ಬೆಂಗಳೂರು: ಅಕ್ರಮ ಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ಇಂದು ಮಂಡ್ಯ ಸಂಸದೆ ಸುಮಲತಾ ಅವರು ಮಾಹಿತಿ ನೀಡಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿರುದ್ಧ ಜೆಡಿಎಸ್​ ಪಕ್ಷವೂ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಸುಮಲತಾ ಅವರ ಬಗ್ಗೆ ನಾನು ಚರ್ಚೆ ಮಾಡೋದಿಲ್ಲ. ರಾಜ್ಯದ ಹಲವು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಈ ಬಗ್ಗೆ ಹಲವಾರು ಬಾರಿ ಹೇಳಿದ್ದೇನೆ. ಅಕ್ರಮ ಗಣಿಗಾರಿಕೆಯನ್ನು ತಡೆಯುವುದು ಸರ್ಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಲು ಮುಂದಾಗುವ ನಾಯಕರಿಗೆ ವೈಯಕ್ತಿಕವಾಗಿ ನಾನು ಮತ್ತು ನಮ್ಮ ಪಕ್ಷ ಕೂಡ ಬೆಂಬಲ ನೀಡುತ್ತದೆ ಎಂದರು.

ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸುಮಲತಾ ಯುದ್ಧ; ಇಂದು ರಾಜ್ಯಪಾಲರ ಭೇಟಿ ಮಾಡಿದ ಸಂಸದೆ

ಇದೇ ವೇಳೆ ಪಕ್ಷ ಸಂಘಟನೆಯ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳ ನಾಯಕರೊಂದಿಗೆ ಸಭೆ ನಡೆಸುತ್ತಿದ್ದು, ಯುವಕರು, ವಕೀಲರು, ಪಕ್ಷದಲ್ಲಿ ಪ್ರಾಮಾಣಿಕರಾಗಿ ಪಕ್ಷಕ್ಕಾಗಿ ಕೆಲಸ ಮಾಡಿದವರು ಸಭೆಯಲ್ಲಿ ಭಾಗಿಯಾಗಿದ್ರು. ಅವರಿಂದ ಸಲಹೆಗಳನ್ನು ಪಡೆದುಕೊಂಡಿದ್ದೇನೆ. ಜೆಡಿಎಸ್​ ಮುಗಿದೇ ಹೋಯ್ತು ಎಂಬ ಚರ್ಚೆಗಳ ನಡೆಯುತ್ತಿವೆ ಆದರೆ ಯುವಕರು ಇಂದು ಪಕ್ಷ ಸಂಘಟನೆಗೆ ಮುಂದಾಗಿದ್ದು, ಆಯಾ ಜಿಲ್ಲೆಗಳ ನಾಯಕರಿಗೆ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಲು ಸಲಹೆ ನೀಡುತ್ತಿದ್ದೇನೆ. ಜನರ ನಡುವೆ ಹೋಗಿ ಕೆಲಸ ಮಾಡಲು ಮುಂದಾಗಿದ್ದೇವೆ ಎಂದರು.

The post ಅಕ್ರಮ ಗಣಿಗಾರಿಕೆ ಹೋರಾಟಕ್ಕೆ ನಾನು, ನಮ್ಮ ಪಕ್ಷ ಸಾಥ್ ಕೊಡುತ್ತದೆ -ಹೆಚ್​​ಡಿಕೆ appeared first on News First Kannada.

Source: newsfirstlive.com

Source link