ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ಕೇಳಿ ಇತರೆ ರಾಜ್ಯಗಳಲ್ಲು ಆಕ್ಸಿಜನ್ ಸಮಸ್ಯೆಗೆ ಕಾರಣವಾಯ್ತಾ ದೆಹಲಿ?

ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ಕೇಳಿ ಇತರೆ ರಾಜ್ಯಗಳಲ್ಲು ಆಕ್ಸಿಜನ್ ಸಮಸ್ಯೆಗೆ ಕಾರಣವಾಯ್ತಾ ದೆಹಲಿ?

ಕೊರೊನಾ ಎರಡನೇ ಅಲೆ ಉತ್ತುಂಗದಲ್ಲಿದ್ದಾಗ ಇಡೀ ರಾಷ್ಟ್ರದಲ್ಲಿಯೇ ಮೆಡಿಕಲ್‌ ಆಕ್ಸಿಜನ್‌ ಸಮಸ್ಯೆ ಉದ್ಭವಿಸಿತ್ತು. ನಮ್ಮ ಚಾಮರಾಜನಗರದಲ್ಲಿ ಕೂಡ ಆಕ್ಸಿಜನ್‌ ಕೊರತೆಯಿಂದ ಒಂದೇ ದಿನ 24 ಜನ ಪ್ರಾಣ ಕಳೆದುಕೊಂಡಿದ್ರು. ಆದ್ರೆ, ಆಕ್ಸಿಜನ್‌ ಹಂಚಿಕೆಗೆ ಸುಪ್ರೀಂ ಕೋರ್ಟ್‌ ರಚಿಸಿದ ಸಮಿತಿಯೊಂದರ ಮಧ್ಯಂತರ ವರದಿ ಆಘಾತ ನೀಡಿದೆ. ಆ ವರದಿ ದೆಹಲಿ ಸರ್ಕಾರಕ್ಕೆ ಹೊಸ ತಲೆ ನೋವಾಗಿದೆ.

ಕೊರೊನಾ ಮೊದಲನೇ ಅಲೆಯಲ್ಲಿ ಭಾರತ ಅಷ್ಟೇನು ಸಮಸ್ಯೆ ಅನುಭವಿಸಿರಲಿಲ್ಲ. ಬಹುಪಾಲು ರೋಗಿಗಳು ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಿದ್ರು. ಆದ್ರೆ, ಎರಡನೇ ಅಲೆ ಸಂಪೂರ್ಣ ಭಿನ್ನವಾಗಿತ್ತು. ಅದು ಸುನಾಮಿ ರೀತಿಯಲ್ಲಿ ಅಪ್ಪಳಿಸಿತ್ತು. ರುದ್ರಭೂಮಿಯಲ್ಲಿ ಆ್ಯಂಬುಲೆನ್ಸ್‌ಗಳ ಸಾಲು ಸಾಲೇ ನಿಲ್ಲುತ್ತಿತ್ತು ಅಂದ್ರೆ ಅದರ ಭೀಕರತೆ ಎಂಥವರಿಗಾದ್ರೂ ಅರ್ಥವಾಗಿ ಬಿಡುತ್ತೆ. ಯಾವ ತಜ್ಞರು ಕೂಡ ಎರಡನೇ ಅಲೆ ಅಷ್ಟೊಂದು ಭೀಕರವಾಗಿ ಅಪ್ಪಳಿಸುತ್ತೆ ಅನ್ನೋದನ್ನ ಅಂದಾಜಿಸಿರಲಿಲ್ಲ. ಹೀಗಾಗಿ ಸರ್ಕಾರದ ಸಿದ್ಧತೆಯೂ ಅಷ್ಟಕಷ್ಟೇ ಆಗಿತ್ತು. ಇದರ ಪರಿಣಾಮ ಆಕ್ಸಿಜನ್‌ ಸಮಸ್ಯೆಯಿಂದಲೇ ನೂರಾರು ಜನ ಪ್ರಾಣ ಕಳೆದುಕೊಳ್ಳಬೇಕಾಯಿತು. ಆಕ್ಸಿಜನ್‌ ಕೊಡಿ ಅಂತ ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರಕ್ಕೆ ದುಂಬಾಲು ಬೀಳುವಂತಾಯ್ತು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸುಪ್ರೀಂಕೋರ್ಟ್‌ ಎಲ್ಲಾ ರಾಜ್ಯಗಳಿಗೆ ಅಗತ್ಯಕ್ಕೆ ತಕ್ಕಷ್ಟು ಆಕ್ಸಿಜನ್‌ ಪೂರೈಸಲು 12 ಜನರ ಸಮಿತಿಯೊಂದನ್ನು ರಚಿಸಿತ್ತು.  ಈಗ ಸಮಿತಿಯ ಮಧ್ಯಂತರ ವರದಿ ಹೊರಬಂದಿದೆ. ಆ ವರದಿ ದೆಹಲಿ ಸರ್ಕಾರದ ಮೇಲೆ ತಿರುಗಿಬೀಳುವಂತೆ ಮಾಡಿದೆ.

ಸಮಿತಿಯ ಮಧ್ಯಂತರ ವರದಿಯಲ್ಲಿ ಏನಿದೆ?
ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಯ ಮಧ್ಯಂತರ ವರದಿಯ ಪ್ರಕಾರ ‘ದೆಹಲಿ ಸರ್ಕಾರ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಆಕ್ಸಿಜನ್‌ ಕೇಳಿತ್ತು. ಪ್ರತಿ ಬೆಡ್‌ಗೆ 289 ಮೆಟ್ರಿಕ್‌ ಟನ್‌ ಅಗತ್ಯ ಇದ್ದ ಸಂದರ್ಭದಲ್ಲಿ 1140 ಮೆಟ್ರಿಕ್‌ ಟನ್‌ ಆಕ್ಸಿಜನ್‌ ಕೊಡಿ ಅಂತ ಬೇಡಿಕೆ ಸಲ್ಲಿಸಿತ್ತು’. ಇದುವೇ ಮಧ್ಯಂತರ ವರದಿಯಲ್ಲಿ ಹೊರ ಬಿದ್ದ ವಿಷಯ. ಇದು ಹೊರ ಬೀಳುತ್ತಲೆ ದೆಹಲಿ ಸರ್ಕಾರದ ವಿರುದ್ಧ ರಾಜಕಾರಣಿಗಳು, ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ.

ದೆಹಲಿ ಸರ್ಕಾರದ ನಡೆ ಉಳಿದ ರಾಜ್ಯಗಳಿಗೆ ಸಮಸ್ಯೆ ಆಯ್ತಾ?
ಮಹಾ ದುರಂತಗಳಿಗೆ ದೆಹಲಿಯೇ ಕಾರಣ ಆಯ್ತಾ?

ಏಪ್ರಿಲ್‌, ಮೇ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಭಾರೀ ಏರಿಕೆ ಆದಾಗ ಎಲ್ಲಾ ರಾಜ್ಯಗಳಲ್ಲಿಯೂ ಆಕ್ಸಿಜನ್‌ ಕೊರತೆ ಇತ್ತು. ವಿದೇಶಗಳಿಂದಲೂ ಆಕ್ಸಿಜನ್‌ ತರಿಸಿಕೊಳ್ಳಲಾಗುತ್ತಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನೇನೋ ಸಾಹಸ ಮಾಡ್ತಾ ಇದ್ದವು. ಕೆಲವು ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಆಕ್ಸಿಜನ್‌ ಸರಬರಾಜನ್ನೇ ನಿಲ್ಲಿಸಲಾಗಿತ್ತು. ಮೆಡಿಕಲ್‌ ಆಕ್ಸಿಜನ್‌ ಮಾತ್ರ ಪೂರೈಸುವಂತೆ ಆದೇಶ ಹೊರಡಿಸಲಾಗಿತ್ತು. ಆದ್ರೆ ಇದೇ ಸಂದರ್ಭದಲ್ಲಿ ದೆಹಲಿ ಸರ್ಕಾರ ಅಗತ್ಯಕ್ಕಿಂತ ಹೆಚ್ಚಿನ ಆಕ್ಸಿಜನ್‌ ಬೇಡಿಕೆ ಇಟ್ಟಿತ್ತು ಎನ್ನಲಾಗಿದೆ. ಅದರಿಂದಲೇ ಉಳಿದ ರಾಜ್ಯಗಳಿಗೆ ಆಕ್ಸಿಜನ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸುಮಾರು 11 ರಾಜ್ಯಗಳಿಗೆ ಆಕ್ಸಿಜನ್‌ ಪೂರೈಸಲು ಸಾಧ್ಯವಾಗಿಲ್ಲ ಅನ್ನೋ ಆರೋಪ ಕೇಳಿ ಬರ್ತಿದೆ. ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲಿ ಆಕ್ಸಿಜನ್‌ ಕೊರತೆಯಿಂದ ರೋಗಿಗಳು ಸಾವನ್ನಪ್ಪಲು ಇದೂ ಒಂದು ಕಾರಣ ಅಂತ ಆರೋಪಿಸಲಾಗ್ತಿದೆ.

ಆಪ್‌ ವಿರುದ್ಧ ಮುಗಿ ಬಿದ್ದ ಪ್ರತಿಪಕ್ಷಗಳು
ಸಾಮಾಜಿಕ ಜಾಲತಾಣದಲ್ಲಿ ಆಪ್‌ ವಿರುದ್ಧ ಕಿಡಿ

 

ಸಮಿತಿಯ ಮಧ್ಯಂತರ ವರದಿ ಹೊರಬೀಳುತ್ತಿದ್ದಂತೆ ಟ್ವೀಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯ ಸೌಂಡ್‌ ಮಾಡ್ತಿದೆ. ಕೆಲವರು ವರದಿ ಪೂರ್ಣ ಬಂದಿಲ್ಲ, ಅದರಲ್ಲಿ ಸತ್ಯಾಂಶ ಇಲ್ಲ ಅಂತ ಹೇಳುತ್ತಿದ್ದಾರೆ. ಇನ್ನು ಕೆಲವರು ದೆಹಲಿ ನಡೆ ತಪ್ಪು. ಅದರಿಂದಲೇ ನೂರಾರು ಜನ ಸಾವನ್ನಪ್ಪುವಂತಾಗಿದೆ. ಅಂತಹ ಸಂದರ್ಭದಲ್ಲಿ ದೆಹಲಿ ಆ ರೀತಿ ನಡೆದುಕೊಂಡಿದ್ದು ತಪ್ಪು ಅಂತ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಇದು ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ ಆಪ್‌ ಮುಖಂಡರು ಕೂಡ ಹೇಳಿಕೆ ನೀಡಿದ್ದಾರೆ.

ಕಚ್ಚಾಟ ಬಿಡೋಣ ಎಂದ ಮುಖ್ಯಮಂತ್ರಿ ಕೇಜ್ರಿವಾಲ್‌
ಮೂರನೇ ಅಲೆ ಎದುರಿಸಲು ಸಿದ್ಧರಾಗೋಣ ಅಂತ ಕರೆ

ಬಿಜೆಪಿ, ಕಾಂಗ್ರೆಸ್‌, ಆಪ್‌ ಮುಖಂಡರ ವಾದ ತಾರಕಕ್ಕೇರುತ್ತಿದ್ದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಈ ವರದಿಯನ್ನು ಬೋಗಸ್‌ ಅಂತ ಅಲ್ಲಗೆಳೆದಿದ್ದಾರೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕೂಡ ಟ್ವೀಟ್‌ ಮಾಡಿದ್ದಾರೆ. ಹಿಂದಿಯಲ್ಲಿ ಟ್ವೀಟ್‌ ಮಾಡಿರುವ ಅವರು, ‘ಮೂರನೇ ಅಲೆಯ ಎಚ್ಚರಿಕೆ ನಮ್ಮ ಮುಂದೆ ಇದೆ. ನಿಮ್ಮ  ಬಡಿದಾಟ ಮುಗಿದಿದ್ದರೆ ನಾವು ಕೆಲಸ ಆರಂಭಿಸೋಣವೇ? ಮೂರನೇ ಅಲೆಯಲ್ಲಿ ಒಬ್ಬ ರೋಗಿ ಕೂಡ ಆಕ್ಸಿಜನ್‌ ಕೊರತೆ ಎದುರಿಸದಂತೆ ನೋಡಿಕೊಳ್ಳೋಣ’ ಅಂದಿದ್ದಾರೆ.

ದೆಹಲಿಯಲ್ಲಿಯೂ ಆಕ್ಸಿಜನ್‌ ಕೊರತೆಯಿಂದ ಸಾವನ್ನಪ್ಪಿದ್ರು
ಸುಮಾರು 50 ಜನ ಮರಣ ಹೊಂದಿದ ವರದಿಯಾಗಿತ್ತು

ಮೇ ತಿಂಗಳಲ್ಲಿ ತಲೆದೋರಿದ ಮೆಡಿಕಲ್‌ ಆಕ್ಸಿಜನ್‌ ಕೊರತೆ ಅಷ್ಟಿಷ್ಟಲ್ಲ. ದೆಹಲಿಯ ಸರ್‌ ಗಂಗಾ ರಾಮ್‌ ಆಸ್ಪತ್ರೆಯಲ್ಲಿ 25 ಜನ, ಜೈಪುರ್‌ ಗೋಲ್ಡನ್‌ ಆಸ್ಪತ್ರೆಯಲ್ಲಿ 25 ಜನ ಆಕ್ಸಿಜನ್‌ ಕೊರತೆಯಿಂದಲೇ ಸಾವನ್ನಪ್ಪಿದ್ರು. ತಮ್ಮ ಬಂಧು ಬಳಗದವರನ್ನು ಕಳೆದುಕೊಂಡ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ರು. ಶವಗಳ ಮುಂದೆ ನಿಂತು ಕಣ್ಣೀರು ಸುರಿಸಿದ್ರು. ಆ ದುರ್ಘಟನೆಯನ್ನು ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಹಾಕಿದ್ವು. ದೆಹಲಿ ಸರ್ಕಾರ ತಮಗೆ ಆಕ್ಸಿಜನ್‌ ಪೂರೈಕೆ ಮಾಡಿ ಅಂತ ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿತ್ತು.

ಚಾಮರಾಜನಗರದಲ್ಲಿಯೂ 24 ಜನ ಸಾವನ್ನಪ್ಪಿದ್ರು
ಆ ದುರಂತಕ್ಕೆ ಆಕ್ಸಿಜನ್‌ ಕೊರತೆಯೇ ಕಾರಣವಾಗಿತ್ತು

ಏಪ್ರಿಲ್‌, ಮೇ ತಿಂಗಳಲ್ಲಿ ಆಕ್ಸಿಜನ್‌ ಕೊರತೆ ಕರ್ನಾಟಕ ರಾಜ್ಯದಲ್ಲಿಯೂ ತಲೆದೋರಿತ್ತು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಒಂದೇ ದಿನ 24 ರೋಗಿಗಳು ಸಾವನ್ನಪ್ಪಿದ್ರು. ತಮ್ಮ ಸಂಬಂಧಿಕರನ್ನು, ಕುಟುಂಬದವರನ್ನು ಕಳೆದುಕೊಂಡು ಜನ ಗೋಳಾಡಿದ್ರು. ಈ ವೇಳೆ ಸರ್ಕಾರಕ್ಕೆ, ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ರು. ಜನರ ಗೋಳಾಟ, ನರಳಾಟ ನೋಡಿದ್ರೆ ಕರುಳು ಹಿಂಡುವಂತಿತ್ತು. ಅಷ್ಟೇ ಅಲ್ಲ, ಕಲಬುರಗಿಯಲ್ಲಿಯೂ ಆಕ್ಸಿಜನ್‌ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ್ರು.

ಕಾಳ ಸಂತೆಯಲ್ಲೂ ಸಿಕ್ತಿತ್ತು ಆಕ್ಸಿಜನ್‌
ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಬಹಳಷ್ಟು ಜನರಿಗೆ ಕಾಣಿಸಿಕೊಂಡಿದ್ದು ಉಸಿರಾಟದ ಸಮಸ್ಯೆ. ಪ್ರತಿ ಆಸ್ಪತ್ರೆಯಲ್ಲಿಯೂ ಆಕ್ಸಿಜನ್‌ ಬೆಡ್‌ಗಾಗಿ ಬೇಡಿಕೆ ಇತ್ತು. ಕೆಲವು ಆಸ್ಪತ್ರೆಗಳು ಆಕ್ಸಿಜನ್‌ ಬೆಡ್‌ ಇಲ್ಲ ಅಂತ ಬೋರ್ಡ್‌ ಅನ್ನೇ ನೇತುಹಾಕಿ ಬಿಟ್ಟಿದ್ವು. ಅಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಆದ್ರೆ, ಕಾಳಸಂತೆಯಲ್ಲಿ ಮಾತ್ರ ಬೇಕಾಬಿಟ್ಟಿ ಆಕ್ಸಿಜನ್‌ ಸಿಲಿಂಡರ್‌ ಸಿಗುತ್ತಿತ್ತು. ರೋಗಿಗಳ ಸಂಬಂಧಿಕರು ಕಾಳಸಂತೆಯಲ್ಲಿಯೇ ದುಬಾರಿ ಮೊತ್ತಕ್ಕೆ ಖರೀದಿಸಿ ರೋಗಿಗಳಿಗೆ ಒದಗಿಸುತ್ತಿದ್ರು. ಕಾಳಸಂತೆಯ ಮಾರಾಟಕ್ಕೆ ಕಡಿವಾಣ ಹಾಕಲು ಸರ್ಕಾರ ಎಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗಲಿಲ್ಲ.

ಸಮಿತಿ ನೀಡಿದ್ದು ಪೂರ್ಣ ವರದಿಯಲ್ಲ
ಪೂರ್ಣವರದಿ ನಂತರವೇ ದೆಹಲಿ ಬಣ್ಣ ಬಯಲು

ಹೌದು, ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿ ನೀಡಿರುವ ವರದಿ ಮಧ್ಯಂತರ ವರದಿಯಾಗಿದೆ. ಹೀಗಾಗಿ ದೆಹಲಿ ಸರ್ಕಾರ ತಪ್ಪು ಮಾಡಿದ್ದು ಸತ್ಯ ಅಂತ ಹೇಳಲಾಗದು. ಇದನ್ನೇ ಕೆಲವು ತಜ್ಞರು ಹೇಳಿದ್ದಾರೆ. ಸಂಪೂರ್ಣ ವರದಿ ಬಹಿರಂಗಗೊಂಡ ನಂತರವೇ ಸತ್ಯಾಸತ್ಯತೆ ಏನು ಅನ್ನೋದು ತಿಳಿದುಬರಲಿದೆ. ಏಮ್ಸ್‌ ನಿರ್ದೇಶಕರಾಗಿರುವ ಡಾ.ಗುಲೇರಿಯಾ ಕೂಡ ಪೂರ್ಣ ವರದಿ ಬಂದ ಮೇಲೆಯೇ ಸತ್ಯ ತಿಳಿಯಲಿದೆ. ಅದಕ್ಕೂ ಮುನ್ನ ಮಾತಾಡುವುದು ತಪ್ಪಾಗುತ್ತದೆ ಅಂತ ತಿಳಿಸಿದ್ದಾರೆ.

ಮೂರನೇ ಅಲೆಗೆ ಈಗಿನಿಂದಲೇ ಬೇಕಿದೆ ಸಿದ್ಧತೆ
ಆಕ್ಸಿಜನ್‌ ಕೊರತೆ ಆಗದಂತೆ ನೋಡಿಕೊಳ್ಳಬೇಕಿದೆ

ಈಗಾಗಲೇ ಕೊರೊನಾ ರೂಪಾಂತವಾಗಿ ಡೆಲ್ಟಾ, ಡೆಲ್ಟಾ ಪ್ಲಸ್‌ ಆಗಿ ಕಾಣಿಸಿಕೊಳ್ಳುತ್ತಿದೆ. ಡೆಲ್ಟಾ ಪ್ಲಸ್‌ ವೈರಸ್‌ ವ್ಯಾಕ್ಸಿನ್‌ ತಗೊಂಡವರ ಮೇಲೆಯೂ ಪರಿಣಾಮ ಬೀರಲಿದೆ ಅನ್ನುವಂತಹ ವರದಿಯನ್ನು ತಜ್ಞರೇ ನೀಡಿದ್ದಾರೆ. ಅದರಲ್ಲಿಯೂ ಮೂರನೇ ಅಲೆ ಪ್ರಮುಖವಾಗಿ ಮುಕ್ಕಳ ಮೇಲೆ ಪರಿಣಾಮ ಬೀರಲಿದೆ ಅಂತ ಹೇಳಲಾಗ್ತಿದೆ. ಈ ನಿಟ್ಟಿಲ್ಲಿ ಮೂರನೇ ಅಲೆ ಎದುರಿಸಲು ಇಡೀ ದೇಶವೇ ಸರ್ವ ಸನ್ನದ್ಧವಾಗಬೇಕು. ಎರಡನೇ ಅಲೆಯಲ್ಲಿ ಆದಂತಹ ದುರಂತಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳಬೇಕು.

ಸುಪ್ರೀಂಕೋರ್ಟ್‌ ರಚಿಸಿರುವ ಸಮಿತಿ ನೀಡಿರುವ ಮಧ್ಯಂತರ ವರದಿ ನಿಜಕ್ಕೂ ಆಘಾತ ತಂದಿದೆ. ವರದಿ ಪ್ರಕಾರ ದೆಹಲಿ ಹೆಚ್ಚಿನ ಆಕ್ಸಿಜನ್‌ ಪಡೆದಿದ್ದರೆ ಅದು ತಪ್ಪು. ಆದ್ರೆ, ಪೂರ್ಣ ವರದಿ ಬಂದ ನಂತರವೇ ಅದರ ಚಿತ್ರಣ ಏನು ಅನ್ನೋದು ತಿಳಿಯಲಿದೆ.

The post ಅಗತ್ಯಕ್ಕಿಂತ ಹೆಚ್ಚು ಆಮ್ಲಜನಕ ಕೇಳಿ ಇತರೆ ರಾಜ್ಯಗಳಲ್ಲು ಆಕ್ಸಿಜನ್ ಸಮಸ್ಯೆಗೆ ಕಾರಣವಾಯ್ತಾ ದೆಹಲಿ? appeared first on News First Kannada.

Source: newsfirstlive.com

Source link