ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಡಿ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಕಳೆದ 30 ವರ್ಷಗಳಿಂದ ನಾಲೆ ಹೂಳು ತೆಗೆಯುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಗ್ರಾಮಸ್ಥರ ಮನವಿಗೆ ತಲೆಕೆಡಿಸಿಕೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬೇಸತ್ತು ತಾವೇ ಸ್ವಂತ ಹಣ ಖರ್ಚು ಮಾಡಿ ಡಿ.ಹೊಸಹಳ್ಳಿ ಗ್ರಾಮಸ್ಥರು ನಾಲೆ ಹೂಳು ತೆಗೆದಿದ್ದಾರೆ. ಕಳೆದೆರಡು ವರ್ಷಗಳಿಂದ ಜಮೀನುಗಳಿಗೆ ನೀರು ಹರಿಯದೆ ರೈತರು ಪರದಾಡುವಂತಾದ ಕಾರಣ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿದ್ದಾರೆ. ಕೆರಗೋಡು ನಾಲಾ ವಿಭಾಗದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶಗೊಂಡಿದ್ದು ಇನ್ನೊಂದು ವಾರದೊಳಗೆ ಉಳಿದಿರುವ ನಾಲೆಗಳ ಹೂಳು ತೆಗೆಯುವಂತೆ ಒತ್ತಾಯ ಮಾಡಿದ್ದಾರೆ.