ಬಳ್ಳಾರಿ: ಹಳ್ಳಿ ಜನ, ತಮ್ಮ ಹಳ್ಳಿ ಜನರ ಮಾತೇ ಕೇಳೋದು. ಅದೆಂಥದ್ದೇ ಗಾಳಿ ಸುದ್ದಿ ಇರ್ಲಿ, ಬಲು ಬೇಗ ನಂಬೋ ಮುಗ್ಧರು ನಮ್ಮ ಹಳ್ಳಿಗರು.ಕೊರೊನಾ ವ್ಯಾಕ್ಸಿನ್‌ ವಿಚಾರದಲ್ಲೂ ಹಾಗೇ ಆಗಿತ್ತು. ಆದರೆ ಇಂತಹ ಜನರು ಈಗ ನಾವು ಹೇಳೋ ಸುದ್ದಿಯನ್ನು ಕೇಳಲೇಬೇಕು. ವ್ಯಾಕ್ಸಿನ್‌ಗೆ ಭಯ ಪಡೋರು ಮಾತ್ರ ತಪ್ಪದೇ ಈ ಸುದ್ದಿ ಓದಬೇಕು.

ಅವ್ರು ಕೇಳಲಿಲ್ಲ.. ಇವ್ರು ಬಿಡಲಿಲ್ಲ.. ಊರಲ್ಲಿದ್ರೆ ವ್ಯಾಕ್ಸಿನ್‌ ಹಾಕಿಸಿಕೊಳ್ಳಬೇಕಾಗುತ್ತೆ ಅಂತಾ ಜನ ಹೊಲಕ್ಕೆ ಹೋಗಿದ್ರು. ಹಾಗಂತ ತಪ್ಪಿಸಿಕೊಂಡಿರೋರನ್ನ ಅಧಿಕಾರಿಗಳು ಸುಮ್ನೆ ಏನೂ ಬಿಟ್ಟಿಲ್ಲ. ಹೊಲಕ್ಕೆ ಹೋದ್ರೂ ಅಲ್ಲಿಗೆ ಹೋಗಿ ವ್ಯಾಕ್ಸಿನ್‌ ಹಾಕಿ ಬಂದು ಬಿಟ್ಟಿದ್ದಾರೆ.
ನಡೆದಾಡದೇ ಇರುವಷ್ಟೇನು ವಯಸ್ಸಾಗಿಲ್ಲ. ಆದ್ರೆ ಏನ್‌ ಮಾಡೋದು ಹೇಳದೇ ಕೇಳದೇ ಬರೋ ಕಾಯಿಲೆಗೆ ಈ ಇಬ್ಬರಿಗೆ ನಡೆದಾಡೋಕೆ ಆಗೋದೇ ಇಲ್ಲ. ಆದ್ರೆ, ಕೊರೊನಾಗೆ ಅಂತಾ ತಗೊಂಡ ವ್ಯಾಕ್ಸಿನ್‌ ಇವ್ರ ಕಾಲಿಗೆ ಈಗ ಶಕ್ತಿ ತಂದಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ವ್ಯಾಕ್ಸಿನ್‌ ತಗೊಂಡ ಈ ಇಬ್ಬರಿಗೂ ಕಳೆದ 10 ವರ್ಷಗಳಿಂದಿದ್ದ ಕೀಲುನೋವು ವಾಸಿಯಾಗಿದೆ. ಕೇಳಿದ್ರೇನೆ ಆಶ್ಚರ್ಯ ಆಗುತ್ತಲ್ವಾ?

ಗುಡೇಕೋಟೆ ಗ್ರಾಮದ 10 ವರ್ಷಗಳಿಂದ ಬಳಲುತ್ತಿದ್ದ ಪಾಲಾಕ್ಷ, ಬಸವೇಶ ಅನ್ನೋರು ಈಗ ಕಾಯಿಲೆಗಳಿಂದ ಮುಕ್ತಿ ಪಡೆದಿದ್ದಾರೆ. ಫಸ್ಟ್ ಡೋಸ್ ವ್ಯಾಕ್ಸಿನ್​ ಪಡೆದ ಬಳಿಕ ಕೀಲು ನೋವು ಮಾಯವಾಗ್ಬಿಟ್ಟಿದೆ ಅನ್ನೋದು ಇವರ ಅಭಿಪ್ರಾಯ.

ಪಾಲಾಕ್ಷ ಅನ್ನೋರು ಮೈ-ಕೈ ನೋವು, ಶುಗರ್‌ನಿಂದ ಬಳಲುತ್ತಿದ್ದರು. ನಡೆಯಲೂ ಆಗದೇ ಮತ್ತೊಬ್ಬರ ಸಹಾಯ ಪಡೆಯುತ್ತಿದ್ದರು. ಇತ್ತ ಬಸವೇಶ ಅನ್ನೋರಿಗೆ 6 ವರ್ಷದಿಂದ ಕೀಲುನೋವು ಇತ್ತು. ಮೈ-ಕೈ ನೋವು, ಅಸ್ತಮಾದಿಂದ ನರಳುತ್ತಿದ್ದ ಬಸವೇಶ ಬಳ್ಳಾರಿಯ ವಿಮ್ಸ್‌ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಚಿಕಿತ್ಸೆ ಕೂಡಾ ತೆಗೆದುಕೊಂಡಿದ್ರು. ಆದರೆ ವಾಸಿಯಾಗಿರಲಿಲ್ಲ. ಚರಂಡಿಯಲ್ಲಿ ಬಿದ್ದು ಮತ್ತಷ್ಟು ಕಾಲುನೋವಾಗಿದ್ದರಿಂದ ಸ್ಟಿಕ್‌ ಹಿಡಿದು ನಡೆದಾಡುತ್ತಿದ್ದರು. ಆದ್ರೆ ಯಾವಾಗ ಇವರಿಬ್ಬರೂ ಕೋವಿಡ್‌ ವ್ಯಾಕ್ಸಿನ್‌ ತಗೊಂಡ್ರೋ, ಈಗ ಯಾರ ಸಹಾಯವಿಲ್ಲದೆ ಇಬ್ಬರೂ ನಾರ್ಮಲ್‌ ಆಗಿ ನಡೆದಾಡುತ್ತಿದ್ದಾರೆ.

ಬಳ್ಳಾರಿಯಲ್ಲಿ ಜನ ವ್ಯಾಕ್ಸಿನ್‌ ತೆಗೆದುಕೊಳ್ಳೋದಕ್ಕೆ ಅಂತಾ ಹಿಂದು ಮುಂದು ನೋಡ್ತಿದ್ರು. ಈ ಬಗ್ಗೆ ನ್ಯೂಸ್‌ಫಸ್ಟ್‌ ಕೂಡಾ ವರದಿ ಮಾಡಿ ಅಧಿಕಾರಿಗಳನ್ನು ಎಚ್ಚರಿಸಿದ ಮೇಲೆ ವ್ಯಾಕ್ಸಿನೇಷನ್‌ ಕಾರ್ಯ ಭರದಿಂದ ಸಾಗ್ತಿದೆ. ಹೀಗಾಗಿ, ನ್ಯೂಸ್‌ಫಸ್ಟ್‌ ವರದಿಗೆ ಡಿಹೆಚ್‌ಓ ಜನಾರ್ಧನ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಿಹೆಚ್‌ಓ ಹೇಳಿದ ಹಾಗೇ ವ್ಯಾಕ್ಸಿನ್‌ ಇಂದಾನೇ ಅವ್ರ ಕಾಯಿಲೆ ವಾಸಿಯಾಗಿದೆ ಅಂತಾ ವೈಜ್ಞಾನಿಕವಾಗಿ ಹೇಳೋಕೆ ಆಗಲ್ಲ. ಆದ್ರೆ, ಕಾಕತಾಳೀಯ ಎಂಬಂತೆ ವ್ಯಾಕ್ಸಿನ್​ನಿಂದ ಮಂಡಿನೋವು ಮಾಯವಾಗಿದೆ. ಏನೇ ಇರ್ಲಿ, ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕೋ ಜನರಿಗೆ ಇವರಿಬ್ಬರ ಕಥೆ ಮಾದರಿ. ಈಗ್ಲಾದ್ರೂ ಭಯ ಬಿಟ್ಟು ಲಸಿಕೆ ತೆಗೆದುಕೊಳ್ಳಬೇಕಿದೆ.

The post ಅಚ್ಚರಿಯಾದ್ರೂ ಸತ್ಯ: ವ್ಯಾಕ್ಸಿನ್​ನಿಂದ ವಾಸಿಯಾಯ್ತು 10 ವರ್ಷದಿಂದ ಕಾಡಿದ್ದ ಕಾಯಿಲೆ appeared first on News First Kannada.

Source: newsfirstlive.com

Source link