ಬೆಂಗಳೂರು: ಮಾಜಿ ಸಿಎಂ ಹೆಚ್​​.ಡಿ ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವೆ ಕಳೆದ ಕೆಲ ದಿನಗಳಿಂದ ವಾಕ್ಸಮರ ನಡೆಯುತ್ತಲೇ ಇದೆ. ಸಾಮಾಜಿಕ ಜಾಲತಾಣದಲ್ಲಿ ಕುಮಾರಸ್ವಾಮಿ​ ಬೆಂಬಲಿಗರು ಸುಮಲತಾ ವಿರುದ್ಧ ಹಾಗೂ ಸುಮಲತಾ ಬೆಂಬಲಿಗರು ಕುಮಾರಸ್ವಾಮಿ ವಿರುದ್ಧ ಕಮೆಂಟ್​ ಮಾಡ್ತಿದ್ದಾರೆ. ಇಂದು ಕೆಲ ಜೆಡಿಎಸ್​ ಬೆಂಬಲಿಗರು ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಮನೆ ಬಳಿ ಪ್ರತಿಭಟನೆ ನಡೆಸಿದ್ರು. ಇದರ ಬೆನ್ನಲ್ಲೇ ಕುಮಾರಸ್ವಾಮಿ ಟ್ವೀಟ್​ ಮಾಡಿದ್ದು, ನಾವು ಹೋರಾಟ ಮಾಡಬೇಕಾದ ವಿಷಯ ಬಹಳಷ್ಟಿವೆ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ ಎಂದಿದ್ದಾರೆ. ಈ ಕುರಿತು ಹೆಚ್​ಡಿಕೆ ಸರಣಿ ಟ್ವೀಟ್​ಗಳನ್ನ ಮಾಡಿ ತಮ್ಮ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.

ಕಾರ್ಯಕರ್ತ ಬಂಧುಗಳೇ, ಅಭಿಮಾನಿ ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ ನಾವು ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ. ಕನ್ನಡ, ಕನ್ನಡಿಗ, ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಮಗೆ ಬಹುದೊಡ್ಡ ನ್ಯಾಯ ಸಿಗಬೇಕಿದೆ. ನನ್ನ ಹೋರಾಟವನ್ನು ಈಗಾಗಲೇ ಅತ್ತ ಕೇಂದ್ರೀಕರಿಸಿದ್ದೇನೆ. ನಾಡು ನುಡಿಗಾಗಿ ಹೋರಾಡೋಣ. ಬೇರೆಲ್ಲ ವಿಷಯಗಳನ್ನು ನಾವು ಉಪೇಕ್ಷಿಸೋಣ.

ಪ್ರಾದೇಶಿಕ ಪಕ್ಷವಾಗಿ ನಾವು ಮಾತಾಡುವುದಿದೆ, ಮಾತಾಡೋಣ. ಪ್ರಾದೇಶಿಕ ವಿಚಾರಗಳು ಇತ್ತೀಚೆಗೆ ಗೌಣವಾಗುತ್ತಿವೆ, ಅದರ ಬಗ್ಗೆ ಮಾತಾಡೋಣ. ಒಕ್ಕೂಟ ವ್ಯವಸ್ಥೆಯಲ್ಲಿ ನಮಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ನಾವು ದೊಡ್ಡದಾಗಿ ಕೂಗಿ ಹೇಳೋಣ. ಪ್ರಾದೇಶಿಕ ಅಸ್ಮಿತೆಯ ವಿಚಾರವನ್ನು ಜನರೊಂದಿಗೆ ಪ್ರಸ್ತಾಪಿಸೋಣ. ಆದರೆ, ಅನಗತ್ಯ ಮಾತು ಅನಗತ್ಯವಷ್ಟೆ.

ನಾವು ಸಿಡಿಯಬೇಕಾದ ಪರಿಸ್ಥಿತಿ ಇದೆ, ಸಿಡಿಯೋಣ. ಕಾವೇರಿ ಜಲದ ಯೋಜನೆಗಳಿಗೆ ತಡೆಯೊಡ್ಡುತ್ತಿರುವವರ ವಿರುದ್ಧ ಸಿಡಿಯೋಣ. ನಮ್ಮ ನೆಲದಲ್ಲಿ ನಮ್ಮ ಕನ್ನಡ ಧ್ವಜವನ್ನು ಹಾರಿಸಲು ಬಿಡಲೊಲ್ಲದ ಪಟ್ಟಭದ್ರರ ವಿರುದ್ಧ ಸಿಡಿಯೋಣ. ನಮಗೆ ನೀಡಬೇಕಾದ ಪರಿಹಾರ, ಅನುದಾನ ನೀಡದ ವ್ಯವಸ್ಥೆಯ ವಿರುದ್ಧ ಸಿಡಿಯ ಬೇಕಾಗಿದೆ ಸಿಡಿಯೋಣ. ಇದು ನಮ್ಮ ಆಯ್ಕೆಯಾಗಲಿ.

ಕೋವಿಡ್‌ ಕಾಲದಲ್ಲಿ ಜೆಡಿಎಸ್‌ ರಾಜಕೀಯ ಮಾಡಲಿಲ್ಲ. ಆದರೆ, ಜನರ ಪರ ನಿಲ್ಲುವುದನ್ನು ಮರೆಯಲಿಲ್ಲ, ಸರ್ಕಾರವನ್ನು ಎಚ್ಚರಿಸದೇ ಇರಲಿಲ್ಲ. ಕರ್ನಾಟಕ, ಕನ್ನಡಿಗರಿಗೆ ಅಪಮಾನವಾದಾಗ ಸಿಡಿಯಲು ಒಂದು ಕ್ಷಣವೂ ತಡ ಮಾಡಿಲ್ಲ. ನಾವು ರಾಜಕೀಯ ಮಾಡೋಣ, ಕರ್ನಾಟಕ ಕೇಂದ್ರಿತ ರಾಜಕಾರಣ ಮಾಡೋಣ. ನಮ್ಮ ಮೇಲಿನ ಆರೋಪಗಳನ್ನು ಜನರ ತೀರ್ಮಾನಕ್ಕೆ ಬಿಡೋಣ.
-ಹೆಚ್​​.ಡಿ ಕುಮಾರಸ್ವಾಮಿ, ಮಾಜಿ ಸಿಎಂ

 

The post ‘ಅಣ್ಣ ತಮ್ಮಂದಿರೆ, ಅಕ್ಕ ತಂಗಿಯರೇ..ಹೋರಾಟ ಮಾಡಬೇಕಾದ ವಿಚಾರ ಬಹಳಷ್ಟಿವೆ’ -ಹೆಚ್​​ಡಿಕೆ ಸಲಹೆ appeared first on News First Kannada.

Source: newsfirstlive.com

Source link