ಅಚ್ಚಿಗೂ ಮೊದಲು: ಕವಿಜೋಡಿ ಸಂಘಮಿತ್ರೆ ನಾಗರಘಟ್ಟ, ರಾಜೇಶ್ ಹೆಬ್ಬಾರ್ ‘ಬೆನ್ನಿಗೆಲ್ಲಿಯ ಕಣ್ಣು’ ಕೃತಿ ನಿಮ್ಮ ಕೈಗೆ | Acchigoo Modhalu Bennielliya Kannu Poetry Collection by Sanghamitre Nagaraghatta and Rajesh Hebbar


ಅಚ್ಚಿಗೂ ಮೊದಲು: ಕವಿಜೋಡಿ ಸಂಘಮಿತ್ರೆ ನಾಗರಘಟ್ಟ, ರಾಜೇಶ್ ಹೆಬ್ಬಾರ್ ‘ಬೆನ್ನಿಗೆಲ್ಲಿಯ ಕಣ್ಣು’ ಕೃತಿ ನಿಮ್ಮ ಕೈಗೆ

ಕವಿಜೋಡಿಗಳಾದ ಸಂಘಮಿತ್ರೆ ನಾಗರಘಟ್ಟ , ರಾಜೇಶ್ ಹೆಬ್ಬಾರ್

Poetry : ‘ಬೆನ್ನಿಗೆಲ್ಲಿಯ ಕಣ್ಣು’ ಆಂತರಿಕ-ಬಾಹ್ಯಗಳ ನಡುವಿನ ಕಾವ್ಯಾತ್ಮಕ ಗುದ್ದಾಟವೆನ್ನಬಹುದು. ನಾವಿಬ್ಬರೂ ಸೇರಿ ಬರೆದ ಈ ಸಂಕಲನದ ಬಿಡುಗಡೆ ಮತ್ತು ನಾವಿಬ್ಬರೂ ‘ವಿವಾಹಬಂಧ’ಕ್ಕೆ ಒಳಗೊಳ್ಳುವ ಪ್ರಕ್ರಿಯೆ ಏಕ ಕಾಲದಲ್ಲಿ ನಡೆಯುತ್ತಿದೆ. ಕಾವ್ಯ ನಮ್ಮ ಕೈ ಹಿಡಿಯಿತು ನಾವು ಅದರ ಕೈ ಹಿಡಿದೆವು.’

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ [email protected]

ಕೃತಿ : ಬೆನ್ನಿಗೆಲ್ಲಿಯ ಕಣ್ಣು ( ಕವನ ಸಂಕಲನ)

ಲೇಖಕರು : ಸಂಘಮಿತ್ರೆ ನಾಗರಘಟ್ಟ ಮತ್ತು ರಾಜೇಶ್ ಹೆಬ್ಬಾರ್

ಪುಟ- 96

ಬೆಲೆ : ರೂ. 100

ಮುಖಪುಟ ವಿನ್ಯಾಸ : ಎಸ್. ವಿಷ್ಣುಕುಮಾರ್

ಪ್ರಕಾಶಕನ : ಊರುಕೇರಿ ಪ್ರಕಾಶನ ತಿಪಟೂರು

ಅಸ್ಥಿರ, ಗೋಜಲು, ದಿಕ್ಕೆಟ್ಟ ಭಾವಗಳ 14 ವರ್ಷಗಳ ಬಾಲೆಯನ್ನು ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಕಂಡಾಗ ಕಂಗೆಟ್ಟು ಹೋಗಿದ್ದೆ. ಕೌಟುಂಬಿಕ ವಿಘಟನೆ, ಒಡೆದ ಮನಸುಗಳು, ಅಪ್ಪನ ದುಡುಕಿನ ಸಾವಿನ ನಿರ್ಧಾರ… ಎಲ್ಲದಕ್ಕೆ ಬಲಿಪಶುವಾದವಳ ಉದಾಹರಣೆಯಂತೆ ಸಂಘಮಿತ್ರೆ ವಿಹ್ವಲಗೊಂಡು ಕುಳಿತಿದ್ದಳು. ಬರೆಯಲು ನೋಟ್​ಬುಕ್​ ಕೊಟ್ಟೆ. ಕವಿತೆಗಿಂತ ಕಥೆಗಳನ್ನೇ ಬರೆಯುವೆ ಎಂದಳು. ಮಧ್ಯೆ ವರ್ಷಗಳುರುಳಿದವು ಈಗ  ಈಗ ಅಂತರ್ಮುಖಿ ಸಂಘಮಿತ್ರೆ ಮತ್ತು ಬಹಿರ್ಮುಖಿ ರಾಜೇಶ್, ಮುಂದಿನ ಬದುಕಿನ ಪಯಣದಲ್ಲಿ ಜೊತೆಯಾಗಿ ಸಮನ್ವಯದ, ಮಧ್ಯಮ ಮಾರ್ಗದ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿ ನಿಂತಿದ್ದಾರೆ. ಅವರಲ್ಲಿ ಬದುಕು, ಸಮಾಜದ ಬಗ್ಗೆ ನೂರಾರು ಕನಸುಗಳಿವೆ. ಅವರಿಬ್ಬರ ಕವಿತೆಗಳು, ಸಂಘಮಿತ್ರೆಯ ರೇಖೆಗಳು ಬದುಕು ಸಹ್ಯಗೊಳಿಸಿಕೊಳ್ಳುವ ಸಹಸ್ರಾರು ಕತೆಗಳನ್ನು ಬಿಚ್ಚಿಡುತ್ತಿವೆ! ಅದು ನಮ್ಮನ್ನು ಎಚ್ಚರಿಸಲಿ, ಕಲಕಲಿ, ಆರ್ದ್ರಗೊಳಿಸಲಿ. ನೂರು ಅಡೆತಡೆಗಳು ಬಂದರೂ ಜೊತೆಯಾಗಿಯೇ ಅದನ್ನೆದುರಿಸುವ ಧೀಮಂತಿಕೆ ಇವರಿಗಿರಲಿ.

ರೂಪ ಹಾಸನ, ಕವಿ

ಸಾಮಾನ್ಯವಾಗಿ ಕವಿತೆಗಳ ಸಂಕಲನ ಎಂದರೆ ಕೇವಲ ಒಬ್ಬ ವ್ಯಕ್ತಿಯ ಕ್ಯಾನ್ವಾಸ್ ಆಗಿರುತ್ತದೆ. ಅಲ್ಲಿ ಏಕವ್ಯಕ್ತಿಯ ರೂಪಕಗಳು ಇರುತ್ತವೆ. ಆದರೆ‌ ಬೆನ್ನಿಗೆಲ್ಲಿಯ ಕಣ್ಣು ಜಂಟಿ ಕವನ ಸಂಕಲನವಾಗಿದೆ. ಸಂಕಲನದ ಶೀರ್ಷಿಕೆಯೇ ಹೇಳುವಂತೆ ಸಹಜ ಮನುಜರಾದ ನಾವು ಕೆಲವೊಮ್ಮೆ ಬೆನ್ನಿಗೆ ಕಣ್ಣು ಹುಡುಕುವ ಪ್ರಯತ್ನವನ್ನು ಮಾಡುವುದೇ ಇಲ್ಲ. ಇದರರ್ಥ ಎಷ್ಟೋ ಘಟನೆಗಳು ಸಂಭವಿಸಿದಾಗ ಅದಕ್ಕೆ ನಿಜವಾದ ಕಾರಣಗಳ ಕಂಡುಕೊಳ್ಳುವಲ್ಲಿ ವಿಫಲರಾಗುತ್ತೇವೆ. ಬೆನ್ನಿಗೆಲ್ಲಿಯ ಕಣ್ಣು ಆಂತರಿಕ ಮತ್ತು ಬಾಹ್ಯಗಳ ನಡುವಿನ ಒಂದು ರೀತಿಯ ಕಾವ್ಯಾತ್ಮಕ ಗುದ್ದಾಟವೆನ್ನಬಹುದು. ನಾವಿಬ್ಬರೂ ಸೇರಿ ಬರೆದ ಈ ಸಂಕಲನ ನಮ್ಮ ಚೊಚ್ಚಲ ಪುಸ್ತಕ. ಈ ಪುಸ್ತಕದ ಬಿಡುಗಡೆ ಮತ್ತು ನಾವಿಬ್ಬರು ‘ವಿವಾಹಬಂಧ’ಕ್ಕೆ ಒಳಗೊಳ್ಳುವ ಪ್ರಕ್ರಿಯೆ ಏಕ ಕಾಲದಲ್ಲಿ ಆಗುತ್ತಿದೆ. ಕಾವ್ಯ ನಮ್ಮ ಕೈ ಹಿಡಿಯಿತು ನಾವು ಅದರ ಕೈ ಹಿಡಿದೆವು.

ಸಂಘಮಿತ್ರೆ ನಾಗರಘಟ್ಟ, ರಾಜೇಶ್ ಹೆಬ್ಬಾರ್

*

ಬೆನ್ನಿಗೆಲ್ಲಿಯ ಕಣ್ಣು

TV9 Kannada


Leave a Reply

Your email address will not be published. Required fields are marked *