ಚಿಕ್ಕಬಳ್ಳಾಪುರ: ಕಾನೂನು ಬಾಹಿರವಾಗಿ ಸ್ಫೋಟಕಗಳನ್ನು ಸಾಗಾಟ ಮಾಡುತ್ತಿದ್ದ ನಾಲ್ವರನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ರಮೇಶ್, ವೆಂಕಟೇಶ್, ವೇಣು ಹಾಗೂ ಯಾದಗಿರಿ ಎಂದು ಗುರುತಿಸಲಾಗಿದೆ. ಚಿಂತಾಮಣಿ ತಾಲೂಕು ಸೋಮಾಕಲಹಳ್ಳಿ ಬಳಿ ಬೈಕ್‍ನಲ್ಲಿ ಮೂಟೆಗಳನ್ನು ಇಟ್ಟುಕೊಂಡು ಅನುಮಾನಸ್ಪದವಾಗಿ ಹೋಗುತ್ತಿದ್ದವರನ್ನು ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಂಗಾರದ ಮೋಹದ ರಾಣಿಯ ಮಹಾವಂಚನೆಯ ಕಥೆ – RBI ಹೆಸರಿನಲ್ಲಿ ನಕಲಿ ದಾಖಲೆ

ಬಂಧಿತರು ಮೂಲತಃ ತೆಲಂಗಾಣ ರಾಜ್ಯದವರಾಗಿದ್ದು ಸದ್ಯ ದಿಬ್ಬೂರಹಳ್ಳಿಯಲ್ಲಿ ವಾಸವಾಗಿದ್ದಾರೆ. ಮದನಪಲ್ಲಿಯ ನೂರ್ ಎಂಬಾತನಿಂದ ಈ ಸ್ಫೋಟಕಗಳನ್ನು ತೆಗೆದುಕೊಂಡು ಬರುತ್ತಿದ್ದರು ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಂಧಿತರ ಬಳಿ 600 ಜಿಲೆಟಿನ್ ಕಡ್ಡಿಗಳು, 1000 ಐಡೆಲ್ ಬ್ಲಾಸ್ಟಿಂಗ್ ಗಳು ಪತ್ತೆಯಾಗಿದ್ದು, ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಹಿಂದೆ ನಡೆದ ಗಣಿ ಬ್ಲಾಸ್ಟಿಂಗ್ ದುರಂತದಿಂದ ಆರು ಮಂದಿ ಸಾವನ್ನಪ್ಪಿದ್ದರು. ಈ ಘಟನೆ ನಂತರವೂ ಗಣಿ ಮಾಲೀಕರು ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಮತ್ತೆ ಅದೇ ಹಳೆಯ ರೀತಿ ನಿಯಮ ಬಾಹಿರವಾಗಿ ಸ್ಫೋಟಕಗಳ ಖರೀದಿ, ಸಾಗಾಟ ಮುಂದುವರಿಯುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ.

The post ಅಕ್ರಮ ಸ್ಫೋಟಕ ಸಾಗಾಟ – ನಾಲ್ವರ ಬಂಧನ appeared first on Public TV.

Source: publictv.in

Source link