ಹಿಮಾಲಯ ಪರ್ವತ ಶ್ರೇಣಿಗಳನ್ನು ನೋಡಿದಷ್ಟು ಚಂದ. ಇದರ ಬಗ್ಗೆ ಹೇಳೋದೇ ಒಂದು ಸುಂದರವಾದ ವರ್ಣನೆ. ಇದರ ಬಗ್ಗೆ ಬರೆಯೋದೇ ಒಂದು ಕಾವ್ಯ. ಭಾರತದ ಮುಕುಟದಂತೆ ಇರುವ ಹಿಮಾಲಯವೇ ಹೀಗೆ. ಎಷ್ಟು ಸುಂದರವೋ ಅಷ್ಟೇ ನಿಗೂಢ, ರಹಸ್ಯ, ವಿಸ್ಮಯಗಳ ತಾಣ ಈ ಹಿಮಾಲಯ. ಹಿಮಾಲಯ ನೋಡೋದಕ್ಕೆ ತುಂಬಾ ಚಂದ. ಆದರೆ, ಅಲ್ಲಿ ಹೋಗೋದೇ ಒಂದು ಸಾಹಸ. ಹಿಮಾಲಯದ ಕಡಿದಾದ ಪರ್ವತಗಳನ್ನ ದೂರದಿಂದ ನೋಡೋಕೆ ಮೋಹಕ. ಆದ್ರೆ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಂತಾರಲ್ಲ ಹಾಗೆ ಇದರ ಹತ್ತಿರ ಹೋಗೋದೇ ದೊಡ್ಡ ಚಾಲೆಂಜ್. ಇನ್ನು ಇಂತಹ ಗಿರಿ ಶಿಖರಗಳನ್ನು ಹತ್ತೋದು ಅಂದ್ರೆ ಅದೊಂದು ಸಾಹಸಗಾಥೆ.

ಹಿಮಾಲಯದಲ್ಲಿ ಅತ್ಯಂತ ಎತ್ತರವಾದ ಶಿಖರವೇ ಮೌಂಟ್ ಎವರೆಸ್ಟ್. ಕಣ್ಣು ಕೋರೈಸುವ ಶ್ವೇತ ಬಣ್ಣ. ಸೂರ್ಯನ ಕಿರಣಗಳು ಈ ಹಿಮಾಚ್ಛಾದಿತ ಬೆಟ್ಟದ ಮೇಲೆ ಬೀಳತೊಡಗಿದಾಗ ಈ ದೃಶ್ಯ ನೋಡಿದರೆ ಇದು ಭೂಮಿಯ ಮೇಲಿನ ಸ್ವರ್ಗ. ಈ ಮೌಂಟ್ ಎವರೆಸ್ಟ್ ಹತ್ತುವುದೇ ಜೀವಮಾನದ ಸಾಧನೆ. ಮೌಂಟ್ ಎವರೆಸ್ಟ್ ಏರುವ ವಿಚಾರದಲ್ಲಿ ಮೊನ್ನೆ ಮೊನ್ನೆ ಮಹಿಳೆಯೊಬ್ಬರು ಈ ಹಿಂದಿನ ಎಲ್ಲಾ ದಾಖಲೆಗಳನ್ನೂ ಅಳಿಸಿ ಹಾಕಿದ್ದಾರೆ.

ಮೌಂಟ್ ಎವರೆಸ್ಟ್ ಪ್ರಪಂಚದ ಅತ್ಯಂತ ಎತ್ತರದ ಪ್ರದೇಶ. ಹಿಮಾಲಯ ಎಂದಾಕ್ಷಣ ಮೊದ್ಲಿಗೆ ನೆನಪಾಗುವುದೇ ಇದೇ ಮೌಂಟ್ ಎವರೆಸ್ಟ್. ನಿರಂತರವಾಗಿ ಹಿಮದಿಂದ ಕೂಡಿದ, ಅದ್ಭುತ ಹಾಗೂ ಎತ್ತರದ ಪರ್ವತ ಶ್ರೇಣಿಗಳ ಆಲಯವೆ ಹಿಮಾಲಯ. ಹಿಮಾಲಯ ಮತ್ತು ಅದರ ಸುತ್ತಮುತ್ತಲಿರುವ ಸ್ಥಳದ ಬಗ್ಗೆ ಎಷ್ಟು ಮಾತನಾಡಿದರೂ ಅದು ಕಡಿಮೆನೆ ಬಿಡಿ. ಆಕಾಶದೆತ್ತರಕ್ಕೆ ನಿಂತಿರುವ ಹಿಮ ಶಿಖರಗಳು, ಸ್ಪಷ್ಟ ಸರೋವರಗಳು, ಹೀಗೆ ಹೇಳುತ್ತಾ ಹೋದರೆ ದೊಡ್ಡದಾದ ಪಟ್ಟಿಯೇ ಬೆಳೆಯುತ್ತದೆ. ತನ್ನ ಒಡಲಲ್ಲಿ ಊಹೆಗೂ ಮೀರಿದ ಸೌಂದರ್ಯವನ್ನ ಈ ಹಿಮಾಲಯ ಬಚ್ಚಿಟ್ಟಿಕೊಂಡಿದೆ. ಒಂದು ಕಡೆ ಹಿಮಾಲಯ ಮತ್ತೊಂದು ಕಡೆ ಮೌಂಟ್ ಎವರೆಸ್ಟ್ .

ಪ್ರಪಂಚದ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಬಗೆಗಿನ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಮೌಂಟ್ ಎರರೆಸ್ಟ್ ಬಗ್ಗೆ ಹೆಚ್ಚೆಚ್ಚು ತಿಳ್ಕೊಬೇಕ್ಕೆನ್ನುವ ಕುತೂಹಲ ಎಲ್ಲರಿಗೂ ಇರುತ್ತೆ. ಕಣ್ಣು ಕೋರೈಸುವ ಹಿಮದ ರಾಶಿ, ಅಗಾಧತೆ, ಮಂಜು ಕವಿದ ಪರ್ವತಗಳು ಎಲ್ಲವು ಮೌಂಟ್ ಎವರೆಸ್ಟ್ ಬಗ್ಗೆ ತಿಳಿಯಬೇಕೆನ್ನುವ ಕುರಿತು ಮತ್ತಷ್ಟು, ಮಗದಷ್ಟು ಕುತೂಹಲ ಹುಟ್ಟು ಹಾಕುತ್ತೆ. ಇದೇ ಮೌಂಟ್ ಎವರೆಸ್ಟ್​​ನ ಎತ್ತರದ ಬಗ್ಗೆಯೂ ಕೆಲವರಿಗೆ ಕೂತೂಹಲವಿತ್ತು. ವಿಶ್ವದ ಅತೀ ಎತ್ತರದ ಶಿಖರದ ನಿಜವಾದ ಎತ್ತರವನ್ನು ಇತ್ತೀಚಿಗಷ್ಟೇ 8848.86 ಮೀಟರ್ ಎಂದು ನೇಪಾಳ ಸರ್ಕಾರ ಘೋಷಣೆ ಮಾಡುವ ಮೂಲಕ ಎಲ್ಲರ ಕೂತಹಲದ ಪ್ರಶ್ನೆಗಳಿಗೆ ಅಂತ್ಯವಾಡುವ ಪ್ರಯತ್ನ ಮಾಡಿದೆ.

1953ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ತುತ್ತತುದಿಯ ಮೇಲೆ ಮಾನವ ಹೆಜ್ಜೆ ಇಟ್ಟಿದ್ದ. ಎಡ್ಮಂಡ್ ಹಿಲೆರಿ ಮತ್ತು ತೇನ್ ಸಿಂಗ್ ಹೆಸರು ಕೇಳದವರು ಯಾರಿದ್ದಾರೆ ಹೇಳಿ. ಅಲ್ಲಿಂದ ಇಲ್ಲಿಯವರೆಗೆ ಶಿಖರ ಏರಲು ಹೊರಟವರು ಅದೆಷ್ಟೋ. 300ಕ್ಕೂ ಅಧಿಕ ಸಾಹಸಿಗಳು ಮೌಂಟ್ ಎವರೆಸ್ಟ್ ಏರಲು ಹೊರಟು ಈಗಾಗಲೇ ಪ್ರಾಣ ಕಳ್ಕೊಂಡಿದ್ದಾರೆ. ಕೆಲವರು ಪರ್ವತವನ್ನ ಏರಿ ಇತಿಹಾಸದ ಪುಟದಲ್ಲಿ ತಮ್ಮ ಹೆಸರನ್ನು ಅಚ್ಚೊತ್ತಿದ್ರೆ, ಇನ್ನೂ ಕೆಲವರು ಅರ್ಧದಲ್ಲೇ ಪ್ರಾಣ ಕಳ್ಕೊಂಡಿದ್ದಾರೆ.

ಮೌಂಟ್ ಎವರೆಸ್ಟ್ ತುದಿ ತಲುಪಿದ್ರೆ ಪಟ್ಟ. ಎಲ್ಲಾದರೂ ಎಚ್ಚರ ತಪ್ಪಿದ್ರೆ ಅಷ್ಟೇ ಆಪತ್ತು. ಪ್ರಾಣಕ್ಕೇ ಕುತ್ತು. ಇದೆಲ್ಲ ಗೊತ್ತಿದ್ರು ಕೂಡ ವರ್ಷದಿಂದ ವರ್ಷಕ್ಕೆ ಪವರ್ತ ಏರುವ ಸಾಹಸಿಗರ ಸಂಖ್ಯೆ ಏನು ಕಡ್ಮೆಯಾಗಿಲ್ಲ. ವಿವಿಧ ದೇಶಗಳ ಸಾಹಸಿಗರು ಮೌಂಟ್ ಎವರೆಸ್ಟ್​ಗೆ ಬರ್ತಿರುವುದರಿಂದ ಜನ ಸಂದಣಿ ಹೆಚ್ಚಾಗ್ತಾ ಇದೆ. ಕೊರೊನಾದಿಂದ ಕಳೆದೆರಡು ವರ್ಷಗಳಲ್ಲಿ ಪರ್ವತರೋಹಿಗಳ ಸಂಖ್ಯೆಯಲ್ಲಿ ತುಸು ಇಳಿಮುಖವಾಗಿದೆ ಎನ್ನಲಾಗಿದೆ.

ಮೌಂಟ್ ಎವರೆಸ್ಟ್ ಏರಿದ ಮಾಜಿ ಶಿಕ್ಷಕಿಯಿಂದ ಹೊಸ ಮೈಲಿಗಲ್ಲು
ಮೌಂಟ್ ಎವರೆಸ್ಟ್​​​ ಏರಲು ವರ್ಷದ ಎಲ್ಲಾ ತಿಂಗಳು ಪರ್ವತರೋಹಿಗಳಿಗೆ ಅವಕಾಶವಿರುವುದಿಲ್ಲ. ಅದ್ಕೆಂದೆ ಕೆಲವು ತಿಂಗಳನ್ನು ನಿಗದಿಪಡಿಸಲಾಗಿದೆ. ಮಾರ್ಚ್-ಮೇವರೆಗೆ ಪರ್ವತರೋಹಿಗಳಿಗೆ ಮೌಂಟ್ ಎವರೆಸ್ಟ್ ಏರಲು ಅವಕಾಶ ಕಲ್ಪಿಸಲಾಗುತ್ತೆ. ಈ ವೇಳೆ ವಿವಿಧ ದೇಶಗಳ ನೂರಾರು ಪರ್ವತಾರೋಹಿಗಳು ಎವರೆಸ್ಟ್ ಏರಲು ಮುಂದಾಗ್ತಾರೆ. ಆದ್ರೆ ಇದ್ರರಲ್ಲಿ ಸಕ್ಸಸ್ ಕಾಣುವುದು ಬೆರಳೆಣಿಯಷ್ಟು ಪರ್ವತರೋಹಿಗಳು ಮಾತ್ರ. ಎತ್ತರದ ಇದೇ ಮೌಂಟ್ ಎವರೆಸ್ಟ್ ಶಿಖರವನ್ನು ಏರುವ ಮೂಲಕ ಹಾಂಕಾಂಗ್ ನ ಶಿಕ್ಷಕಿಯೊಬ್ಬರು ಹೊಸ ಮೈಲಿಗಲ್ಲು ಸೃಷ್ಟಿಸಿದ್ದಾರೆ.

ಏಜ್ ಇಸ್ ಜಸ್ಟ್ ಎ ನಂಬರ್ ಅನ್ನೋ ಮಾತಿದೆ. ಕೆಲವರು ಈ ಮಾತನ್ನು ಪದೇ ಪದೇ ಸಾಬಿತುಪಡಿಸುತ್ತಲೇ ಇದ್ದಾರೆ. ಜಗತ್ತಿನಲ್ಲಿ ಸಾಧಕರಿಗೇನು ಕೊರತೆ ಇಲ್ಲ. ಆದ್ರೆ ಕೆಲವರು ಮಾಡುವ ಸಾಧನೆ ಮಾತ್ರ ಸೋಮಾರಿಗಳಲ್ಲೂ ಸ್ಫೂರ್ತಿಯ ಸೆಳೆ ಉಕ್ಕಿಸುತ್ತೆ. ಯುವ ಸಮುದಾಯವನ್ನ ಬಡಿದೆಬ್ಬಿಸುತ್ತೆ. ಅದೆಷ್ಟೋ ಬಿಸಿ ರಕ್ತದ ಯುವಕರು ಮೌಂಟ್ ಎವರೆಸ್ಟ್ ಏರಬೇಕೆಂದು ಹೊರಟು ಸಕ್ಸಸ್ ಕಾಣದೇ ಎವರೆಸ್ಟ್ ಎದುರು ತಲೆ ಬಾಗಿದ್ದಾರೆ. ಆದ್ರೆ ಹಾಕಾಂಗ್​ನ ಮಹಿಳೆಯೊಬ್ಬರು ಯುವಕರು ಕೂಡ ನಾಚುವಂತೆ ಎವರೆಸ್ಟ್​​ ಏರಿದ್ದಾರೆ.

ವಿಶ್ವವನ್ನೇ ಬೆರಗುಗೊಳಿಸಿದ 45 ವರ್ಷದ ಹಾಂಕಾಂಗ್ ಮಹಿಳೆ
ಈಕೆ ಮೌಂಟ್ ಎವರೆಸ್ಟ್ ನ ತುತ್ತ ತುದಿಯಲ್ಲಿ ಇಡ್ತಿರುವ ಒಂದೊಂದು ಹೆಜ್ಜೆಗಳು ಇತಿಹಾಸ ಪುಟದಲ್ಲಿ ಒಂದೊಂದೆ ಪದಗಳಾಗಿ ದಾಖಲಾಗಿವೆ. ನಿಜಕ್ಕೂ ಈಕೆಯ ಒಂದೊಂದೆ ಹೆಜ್ಜೆಗಳು ಮೈನವಿರೇರಿಸುವಂತಿದೆ. ಹೀಗೆ ಪವರ್ತದ ತುತ್ತ ತುದಿಯಲ್ಲಿರುವ ಇವರು, ಕಡಿಮೆ ಅವಧಿಯಲ್ಲಿ ವಿಶ್ವದ ಅತ್ಯಂತ ಎತ್ತರದ ಮೌಂಟ್ ಎವರೆಸ್ಟ್ ಏರಿದ ಮಹಿಳೆ ಎಂಬ ಹೊಸ ದಾಖಲೆ ಬರೆದಿದ್ದಾರೆ. ಈ ಸಾಹಸಿಯ ಹೆಸ್ರು ತ್ಸಾಂಗ್ ಯಿನ್ ಯಾಂಗ್. ಈ ಮಾಜಿ ಶಿಕ್ಷಕಿ ಮೌಂಟ್ ಎವರೆಸ್ಟ್ ಏರಿದ್ದು ಮಾತ್ರವಲ್ಲದೇ ಅದ್ಕೆ ತೆಗೆದುಕೊಂಡಿರುವ ಸಮಯ ಅತ್ಯಂತ ಕಡಿಮೆ.ಇದೇ ಈಗ ಹೊಸ ದಾಖಲೆಗೆ ಕಾರಣವಾಗಿದೆ.

ಎವರೆಸ್ಟ್ ಏರಲು ತೆಗೆದುಕೊಂಡಿರುವ ಸಮಯವೆಷ್ಟು ಗೊತ್ತಾ?
ಹಾಂಕಾಂಗ್ ನ ಮಾಜಿ ಶಿಕ್ಷಕಿ ತ್ಸಾಂಗ್ ಯಿನ್-ಯಾಂಗ್ 26 ಗಂಟೆಗಿಂತ ಕಡಿಮೆ ಅವಧಿಯಲ್ಲಿ ಮೌಂಟ್ ಎವರೆಸ್ಟ್ ಪರ್ವತದ ತುದಿ ತಲುಪುವ ಮೂಲಕ ಹೊಸ ಹಿಸ್ಟ್ರಿ ಕ್ರಿಯೇಟ್ ಮಾಡಿದ್ದಾರೆ. ಈ ಮೂಲಕ ಈ ಹಿಂದೆ ದಾಖಲಾಗಿದ್ದ ಎಲ್ಲಾ ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ. 2017ರಲ್ಲಿ ಪುಂಜೂ ಲಾಮ ಅವರು 39 ಗಂಟೆ ಆರು ನಿಮಿಷದಲ್ಲಿ ಎವರೆಸ್ಟ್ ಏರಿ ಹೊಸ ದಾಖಲೆ ಬರೆದಿದ್ರು. ಆದ್ರೆ ಇದೀಗ ತ್ಸಾಂಗ್ ಯಿನ್-ಯಾಂಗ್ ಕೇವಲ 25 ಗಂಟೆ 50 ನಿಮಿಷದಲ್ಲಿ ಮೌಂಟ್ ಎವರೆಸ್ಟ್ ಪರ್ವತದ ತುದಿ ತಲುಪುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಒಂದಲ್ಲ ಎರಡಲ್ಲ ಮೂರು ಬಾರಿ ನಡೆದಿತ್ತು ಪ್ರಯತ್ನ
ಈಕೆಗೆ ಸಕ್ಸಸ್ ಎನ್ನುವುದು ಒಮ್ಮೆಲೆ ಒಲಿಯಲ್ಲಿಲ್ಲ. ಆಕೆ ಪ್ರಯತ್ನ ಪಟ್ಟಿದ್ದು ಒಂದಲ್ಲ .. ಎರಡಲ್ಲ.. ಮೂರು ಬಾರಿ. ಕಡಿಮೆ ಅವಧಿಯಲ್ಲಿ ಮೌಂಟ್ ಎವರೆಸ್ಟ್ ಏರುವ ಮೂಲಕ ದಾಖಲೆಯ ಶಿಖರ ಕಟ್ಟಿದ ಮೇಲೆ ಈಕೆ ಯಾರು? ಆಕೆಯ ಹಿನ್ನೆಲೆ ಏನು ಎಂಬುದರ ಕುರಿತ ಹುಡುಕಾಟ ಜೋರಾಗಿದೆಯಂತೆ. ಅಂತರಾಷ್ಟ್ರೀಯ ಮಾಧ್ಯಮಗಳಲ್ಲೂ ಸಖತ್ ಹೈಪ್ ಕ್ರಿಯೇಟ್ ಮಾಡಿರುವ ಈ ತ್ಸಾಂಗ್ ಯಿನ್-ಯಾಂಗ್ ಮೂಲತಃ ಚೀನಾದವರು. 10 ವರ್ಷವಿರುವಾಗ್ಲೇ ಇವರ ಕುಟುಂಬ ಚೀನಾ ಬಿಟ್ಟು ಹಾಂಕಾಂಗ್​​ಗೆ ಹೋಗುತ್ತೆ. ಅದಾಗ್ಲೇ ಕ್ರೀಡೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದ್ದ ಈಕೆ 11 ವರ್ಷಗಳ ಕಾಲ ಮೌಂಟ್ ಎವರೆಸ್ಟ್ ಹೇಗೆ ಹತ್ತಬಹುದು ಎಂಬುದರ ಕುರಿತು ತರಬೇತಿ ಪಡೆಯುತ್ತಾರೆ. ಮುಂದೆ 2017ರಲ್ಲಿ ಮೊದಲ ಬಾರಿಗೆ ಮೌಂಟ್ ಎವರೆಸ್ಟ್ ಏರುವ ಪ್ರಯತ್ನ ಮಾಡಿದ್ರು. ಆದ್ರೆ ಅದು ಸಕ್ಸಸ್ ಆಗ್ಲಿಲ್ಲ. ಆದ್ರೂ ಛಲ ಬಿಡದ ಈಕೆ ಮತ್ತೊಮ್ಮೆ ಎವರೆಸ್ಟ್ ಏರಲು ಮುಂದಾಗಿದ್ರು. ಅವಾಗ್ಲೂ ಕೂಡ ಕಾರಣಾಂತರಗಳಿಂದ ಇವರ ಪ್ರಯತ್ನ ವಿಫಲವಾಗಿತ್ತು. ಅದ್ಕೆ ಕಾಲ ಕೂಡಿ ಬಂದಿದ್ದು ಕಳೆದ ಭಾನುವಾರ. ಕಳೆದ ಭಾನುವಾರ ಈಕೆ ತಾನು ಅಂದುಕೊಂಡಿದ್ದನ್ನು ಸಾಧಿಸಿ, ಪ್ರಪಂಚದ ಎತ್ತರದ ಪ್ರದೇಶದಲ್ಲಿ ಸಾಧನೆಯ ನಗು ಬೀರಿದ್ದಾರೆ.

ಹಠ ಬಿಡದ ಈ ಛಲಗಾರ್ತಿ ಕಡೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸಿ ಹೊಸ ಇತಿಹಾಸ ಬರೆದಿದ್ದಾರೆ. ತನ್ನ ಸಾಧನೆಯ ಕುರಿತು ಈ ಸಾಹಸಗಾಥಿ ಏನ್ ಹೇಳಿದ್ದಾರೆ ಕೇಳಿ;

ಪ್ರಪಂಚದ ಅತ್ಯಂತ ಎತ್ತರದ ಪರ್ವತದ ತುತ್ತ ತುದಿಯನ್ನು ತಲುಪಲು ಇದ್ದ ಛಲ, ಶ್ರದ್ಧೆ ಇವೆಲ್ಲವು ಇಂದು ಈ ಹಂತಕ್ಕೆ ಬಂದು ತಲುಪಿಸಿದೆ. ಜೀನವದಲ್ಲಿ ಏನನ್ನಾದ್ರೂ ಸಾಧಿಸಲು ಬಯಸಿದ್ರೆ ಎಂತಹ ಕಠಿಣ ಸವಾಲುಗಳನ್ನು ಎದುರಿಸಿಯಾದ್ರೂ ಸಾಧನೆ ಮಾಡಬಹುದು. ಹಂತ ಹಂತವಾಗಿ ಪ್ರಯತ್ನಿಸಿದ್ರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಇದೇ ಉದಾಹರಣೆ.
-ತ್ಸಾಂಗ್ ಯಿನ್-ಯಾಂಗ್, ಪರ್ವತರೋಹಿ

45ನೇ ವಯಸ್ಸಿನಲ್ಲಿ ಈಕೆ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದಾರೆ. ತನ್ನ ಈ ಸಾಧನೆಗೆ ಸತತ ಪರಿಶ್ರಮ, ಶ್ರದ್ಧೆ , ಸಾಧನೆ ಮಾಡಬೇಕೆಂಬ ಛಲವೇ ಕಾರಣ ಎಂದಿದ್ದಾರೆ.

ಶಿಖರವೇರುವಾಗ ಎದುರಾಗುವ ಸವಾಲುಗಳೇನು?
ಕಮಿ ರಿತ ಶೆರ್ಪಾ ಎಂಬವರು 21 ಬಾರಿ ಮೌಂಟ್ ಎವರೆಸ್ಟ್ ತುತ್ತತುದಿ ಏರಿ ಇಳಿದಿದ್ದಾರೆ. ಇಂದು ಹಲವು ಸಾಧಕರು ಮೌಂಟ್ ಎವರೆಸ್ಟ್ ಏರಿರಬಹುದು. ಹಾಗೆಂದ ಮಾತ್ರಕ್ಕೆ ಇದು ಸುಲಭದ ಮಾತಲ್ಲ. ಗೆದ್ದರೆ ಪಟ್ಟ, ಸ್ವಲ್ಪ ಎಡವಟ್ಟಾದ್ರೂ ಪ್ರಾಣಕ್ಕೇ ಕುತ್ತು. ಮೌಂಟ್ ಎವರೆಸ್ಟ್ ಏರುವಾಗ ಪರ್ವತಾರೋಹಿಗಳಿಗೆ ನೂರಾರು ಸಮಸ್ಯೆಗಳು ಎದುರಾಗುತ್ತವೆ. ಮೂಳೆ ಕೊರೆಯುವ ಚಳಿ, ಆಳ ಅಳೆಯಲಾಗದ ಹಿಮದ ಪದರ, ಸಡಿಲವಾದ ಹಿಮದ ಪದರ ಜಾರಿ ಬೀಳುವ ಭಯ, ಈ ಎಲ್ಲಾ ಸಮಸ್ಯೆಗಳು ಪರ್ವತರೋಹಿಗಳನ್ನು ಹೆಜ್ಜೆ ಹೆಜ್ಜೆಗೂ ಕಾಡುತ್ತೆ. ಎತ್ತರಕ್ಕೆ ಸಾಗಿದಂತೆಲ್ಲಾ ಆಮ್ಲಜನಕ ವಿರಳವಾಗುವ ಕಾರಣ ಪರ್ವತಾರೋಹಿಗಳು ಸಮಸ್ಯೆಗೆ ಸಿಲುಕುತ್ತಾರೆ. ಈ ಎಲ್ಲಾ ಅಡೆತಡೆಗಳು ಎದುರಾದ್ರು ಅವೆಲ್ಲವನನ್ನು ಮರೆತು ಕಡೆಗೂ ಪ್ರಪಂಚದ ಎತ್ತರದ ಪರ್ವತದ ಗುರಿ ತಲುಪುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ.

ನೂರಾರು ಅಡೆತಡೆಗಳ ನಡುವೆಯೂ ಈಕೆ ಕಡೆಗೂ ತಾನು ಅಂದ್ಕೊಂಡಿದನ್ನು ಸಾಧಿಸಿದ್ದಾರೆ. 45ರ ವಯಸ್ಸಿನಲ್ಲಿಯೂ ಪ್ರಪಂಚದ ಎತ್ತರದ ಶಿಖರವನ್ನು ಏರಿ ಇತಿಹಾಸ ಸೃಷ್ಠಿಸಿದ್ದಾರೆ. ದಿನದಿಂದ ದಿನಕ್ಕೆ ಸಾಹಸಿಗರ ಸಂಖ್ಯೆ ಕೂಡ ಹೆಚ್ಚಾಗ್ತಿರುವುದರಿಂದ ಮುಂದೆ ಇವರು ನಿರ್ಮಿಸಿರುವ ದಾಖಲೆ ಕೂಡ ಅಳಿಸಿ ಹೋದ್ರು ಅಚ್ಚರಿಪಡಬೇಕಿಲ್ಲ.

The post ಅತೀ ಕಡಿಮೆ ಸಮಯದಲ್ಲಿ ಎವರೆಸ್ಟ್ ಏರಿ ಮಹಿಳೆಯ ದಾಖಲೆ, ಇವರು ತೆಗೆದುಕೊಂಡ ಸಮಯವೆಷ್ಟು ಗೊತ್ತಾ? appeared first on News First Kannada.

Source: newsfirstlive.com

Source link