ಪೊಲೀಸರು, ಬಂಧಿತರಿಂದ ಅಕ್ರಮ ವ್ಯಾಕ್ಸಿನೇಷನ್​ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಯಾವೆಲ್ಲಾ ಮಾದರಿಯಲ್ಲಿ ಅಕ್ರಮ ವ್ಯಾಕ್ಸಿನೇಷನ್ ನಡೆಸಲಾಗ್ತಿತ್ತು..? ಮಂಜುನಾಥನಗರದಿಂದ ಎಚ್ಎಂಟಿ ಲೇಔಟ್​ಗೆ ಹೇಗೆ ರವಾನಿಸಲಾಗ್ತಿತ್ತು..? ವ್ಯಾಕ್ಸಿನೇಷನ್ ರವಾನೆ ಬಳಿಕ ಅಕೌಂಟಿಬಿಲಿಟಿ ಹೇಗೆ ಮಾಡಲಾಗ್ತಿತ್ತು..? ಅಕ್ರಮ ವ್ಯಾಕ್ಸಿನೇಶನ್ ಬಳಿಕ ಹೇಗೆ ದಾಖಲಾತಿ ತೋರಿಸಲಾಗ್ತಿತ್ತು..? ಹೀಗೆ ಹತ್ತಾರು ವಿಚಾರಗಳ ಕುರಿತು ತನಿಖೆ ಮಾಡ್ತಿದ್ದಾರೆ.

20 ಜನರಿಗೆ ಹಾಕಬಹುದಾದಷ್ಟು ವ್ಯಾಕ್ಸಿನ್ ಜಪ್ತಿ
ಬಂಧಿತರ ಬಳಿ ಕೋವಿಶೀಲ್ಡ್​ ಲಸಿಕೆಯ 2 ತುಂಬಿದ ವಯಲ್ ಹಾಗೂ ಮೂರು ಖಾಲಿ ಆಗಿರುವ ಕೋವಿಶೀಲ್ಡ್ ವಯಲ್​ಗಳು ಪತ್ತೆಯಾಗಿವೆ. ಕೋವಿಶೀಲ್ಡ್​​​ನ ಒಂದು ವಯಲ್​​ನಲ್ಲಿ 50ml ವ್ಯಾಕ್ಸಿನ್ ಇರುತ್ತದೆ. ಒಂದು ವಯಲ್​ನಿಂದ ಸಿಂಗಲ್ ಡೋಸ್​​ನಂತೆ 10 ಜನರಿಗೆ ವ್ಯಾಕ್ಸಿನ್ ಕೊಡಬಹುದು. ಅಂದ್ರೆ, ಬಂಧಿತರಿಂದ ಒಟ್ಟು 20 ಜನರಿಗೆ ಸಿಂಗಲ್ ಡೋಸ್ ಕೊಡುವಷ್ಟು ವ್ಯಾಕ್ಸಿನ್ ಸಿಕ್ಕಿದೆ. ಜೊತೆಗೆ 2 ಬಾಕ್ಸ್​ನಲ್ಲಿ 8 ಶೀಟ್ ಪ್ಯಾರಸಿಟಮಲ್ ಮಾತ್ರೆಗಳು, ‌24 ಸಿರಿಂಜ್​ಗಳು ಸಿಕ್ಕಿವೆ. ಎರಡು ಸಿರಿಂಜ್​​ನಲ್ಲಿ ವ್ಯಾಕ್ಸಿನ್ ಇದ್ದದ್ದು ಪತ್ತೆಯಾಗಿದೆ.

ಆರೋಪಿಗಳಿಬ್ಬರೂ ವ್ಯಾಕ್ಸಿನೇಷನ್‌ ಪಡೆಯುವವರ ಬಳಿ ಆಧಾರ್ ಕಾರ್ಡ್ ಪಡೆದು ವೆಬ್​​ಸೈಟ್​ನಲ್ಲಿ ಎಂಟ್ರಿ ಮಾಡಿ ಮೆಸೇಜ್ ಬರುವಂತೆ ಮಾಡ್ತಿದ್ರು. ಸಕ್ರಮವಾಗಿ ವ್ಯಾಕ್ಸಿನೇಷನ್​​​​ಗೆ ಇರುವ ನೀತಿ ನಿಯಮಗಳನ್ನೆ ಪಾಲಿಸುತಿದ್ರು. ಆದ್ರೆ ಒಂದು ವ್ಯಾಕ್ಸಿನೇಷನ್​​ಗೆ 500 ರೂಪಾಯಿ ಹಣ ಪಡೆಯುತ್ತಿದ್ದರು ಅಂತ ಗೊತ್ತಾಗಿದೆ. ರೆಡ್​ಹ್ಯಾಂಡ್ ಅಗಿ ಆರೋಪಿಗಳನ್ನ ಹಿಡಿಯದಿದ್ರೆ ಸಾಕ್ಷಿಯೇ ಸಿಗುತ್ತಿರಲಿಲ್ಲ.

ದಿನಕ್ಕೆ 30 ರಿಂದ 35 ಸಾವಿರ ಹಣ ಸಂಪಾದನೆ
ಆರೋಪಿಗಳು ಒಂದು ದಿನಕ್ಕೆ ಸುಮಾರು 70 ಜನರಿಗೆ ವ್ಯಾಕ್ಸಿನೇಷನ್‌ ಹಾಕಿರುವ ಮಾಹಿತಿ ಲಭ್ಯವಾಗಿದೆ. ಒಂದು ದಿನದಲ್ಲೆ ಅಕ್ರಮವಾಗಿ ಸುಮಾರು 30 ರಿಂದ 35 ಸಾವಿರ ಹಣ ಮಾಡುತ್ತಿದ್ದರು ಅಂತ  ತಿಳಿದುಬಂದಿದೆ. ಈ ಹಿನ್ನೆಲೆ ಅನ್ನಪೂರ್ನೇಶ್ವರಿ ನಗರ ಪೊಲೀಸರಿಂದ  ವಿಚಾರಣೆ ಮುಂದುವರೆದಿದೆ.

 

The post ಅಕ್ರಮವಾಗಿ ವ್ಯಾಕ್ಸಿನ್ ಮಾರಾಟ: ವೈದ್ಯೆ-ಶಿಷ್ಯೆ ವಿರುದ್ಧ FIR ದಾಖಲು appeared first on News First Kannada.

Source: newsfirstlive.com

Source link