ಬಳ್ಳಾರಿ: ಶಿರಗುಪ್ಪ ತಾಲೂಕಿನ ರಾರಾವಿ ಗ್ರಾಮದ ಬಳಿ ಹಗರಿ ನದಿಗೆ ನಿರ್ಮಾಣ ಆಗ್ತಿರೋ ಸೇತುವೆ 13 ವರ್ಷವಾದ್ರೂ ಲೋಕಾರ್ಪಣೆಯಾಗದೇ ಉಳಿದಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಜಟಾಪಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ. ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

2013ರಲ್ಲಿ ಅಂದಿನ ಸಿಎಂ ಜಗದೀಶ್ ಶೆಟ್ಟರ್‌ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ , 30 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆದ್ರೆ ಸೇತುವೆ ನಿರ್ಮಣದ ಕಾಮಗಾರಿ ಅವಸರ ಮತ್ತು ಅವೈಜ್ಞಾನಿಕಗಿಕವಾಗಿ ಆರಂಭವಾಗಿತ್ತು ಎನ್ನಲಾಗಿದೆ. ಕರ್ನಾಟಕ, ಆಂಧ್ರ ನಡುವೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ಬಿಡ್ಜ್​​ ನಿರ್ಮಾಣ ಆಗ್ತಿದೆ. ಆಂಧ್ರದ ಮಾಧವ ಹೈಟೆಕ್ ಇನ್‌ಫ್ರಾಸ್ಟ್ರಕ್ಟರ್ ಪ್ರೈವೇಟ್ ಲಿಮಿಟೆಡ್ ಕಂಪನಿ ಬ್ರಿಡ್ಜ್ ನಿರ್ಮಾಣದ ಜವಾಬ್ದಾರಿ ಹೊತ್ತಿದೆ.  2015ರ ಜನವರಿ ತಿಂಗಳಲ್ಲಿ ಸೇತುವೆ ಲೋಕಾರ್ಪಣೆ ಆಗಬೇಕಿತ್ತು. ಆದ್ರೆ ಇನ್ನೂ ಆಗಿಲ್ಲ.

ಮಳೆಯಾದ್ರೆ ಹಗರಿ ನದಿ ನೀರು ಬಂದು ರಾರಾವಿ ಗ್ರಾಮದ ನೆಲಮಟ್ಟದ ಸೇತುವೆ ಮುಳುಗಡೆ ಆಗ್ತಿದೆ. ಮಳೆ ಬಂದಾಗ ಕರ್ನಾಟಕದ 25ಕ್ಕೂ ಅಧಿಕ ಹಳ್ಳಿಗಳ ಸಂಪರ್ಕ ಕಡಿತಗೊಳ್ಳುತ್ತದೆ. ರಾರಾವಿ ಗ್ರಾಮದ ನೆಲಮಟ್ಟದ ಸೇತುವೆ ಮುಳುಗಡೆಯಿಂದ ಸಿರಗುಪ್ಪ ಪಟ್ಟಣಕ್ಕೆ ಬರಲು ಪರದಾಡುವಂತಾಗುತ್ತದೆ. ರಾರಾವಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಕಾಮಗಾರಿ ಪ್ರಗತಿಯಲ್ಲಿದ್ದರೂ, ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಸೇತುವೆ ನಿರ್ಮಾಣ ಪೂರ್ಣಗೊಂಡಿಲ್ಲ ಅಂತ ಜನರು ಆಕ್ರೋಶ ಹೊರಹಾಕ್ತಿದ್ದಾರೆ.

ಕಳೆದ ವಾರವಷ್ಟೇ ತಜ್ಞರು ಬ್ರಿಡ್ಜ್ ಕಾಮಗಾರಿ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಮತ್ತೆ ಕಾಮಗಾರಿಗೆ ಆರು ಕೋಟಿ ರೂಪಾಯಿ ಅನುದಾನ ಹೆಚ್ಚಿಸಿದ್ದಾರೆ. ಹೀಗಾಗಿ ಒಟ್ಟು 36 ಕೋಟಿ ವೆಚ್ಚದಲ್ಲಿ ಕಾಮಗಾರಿ ಪೂರ್ಣ ಮಾಡುವಂತೆ ಗುತ್ತಿಗೆದಾರನಿಗೆ ತಾಕೀತು ಮಾಡಲಾಗಿದೆ. ಆದ್ರೆ ಇನ್ನೂ ಒಂದು ವರ್ಷ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ ಎಂಬ ವರದಿ ನೀಡಲಾಗಿದೆ. ಸರ್ಕಾರದ ಹಣ ಖರ್ಚಾಗುತ್ತಿದೆ, ಕಾಮಗಾರಿ ಪೂರ್ಣಗೊಳಿಸಿ ಎಂದು ರಾರಾವಿ ಗ್ರಾಮಸ್ಥರು ಒತ್ತಾಯ ಮಾಡ್ತಿದ್ದಾರೆ. ಪಿಡಬ್ಲ್ಯೂಡಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷಕ್ಕೆ ಜನಾಕ್ರೋಶ ವ್ಯಕ್ತವಾಗಿದೆ.

2022ರ ಮಾರ್ಚ್ ವೇಳೆಗೆ ಎರಡು ವರ್ಷದಲ್ಲಿ ಜನಸೇವೆಗೆ ಬ್ರಿಡ್ಜ್​ ಸಿದ್ಧವಾಗುತ್ತೆ ಎಂದು ಸಿರಗುಪ್ಪ ಶಾಸಕ ಎಂ. ಎಸ್ ಸೋಮಲಿಂಗಪ್ಪ ಹೇಳಿದ್ದಾರೆ.

The post ಅಧಿಕಾರಿಗಳು-ಗುತ್ತಿಗೆದಾರರ ಜಟಾಪಟಿ: 13 ವರ್ಷವಾದ್ರೂ ಲೋಕಾರ್ಪಣೆಯಾಗದ ಸೇತುವೆ appeared first on News First Kannada.

Source: newsfirstlive.com

Source link