ಸದಾ ಕುತೂಹಲ ಹುಟ್ಟಿಸುವ ,ಅಷ್ಟೇ ಶಾಕ್ ನೀಡುವ, ಆಗಾಗ ಮಾತ್ರವೇ ಕಾಣಿಸಿಕೊಳ್ಳುವ ಉತ್ತರ ಕೊರಿಯಾ ಸರ್ವಾಧಿಕಾರಿ ಮತ್ತೊಂದು ನ್ಯೂಸ್ ಕೊಟ್ಟಿದ್ದಾರೆ. ಸರ್ವಾಧಿಕಾರಿ ಕಿಮ್ ಈಗ ಹೇಳ್ತಿರೋದು ನಿಜಕ್ಕೂ ಅಚ್ಚರಿ ತಂದಿದೆ. ಉತ್ತರ ಕೊರಿಯಾದಲ್ಲಿ ಈವರೆಗೂ ಒಂದೇ ಒಂದು ಕೊರೊನಾ ಕೇಸ್ ಪತ್ತೆಯಾಗಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಗೆ ರಿಪೋರ್ಟ್ ಕೊಡಿಸಿ ಬಿಟ್ಟಿದ್ದಾರೆ ಜಾಂಗ್.

ಇವರನ್ನು ನೀವೆಲ್ಲ ನೋಡಿಯೇ ಇರ್ತೀರಾ. ಆಗಾಗ ವಿಶ್ವದಲ್ಲೆಲ್ಲ ಸುದ್ದಿ ಸದ್ದು ಮಾಡುವ ಸರ್ವಾಧಿಕಾರಿ ಇವರು. ಹೆಸರು ಕಿಮ್ ಉನ್ ಜಾಂಗ್. ಇಲ್ಲೇ ಪೂರ್ವ ಏಷ್ಯಾದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ,ಈಗ ಮತ್ತೊಂದು ರಿಪೋರ್ಟ್ ಕೊಡಿಸಿ ಬಿಟ್ಟಿದ್ದಾರೆ. ಇದು ನಿಜಕ್ಕೂ ಅಚ್ಚರಿ ಪಡುವಂತಹ ವರದಿ. ಉತ್ತರ ಕೊರಿಯಾ ಸಂಪೂರ್ಣ ಕೊರೊನಾ ಮುಕ್ತವಾಗಿದೆ. ಇಲ್ಲಿ ಒಂದೇ ಒಂದು ಪ್ರಕರಣವೂ ಪತ್ತೆಯಾಗಿಲ್ಲ ಅಂತ ನೇರಾ ನೇರ ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿದೆ. ಅಬ್ಬಾ. ಇದೆಂತಹಾ ಪವಾಡ ಅಂತೀರಾ. ನಿಜಕ್ಕೂ ಪವಾಡವೇ. ಕಾರಣ ವಿಶ್ವದ 200ಕ್ಕೂ ಹೆಚ್ಚು ದೇಶಗಳಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಇದರಿಂದ ಮುಕ್ತವಾಗಿರೋ ದೇಶವೇ ಇಲ್ಲ. ಆದ್ರೆ ಉತ್ತರ ಕೊರಿಯಾದಲ್ಲಿ ಕೊರೊನಾ ಕೇಸೇ ಪತ್ತೆಯಾಗಿಲ್ಲ ಅಂದ್ರೆ ಆಶ್ಚರ್ಯವಾಗೋದಿಲ್ವಾ. ಆಶ್ಚರ್ಯವಾದರೂ ನಂಬಲೇಬೇಕು. ಕಾರಣ ಇದು ಉತ್ತರ ಕೊರಿಯಾ. ಬೇರೆ ದೇಶಗಳಲ್ಲಾದರೆ ಇದೆಲ್ಲ ಸುಳ್ಳು ಅಂತ ಹೇಳಿ ಬಿಡಬಹುದಿತ್ತು. ಅಥವಾ ಮುಚ್ಚಿಡುತ್ತಿದ್ದಾರೆ ಅಂತ ಆರೋಪಿಸಬಹುದಿತ್ತು. ಆದರೆ ಈ ಕಿಮ್ ಉನ್ ಜಾಂಗ್ ವಿರುದ್ಧ ಮಾತನಾಡೋದಿರಲಿ ಈ ದೇಶದ ಜನ ಉಸಿರು ಕೂಡ ಎತ್ತಲ್ಲ. ದೊಡ್ಡದಾಗಿ ಉಸಿರಾಡಿ ಬಿಟ್ಟರೆ ಎಲ್ಲಿ ಕಿಮ್ ಗೆ ಗೊತ್ತಾಗಿ ಬಿಡುತ್ತೆ ಅಂತ ನಿಧಾನವಾಗಿಯೇ ಉಸಿರಾಡಬಹುದು ಇಲ್ಲಿನ ಜನ.

ವಿಶ್ವ ಆರೋಗ್ಯ ಸಂಸ್ಥೆಗೆ ಉತ್ತರ ಕೊರಿಯಾದಿಂದ ವರದಿ

ಕಿಮ್ ಉನ್ ಜಾಂಗ್ ಎಷ್ಟು ವರ್ಣರಂಜಿತನೋ ಅಷ್ಟೇ ಕ್ರೂರಿ ಅಂತಾನೂ ಹೇಳಲಾಗುತ್ತೆ. ಅಷ್ಟೇ ಅಲ್ಲ, ಈತ ಅಷ್ಟೇ ವಿಚಿತ್ರ ಮನುಷ್ಯ ಕೂಡ. ಉತ್ತರ ಕೊರಿಯಾದ ಜನ ಇವನ ಬಗ್ಗೆ ಅದ್ಯಾವ ಭಾವನೆ ಇದೆಯೋ ಗೊತ್ತಿಲ್ಲ. ಏನೇ ಇದ್ದರೂ ವ್ಯಕ್ತಪಡಿಸುವಂತೆಯೇ ಇಲ್ಲ. ಕಾರಣ ಈ ದೇಶ ಇರೋದೇ ಹೀಗೆ. ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ, ಮಾಧ್ಯಮ ಸ್ವಾತಂತ್ರ್ಯ ಮೊದಲೇ ಇಲ್ಲ, ಇನ್ನು ಸಾಮಾಜಿಕ ಜಾಲತಾಣಗಳಂತೂ ಇಲ್ಲವೇ ಇಲ್ಲ. ಅಬ್ಬಾ. ಇದೆಂತಾ ದೇಶ ಅಂದುಕೊಂಡ್ರೆ ಇದು ಮೊದಲಿನಿಂದಲೂ ಇರೋದೇ ಹೀಗೆ. ಇಲ್ಲಿನ ಜನಕ್ಕೆ ಹೀಗೆಯೇ ಬದುಕಿ ಅಭ್ಯಾಸವಾಗಿ ಬಿಟ್ಟಿದೆ. ಕಿಮ್ ಏನು ಅಪ್ಪಣ ಕೊಡುತ್ತಾರೋ ಅದರಂತೆ ನಡೆದುಕೊಳ್ಳುವುದಷ್ಟೇ ಇಲ್ಲಿನ ಜನರ ಕೆಲಸ.ಅದು ಬಿಟ್ಟರೆ ಸದಾ ಕಿಮ್ ಆರಾಧಿಸೋದು, ಹೊಗಳೋದು ಬಿಟ್ರೆ ಬೇರೆ ಯಾವುದು ಇಲ್ಲಿ ಕಾಣಲ್ಲ.

ಈ ಸರ್ವಾಧಿಕಾರಿಯ ನಿಲುವು ನೋಡಿ. ನೋಡಲು ವಿಚಿತ್ರ. ನಡೆಯುವುದೂ ವಿಚಿತ್ರ. ಮಾತನಾಡುವುದು ಕಡಿಮೆ. ಇನ್ನು ಇವರ ಹೇರ್ ಸ್ಟೈಲ್ ಸಿಕ್ಕಾಪಟ್ಟೆ ಫೇಮಸ್. ಇವರಷ್ಟೇ ಅಲ್ಲ. ಈ ದೇಶದ ಪುರುಷರೆಲ್ಲಾ ಇವರಂತೆ ಹೇರ್ ಕಟ್ ಮಾಡಿಸಿಕೊಳ್ಳಬೇಕು.ಇದು ಈ ಸರ್ವಾಧಿಕಾರಿಯ ಆಜ್ಞೆ. ಮೀರಿದರೆ ಗೊತ್ತಲ್ಲ..ಕೂದಲು ಅಲ್ಲ ,ಪ್ರಾಣವೇ ಇರೋದಿಲ್ಲ. ಇಂತರ ಸರ್ವಾಧಿಕಾರಿಯ ದೇಶದಲ್ಲಿ ಕೊರೊನಾನೇ ಪತ್ತೆಯಾಗಿಲ್ಲ ಅಂದ್ರೆ ಅಚ್ಚರಿಯಾಗುತ್ತೆ. ಉತ್ತರ ಕೊರಿಯಾದ ಉತ್ತರಕ್ಕೆ ರಷ್ಯಾ,ಚೀನಾದಂತಹ ಬಲಾಢ್ಯ ದೇಶಗಳಿದ್ದಾವೆ. ದಕ್ಷಿಣಕ್ಕೆ ದಕ್ಷಿಣ ಕೊರಿಯಾ ಇದೆ. ಉದ್ದಕ್ಕೂ ಗಡಿ ಹಂಚಿಕೊಂಡ ಈ ದೇಶಕ್ಕೆ ಹೋಗಿ ಬರೋರೇನು ಕಡಿಮೆ ಇಲ್ಲ. ಆದ್ರೆ ಯಾರೂ ಕೊರೊನಾ ಹೊತ್ತೊಯ್ದೇ ಇಲ್ವಾ ಅಂತ ಕೇಳಿದ್ರೆ ಯಾರೂ ಇಲ್ಲಿ ಬಾಯಿ ಬಿಡಲ್ಲ. ಬಾಯಿ ಬಿಟ್ಟರೆ ಇಲ್ಲಿ ಬದುಕೇ ಇಲ್ಲ.

ನೋಡಿ ಈ ಕಿಮ್ ಉನ್ ಜಾಂಗ್ ಮೊದಲಿನಿಂದಲೂ ಇದ್ದಿದ್ದೇ ಹೀಗೆ. ಇವರು ಹುಟ್ಟಿ ವಿದೇಶದಲ್ಲಿ ಶಿಕ್ಷಣ ಪಡೆದು ಬಂದ ಮೇಲೆ ಅಧಿಕಾರ ವಹಿಸಿಕೊಳ್ತಾರೆ. ತಮ್ಮ ತಂದೆಯ ಬಳಿಕ ಕುಟುಂಬದ ಉಳಿದ ಸದಸ್ಯರನ್ನು ಮುಗಿಸಿ ಬಿಟ್ಟಿರುವ ಮಾತೂ ಇದೆ. ವಂಶ ಪಾರಂಪರ್ಯ ಸರ್ವಾಧಿಕಾರಿಯ ನಡೆ ನುಡಿ ಎಲ್ಲವೂ ವಿಚಿತ್ರ. ಈ ಮನುಷ್ಯನಿಗೆ ಎದುರಾಡುವ ಜನರೇ ಈ ದೇಶದಲ್ಲಿ ಇಲ್ಲ. ಈ ದೇಶದಲ್ಲಿ ಏನಿಲ್ಲ ಏನುಂಟು ಅನ್ನೋದು ಹೊರ ಜಗತ್ತಿಗೇ ಗೊತ್ತೇ ಆಗಲ್ಲ. ಅಷ್ಟೊಂದು ನಿರ್ಬಂಧ ಇಲ್ಲಿದೆ. ಇಷ್ಟ ಬಂದ ಹಾಗೆ ಇರೋ ಹಾಗಿಲ್ಲ. ಸರ್ಕಾರದ ವಿರುದ್ಧ ಮಾತನಾಡೋ ಹಾಗಿಲ್ಲ. ಬಹುಷಃ ಕೊರೊನಾ ಕೂಡ ಈ ಸರ್ವಾಧಿಕಾರಿ ಕಿಮ್ ಉನ್ ಜಾಂಗ್ ಮಾತನ್ನೇ ಕೇಳಿರಬೇಕು. ಹೀಗಾಗಿ ಈ ದೇಶದಲ್ಲಿ ಕೊರೊನಾ ಯಾರಲ್ಲೂ ಎಂಟ್ರಿ ಕೊಡದೇ ಇರಬಹುದು.

ಈ ಸರ್ವಾಧಿಕಾರಿ ವಿಶ್ವದ ದೊಡ್ಡಣ್ಣನನ್ನೇ ಹೆದರಿಸುತ್ತಾನೆ. ಹೈಡ್ರೋಜನ್ ಬಾಂಬ್ ಪ್ರಯೋಗ ಮಾಡ್ತಾ ಇದ್ದೇವೆ ಅಂತ ದಿಢೀರ್ ಅಂತ ಅನೌನ್ಸ್ ಮಾಡ್ತಾರೆ. ಮರುದಿನವೇ ಅಮೆರಿಕದ ಜೊತೆ ಸ್ನೇಹ ಹಸ್ತಾ ಚಾಚ್ತಾರೆ ಜಾಂಗ್. ಒಮ್ಮೊಮ್ಮೆ ತಿಂಗಳುಗಟ್ಟಲೇ ದೇಶವಾಸಿಗಳ ಕಣ್ಣಿಗೇ ಬೀಳೋದಿಲ್ಲ ಈ ಕಿಮ್ ಉನ್ ಜಾಂಗ್. ಕಳೆದ ಕೆಲವು ತಿಂಗಳು ಹಿಂದೆಯಂತೂ ಕಿಮ್ ಉನ್ ಜಾಂಗ್ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಅನ್ನೋ ವದಂತಿಯೂ ಹಬ್ಬಿತ್ತು. ಇನ್ನು ಕೆಲವರು ಕಿಮ್ ವಿದೇಶದಲ್ಲಿ ಟ್ರೀಟ್ ಮೆಂಟ್ ಪಡೆದುಕೊಳ್ತಾ ಇದಾರೆ ಅಂತ ಹೇಳ್ತಿದ್ರು. ಆದರೆ ,ಜಗತ್ತಿಗಿರಲಿ,ದೇಶವಾಸಿಗಳಿಗೂ ಇವರ ಬಗ್ಗೆ ಮಾಹಿತಿ ಇರಲಿಲ್ಲ. ಹಾಗಂತ ಯಾರೂ ಕಿಮ್ ಎಲ್ಲಿ ಅಂತ ಪ್ರಶ್ನೆ ಮಾಡುವ ಹಾಗೂ ಇರಲಿಲ್ಲ. ಕೊನೆಗೊಂದು ದಿನ ತಮ್ಮ ಎಂದಿನ ಸ್ಟೈಲಿನಲ್ಲೇ ಕಿಮ್ ಪ್ರತ್ಯಕ್ಷರಾದರು. ಈಗ ಮತ್ತದೇ ರೀತಿ ಆಡಳಿತ ಮುಂದುವರಿದೇ ಇದೆ. ಇಂತಹ ಕಿಮ್ ಈಗ ಕೊರೊನಾನೇ ಇಲ್ಲ ನಮ್ಮ ದೇಶದಲ್ಲಿ ಅಂತಿದಾರೆ. ಇದ್ದರೂ ಇರಬಹುದು. ಆದ್ರೆ ಇಲ್ಲಿನ ಜನರಿಗೆ ವಾಸ್ತವ ಸಂಗತಿ ಗೊತ್ತಿರುತ್ತೆ. ಆದರೆ ಬಾಯಿ ಬಿಡ್ತಾ ಇಲ್ಲ. ಯಾರಿಗೂ ಹೇಳ್ತಾ ಇಲ್ಲ. ಹೇಳಿದರೆ ಅವರ ಕಥೆ ಅಷ್ಟೇ. ಕೊರೊನಾ ಮೊದಲು ಬಂದಾಗ ಒಬ್ಬ ಸೋಂಕಿತ ಉತ್ತರ ಕೊರಿಯಾ ಗಡಿಯೊಳಗೆ ಬಂದು ಬಿಟ್ಟ ಅಂತ ಕೊಲ್ಲಿಸಿಯೇ ಬಿಟ್ಟರಂತೆ ಈ ಕಿಮ್. ಅಂದ್ರೆ ಬಹುಷಃ ಕೊರೊನಾ ಬಂದವರೂ ಕೂಡ ತಮಗೆ ಕೊರೊನಾ ಬಂದಿದೆ ಅಂತ ಹೇಳಿಕೊಳ್ಳಲೇ ಇಲ್ಲವೇನೋ.ಹೀಗೆ ಸೋಂಕಿತರನ್ನು ಕೊಲ್ಲಿಸಿ ಬಿಟ್ಟರೆ ಎಂಬ ಭಯದಿಂದ ಅದೆಷ್ಟು ಮಂದಿ ಪ್ರಾಣವನ್ನೇ ಕಳೆದುಕೊಂಡಿದ್ದಾರೋ ಗೊತ್ತಿಲ್ಲ. ಇದನ್ನು ಪರಿಶೀಲನೆ ಮಾಡೋಕೆ ಇಲ್ಲಿಗೆ ವಿಶ್ವ ಆರೋಗ್ಯ ಸಂಸ್ಥೆಯ ತಂಡವೂ ಬರಲ್ಲ,ಯಾರೂ ಬರಲ್ಲ. ಯಾಕಂದ್ರೆ ಇದು ಉತ್ತರ ಕೊರಿಯಾ. ಇಲ್ಲಿರೋದು ಸರ್ವಾಧಿಕಾರಿ ಕಿಮ್ ಉನ್ ಜಾಂಗ್ ಆಡಳಿತ.

ಶೀತ ಜ್ವರ,ಉಸಿರಾಟದ ಸಮಸ್ಯೆ ಕೆಲವರಲ್ಲಿ ಕಾಣಿಸಿತ್ತು

ಉತ್ತರ ಕೊರಿಯಾದಲ್ಲಿ ಏಪ್ರಿಲ್‌ ವೇಳೆಗೆ 25,986 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ, ಒಂದೇ ಒಂದು ಸೋಂಕು ಪ್ರಕರಣ ಪತ್ತೆಯಾಗಿಲ್ಲ ಅಂತ ವಿಶ್ವ ಆರೋಗ್ಯ ಸಂಸ್ಥೆಗೆ ಉತ್ತರ ಕೊರಿಯಾ ಸರ್ಕಾರ ತಿಳಿಸಿ ಬಿಟ್ಟಿದೆ. ಏಪ್ರಿಲ್ 23ರಿಂದ 29ರ ಅವಧಿಯಲ್ಲಿ 751 ಮಂದಿಯನ್ನು ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 139 ಮಂದಿಯಲ್ಲಿ ಶೀತಜ್ವರ ಮತ್ತು ಉಸಿರಾಟ ಸಮಸ್ಯೆ ಕಾಣಿಸಿಕೊಂಡಿತ್ತು. ಆದ್ರೆ ಕೊರೊನಾ ಬಂದಿರಲಿಲ್ಲ ಅಂತಾನೇ ಉತ್ತರ ಕೊರಿಯಾದ ವಾದ. ಆದರೆ, ಸಂಪೂರ್ಣ ಕೊರೊನಾ ಮುಕ್ತವಾಗಿದೆ ಅಂತ ಉತ್ತರ ಕೊರಿಯಾದ ಹೇಳ್ತಿರೋದ್ರ ಬಗ್ಗೆ ತಜ್ಞರು ತೀವ್ರ ಅನುಮಾನ ವ್ಯಕ್ತಪಡಿಸ್ತಾ ಇದಾರೆ. ಆದರೆ ಇದು ಅನುಮಾನವಾಗಿಯೇ ಇರುತ್ತೆ ಬಿಟ್ರೆ ಸತ್ಯ ಆಚೆ ಬರೋದೇ ಇಲ್ಲ. ಕಾರಣ ಸರ್ವಾಧಿಕಾರಿ ಕಿಮ್ ಉನ್ ಜಾಂಗ್. ಈತ ಹೇಳಿದ್ದೇ ಇಲ್ಲಿ ಫೈನಲ್. ಕೊರೊನಾ ಇದೆ ಅಂದ್ರೆ ಇದೆ. ಇಲ್ಲಾ ಅಂದ್ರೆ ಇಲ್ಲ. ಅಷ್ಟೇ.

ಏಪ್ರಿಲ್ ನಿಂದ ಈವರೆಗೆ ಒಂದೂ ಪ್ರಕರಣ ಪತ್ತೆಯಾಗಿಲ್ಲ

ಕಿಮ್ ಉನ್ ಜಾಂಗ್ ದೇಶದಲ್ಲಿ ಕೊರೊನಾ ಬಂದಿದ್ಯೋ ಇಲ್ವೋ. ಆದ್ರೆ ಈಗ ಇದೇ ದೇಶ ಕೊಟ್ಟಿರೋ ರಿಪೋರ್ಟ್ ನಲ್ಲಿ ಬಂದಿಲ್ಲ ಅಂತಾನೇ ಇದೆ. ಅದನ್ನು ಜಗತ್ತು ನಂಬುತ್ತೋ ಬಿಡುತ್ತೋ .ಈ ದೇಶದ ಜನ ಮಾತ್ರ ನಂಬಿಯೇ ನಂಬ್ತಾರೆ.ನಂಬಲೇಬೇಕು. ಯಾಕಂದ್ರೆ ಎದುರಿಗೆ ಕಾಣೋದು ಕಿಮ್. ಕಿಮ್ ಅಂದ್ರೆ ಇಲ್ಲಿನ ಬಹುತೇಕರಿಗೆ ದೇವರ ಸಮಾನ. ಕಿಮ್ ಪ್ರತ್ಯಕ್ಷವಾಗಿ ಕಾಣಿಸಿಕೊಂಡರೆ ಇಲ್ಲಿನ ಜನ ಸಂಭ್ರಮಿಸುತ್ತಾರೆ. ಈ ಮನುಷ್ಯ ಹೇಳಿದ್ದನ್ನು,ಆದೇಶ ಹೊರಡಿಸಿದ್ದನ್ನ ಚಾಚು ತಪ್ಪದೇ ಪಾಲಿಸ್ತಾರೆ. ಈ ಮನುಷ್ಯ ಎಲ್ಲದರೂ ತಮ್ಮ ಅರಮನೆಯಿಂದ ಆಚೆಗೆ ಬಂದರೆ ,ಎಲ್ಲಿಗಾದರೂ ಸವಾರಿ ಬಂದರೆ ಮನತುಂಬಿ ಬರ ಮಾಡಿಕೊಳ್ಳುತ್ತಾರೆ. ಚಪ್ಪಾಳೆ ತಟ್ಟುತ್ತ ಆನಂದ ಬಾಷ್ಪ ಸುರಿಸುತ್ತಾರೆ. ಬಹುಷಃ ಕೊರೊನಾ ಬಂದಿದ್ದರೂ ಈ ದೇಶದ ಆಜ್ಞಾನುರಾಧಕ ಜನರನ್ನು ನೋಡಿ, ಇಷ್ಟೊಂದು ವಿಧೇಯರಾಗಿರೋದನ್ನು ನೋಡಿ ವಾಪಸ್ ಹೋಗಿರಬೇಕು. ಅಷ್ಟರ ಮಟ್ಟಿಗೆ ಇಲ್ಲಿನ ಜನ ಕಿಮ್ ಮುಂದೆ ವಿಧೇಯತೆ ಪ್ರದರ್ಶಿಸ್ತಾರೆ. ಬಹುಷಃ ಕೊರೊನಾ ಕೂಡ ಕಿಮ್ ಮುಂದೆ ವಿಧೇಯತೆ ಪ್ರದರ್ಶಿಸಿರಬೇಕು.

ಕಿಮ್ ಅಪ್ಪಣೆ ಕೊಡಿಸಿದ್ರೆ ವಿರುದ್ಧ ಮಾತನಾಡಲ್ಲ ಇಲ್ಲಿನ ಜನ

ಕೊರೊನಾ ಬಂದೇ ಇಲ್ಲ,ನಮ್ಮ ದೇಶದಲ್ಲಿ ಕಾಣಿಸಿಕೊಂಡೇ ಇಲ್ಲ ಅಂತ ಉತ್ತರ ಕೊರಿಯಾ ಹೇಳಿದ್ದು ನಿಜವೇ ಆಗಿದ್ದರೆ ಅದಕ್ಕಿಂತ ಖುಷಿ ವಿಚಾರ ಮತ್ತೊಂದಿಲ್ಲ. ಮತ್ತು ಜಗತ್ತಿಗೆಲ್ಲ ಹರಡಿದ ಕೊರೊನಾ ಉತ್ತರ ಕೊರಿಯಾದಲ್ಲಿ ಯಾಕೆ ಬಂದಿಲ್ಲ ಅಂತ ಅಧ್ಯಯವನ್ನೂ ನಡೆಸಬಹುದು. ಅಷ್ಟೇ ಅಲ್ಲ, ಕೊರೊನಾ ಬರದಂತೆ ತಡೆದ ಉತ್ತರ ಕೊರಿಯಾದ ಮಾದರಿಯನ್ನೂ ಅಳವಡಿಸಿಕೊಳ್ಳಬಹುದು. ಆದ್ರೆ ಕಿಮ್ ಹೇಳ್ತಿರೋದು ನಿಜಾನಾ, ವಿಶ್ವ ಆರೋಗ್ಯ ಸಂಸ್ಥೆ ಇದನ್ನು ದೃಢಿಕರಿಸುತ್ತಾ. ಕಾದು ನೋಡಬೇಕು. ಏನೇ ಹೇಳಿ ಕಿಮ್ ಉನ್ ಜಾಂಗ್ ಗೆ ಕಿಮ್ ಉನ್ ಜಾಂಗ್ ಅವರೇ ಸಾಟಿ. ಕೊರೊನಾನಾದ್ರೂ ಬರಲಿ, ಸುಂಟರ ಗಾಳಿಯಾದರೂ ಬೀಸಲಿ ಅದು ಕಿಮ್ ಅಪ್ಪಣೆ ಇಲ್ಲದೇ ಉತ್ತರ ಕೊರಿಯಾ ಪ್ರವೇಶಿಸುವಂತಿಲ್ಲ. ಹಾಗಿದೆ ಕಿಮ್ ಹವಾ. ಈ ಮನುಷ್ಯನನ್ನ ನೋಡಿದ್ರೆ ವಿಚಿತ್ರವೂ ಅನಿಸುತ್ತೆ. ಇವರ ಬಗ್ಗೆ ತಿಳಿದುಕೊಂಡರೆ ಭಯವೂ ಆಗುತ್ತೆ. ಇವರ ನಿಗೂಢ ಬದುಕು ಕೂಡ ಅಷ್ಟೇ ಕುತೂಹಲ ಹುಟ್ಟಿಸುತ್ತೆ. ಈಗ ಉತ್ತರ ಕೊರಿಯಾ ಕೊರೊನಾ ರಿಪೋರ್ಟ್ ಕೂಡ ಇಷ್ಟೇ ಅಚ್ಚರಿಕೆ ಕಾರಣವಾಗಿ ಬಿಟ್ಟಿದೆ.

The post ಅಚ್ಚರಿ ಅನಿಸಿದರೂ ನಿಜ.. ಉತ್ತರ ಕೊರಿಯಾದಲ್ಲಿ ಕೊರೊನಾ ಇಲ್ವೇ ಇಲ್ವಂತೆ! appeared first on News First Kannada.

Source: newsfirstlive.com

Source link