ಅನಿಲ್ ಅಂಬಾನಿ ವಿರುದ್ಧ ನವೆಂಬರ್17ರವರೆಗೆ ಬಲವಂತವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಐಟಿ ಇಲಾಖೆಗೆ ಬಾಂಬೆ ಹೈಕೋರ್ಟ್ ಸೂಚನೆ | No coercive action against anil ambani until nov 17 bombay high court directed income tax department rak au33


Anil Ambani ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ₹ 814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣದ ಮೇಲಿನ ₹ 420 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ 2022ರ ಆಗಸ್ಟ್ 8 ರಂದು ಅನಿಲ್ ಅಂಬಾನಿ ಅವರಿಗೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು.

ಅನಿಲ್ ಅಂಬಾನಿ ವಿರುದ್ಧ ನವೆಂಬರ್17ರವರೆಗೆ ಬಲವಂತವಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಐಟಿ ಇಲಾಖೆಗೆ ಬಾಂಬೆ ಹೈಕೋರ್ಟ್ ಸೂಚನೆ

ಅನಿಲ್ ಅಂಬಾನಿ

ಮುಂಬೈ : ರಿಲಯನ್ಸ್‌ ಗ್ರೂಪ್‌ ಅಧ್ಯಕ್ಷ ಅನಿಲ್‌ ಅಂಬಾನಿ (Anil Ambani) ವಿರುದ್ಧ ಕಪ್ಪುಹಣ ಕಾಯ್ದೆಯಡಿ ವಿಚಾರಣೆ ನಡೆಸುವಂತೆ ಕೋರಿ ನೀಡಿರುವ ಶೋಕಾಸ್‌ ನೋಟಿಸ್‌ ಮೇಲೆ ನವೆಂಬರ್‌ 17ರವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಬಾಂಬೆ ಹೈಕೋರ್ಟ್‌(Bombay High Court) ಸೋಮವಾರ ಆದಾಯ ತೆರಿಗೆ ಇಲಾಖೆಗೆ (Income Tax department) ನಿರ್ದೇಶನ ನೀಡಿದೆ. ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ₹ 814 ಕೋಟಿಗೂ ಹೆಚ್ಚು ಮೌಲ್ಯದ ಬಹಿರಂಗಪಡಿಸದ ಹಣದ ಮೇಲಿನ ₹ 420 ಕೋಟಿ ತೆರಿಗೆ ವಂಚನೆ ಆರೋಪದ ಮೇಲೆ 2022ರ ಆಗಸ್ಟ್ 8 ರಂದು ಅನಿಲ್ ಅಂಬಾನಿ ಅವರಿಗೆ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ಅನಿಲ್ ಅಂಬಾನಿ ವಿರುದ್ಧ ವಂಚನೆ ಆರೋಪ ಹೊರಿಸಿರುವ ಇಲಾಖೆ ಅವರು “ಉದ್ದೇಶಪೂರ್ವಕವಾಗಿ” ತಮ್ಮ ವಿದೇಶಿ ಬ್ಯಾಂಕ್ ಖಾತೆಯ ವಿವರಗಳು ಮತ್ತು ಹಣಕಾಸಿನ  ವ್ಯವಹಾರಗಳನ್ನು ಭಾರತೀಯ ತೆರಿಗೆ ಅಧಿಕಾರಿಗಳಿಗೆ ಬಹಿರಂಗಪಡಿಸಲಿಲ್ಲ ಎಂದಿದೆ. ಇಲಾಖೆಯ ಸೂಚನೆಯಂತೆ, ಅಂಬಾನಿ ವಿರುದ್ಧ 2015 ರ ಕಪ್ಪು ಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ತೆರಿಗೆ ಕಾಯ್ದೆಯ ಸೆಕ್ಷನ್ 50 ಮತ್ತು 51 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸ ಬಹುದು. ಈ ಕ್ರಮ ದಂಡದೊಂದಿಗೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. 2015ರಲ್ಲಿ ಕಪ್ಪುಹಣ ಕಾಯಿದೆಯನ್ನು ಜಾರಿಗೊಳಿಸಲಾಗಿದ್ದು, ಆರೋಪಿಸಲಾಗಿರುವ ವ್ಯವಹಾರ 2006-2007 ಮತ್ತು 2010-2011ರ ವರ್ಷದ್ದು ಎಂದು ಅಂಬಾನಿ ಈ ತಿಂಗಳ ಆರಂಭದಲ್ಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಅಂಬಾನಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಫೀಕ್ ದಾದಾ, ಕಾಯ್ದೆಯ ನಿಬಂಧನೆಗಳು ಹಿಂದಿನ ವ್ಯವಹಾರಕ್ಕೆ ಪರಿಣಾಮ ಬೀರಲು ಸಾಧ್ಯವಿಲ್ಲ ಎಂದಿದ್ದಾರೆ. ಐಟಿ ಇಲಾಖೆಯ ಪರ ವಾದ ಮಂಡಿಸಿದ ವಕೀಲ ಅಖಿಲೇಶ್ವರ ಶರ್ಮಾ, ಅರ್ಜಿಗೆ ಪ್ರತಿಕ್ರಿಯೆ ನೀಡಲು ಕಾಲಾವಕಾಶ ಕೋರಿದರು. ನ್ಯಾಯಮೂರ್ತಿಗಳಾದ ಎಸ್ ವಿ ಗಂಗಾಪುರವಾಲಾ ಮತ್ತು ಆರ್ ಎನ್ ಲಡ್ಡಾ ಅವರ ವಿಭಾಗೀಯ ಪೀಠವು ಇದನ್ನು ಅನುಮತಿಸಿ ಅರ್ಜಿಯನ್ನು ನವೆಂಬರ್ 17 ರಂದು ವಿಚಾರಣೆಗೆ ಮುಂದೂಡಿತು.

“ಆದಾಯ ತೆರಿಗೆ ಇಲಾಖೆಯು ಮುಂದಿನ ದಿನಾಂಕದವರೆಗೆ ಶೋಕಾಸ್ ನೋಟಿಸ್‌ಗೆ ಅನುಗುಣವಾಗಿ ಅರ್ಜಿದಾರರ (ಅಂಬಾನಿ) ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಕಪ್ಪುಹಣ ಕಾಯ್ದೆಯ ನಿಬಂಧನೆಗಳು ಹಿಂದಿನ ವ್ಯವಹಾರಕ್ಕೆ ಪರಿಣಾಮ ಬೀರದಿರಬಹುದು ಎಂಬ ಅಂಬಾನಿ ಅವರ ವಾದಕ್ಕೆ ಪ್ರತಿಕ್ರಿಯಿಸಲು ಐಟಿ ಇಲಾಖೆಗೆ ನಿರ್ದೇಶನ ನೀಡಿದೆ.

ಈ ವರ್ಷದ ಮಾರ್ಚ್‌ನಲ್ಲಿ ಇಲಾಖೆಯಿಂದ ಮೌಲ್ಯಮಾಪನ ಆದೇಶವನ್ನು ಜಾರಿಗೊಳಿಸಲಾಗಿದೆ. ಅರ್ಜಿದಾರರು ಈ ಆದೇಶದ ವಿರುದ್ಧ ಆದಾಯ ತೆರಿಗೆ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ ಎಂದು ದಾದಾ ನ್ಯಾಯಾಲಯಕ್ಕೆ ತಿಳಿಸಿದರು.

“ಈ ಸಿವಿಲ್ ಪ್ರಕ್ರಿಯೆ ಬಾಕಿ ಉಳಿದಿದ್ದು, ಕಪ್ಪುಹಣ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸಲು ಇಲಾಖೆಯು ಈಗ ಈ ಶೋಕಾಸ್ ನೋಟಿಸ್ ನೀಡಿದೆ” ಎಂದು ದಾದಾ ಹೇಳಿದ್ದು ಸಿವಿಲ್ ವಿಚಾರಣೆ ಬಾಕಿ ಇರುವಾಗ ಇಲಾಖೆಯಿಂದ ಕ್ರಿಮಿನಲ್ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

ಶೋಕಾಸ್ ನೋಟಿಸ್ ಭಾರತದ ಸಂವಿಧಾನದ 20 ನೇ ವಿಧಿಯ ಉಲ್ಲಂಘನೆಯಾಗಿದೆ (ಯಾವುದೇ ಆಪಾದಿತ ಅಪರಾಧಕ್ಕಾಗಿ ಯಾವುದೇ ವ್ಯಕ್ತಿಯನ್ನು ಎರಡು ಬಾರಿ ವಿಚಾರಣೆಗೆ ಒಳಪಡಿಸಬಾರದು ಎಂದು ಹೇಳುತ್ತದೆ). ಸಿವಿಲ್ ಪ್ರಕ್ರಿಯೆಗಳು ಮುಂದುವರಿಯಲಿ ಮತ್ತು ಅದರ ತಾರ್ಕಿಕ ಅಂತ್ಯವನ್ನು ತಲುಪಲಿ ಎಂದು ದಾದಾ ವಾದಿಸಿದರು.

ಶೋಕಾಸ್ ನೋಟಿಸ್‌ಗೆ ಅಂಬಾನಿ ಉತ್ತರಿಸಿದ್ದಾರೆಯೇ ಎಂದು ದಾದಾ ಅವರಲ್ಲಿ ಕೇಳಿದಾಗ  ಇದಕ್ಕೆ ಅರ್ಜಿದಾರರು ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಕೋರಿದ್ದಾರೆ ಎಂದು ದಾದಾ ಹೇಳಿದ್ದು, ದಾಖಲೆಗಳನ್ನು ಸ್ವೀಕರಿಸಿದ ನಂತರ ಅರ್ಜಿದಾರರು ವಿವರವಾದ ಉತ್ತರವನ್ನು ಸಲ್ಲಿಸುತ್ತಾರೆ ಎಂದಿದ್ದಾರೆ.

ಅವಧಿ ಪೂರ್ವ ನೋಟಿಸ್ ನೀಡಲಾಗಿದೆ. ಐಟಿ ಇಲಾಖೆಯ ಕ್ರಮವು ನ್ಯಾಯವ್ಯಾಪ್ತಿ ಅಥವಾ ಕಾನೂನಿನಲ್ಲಿ ಅಧಿಕಾರವಿಲ್ಲದೆ ಮಾತ್ರವಲ್ಲದೆ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದಾದಾ ವಾದಿಸಿದರು. ಐಟಿ ಇಲಾಖೆಯ ಸೂಚನೆಯ ಪ್ರಕಾರ ಅಂಬಾನಿ ಅವರು ‘ಡೈಮಂಡ್ ಟ್ರಸ್ಟ್’ ಎಂಬ ಬಹಾಮಾಸ್ ಮೂಲದ ಘಟಕದ ಮತ್ತು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ನಲ್ಲಿರುವ ನಾರ್ದರ್ನ್ ಅಟ್ಲಾಂಟಿಕ್ ಟ್ರೇಡಿಂಗ್ ಅನ್‌ಲಿಮಿಟೆಡ್ (ಎನ್‌ಎಟಿಯು)ನ ಆರ್ಥಿಕ ಕೊಡುಗೆ ಹಾಗೂ ಲಾಭದಾಯಕ ಮಾಲೀಕ.

ಅಂಬಾನಿ ಅವರು ತಮ್ಮ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಫೈಲಿಂಗ್‌ಗಳಲ್ಲಿ ಈ ವಿದೇಶಿ ಆಸ್ತಿಗಳನ್ನು ಬಹಿರಂಗಪಡಿಸಿಲ್ಎಂಲ ದು ಇಲಾಖೆ ಆರೋಪಿಸಿದ್ದು, 2014 ರಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ನರೇಂದ್ರ ಮೋದಿ ಸರ್ಕಾರ ತಂದ ಕಪ್ಪುಹಣ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದೆ.
ಎರಡು ಖಾತೆಗಳಲ್ಲಿನ ಬಹಿರಂಗಪಡಿಸದ ಹಣದ ಒಟ್ಟು ಮೌಲ್ಯವನ್ನು ತೆರಿಗೆ ಅಧಿಕಾರಿಗಳು ₹ 8,14,27,95,784 (ರೂ. 814 ಕೋಟಿ) ಎಂದು ಅಂದಾಜಿಸಿದ್ದ್ದು ಈ ಮೊತ್ತಕ್ಕೆ ₹ 4,20,29,04,040 (ರೂ. 420 ಕೋಟಿ) ತೆರಿಗೆ ಪಾವತಿಸಬೇಕು.

ತಾಜಾ ಸುದ್ದಿ

TV9 Kannada


Leave a Reply

Your email address will not be published.