ಅದ್ಧೂರಿ ಹೊಸ ವರ್ಷ ಆಚರಣೆಗೆ ಬ್ರೇಕ್​ ಹಾಕುತ್ತ ಸರ್ಕಾರ? -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್ ರೌಂಡಪ್

1. ಅದ್ಧೂರಿ ಹೊಸ ವರ್ಷ ಆಚರಣೆಗೆ ಸರ್ಕಾರ ಬ್ರೇಕ್​?

ಅದ್ಧೂರಿ ಹೊಸ ವರ್ಷಾಚರಣೆಗೆ ರಾಜ್ಯ ಸರ್ಕಾರ ಬ್ರೇಕ್​ ಹಾಕಲು ಮುಂದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನೂ ಕೂಡ ಕೊರೊನಾ 3ನೇ ಅಲೆಯ ಆತಂಕ ದೂರವಾಗಿಲ್ಲವಾದ್ದರಿಂದ ಹೆಚ್ಚು ಜನ ಸೇರುವುದನ್ನ ತಡೆಯುವುದು ಅನಿವಾರ್ಯವಾಗಿದೆ. ಹೀಗಾಗಿ ಹೊಸ ವರ್ಷದ ಸಾರ್ವಜನಿಕ ಸಂಭ್ರಮಾಚರಣೆಗೆ ನಿಷೇಧ ಹೇರಲು ಸರ್ಕಾರ ಮುಂದಾಗಿದೆ. ಇದ್ರಿಂದ ಈ ಬಾರಿಯಾದ್ರೂ ಅದ್ಧೂರಿಯಾಗಿ ಹೊಸ ವರ್ಷವನ್ನ ಬರಮಾಡಿಕೊಳ್ಳೋಣ ಎಂದುಕೊಂಡಿದ್ದವರಿಗೆ ಶಾಕ್​​ ಆಗಿದೆ.

2. ಇಂದು ಹೆದ್ದಾರಿ ಬಂದ್​ಗೆ ರೈತ ಸಂಘಟನೆ ನಿರ್ಧಾರ

3 ಕೃಷಿ ಕಾಯ್ದೆಯನ್ನ ಅಧಿಕೃತವಾಗಿ ಹಿಂಪಡೆಯೋ‌ದ್ರಾ ಜೊತೆಗೆ ಬೆಂಬಲ ಬೆಲೆ ಖಾತ್ರಿಪಡಿಸುವಂತೆ ಆಗ್ರಹಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ದೆಹಲಿ ಪ್ರತಿಭಟನೆ ಬೆಂಬಲಿಸಿ, ರಾಜ್ಯದಲ್ಲೂ ರೈತರು ರಾಜ್ಯ ಹೆದ್ದಾರಿ ಬಂದ್​​​ಗೆ ಕರೆ ಕೊಟ್ಟಿದ್ದಾರೆ. ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಹೆದ್ದಾರಿಗಳ ಬಂದ್ ನಡೆಯಲಿದೆ.

3. ಇಂದು ಮೂರು ಜಿಲ್ಲೆಗಳಿಗೆ ಸಿಎಂ ಬೊಮ್ಮಾಯಿ ಪ್ರವಾಸ

ಸಿಎಂ ಬಸವರಾಜ್ ಬೊಮ್ಮಾಯಿ ಇಂದು ದಾವಣಗೆರೆ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ. ಬೆಳಗ್ಗೆ 7 ಗಂಟೆಗೆ ಬೆಂಗಳೂರಿನಿಂದ ದಾವಣಗೆರೆಗೆ ಹೊರಟಿದ್ದಾರೆ. ದಾವಣಗೆರೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು. ಬಳಿಕ ಚಿತ್ರದುರ್ಗ ಹಾಗೂ ತುಮಕೂರಿನಲ್ಲಿ ಪಕ್ಷದ ವಿಧಾನಪರಿಷತ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿ ರಾತ್ರಿ ವೇಳೆಗೆ ಸಿಎಂ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

4. ಅಣ್ಣಾ ಹಜಾರೆಗೆ ಎದೆನೋವು, ಆಸ್ಪತ್ರೆಗೆ ದಾಖಲು
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಪುಣೆಯ ರೂಬಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಎರಡು ಮೂರು ದಿನಗಳಿಂದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುಣೆಯ ರೂಬಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯದ ಅಪಧಮನಿಯಲ್ಲಿನ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಸ್ಥಿರವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯ ಇಬ್ಬರು ವೈದ್ಯರಾದ ಪಿ ಕೆ ಗ್ರಾಂಟ್ ಮತ್ತು ಸಿಎನ್ ಅವರು ಅಣ್ಣಾ ಹಜಾರೆ ಅವರಿಗೆ ಇಸಿಜಿ, ಆಂಜಿಯೋಗ್ರಫಿ, ಇಮೇಜಿಂಗ್ ಪರೀಕ್ಷೆಯನ್ನು ನಡೆಸಿದ್ದಾರೆ.

5. ಮತ್ತೊಂದು ರೂಪದಲ್ಲಿ ಎಂಟ್ರಿ ಕೊಟ್ಟ ಕೊರೊನಾ


ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಹೊಸ ಕೋವಿಡ್ ರೂಪಾಂತರವನ್ನು ಪತ್ತೆ ಮಾಡಿದ್ದಾರೆ. ಇದು ಈಗಷ್ಟೇ ಕೋವಿಡ್‌ ಹೊಡೆತದಿಂದ ಚೇತರಿಸಿಕೊಳ್ತಿರೋ ವಿಶ್ವಕ್ಕೆ ಮತ್ತೊಂದು ಶಾಕ್ ಎದುರಾದಂತಾಗಿದೆ. ಈ ರೂಪಾಂತರಿ ಬಗ್ಗೆ ಇಡೀ ವಿಶ್ವವೇ ಭಾರೀ ಎಚ್ಚರಿಕಾ ಕ್ರಮಗಳನ್ನು ಅನುಸರಿಸೋಕೆ ಮುಂದಾಗಿವೆ. ಅದರಂತೆ ಭಾರತವೂ ಕೂಡ ದಕ್ಷಿಣ ಆಫ್ರಿಕಾ, ಹಾಂಗ್ ಕಾಂಗ್‌ನಿಂದ ಬರುವ ಅಂತರರಾಷ್ಟ್ರೀಯ ಪ್ರಯಾಣಿಕರ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಲು ಎಚ್ಚರಿಕೆ ನೀಡಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ಪತ್ರ ನೀಡಿದೆ.

6. ಕೊರೊನಾ ಲಸಿಕೆ ರಫ್ತಿಗೆ ಕೇಂದ್ರ ಸರ್ಕಾರದ ಅಸ್ತು
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ತಯಾರಕರಲ್ಲಿ ಲಭ್ಯವಿರುವ ಕೊರೊನಾ ಲಸಿಕೆಗಳ ಸಾಕಷ್ಟು ದಾಸ್ತಾನು ಪರಿಗಣಿಸಿದ ಸರ್ಕಾರ, ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ ಲಸಿಕೆಯನ್ನು ವಾಣಿಜ್ಯ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರದ ಅಧಿಕೃತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅಲ್ಲದೆ ದೇಶದಲ್ಲಿ ಲಸಿಕೆ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಂಡು, ರಫ್ತು ಮಾಡಬೇಕಾದ ಲಸಿಕೆಗಳ ಪ್ರಮಾಣವನ್ನು ಸರ್ಕಾರವೇ ಪ್ರತಿ ತಿಂಗಳು ನಿರ್ಧರಿಸುತ್ತದೆ.

7. ದೇಶಕ್ಕೆ ₹11,185 ಕೋಟಿ ಸಾಲ ಕೊಡಲು ಮುಂದಾದ ಎಡಿಬಿ

ಕೋವಿಡ್‌ ಲಸಿಕೆ ಸಂಗ್ರಹಣೆಗಾಗಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಭಾರತಕ್ಕೆ ಸುಮಾರು 11,185 ಕೋಟಿ ರೂಪಾಯಿ ಸಾಲ ನೀಡಲು ಮುಂದಾಗಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳನ್ನು ಖರೀದಿಸುವ ಭಾರತ ಸರ್ಕಾರದ ನೆರವಿಗಾಗಿ 1.5 ಬಿಲಿಯನ್‌ ಡಾಲರ್‌ ಸಾಲಕ್ಕೆ ಅನುಮೋದನೆ ನೀಡಲಾಗಿದೆ ಎಂದು ಎಡಿಬಿ ತಿಳಿಸಿದೆ. ಈ ಯೋಜನೆಗೆ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಕೂಡ ಹೆಚ್ಚುವರಿಯಾಗಿ 500 ಮಿಲಿಯನ್ ಡಾಲರ್‌ ಹಣಕಾಸು ಸಹಾಯ ನೀಡುವ ನಿರೀಕ್ಷೆಯಿದೆ.

8. ASU ಔಷಧಿಗಳಲ್ಲಿ ಅಶ್ವಗಂಧ ಎಲೆಗಳ ಬಳಕೆಗೆ ಚಿಂತನೆ

ಆಯುರ್ವೇದ, ಸಿದ್ಧ ಮತ್ತು ಯುನಾನಿ ಔಷಧಗಳಲ್ಲಿ ಅಶ್ವಗಂಧ ಎಲೆಗಳ ಬಳಕೆಗೆ ಆಯುಷ್ ಸಚಿವಾಲಯ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಪರಿಶೀಲಿಸಲನೆ ನಡೆಸಲು ತಜ್ಞರ ತಂಡ ರಚನೆಗೆ ನಿರ್ಧರಿಸಿದೆ. ಆಯುಷ್ ಸಚಿವಾಲಯವು ಈ ಹಿಂದೆ ASU ಉತ್ಪನ್ನಗಳಲ್ಲಿ ಅಶ್ವಗಂಧ ಎಲೆಗಳ ಬಳಕೆಯ ಬಗೆಗಿನ ಗೊಂದಲಗಳ ಬಗ್ಗೆ ಚರ್ಚಿಸಲು ಸ್ಟಾಕ್​ ಹೋಲ್ಡರ್ಸ್​​​​​​​ ಆಹ್ವಾನಿಸಿತ್ತು. ಈ ಮೂಲಕ ವೈಜ್ಞಾನಿಕ ಪುರಾವೆಗಳ ಆಧಾರದ ಮೇಲೆ ASU ಉತ್ಪನ್ನಗಳಲ್ಲಿ ಅಶ್ವಗಂಧದ ಎಲೆಗಳನ್ನ ಬಳಸುವ ಬಗ್ಗೆ ತಜ್ಞರ ತಂಡ ಪರಿಶೀಲನೆ ನಡೆಸಿ ಭಾರತ ಸರ್ಕಾರಕ್ಕೆ ಸೂಕ್ತ ಶಿಫಾರಸನ್ನ ನೀಡಲಿದೆ.

9. ಇಂದು ಗೋಲ್ಡನ್ ಸ್ಟಾರ್ ಗಣೇಶ್ ‘ಸಖತ್’ ಎಂಟ್ರಿ


ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಸಖತ್‌ ಸಿನಿಮಾ ಇಂದು ರಾಜ್ಯದ್ಯಂತ ಬಿಡುಗಡೆಯಾಗಲಿದೆ. ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರ ಸಖತ್ ಸಿನಿಮಾದ ಪ್ರಮುಖ ಥಿಯೇಟರ್ ಆಗಿದ್ದು, ಇವತ್ತು ಬೆಳಗ್ಗೆ 10 ಗಂಟೆಗೆ ಚಿತ್ರ ತೆರೆಕಾಣಲಿದೆ. ಇನ್ನೂ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಗಣೇಶ್ ಅಭಿನಯದ 38ನೇ ಸಿನಿಮಾ ಇದಾಗಿದ್ದು ಸಿಂಪಲ್ ಸುನಿ ಕತೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇನ್ನೂ ಗೋಲ್ಡನ್ ಸ್ಟಾರ್​ ಗಣೇಶ್​ಗೆ ಜೋಡಿಯಾಗಿ ನಿಶ್ವಿಕಾ ನಾಯ್ಡು ಹಾಗೂ ಸುರಭಿ ನಟಿಸಿದ್ದಾರೆ.

10. ಚೊಚ್ಚಲ ಪಂದ್ಯದಲ್ಲಿ ಶ್ರೇಯಸ್ ಐಯ್ಯರ್ ಅರ್ಧಶತಕ


ರವೀಂದ್ರ ಜಡೇಜಾ ಮತ್ತು ಶ್ರೇಯಸ್ ಐಯ್ಯರ್ ಅರ್ಧಶತಕಗಳ ನೆರವಿನಿಂದ ಭಾರತ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಕಾನ್ಪುರದ ಗ್ರೀನ್ ಪಾರ್ಕ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಭಾರತ- ನ್ಯೂಜಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ದಿನದಾಟದಾಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ಗಳ ನಷ್ಟಕ್ಕೆ 258 ರನ್ ಗಳನ್ನು ಗಳಿಸಿದೆ. ರವೀಂದ್ರ ಜಡೇಜಾ- ಶ್ರೇಯಸ್ ಐಯ್ಯರ್ 5 ನೇ ವಿಕೆಟ್ ಗೆ 113 ರನ್ ಗಳ ಅದ್ಭುತ ಜೊತೆಯಾಟ ಕಟ್ಟಿದರು.ಸದ್ಯ ಶ್ರೇಯಸ್ ಅಯ್ಯರ್ ಹಾಗೂ ರವೀಂದ್ರ ಜಡೇಜಾ ಕ್ರೀಜ್ ಕಾಯ್ದುಕೊಂಡಿದ್ದು, ಇಂದಿನ 2ನೇ ದಿನದಾಟವನ್ನು ಆರಂಭಿಸಲಿದ್ದಾರೆ.

News First Live Kannada

Leave a comment

Your email address will not be published. Required fields are marked *