ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯವನ್ನು ಕಡಿತಗೊಳಿಸುವುದಾಗಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಸದ್ಯ ರಾಜ್ಯ ಸರ್ಕಾರದ ಮಾರ್ಗಸೂಚಿಗಳ ಅನ್ವಯ ಬೆಳಗ್ಗೆ 6 ರಿಂದ 10 ಗಂಟೆವರೆಗೂ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈ ಸಮಯವನ್ನು ಬೆಳಗ್ಗೆ 6 ರಿಂದ 8 ಗಂಟೆವರೆಗೆ ಮಾತ್ರ ಅವಕಾಶ ನೀಡುವುದರ‌ ಬಗ್ಗೆ ಚಿಂತನೆ ನಡೆಸಲಾಗಿದೆ. ಮುಂದಿನ ಹತ್ತು ದಿನಗಳಲ್ಲಿ ಕೋವಿಡ್ ಕಂಟ್ರೋಲ್ ಸಿಗುವ ಸಾಧ್ಯತೆ ಇದೆ. ಇದಕ್ಕೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವುದರ ಬಗ್ಗೆ ಚಿಂತನೆ ಮಾಡಲಾಗುವುದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಶೇ.40 ಸರಾಸರಿ ಇದ್ದು, ಮೈಸೂರು ತಾಲೂಕಿನ ಶೇ.80 ರಷ್ಟಿದೆ. ನಗರ ಪ್ರದೇಶದಲ್ಲಿ ಶೇ.35 ರಷ್ಟಿದೆ. ನಂಜನಗೂಡಿನಲ್ಲಿ ಶೇ.80 ರಷ್ಟಿದೆ ಎಂದು ವಿವರಿಸಿದ್ದಾರೆ.

ಪ್ರಧಾನಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಸಿ, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದೇವೆ. ಕೋವಿಡ್​​ ಮಿತ್ರಾ ಯೋಜನೆ ಬಗ್ಗೆ ವಿವರಣೆ ನೀಡಿದ್ದೇವೆ. ಜಿಲ್ಲೆಯ 175 ಪ್ರಾಥಮಿಕ ಕೇಂದ್ರಗಳು ಕೋವಿಡ್ ಮಿತ್ರ ಆಗಿದೆ. ಕೋವಿಡ್ ಮಿತ್ರಾ ಚೆನ್ನಾಗಿ ವರ್ಕ್ ಆಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿ ಕೊರೊನಾ ಮುಕ್ತ ಹಳ್ಳಿ ಎಂದು ಘೋಷಣೆ ಮಾಡಲು ಸ್ಪರ್ಧೆ ನಡೆಸಲಿದ್ದೇವೆ. ಇದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತೇವೆ. ಕೊರೊನಾ ಮುಕ್ತ ಹಳ್ಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ಕಾರ್ಯ ನಡೆಯಲಿದೆ. ಆಕ್ಸಿಜನ್ ಕೊರತೆ ಇರುವ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ ನಮ್ಮಲ್ಲಿ ಆಕ್ಸಿಜನ್​ ಬೆಡ್​ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಸೋಂಕಿನ ಲಕ್ಷಣ ಇದ್ದವರು‌ ಕೋವಿಡ್​ ಮಿತ್ರಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಸೋಂಕಿತರಿಗೆ ಮೊದಲ 5 ದಿನ ಮುಖ್ಯವಾದದ್ದು. ತಕ್ಷಣ ಅಗತ್ಯ ಮೆಡಿಸಿನ್ ಕೊಡುವ ಕೆಲಸವಾಗುತ್ತಿದೆ. ಇದರಿಂದ ನಗರ ಆಸ್ಪತ್ರೆಗಳನ್ನ ಅವಲಂಭನೆ ಮಾಡುವುದು ಕಡಿಮೆಯಾಗಿದೆ. ಇದೇ ರೀತಿ‌ ನಗರದಲ್ಲು ಕೋವಿಡ್ ಮಿತ್ರ ಸೆಂಟರ್ ತೆರೆಯುತ್ತಿದ್ದೇವೆ. ಅಲ್ಲದೇ ಟೆಲಿ ಮೆಡಿಸಿನ್ ಯೋಜನೆಯೂ ಜಿಲ್ಲೆಯಲ್ಲಿ ಚೆನ್ನಾಗಿ ವರ್ಕ್ ಆಗುತ್ತಿದೆ. ‘ಯುಕೆ’ಯಲ್ಲಿರುವ ಮೈಸೂರಿನ ವೈದ್ಯರು ಭಾಗಿಯಾಗುತ್ತಿದ್ದಾರೆ. ನುರಿತ ವೈದ್ಯರಿಂದ ಜನರಿಗೆ ಟೆಲಿ ಟ್ರೀಟ್ ಮೆಂಟ್ ಕೊಡುವ ಕೆಲಸವಾಗುತ್ತಿದೆ. ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

The post ಅಗತ್ಯ ವಸ್ತುಗಳ ಖರೀದಿ ಸಮಯ ಕಡಿತಗೊಳಿಸಲು ಚಿಂತನೆ- ರೋಹಿಣಿ ಸಿಂಧೂರಿ appeared first on News First Kannada.

Source: newsfirstlive.com

Source link