ಗದಗದಲ್ಲಿ ಕಿರಾತಕನೊಬ್ಬ ಮಾಡಿದ ಅನಾಹುತ ಅಷ್ಟಿಷ್ಟಲ್ಲ. ಈ ಕಿರಾತಕ ಮಾಡಿದ ಒಂದು ಫೋನ್ ಕರೆಯಿಂದ ವೈದ್ಯರೇ ಬೆಚ್ಚಿ ಬಿದ್ದಿದ್ದರು. ಅಷ್ಟೇ ಅಲ್ಲ ತಾವೇ ಆಂಬ್ಯುಲೆನ್ಸ್ ಡ್ರೈವ್ ಮಾಡಿಕೊಂಡು ಹೋಗಿ ಕೊರೊನಾ ಸೋಂಕಿತರನ್ನು ಬೇರೆ ಆಸ್ಪತ್ರೆಗೂ ಶಿಫ್ಟ್ ಮಾಡಿ ಬಿಟ್ರು. ಆದರೆ ಕೊನೆಗೆ ಆಗಿದ್ದೇ ಬೇರೆ.

ಕೊರೊನಾ ಕಾಲದಲ್ಲಿ ಕಿರಾತಕರು ಅಲ್ಲಲ್ಲಿ ಹುಚ್ಚಾಟ ನಡೆಸ್ತಾ ಇದ್ದ ಸುದ್ದಿಗಳು ಬರ್ತಾನೇ ಇರ್ತಾವೆ. ಇಲ್ಲೊಬ್ಬ ಕಿರಾತಕ ಎಲ್ಲರನ್ನೂ ಮೀರಿಸಿದ್ದಾನೆ. ಅಂಡರ್ ವರ್ಲ್ಡ್ ಡಾನ್ ಥರಾ ವೈದ್ಯರಿಗೇ ಬೆದರಿಕೆ ಹಾಕಿದ್ದಾನೆ. ಯಾರೋ ದೊಡ್ಡ ಮನುಷ್ಯನೇ ಇರಬೇಕೆಂದು ಈ ಆಸ್ಪತ್ರೆಯ ವೈದ್ಯರು ಹೆದರಿಕೊಂಡಿದ್ದಾರೆ. ಅಷ್ಟೇ ಅಲ್ಲ ಈತನ ಅಣತಿಯಂತೆಯೇ ನಡೆದುಕೊಂಡಿದ್ದಾರೆ. ಆದ್ರೆ ಕೊನೆಗೆ ಗೊತ್ತಾಗಿದ್ದೇ ಈತನೊಬ್ಬ ಕಿರಾತಕ ಅಂತ. ಆದರೆ, ಅಷ್ಟರೊಳಗೆ ಎಲ್ಲರೂ ಬೆಸ್ತು ಬಿದ್ದಾಗಿತ್ತು.

ಗದಗದ ವೈದ್ಯರಿಗೆ ಬರುತ್ತೆ ಒಂದು ಅನಾಮಧೇಯ ಕರೆ
ರಾಜಕಾರಣಿಯ ಹೆಸರಿನಲ್ಲಿ ದೂರವಾಣಿಯಲ್ಲೇ ಆವಾಜ್

ಗದಗ ನಗರದಲ್ಲಿರುವ ಡಾ.ಎನ್‌.ಬಿ.ಪಾಟೀಲ್‌ ಖಾಸಗಿ ಆಸ್ಪತ್ರೆಯಲ್ಲಿ, ಸರ್ಕಾರಿ ನಿಯಮದಂತೆ ಕೋವಿಡ್‌ ರೋಗಿಗಳಿಗಾಗಿಯೇ ಶೇ.50 ರಷ್ಟು ಬೆಡ್‌ ಸೌಲಭ್ಯವನ್ನು ಮೀಸಲಿಡಲಾಗಿತ್ತು. ಮಕ್ಕಳಿಂದ ಹಿಡಿದು ವೃದ್ಧರವರಿಗೊ ಇಲ್ಲಿ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ, ಜೂನ್‌ 5 ರಂದು ಆಸ್ಪತ್ರೆಗೆ ಒಂದು ಫೋನ್‌ ಕರೆ ಬರುತ್ತೆ. ಕರೆ ಮಾಡಿದವನು ತಾನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಅಂತ ಪರಿಚಯ ಮಾಡಿಕೊಳ್ತಾನೆ. ಆಸ್ಪತ್ರೆಯಲ್ಲಿ ದಾಖಲಾಗಿರುವ 60 ವರ್ಷದ ಮಹಿಳಾ ಕೋವಿಡ್‌ ರೋಗಿಯೊಬ್ಬರ ಹೆಸರು ಹೇಳಿ ಅವರನ್ನು ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡುವಂತೆ ಹೇಳ್ತಾನೆ. ಆ ಧ್ವನಿ ಪಕ್ಕಾ ಅಂಡರ್‌ ವರ್ಲ್ಡ್‌ ಡಾನ್‌ ರೀತಿಯಲ್ಲೇ ಇರುತ್ತೆ. ವೈದ್ಯರು ಒಮ್ಮೆ ದಂಗಾಗಿ ಹೋಗುತ್ತಾರೆ.

ಆಸ್ಪತ್ರೆಯ ಲ್ಯಾಂಡ್ ಲೈನ್ ಗೆ ಬಂದ ಬೆದರಿಕೆ ಏನು?
ತರಾತುರಿಯಲ್ಲಿ ರೋಗಿಯನ್ನು ಶಿಫ್ಟ್ ಮಾಡಿದ್ದು ಯಾಕೆ?

ಆಸ್ಪತ್ರೆಗೆ ಫೋನ್‌ ಕರೆ ಮಾಡಿದವನು ರೋಗಿಯನ್ನು ಜಿಲ್ಲಾಸ್ಪತ್ರೆ ಸಾಗಿಸುವಂತೆ ಮಾತ್ರ ಕೇಳಿಕೊಂಡಿದ್ರೆ ವೈದ್ಯರು ಸುಮ್ಮನಾಗಿ ಬಿಡ್ತಿದ್ರೋ ಏನೋ. ಆದ್ರೆ, ಕರೆ ಮಾಡಿದವನು ಜಿಲ್ಲಾಸ್ಪತ್ರೆಗೆ ಸಾಗಿಸದಿದ್ದರೆ ಆಸ್ಪತ್ರೆಯನ್ನು ದರೋಡೆ ಮಾಡುವುದಾಗಿ, ರೌಡಿಗಳಿಂದ ಬೆಂಕಿ ಹಚ್ಚಿಸುವುದಾಗಿ ಬೆದರಿಕೆ ಹಾಕಿರ್ತಾನೆ. ಇದೇ ನೋಡಿ ವೈದ್ಯರು ಎದ್ನೋ ಬಿದ್ನೋ ಅಂತ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಂತೆ ಮಾಡಿದ್ದು. ಈ ಕರೆಯಲ್ಲಿ ಹಾಕಿದ್ದ ಆವಾಜ್ ಹಾಗಿತ್ತು. ಅಷ್ಟರ ಮಟ್ಟಿಗೆ ಹೆದರಿಸಿ ಬಿಟ್ಟಿದ್ದ ಈ ವ್ಯಕ್ತಿ.

ವೈದ್ಯರೇ ಆ್ಯಂಬುಲೆನ್ಸ್‌ ಚಾಲಕರಾಗಿ ಕರೆದೊಯ್ದರು

ಖಾಸಗಿ ಆಸ್ಪತ್ರೆಯಾಗಿರಲಿ, ಸರ್ಕಾರಿ ಆಸ್ಪತ್ರೆಯಾಗಿರಲಿ. ವೈದ್ಯರೇ ಆ್ಯಂಬುಲೆನ್ಸ್‌ ಚಾಲನೆ ಮಾಡುವ ಸಾಹಸಕ್ಕೆ ಹೋಗಲ್ಲ. ಒಮ್ಮೆ ಹೋದರೂ ಅದು ಅಪರೂಪದಲ್ಲಿ ಅಪರೂಪದ ಘಟನೆ ಅಷ್ಟೇ. ಆದ್ರೆ, ಇಲ್ಲಿ ಅಪರೂಪದ ಘಟನೆ ನಡೆದೆ ಹೋಯ್ತು. ಕರೆ ಕೇಳಿದ ತಕ್ಷಣವೇ ವೈದ್ಯರು ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ಗಾಬರಿಯಾಗ್ತಾರೆ. ಜಿಲ್ಲಾಸ್ಪತ್ರೆಗೆ ಕಾಲ್‌ ಮಾಡಿ ಬೆಡ್‌ ಇದೆಯಾ ಅಂತ ವಿಚಾರಿಸುತ್ತಾರೆ. ಬೆದರಿಕೆ ಕರೆ ಬಂದಿರುವುದನ್ನು ತಿಳಿಸಿರುತ್ತಾರೆ. ಅಂತೂ ಇಂತೂ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ವ್ಯವಸ್ಥೆ ಆಗಿರುತ್ತದೆ. ಆದ್ರೆ, ಜಿಲ್ಲಾಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್‌ ಚಾಲಕರೇ ಇರುವುದಿಲ್ಲ. ಇನ್ನೇನು ಮಾಡೋದು? ಕೈಕಟ್ಟಿ ಕುಳಿತುಕೊಳ್ಳುವ ಪರಿಸ್ಥಿತಿಯಂತೂ ಅಲ್ಲ. ಖಾಸಗಿ ಆಸ್ಪತ್ರೆಯಲ್ಲೇ ರೋಗಿ ಚಿಕಿತ್ಸೆ ಸ್ಪಂದಿಸುತ್ತಿದ್ರೂ ಫೋನ್‌ ಕರೆಗೆ ಓಗೊಟ್ಟು ಜಿಲ್ಲಾಸ್ಪತ್ರೆಗೆ ಸಾಗಿಸಲೇಬೇಕಾದ ಇಕ್ಕಟ್ಟಿಗೆ ಸಿಲುಕುತ್ತಾರೆ ವೈದ್ಯರು. ಬೇರೆಯಾರಾದರೂ ಚಾಲಕರಿದ್ದಾರಾ ಅಂತ ಹುಡುಕುವುದಕ್ಕೂ ಸಮಯ ಇರಲಿಲ್ಲ. ಆ ಕ್ಷಣವೇ ಡಾ.ಪವನ್‌ ಪಾಟೀಲ್‌ ಆ್ಯಂಬುಲೆನ್ಸ್‌ ಏರಿ ಸ್ಟೇರಿಂಗ್‌ ಹಿಡಿಯುತ್ತಾರೆ. ರೋಗಿಯನ್ನು ಆ್ಯಂಬುಲೆನ್ಸ್‌ಗೆ ಹತ್ತಿಸಿಕೊಂಡು ಜಿಲ್ಲಾಸ್ಪತ್ರೆಗೆ ಸಾಗಿಸಿ ನಿಟ್ಟುಸಿರು ಬಿಡುತ್ತಾರೆ.

ಫೋನ್‌ ಕರೆ ಚೆಕ್‌ ಮಾಡಿದಾಗ ಆಘಾತ
ದೂರವಾಣಿ ನಂಬರ್ ಹಿಂದೆ ಬಿದ್ದ ಸಿಬ್ಬಂದಿ

ರೋಗಿಯನ್ನೇನೋ ಜಿಲ್ಲಾಸ್ಪತ್ರೆಗೆ ಸೇರಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಬಚಾವ್‌ ಆಗಿದ್ರು. ಆ ನಂತರ ಶುರುವಾಗಿದ್ದೇ ಆ ಫೋನ್‌ ಕರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರದ್ದಾ ಅನ್ನುವಂತಹ ಅನುಮಾನ. ಏನೇ ಆಗ್ಲಿ ಅಂತ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನು ಸಂಪರ್ಕಿಸಿ ವಿಚಾರಿಸುತ್ತಾರೆ. ಆದ್ರೆ, ಆ ಫೋನ್‌ ಕರೆ ಅವರದಲ್ಲ ಅನ್ನೋದು ಸಾಬೀತು ಆಗಿ ಹೋಯ್ತು. ತಾವು ಯಾವುದೋ ಕರೆಗೆ ಯಾಮಾರಿದ್ವಾ ಅನ್ನುವಂತಹ ಅನ್ನುಮಾನವೂ ಆರಂಭವಾಯ್ತು. ಫೋನ್‌ ಬಂದಿರೋದು ಮೊಬೈಲ್‌ನಿಂದ ಆಗಿದ್ರೆ ಅಷ್ಟೇನು ತಲೆ ಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಆದ್ರೆ ಕರೆ ಮಾಡಿದವನು ಲ್ಯಾಂಡ್‌ಲೈನ್‌ನಿಂದ ಮಾಡಿದ್ದ. ಕಾಲ್‌ ಡಿಟೆಲ್ಸ್‌ ತೆಗೆದಾಗ ಆ ಕರೆ ಗದಗ ಜಿಲ್ಲೆ ರೋಣ ತಾಲೂಕಿನಿಂದ ಬಂದಿದ್ದು ಅನ್ನೋದು ತಿಳಿಯುತ್ತೆ. ಅದನ್ನು ಬೆನ್ನು ಹತ್ತಿದಾಗ ಗದಗ ಜಿಲ್ಲೆ ರೋಣ ತಾಲೂಕಿನ ನರೇಗಲ್‌ ವ್ಯಕ್ತಿ ಅನ್ನೋದು ತಿಳಿಯುತ್ತೆ. ಆ ಸಾಮಾನ್ಯ ವ್ಯಕ್ತಿ ಬೇರೆಯಾರೂ ಅಲ್ಲ, ಆತ ವಿಜಯ್‌ ಕುಮಾರ್‌ ವಸ್ತ್ರ ಆಗಿದ್ದಾನೆ. ಮುಂದೆ ಏನಾಯ್ತು ಅನ್ನೋದೆ ಈ ಸ್ಟೋರಿಯ ಟ್ವಿಸ್ಟ್‌.

ಯಾವುದೇ ಅಂಡರ್‌ ವರ್ಲ್ಡ್‌ ಡಾನ್‌ ಅಲ್ಲ. ಅಷ್ಟೇ ಏಕೆ, ಆತ ತಾನು ಹೇಳಿಕೊಂಡಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೂಡ ಆಗಿರಲಿಲ್ಲ. 47 ವರ್ಷದ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದ ಅಷ್ಟೇ. ಆಸ್ಪತ್ರೆಯವರಿಗೆ ಅದು ಹೇಗೋ ಸಿಕ್ಕಿ ಬೀಳ್ತಾನೆ. ತಕ್ಷಣವೇ ಕ್ಷಮೆಯಾಚಿಸಿ ಬಿಡ್ತಾನೆ. ಪೊಲೀಸ್‌ ದೂರು ದಾಖಲಿಸುವುದು ಬೇಡ ಅಂತ ಪರಿಪರಿಯಾಗಿ ಬೇಡಿಕೊಳ್ತಾನೆ. ಆತ ಬೇಡಿಕೊಳ್ಳೋದು ನೋಡಿ ಆಸ್ಪತ್ರೆಯ ಸಿಬ್ಬಂದಿ, ವೈದ್ಯರಿಗೆಲ್ಲ ಪಾಪ ಅನಿಸಿಬಿಡುತ್ತೆ. ಆದ್ರೆ, ಆವತ್ತು ಕರೆ ಮಾಡಿ ಪಕ್ಕಾ ಅಂಡರ್‌ ವರ್ಲ್ಡ್‌ ಡಾನ್‌ಗಳ ರೀತಿ ಬೆದರಿಕೆ ಹಾಕಿದ್ದು ನೆನೆಸಿಕೊಂಡರೆ ವೈದ್ಯರಿಗೆ ಮೈಯಲ್ಲ ಉರಿದು ಹೋಗುತ್ತೆ. ಆದ್ರೂ ಈತನನ್ನು ಸುಮ್ಮನೆ ಬಿಡಬಾರದು ಅಂತ ನಿರ್ಧರಿಸುತ್ತಾರೆ. ಆಸ್ಪತ್ರೆಯಲ್ಲಿ ಪಿಪಿಇ ಕಿಟ್‌ ಹಾಕಿಕೊಂಡು ಕೋವಿಡ್‌ ರೋಗಿಗಳ ಸೇವೆ ಮಾಡು ಕಷ್ಟ ಏನು ಅಂತ ಅರ್ಥ ಆಗುತ್ತೆ ಅಂತ ಸೂಚಿಸುತ್ತಾರೆ. ಆಯ್ತು ಮಾಡ್ತೀನಿ ಅಂತ ಭರವಸೆ ನೀಡಿ ಹೋಗಿರ್ತಾನೆ.

ಆತ ಕಾಡಿಬೇಡಿದ್ದರಿಂದ ಪೊಲೀಸ್‌ ದೂರು ನೀಡಲು ಹೋಗಿರಲ್ಲಿಲ. ಪಿಪಿಇ ಕಿಟ್‌ ಹಾಕಿಕೊಂಡು ಒಂದು ವಾರ ಕೋವಿಡ್‌ ರೋಗಿಗಳ ಸೇವೆ ಮಾಡ್ತೀನಿ ಅಂತ ಭರವಸೆ ನೀಡಿದ್ದ. ಆದ್ರೆ, ಒಂದು ವಾರ ಕಾದು ನೋಡಿದ್ರೂ ವ್ಯಕ್ತಿ ಪತ್ತೆ ಇರಲಿಲ್ಲ. ಇನ್ನೇನು ಮಾಡೋದು ಅಂತ ಆಸ್ಪತ್ರೆಯಿಂದ ಶಹರ ಪೊಲೀಸ್‌ ಠಾಣೆಗೆ ದೂರು ನೀಡಲಾಗುತ್ತೆ. ಪೊಲೀಸರು ದೂರು ದಾಖಲಿಸಿಕೊಂಡು ಬಂಧನಕ್ಕೆ ಬಲೆ ಬೀಸಿದ್ದಾರೆ.

ರೋಗಿಗೂ ಈತನಿಗೂ ಸಂಬಂಧವೇ ಇಲ್ಲ!
ಆದರೂ ಕರೆ ಮಾಡಿ ಬೆದರಿಸಿದ್ದು ಏಕೆ?

ಅಂದು ತರಾರುರಿಯಲ್ಲಿ ರೋಗಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಂತೆ ಮಾಡಿದ ವ್ಯಕ್ತಿ, ರೋಗಿ ಸಂಬಂಧಿಕರಾಗಿರಬಹುದು. ಅದಕ್ಕೆ ಆ ರೀತಿ ಬೆದರಿಕೆ ಕರೆ ಮಾಡಿದ್ದಾನೆ ಅಂತ ನೀವು ಅಂದುಕೊಂಡ್ರೆ ಅದು ತಪ್ಪು. ವಾಸ್ತವವಾಗಿ ಯಾವ ರೀತಿಯ ಸಂಬಂಧವೂ ಇಲ್ಲ. ರೋಗಿಯ ಸಂಬಂಧಿಕರಿಗೂ ಈ ಬಗ್ಗೆ ಯಾವುದೇ ಅರಿವೂ ಇರುವುದಿಲ್ಲ. ಆದರೂ ಯಾಕೆ ಕರೆ ಮಾಡಿದ ಅನ್ನೋದೇ ಯಕ್ಷಪ್ರಶ್ನೆ. ಈ ಎಲ್ಲಾ ಘಟನೆಗೆ ಬಗ್ಗೆ ಆಸ್ಪತ್ರೆಯ ವೈದ್ಯರು ಏನು ಹೇಳ್ತಾರೆ ನೋಡೋಣ ಬನ್ನಿ.

ನೋಡಿದ್ರಲ್ಲ, ಒಬ್ಬ ಸಾಮಾನ್ಯ ವ್ಯಕ್ತಿ ಅಂಡರ್‌ ವರ್ಲ್ಡ್‌ ಡಾನ್‌ ಆದ ರೀತಿಯನ್ನು. ವಾಸ್ತವವಾಗಿ ಆ ರೋಗಿಯ ಸಾಗಾಟವೇ ಅಗತ್ಯ ಇರಲಿಲ್ಲ. ಹೀಗಾಗಿ ಹುಚ್ಚಾಟ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಬೇಕು. ಇಂತಹ ಘಟನೆಗಳು ಮರುಕಳಿಸಬಾರದು.

The post ಅನಾಮಧೇಯ ವ್ಯಕ್ತಿ ಹುಚ್ಚಾಟಕ್ಕೆ ಡಾಕ್ಟರೇ ಆದ್ರು ಡ್ರೈವರ್; ಫೋನ್ ನಂಬರ್​ ನೋಡಿದಾಗ ಶಾಕ್ appeared first on News First Kannada.

Source: newsfirstlive.com

Source link