ಬಳ್ಳಾರಿ: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸಾಕಷ್ಟು ಅವಾಂತರ ಸೃಷ್ಟಿಸುತ್ತಿದೆ. ಒಂದೆಡೆ ಭೊರ್ಗರೆಯುತ್ತಿರುವ ವರುಣಾರ್ಭಟಕೆ ಮನೆಗಳೆಲ್ಲ ಕುಸಿದು ನಿವಾಸಿಗಳಗಳನ್ನು ಬೀದಿಗೆ ತಳ್ಳಿದರೆ, ಇನ್ನೊಂದೆಡೆ ವರ್ಷಧಾರೆಯ ಭೀಕರ ನೃತ್ಯ ಅನ್ನದಾತರ ಬಂಗಾರದ ಫಸಲಿಗೆ ಬೆಂಕಿ ಇಟ್ಟಿದೆ.
ಹೌದು, ಈ ಬಾರಿಯ ಮಳೆ ಬಹುಪಾಲು ರೈತರನ್ನು ಸಂಕಷ್ಟಕ್ಕೆ ತಳ್ಳಿದೆ. ವರ್ಷವೀಡಿ ಕಾದು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ನೀರು ಪಾಲಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಒಣಗಲು ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮೆಣಸಿನಕಾಯಿ ಮಳೆಗಾಹುತಿಯಾದ ಹೃದಯ ಹಿಂಡುವ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ನಡೆದಿದೆ.
ಗಣಿನಾಡಲ್ಲಿ ಇತ್ತೀಚಿಗೆ ಬಹುತೇಕ ರೈತರು ಮೆಣಸಿನಕಾಯಿ ಬೆಳೆಯನ್ನು ಬೆಳೆದಿದ್ದಾರೆ. ನೀರಿಕ್ಷೆಯಂತೆ ಉತ್ತಮ ಬೆಳೆ ಬಂದು ಇನ್ನೇನು ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಅನ್ನದಾತನ ಒಡಲಿಗೆ ವರುಣ ವಕ್ರದೃಷ್ಟಿ ನೆಟ್ಟಿದ್ದಾನೆ. ಸೀಜಂಟಾ ತಳಿಯ ಬೀಜಗಳನ್ನು ಬಿತ್ತಿ ಉತ್ತಮ ಇಳುವರಿ ಬೆಳೆದಿದ್ದ ರೈತರ ಸುಮಾರು 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಮೆಣಸಿನಕಾಯಿ ಹಾಳಾಗಿದೆ.
ಇದನ್ನೂ ಓದಿ:ಬರುವಾಗ ಬರಲಿಲ್ಲ ಮಳೆರಾಯ.. ಹೋಗುವಾಗ ಮುನಿದ ವರುಣದೇವ.. ಎಲ್ಲೆಲ್ಲಿ ಏನೆಲ್ಲಾ ಆಗ್ತಿದೆ..?
ಜಮೀನಿನಿಂದ ತಂದು ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಒಣಗಲು ಹಾಕಿದ್ದಾಗ ಅಬ್ಬರಿಸಿದ ವರುಣ ಬೆಳೆಯೆಲ್ಲವನ್ನು ಹಾಳು ಮಾಡಿದ್ದಾನೆ. ಎಕರೆ ಬೆಳೆಗೆ ತಲಾ 1.50 ಲಕ್ಷ ಕ್ಕೂ ಅಧಿಕ ಖರ್ಚು ಮಾಡಿದ್ದ ರೈತರು ಇದೀಗ ತಲೆ ಮೇಲೆ ಕೈ ಹೊತ್ತು ಕಣ್ಣೀರಿಡುತ್ತಿದ್ದಾರೆ. ಮೆಣಸಿನಕಾಯಿ ಬೀಜಕ್ಕಾಗಿ ಲಾಠಿಯೇಟು ತಿಂದಿದ್ದ ಅನ್ನದಾತರು ಬಂಗಾರದ ಬಳೆ ಬದುಕನ್ನ ಬದಲಾಯಿಸುತ್ತೆ ಅಂದುಕೊಂಡಿದ್ದರು ಆದರೆ ಸದ್ಯ ಬೆಳೆ ನೀರಲ್ಲಿ ನಿಂತು ಕೊಳೆತು ಹೋಗುವ ಪರಿಸ್ಥಿತಿ ಎದುರಾಗಿದೆ.
ಪ್ರತಿ ಕ್ವಿಂಟಾಲ್ಗೆ 18000 ರೂಪಾಯಿವರೆಗೆ ಮಾರಾಟವಾಗಬೇಕಿದ್ದ ಬೆಳೆ ಮಣ್ಣಾಗಿದೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ ತಾಲೂಕುಗಳ ರೈತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೆಣಸಿನಕಾಯಿಯನ್ನು ಬೆಳೆದು ಉತ್ತಮ ಆದಾಯ ನೀರಿಕ್ಷೆಯಲ್ಲಿದ್ದರು ಸದ್ಯ ವರುಣನ ಅವಾಂತರಕ್ಕೆ ಬೆಚ್ಚಿ ಕಣ್ಣೀರಿಡುತ್ತಿದ್ದಾರೆ.
ಇದನ್ನೂ ಓದಿ:ರೈತರ ಬೆನ್ನು ಮುರಿದ ಮಳೆರಾಯ; ಶಿವಮೊಗ್ಗ ಜಿಲ್ಲೆಯಲ್ಲಿ 100 ಹೆಕ್ಟೇರ್ ಭತ್ತ & ಮೆಕ್ಕೆಜೋಳ ನಾಶ