ನೈಜೀರಿಯಾದಲ್ಲಿ ಅನಿರ್ದಿಷ್ಟಾವಧಿಗೆ ಸಾಮಾಜಿಕ ಜಾಲತಾಣ ಟ್ವಿಟರ್​​ ಅನ್ನು ಬ್ಯಾನ್ ಮಾಡಲಾಗಿದೆ.

ನೈಜೀರಿಯಾದ ಅಧ್ಯಕ್ಷ ಮೊಹಮ್ಮದ್ ಬುಹಾರಿ, ಆಂತರಿಕ ಯುದ್ಧದ ಬಗ್ಗೆ ಟ್ವೀಟ್ ಒಂದನ್ನ ಮಾಡಿದ್ರು. ದೇಶದ ಭದ್ರತಾ ಸಿಬ್ಬಂದಿ ಮೇಲಿನ ದಾಳಿಗೆ ಕಾರಣರೆಂದು ಆರೋಪಿಸಲಾಗಿರೋ ಬಿಯಾಫ್ರಾದಲ್ಲಿನ ಪ್ರತ್ಯೇಕತಾವಾದಿಗಳಿಗೆ ಬುಹಾರಿ ಎಚ್ಚರಿಕೆ ನೀಡಿದ್ದರು.

ಇಂದು ದುರ್ವತನೆ ತೋರುತ್ತಿರುವವರಲ್ಲಿ ಅನೇಕರು ತುಂಬಾ ಚಿಕ್ಕವರು, ಬಿಯಾಫ್ರಾ ಯುದ್ಧದ ಸಮಯದಲ್ಲಿ ಸಂಭವಿಸಿದ ವಿನಾಶ ಮತ್ತು ಪ್ರಾಣಹಾನಿ ಬಗ್ಗೆ ತಿಳಿಯದವರಾಗಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದರು. 1967ರಲ್ಲಿ ಅಂತರ್ಯುದ್ಧದ ಸಮಯದಲ್ಲಿ ಬ್ರಿಗೇಡ್ ಮೇಜರ್ ಆಗಿದ್ದ ಬುಹಾರಿ, ನಮ್ಮಲ್ಲಿ ಕೆಲವರು 30 ತಿಂಗಳುಗಳ ಕಾಲ ಯುದ್ಧದಲ್ಲಿದ್ದೆವು, ಅವರಿಗೆ ಅರ್ಥವಾಗುವ ಭಾಷೆಯಲ್ಲೇ  ಉತ್ತರಿಸುತ್ತೇವೆ ಎಂದು ಹೇಳಿದ್ದರು.

ಈ ಬಗ್ಗೆ ಕೆಲವರಿಂದ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಈ ಟ್ವೀಟ್​​​ ತಮ್ಮ ನಿಯಮ ಉಲ್ಲಂಘನೆ  ಮಾಡಿದೆ ಎಂಬ ಆರೋಪದ ಮೇಲೆ ಟ್ವಿಟರ್ ಸಂಸ್ಥೆ  ಅಧ್ಯಕ್ಷರ  ಟ್ವೀಟ್​​ ರಿಮೂವ್ ಮಾಡಿ, ಅವರ ಖಾತೆಯನ್ನ 12 ಗಂಟೆಗಳ ಕಾಲ ಸಸ್ಪೆಂಡ್​ ಮಾಡಿತ್ತು. ಇದೇ ಕಾರಣಕ್ಕೆ ಸಿಟ್ಟಾಗಿರುವ ನೈಜೀರಿಯಾ ಸರ್ಕಾರ ಇಡೀ ದೇಶದಿಂದಲೇ ಟ್ವಿಟರ್ ಬಳಕೆಗೆ ನಿರ್ಬಂಧ ಹೇರಿದೆ. ಮುಂದಿನ ಆದೇಶದವರೆಗೂ ನೈಜೀರಿಯಾದಲ್ಲಿ ಟ್ವಿಟರ್ ಚಾಲನೆಯಲ್ಲಿ ಇರೋದಿಲ್ಲ ಅಂತ ಪ್ರಕಟಣೆ ಹೊರಡಿಸಲಾಗಿದೆ.

ಟ್ವಿಟರ್‌ ನಿಷೇಧಿಸೋ ಜೊತೆಗೆ ನೈಜೀರಿಯಾದಲ್ಲಿ ಇನ್ಮುಂದೆ ಎಲ್ಲಾ ಸಾಮಾಜಿಕ ಜಾಲತಾಣಗಳ ಕಾರ್ಯಾಚರಣೆಗಳಿಗೆ ಲೈಸೆನ್ಸ್​ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ, ದೇಶದ ಬ್ರಾಡ್​ಕಾಸ್ಟ್​​ ಕಮಿಷನ್​ಗೆ ನಿರ್ದೇಶನ ನೀಡಿದೆ. ಈ ಕ್ರಮದಿಂದ ಆಫ್ರಿಕನ್ ರಾಷ್ಟ್ರದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವ ನಿರೀಕ್ಷೆಯಿದೆ.

The post ಅಧ್ಯಕ್ಷರ ಟ್ವೀಟ್ ತೆಗೆದಿದ್ದಕ್ಕೆ ಈ ದೇಶದಲ್ಲಿ ಟ್ವಿಟರ್ ಬ್ಯಾನ್ appeared first on News First Kannada.

Source: newsfirstlive.com

Source link