ಅನ್​ಲಾಕ್ ಅಗ್ನಿಪರೀಕ್ಷೆ ಎದುರಿಸಿ ಕೊರೊನಾ ಗೆಲ್ಲಬೇಕಿದೆ.. ಇಲ್ಲದಿದ್ರೆ ಮತ್ತೆ ಲಾಕ್..?

ಅನ್​ಲಾಕ್ ಅಗ್ನಿಪರೀಕ್ಷೆ ಎದುರಿಸಿ ಕೊರೊನಾ ಗೆಲ್ಲಬೇಕಿದೆ.. ಇಲ್ಲದಿದ್ರೆ ಮತ್ತೆ ಲಾಕ್..?

ಇಷ್ಟು ದಿನ ಒಂದು ರೀತಿಯ ಪರೀಕ್ಷೆ. ಮುಂದೆ ಇನ್ನೊಂದು ರೀತಿಯ ಪರೀಕ್ಷೆ. ಇಷ್ಟು ದಿನ ಇತ್ತು ಲಾಕ್ ಡೌನ್. ಇನ್ಮುಂದೆ ಅನ್ ಲಾಕ್. ಈ ಅನ್ ಲಾಕ್ ಪರೀಕ್ಷೆ ಪಾಸಾದರೆ ಮಾತ್ರವೇ ಮುಂದಿನ ದಿನಗಳಲ್ಲಿ ಮತ್ತೆ ಲಾಕ್ ಆಗೋದು ತಪ್ಪುತ್ತೆ. ಹಾಗಾದ್ರೆ ,ಅನ್ ಲಾಕ್ ಪರೀಕ್ಷೆ ಪಾಸಾಗೋದು ಹೇಗೆ?

ಇಷ್ಟು ದಿನ ಬೆಂಗಳೂರು ಮಹಾನಗರ ಸಂಪೂರ್ಣ ಲಾಕ್ ಡೌನ್ ಆಗಿತ್ತು. ಕಳೆದ ಹಲವು ದಿನಗಳಿಂದ ಎಲ್ಲಾ ಚಟುವಟಿಕೆಗಳು ಸ್ತಬ್ಧವಾಗಿದ್ದವು. ಅಂಗಡಿ-ಮುಂಗಟ್ಟುಗಳು ಕ್ಲೋಸ್ ಆಗಿದ್ದವು. ಅಗತ್ಯ ವಸ್ತುಗಳನ್ನು ಬಿಟ್ಟರೆ, ಮದ್ಯದಂಗಡಿ ಬಿಟ್ರೆ ಬೇರಾವುದು ತೆರೆದಿರಲಿಲ್ಲ. ಕೈಗಾರಿಕೆಗಳಿಗೆ ಸೀಮಿತ ಅವಕಾಶ ಕೊಟ್ಟಿದ್ದರೂ ಸಮೂಹ ಸಾರಿಗೆ ಸಂಚಾರ ಇಲ್ಲದ ಕಾರಣ ಅಲ್ಲಿಯೂ ಚಟುವಟಿಕೆ ಗರಿ ಗೆದರಿರಲಿಲ್ಲ. ಆದ್ರೆ ಸೋಮವಾರದಿಂದ ಎಲ್ಲವೂ ಓಪನ್ ಆಗಲಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಎಂದಿನಂತೆ ತನ್ನ ಸಂಚಾರ ಆರಂಭಿಸಲಿದೆ. ಮೆಟ್ರೋ ರೈಲು ಸಂಚಾರ ನಡೆಸಲಿದೆ. ಹೊಟೇಲ್, ಕ್ಲಬ್,ಜಿಮ್ ಗಳು ಓಪನ್ ಆಗ್ತಾ ಇವೆ. ಬಹುತೇಕ ಎಲ್ಲಾ ಚಟುವಟಿಕೆಗಳಿಗೂ ಶೇಕಡಾ 50ರಷ್ಟು ಜನ ಪಾಲ್ಗೊಳ್ಳುವಿಕೆಗೆ ಸೀಮಿತಗೊಳಿಸಿ ಅನುಮತಿ ಕೊಡಲಾಗಿದೆ. ಹೀಗಾಗಿ ಬಹುದಿನಗಳ ನಂತರ ಬೆಂಗಳೂರಿನ ರಸ್ತೆಗಳೆಲ್ಲ ಮತ್ತೆ ತುಂಬಿಕೊಳ್ಳಲಿವೆ.

ಲಾಕ್ ಡೌನ್ ಪರೀಕ್ಷೆ ಸದ್ಯಕ್ಕಂತೂ ಬಹುತೇಕ ಮುಕ್ತಾಯ
ಇನ್ಮುಂದೆ ಎಲ್ಲರು ಪಾಸಾಗಬೇಕಿದೆ ಅನ್ ಲಾಕ್ ಅಗ್ನಿ ಪರೀಕ್ಷೆ
ಅನ್ ಲಾಕ್ ಅಗ್ನಿ ಪರೀಕ್ಷೆ ಪಾಸಾಗದೇ ಇದ್ದರೆ ಮತ್ತೆ ಲಾಕ್!

ಕೊರೊನಾ ಬಂದಾಗಿನಿಂದ ಎದುರಾದ ಸವಾಲುಗಳನ್ನು ಒಂದೊಂದಾಗಿ ಎದುರಿಸ್ತಾ ಬಂದಿದ್ದಾರೆ ಜನತೆ. ಮೊದಲ ವರ್ಷದ ಲಾಕ್ ಡೌನ್ ಮುಗಿಸಿ ಅಂತು ಇಂತು ಕೊರೊನಾ ಹೋಯ್ತು ಅಂದುಕೊಂಡು ಜನ-ಜೀವನ ಸುಧಾರಿಸುವಷ್ಟರಲ್ಲಿ ಬಂದು ಅಪ್ಪಳಿಸಿತ್ತು ಕೊರೊನಾ ಎರಡನೇ ಅಲೆ. ನೋಡ ನೋಡ್ತಾ ಇದ್ದಂತೆಯೇ ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಬಂದಾಗಿ ಹೋಗಿತ್ತು. ಹೀಗಾಗಿ ಮತ್ತೆ ಈ ವರ್ಷವೂ ಕಂಪ್ಲೀಟ್ ಬಂದ್ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಇದು ಒಂದು ರೀತಿಯ ಜನ ಜೀವನದ ಪರೀಕ್ಷೆ. ನಿತ್ಯ ದುಡಿದು ತಿನ್ನಬೇಕಾದವರಿಗಂತೂ ಕಡು ಕಷ್ಟ ಕಾಲ. ಲಾಕ್ ಡೌನ್ ನಿಂದ ಲಕ್ಷಾಂತರ ಮಂದಿ ಬೆಂಗಳೂರಿನಿಂದ ಹೊರಟು ಊರು ಸೇರಿಕೊಂಡಿದ್ದರು. ಈಗ ಮತ್ತೆ ವಾಪಸ್ ಆಗ್ತಾ ಇದಾರೆ. ಬೆಂಗಳೂರಿನ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಆದ್ರೆ ಮತ್ತೆ ಚಿತ್ರಣ ಬದಲಾಗಲಿದೆ. ವಾಹನ ಸಂಚಾರ,ಜನಸಂದಣಿ ಸಹಜವಾಗಿ ಹೆಚ್ಚಾಗಲಿದೆ. ಆದ್ರೆ ಈಗ ಇರೋ ಚಾಲೆಂಜ್ ಅನ್ನು ಮರೆಯಲೇಬಾರದು. ಕೊರೊನಾ ಹೋಗಿಲ್ಲ. ಸದ್ಯಕ್ಕೆ ಕಡಿಮೆ ಆಗಿದೆ ಅಷ್ಟೇ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇಷ್ಟು ದಿನ ಬರೆದಿದ್ದು ಲಾಕ್ ಡೌನ್ ಪರೀಕ್ಷೆ. ಕಷ್ಟವೋ ,ನಷ್ಟವೋ ಹೇಗೋ ದಿನ ಕಳೆದು ಬಿಟ್ಟಾಗಿದೆ. ಈಗ ಮುಂದಿರೋದು ಅನ್ ಲಾಕ್ ಅಗ್ನಿ ಪರೀಕ್ಷೆ.  ಈ ಅಗ್ನಿ ಪರೀಕ್ಷೆಯಲ್ಲಿ ಪಾಸಾಗದೇ ಇದ್ದರೆ ಮತ್ತೆ ಲಾಕ್ ಡೌನ್ ಮಾಡುವ ಪರಿಸ್ಥಿತಿ ಎದುರಾಗಬಹುದು ಹುಷಾರು.

ಅನ್ ಲಾಕ್ ಮಾಡುತ್ತಿರುವ ಬಗ್ಗೆ ತಜ್ಞರು ಹೇಳ್ತಿರೋದೇನು?
ಮುಂದಿನ ಡಿಸೆಂಬರ್ ವರೆಗೂ ಏನೇಲ್ಲಾ ಪಾಲಿಸಬೇಕು ಜನ?

ಅನ್ ಲಾಕ್ ಆಗಿದೆ ಅಂತ ಜನ ಒಮ್ಮೆಲೆ ದಿಢೀರ್ ಅಂತ ಓಡಾಡಲು ಶುರು ಮಾಡಿದರೆ, ಎಲ್ಲಾ ಕಡೆ ಜನಸಂದಣಿ ಆರಂಭವಾದ್ರೆ ಮತ್ತೆ ಆಪತ್ತು ತಪ್ಪಿದ್ದಲ್ಲ. ಅದು ಬಸ್ ನಿಲ್ದಾಣ ಇರಬಹುದು. ರೈಲ್ವೇ ಸ್ಟೇಷನ್ ಇರಬಹುದು. ಕಚೇರಿ ಆವರಣ ಇರಬಹುದು. ಮಾರ್ಕೆಟ್ ಇರಬಹುದು. ಎಲ್ಲೇ ಹೋದರು ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲೇಬೇಕು. ಲಾಕ್ ಡೌನ್ ಮುಗಿದಿದೆ,ಇನ್ನೇನು ಅಂತ ನಿರ್ಲಕ್ಷ್ಯದಿಂದ ವರ್ತಿಸಿದರೆ ಹಾಗೆ ಮಾಡಿದವರಿಗೆ ಮಾತ್ರವಲ್ಲ, ಜನ ಸಮೂದಾಯಕ್ಕೆ ಮತ್ತೆ ಆತಂಕ ಎದುರಾಗುತ್ತೆ. ಹೀಗಾಗಿಯೇ ತಜ್ಞರು ಹೇಳ್ತಿರೋದು ಏನು ಅಂದ್ರೆ, ಅನ್ ಲಾಕ್ ಮಾಡಿದ್ದರೂ ಇದನ್ನು ಸೆಮಿ ಲಾಕ್ ಡೌನ್ ಅಂತಾನೇ ಅಂದುಕೊಳ್ಳಬೇಕು. ಜನರಿಗಾಗುತ್ತಿರುವ ತೊಂದರೆ,ಬದುಕಿನ ಪ್ರಶ್ನೆಯ ಹಿನ್ನೆಲೆಯಲ್ಲಿ ಸರ್ಕಾರ ಅನ್ ಲಾಕ್ ತೀರ್ಮಾನ ಮಾಡಿರಬಹುದು. ಆದ್ರೆ ಇದನ್ನು ಬದುಕಿಗೆ ಎಷ್ಟು ಅಗತ್ಯವೋ ಅಷ್ಟು ಮಾತ್ರ ಬಳಸಿಕೊಳ್ಳಬೇಕು. ಅನ್ ಲಾಕ್ ಆಗಿದೆ ಅಂತ ಅನಗತ್ಯವಾಗಿ ಯಾರೇ ಎಲ್ಲಿಗೇ ಹೋದರೂ ಅದು ತಪ್ಪು. ಮುಂದಿನ ಡಿಸೆಂಬರ್ ತಿಂಗಳಿನವರೆಗೂ ಜನ ಬಹಳ ಎಚ್ಚರಿಕೆಯಿಂದಲೇ ಇರಬೇಕು ಅಂತಿದಾರೆ ತಜ್ಞರು.

ಅನ್ ಲಾಕ್ ಆಗಿದ್ರೂ ಇದನ್ನು ಸೆಮಿ ಲಾಕ್ ಅಂತಾನೇ ಪರಿಗಣಿಸಿ ಜನ-ಜೀವನ ಸಾಗಬೇಕು. ಇಲ್ಲವಾದರೆ ಮತ್ತೆ ಸಮಸ್ಯೆ ಸೃಷ್ಟಿಯಾಗುತ್ತದೆ. ಈಗ ಬಹುತೇಕ ಕಡೆ ಕೊರೊನಾ ಇಳಿಮುಖವಾಗಿರಬಹುದು. ಆದ್ರೆ ಯಾವಾಗ ಎಲ್ಲಿ ಕೊರೊನಾ ಹೆಚ್ಚಾಗುತ್ತದೆ ಅಂತ ಹೇಳಲು ಆಗೋದಿಲ್ಲ. ಅನ್ ಲಾಕ್ ಆಗಿರೋದ್ರಿಂದ ಒಂದು ಊರಿನಿಂದ ಇನ್ನೊಂದು ಊರಿಗೆ ಓಡಾಟ ಸಹಜವಾಗಿ ಹೆಚ್ಚಾಗುತ್ತೆ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಕಡ್ಡಾಯವಾಗಿ ಎಲ್ಲಾ ಕಡೆ ಟೆಸ್ಟ ಮಾಡಿಯೇ ಮುಂದಕ್ಕೆ ಬಿಡೋದು ಕಷ್ಟವಾಗುತ್ತೆ. ಹೀಗಾಗಿ ವೈಯಕ್ತಿಕವಾಗಿ ಅವರವರೇ ಮುನ್ನೆಚ್ಚರಿಕೆ ವಹಿಸಬೇಕು ಅನ್ನೋದು ತಜ್ಞರ ಅಭಿಪ್ರಾಯ. ಇಲ್ಲವಾದರೆ ಒಬ್ಬರು ಮಾಡುವ ತಪ್ಪಿಗೆ ಇಡೀ ಜನ ಸಮೂದಾಯವೇ ಸಂಕಷ್ಟ ಎದುರಿಸಬೇಕಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡದೇ ಇದ್ರೆ ಮುಂದೆ ಮತ್ತೆ ಅಪಾಯ ತಪ್ಪಿದ್ದಲ್ಲವೇ ಅಲ್ಲ.

ಬ್ರಿಟನ್ ನಲ್ಲಿ ಆದ ಪರಿಸ್ಥಿತಿಯೇ ಇಲ್ಲಿಯೂ ಆಗೋದು ಬೇಡ?
ಬ್ರಿಟನ್ ನಲ್ಲಿ ಕಳೆದ ಆರು ತಿಂಗಳಿನಿಂದ ಏನಾಗ್ತಾ ಇದೆ ಗೊತ್ತಾ?
ಕರ್ನಾಟಕದಷ್ಟಿರುವ ಜನಸಂಖ್ಯೆ ಇರುವಲ್ಲೇ ಆತಂಕ ಹೆಚ್ಚಿದ್ದೇಕೆ?

ಗ್ರೇಟ್ ಬ್ರಿಟನ್. ಆರುವರೆ ಕೋಟಿ ಜನ ಇರುವ ರಾಷ್ಟ್ರ. ಅತ್ಯಂತ ಮುಂದುವರೆದಿರುವ ರಾಷ್ಟ್ರ. ಇಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಕೂಡ ಹೆಚ್ಚು ಕಡಿಮೆ ಕಂಪ್ಲೀಟ್ ಆಗಿದೆ. ಆದರೆ,ಕೊರೊನಾ ಮಾತ್ರ ಅಂದುಕೊಂಡಷ್ಟು ನಿಯಂತ್ರಣಕ್ಕೆ ಸಿಗ್ತಾನೇ ಇಲ್ಲ. ಕಾರಣ ಇಲ್ಲಿ ಪದೇ ಪದೇ ಅಲ್ಲಲ್ಲಿ ಆಗಾಗ ಲಾಕ್ ಡೌನ್ ಸಡಿಲಿಕೆ ಮಾಡಲಾಗ್ತಾ ಇತ್ತು. ಜನ ಮತ್ತೆ ಹೆಚ್ಚಾಗಿಯೇ ಹೊರಗೆ ಬರತೊಡಗಿದ್ರು. ಕೊರೊನಾ ಹೋಗೇ ಬಿಡ್ತು ಅಂತ ಬೀಚ್ ನಲ್ಲಿ ,ಸಾರ್ವಜನಿಕ ಉದ್ಯಾನವನದಲ್ಲಿ ವಿಹರಿಸಲು ಆರಂಭಿಸಿದ್ರು. ಆದರೆ, ಕೊರೊನಾ ಮತ್ತೆ ಬ್ರಿಟನ್ ನಲ್ಲಿ ಹೆಚ್ಚಾಗ್ತಾ ಇದೆ. ಕಳೆದ ಆರು ತಿಂಗಳಲ್ಲಿ ಪದೇ ಪದೇ ಇಲ್ಲಿ ಹೀಗಾಗ್ತಾನೇ ಇದೆ. ಹೀಗಾಗಿ ಮತ್ತೆ ಮತ್ತೆ ಲಾಕ್ ಡೌನ್ ವಿಸ್ತರಿಸಲಾಗ್ತಿದೆ ಬ್ರಿಟನ್ ನಲ್ಲಿ. ಕರ್ನಾಟಕದಲ್ಲೂ 6 ಕೋಟಿ ಜನ ಇದ್ದಾರೆ. ಬ್ರಿಟನ್ ಗಿಂತ ಜನದಟ್ಟಣೆ ಇಲ್ಲಿ ಜಾಸ್ತಿ ಇದೆ. ಹೀಗಿದ್ದಾಗ ಮುನ್ನೆಚ್ಚರಿಕೆ ವಹಿಸದೇ ಇದ್ರೆ ಏನಾಗಬಹುದು ಊಹಿಸಿಕೊಳ್ಳಿ. ತಜ್ಞರು ಹೇಳ್ತಾ ಇರೋದು ಇದನ್ನೇ. ಮೂರನೇ ಅಲೆ ಬಂದರೂ ಅದು ನವೆಂಬರ್-ಡಿಸೆಂಬರ್ ನಲ್ಲಿ ಬರಬಹುದು ಅಂತ ಅಂದಾಜು ಮಾಡಲಾಗ್ತಾ ಇತ್ತು. ಆದ್ರೆ ಈಗ ಎಲ್ಲರೂ ಹೇಳ್ತಾ ಇರೋ ಪ್ರಕಾರ ಆಗಸ್ಟ್ ನಲ್ಲಿಯೇ ಬಂದು ಬಿಡಬಹುದು. ಬಂದರೆ ಕೊರೊನಾ ಕಂಟ್ರೋಲ್ ಮಾಡೋದಕ್ಕೆ ಬೇರೆ ದಾರಿ ಇದ್ಯಾ.ಸದ್ಯಕ್ಕಂತೂ ಖಂಡಿತ ಇಲ್ಲ. ಮತ್ತೆ ಲಾಕ್ ಡೌನ್ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು.ಲಾಕ್ ಡೌನ್ ಆದ್ರೆ ಮತ್ತೆ ಜನ ಸಾಮಾನ್ಯರಿಗೆ ಕಷ್ಟ. ಹೀಗಾಗಿ ಅನ್ ಲಾಕ್ ಅಂತ ಎಚ್ಚರ ತಪ್ಪೋದೇ ಬೇಡ.

ಅನ್ ಲಾಕ್ ಮಾರ್ಗಸೂಚಿ ನವೀಕರಿಸುವ ಅಗತ್ಯ ಇದೆಯಾ?
ಮುಂದಿನ ದಿನಗಳಲ್ಲಿ ಗೈಡ್ ಲೈನ್ಸ್ ಪರಿಷ್ಕರಣೆ ಮಾಡಬೇಕಾ?

ಅನ್ ಲಾಕ್ ಮಾರ್ಗಸೂಚಿಯನ್ನೇ ಪರಿಷ್ಕರಿಸುವ ಅಗತ್ಯ ಇದೆ ಅಂತ ತಜ್ಞರು ಹೇಳ್ತಾ ಇದ್ದಾರೆ. ಕಾರಣ ಲಾಕ್ ಡೌನ್ ಮುಕ್ತಾಯವಾದ ಬಳಿಕ ಎಲ್ಲಾ ಕಡೆ ಜನ ಒಮ್ಮೆಲೆ ಸೇರೋದು ಸಹಜ. ಹೀಗಾಗಿ ಬೇರೆ ಬೇರೆ ಸೆಕ್ಟರ್ ಗಳಿಗೆ ಬೇರೆ ಬೇರೆ ರೀತಿಯಾದ ಮಾರ್ಗಸೂಚಿಯೇ ಇರಬೇಕು ಅನ್ನೋದು ಅಭಿಪ್ರಾಯ. ಹೆಚ್ಚು ಜನ ಕೆಲಸ ಮಾಡುವ ಕಾರ್ಖಾನೆಗಳಿಗೆ, ಹೆಚ್ಚು ಜನ ಕೆಲಸ ಮಾಡುವ ಕಚೇರಿಗಳಿಗೆ, ಅಂಗಡಿ-ಮುಂಗಟ್ಟುಗಳಿಗೆ, ಮಾರುಕಟ್ಟೆಗಳಿಗೆ ,ಸಿನಿಮಾ ಥಿಯೇಟರ್ ಗಳಿಗೆ, ಮಾಲ್ ಗಳಿಗೆ, ಹೀಗೆ ಬೇರೆ ಬೇರೆ ರೀತಿಯಲ್ಲೇ ವರ್ಗಿಕರಿಸಿ ಅನ್ ಲಾಕ್ ಮಾರ್ಗಸೂಚಿ ಹೊರಡಿಸಬೇಕು ಅನ್ನೋದು ಹಲವರ ಒತ್ತಾಯ. ಇಲ್ಲವಾದರೆ ಸಾಮಾನ್ಯ ನಿಯಮಗಳೇ ಎಲ್ಲಾ ಕಡೆ ಅನ್ವಯವಾದರೆ ಕಂಟ್ರೋಲ್ ಮಾಡೋದು ಕಷ್ಟ.

ಏನೇ ಮಾಡಿದರೂ ಜನರ ಓಡಾಟ ಹೆಚ್ಚಾಗಿಯೇ ಆಗುತ್ತೆ. ಹೀಗಾಗಿ ಸರ್ಕಾರ ಒಂದು ಕಡೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕಾದ ಅನಿವಾರ್ಯತೆ ಇದ್ರೆ ಇನ್ನೊಂದು ಕಡೆ ಜನರ ಸಹಕಾರ ಬೇಕೇ ಬೇಕು. ಇಲ್ಲವಾದರೆ ಯಾವುದೇ ಮಾರ್ಗಸೂಚಿಯೂ ಪ್ರಯೋಜನಕ್ಕೆ ಬರಲ್ಲ. ತಮಗೆ ತಾವೇ ನಿಯಂತ್ರಣ ಹಾಕಿಕೊಳ್ಳಬೇಕು. ಅದರಲ್ಲೂ ಸಾರ್ವಜನಿಕ ಸಾರಿಗೆ ಬಳಕೆ ಮಾಡುವವರು ಇನ್ನೊಂದಿಷ್ಟು ಎಚ್ಚರಿಕೆಯಿಂದ ಇರಲೇಬೇಕು. ತಮ್ಮ ಪಾಡಿಗೆ ತಮ್ಮ ವೆಹಿಕಲ್ ಗಳನ್ನು ಬಳಸಿದರೆ ಹೆಚ್ಚು ತೊಂದರೆ ಆಗಲ್ಲ. ಆದ್ರೆ ಬಸ್ ಗಳಲ್ಲಿ ,ರೈಲುಗಳಲ್ಲಿ ಓಡಾಡೋರು ಬಹಳ ಎಚ್ಚರಿಕೆಯಿಂದಲೇ ಇರಬೇಕು.

ಕೇಂದ್ರ ಗೃಹ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲೇನಿದೆ?
ಸರ್ಕಾರ ಪಾಲಿಸಬೇಕಾದ ಐದಂಶದ ಸೂತ್ರಗಳು ಯಾವುವು?

ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ತೆರವು ಮಾಡಲಾಗ್ತಾ ಇದೆ. ಹೀಗಾಗಿ ಅನ್ ಲಾಕ್ ಪ್ರಕ್ರಿಯೆಯ ಬಗ್ಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್ ಭಲ್ಲಾ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಬಹಳಷ್ಟು ಎಚ್ಚರಿಕೆಯಿಂದಲೇ ಅನ್ ಲಾಕ್ ಪ್ರಕ್ರಿಯೆಯನ್ನು ಶುರು ಮಾಡಬೇಕು ಅಂತ ಈ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹಾಗಾದ್ರೆ ಏನೇನಿದೆ ಈ ಸುತ್ತೋಲೆಯಲ್ಲಿ ಅಂತ ನೋಡೋದಾದ್ರೆ…

ಕೇಂದ್ರದ ಸುತ್ತೋಲೆಯಲ್ಲೇನಿದೆ?

  • -ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು
  • -ಟೆಸ್ಟ್ ಮಾಡೋದನ್ನು ಸ್ಟಾಪ್ ಮಾಡದೇ ಎಲ್ಲಾ ಕಡೆ ಮುಂದುವರೆಸಬೇಕು
  • -ಮುಂದೆ ಕೇಸ್ ಎಲ್ಲಿಯೇ ಹೆಚ್ಚಾದರೂ ಚಿಕಿತ್ಸೆಗೆ ಸೌಲಭ್ಯ ಲಭ್ಯವಿರಬೇಕು
  • -ಕೊರೊನಾ ಲಸಿಕೆ ಅಭಿಯಾನ ಎಷ್ಟು ಸಾಧ್ಯವೊ ಅಷ್ಟು ಚುರುಕುಗೊಳಿಸಿ
  • -ಎಲ್ಲಿಯೂ ಜನದಟ್ಟಣೆ ಆಗದಂತೆ,ಗುಂಪು ಸೇರದಂತೆ ನೋಡಿಕೊಳ್ಳಬೇಕು
  • -ಕೊರೊನಾ ಜಾಸ್ತಿಯಾದೆಡೆ ಮೈಕ್ರೋ ಕಂಟೈನ್ಮೆಂಟ್ ಝೋನ್ ರಚಿಸಬೇಕು

ಹೀಗೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಎಲ್ಲಾ ರಾಜ್ಯಗಳಿಗೂ ಸುತ್ತೋಲೆಯನ್ನು ರವಾನೆ ಮಾಡಿದ್ದಾರೆ. ಈ ಸುತ್ತೋಲೆಯ ಪ್ರಕಾರವೇ ಕರ್ನಾಟಕದಲ್ಲೂ ಅನ್ ಲಾಕ್ ಪ್ರಕ್ರಿಯೆ ಶುರು ಮಾಡಲಾಗ್ತಾ ಇದೆ. ಹೀಗಾಗಿ ಹೆಚ್ಚು ಕೇಸ್ ಗಳಿರುವ, ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಇನ್ನು ಲಾಕ್ ಡೌನ್ ಕಂಟಿನ್ಯೂ ಮಾಡಲಾಗ್ತಾ ಇದೆ. ಹೀಗಾಗಿಯೇ 16 ಜಿಲ್ಲೆಗಳಲ್ಲಿ ಮಾತ್ರವೇ ಅನ್ ಲಾಕ್ ಘೋಷಣೆ ಮಾಡಲಾಗಿದೆ.

ಅನ್ ಲಾಕ್ ಘೋಷಣೆ ಮಾಡುವಾಗ ಮುಖ್ಯಮಂತ್ರಿ ಯಡಿಯೂರಪ್ಪನವನರೇ ಸ್ಪಷ್ಟವಾಗಿ ಹೇಳಿದ್ದಾರೆ. ಜನ ಸಾಮಾನ್ಯರಿಗೆ ತೊಂದರೆ ಆಗ್ತಾ ಇದೆ. ಹೀಗಾಗಿ ಕೇಸ್ ಕಡಿಮೆ ಇದ್ದಲ್ಲಿ ಅನ್ ಲಾಕ್ ಮಾಡ್ತಾ ಇದ್ದೇವೆ ಅಂತ. ಅಂದ್ರೆ ಅನ್ ಲಾಕ್ ಮಾಡ್ತಾ ಇರೋದು ನಿತ್ಯ ದುಡಿದು ಊಟ ಮಾಡುವ ಬಡವರು, ಜನ ಸಾಮಾನ್ಯರಿಗೆ ಕಷ್ಟವಾಗಬಹುದು ಅಂತಾ. ಆದ್ರೆ ಇದನ್ನು ಮರೆತು ಅಗತ್ಯ ಇದ್ಯೋ ಇಲ್ವೋ ಎಲ್ಲಾ ಕಡೆ ಜನ ಓಡಾಡೋಕೆ ಶುರು ಮಾಡಿದ್ರೆ ಮತ್ತೆ ಸಂಕಷ್ಟ ತಪ್ಪಿದ್ದಲ್ಲ. ಕೊರೊನಾ ಮೊದಲ ಅಲೆ ಬಂದಾಗಲೂ ಕೂಡ ಇದೇ ರೀತಿ ಅನ್ ಲಾಕ್ ಮಾಡಿ ಮತ್ತೆ ಒಂದು ವಾರ ಲಾಕ್ ಡೌನ್ ಮಾಡಲಾಗಿತ್ತು. ಹೀಗಾಗಿ ಪದೇ ಪದೇ ಲಾಕ್ ಡೌನ್ ಮಾಡುವ ಪರಿಸ್ಥಿತಿಯನ್ನು ತಂದುಕೊಳ್ಳುವುದು ಬೇಡ. ಇದರಿಂದ ಮತ್ತೆ ಲಕ್ಷಾಂತರ ಜನರಿಗೆ ತೊಂದರೆ ಆಗಲಿದೆ. ಈಗಾಗಲೇ ಕಳೆದ ಒಂದು ವರ್ಷದಿಂದ ಕೊರೊನಾ ತಂದೊಡ್ಡಿರುವ ಸಂಕಷ್ಟದಿಂದ ಎಲ್ಲಾ ಕಡೆ ನಷ್ಟದ ಮಾತೇ ಕೇಳಿ ಬರ್ತಿದೆ. ಕೈಗಾರಿಕೆಗಳು ಚೇತರಿಸಿಕೊಳ್ಳುವಷ್ಟರಲ್ಲಿ ಮತ್ತೆ ಮತ್ತೆ ಲಾಕ್ ಮಾಡುವಂತೆ ಆಗಿದೆ. ಹೊಟೇಲ್, ಬಾರ್,ಕ್ಲಬ್,ಪಬ್,ಸಿನಿಮಾ ಥಿಯೇಟರ್,ಮಾಲ್, ಎಲ್ಲಾ ಕ್ಲೋಸ್ ಆಗಿ ಲಕ್ಷಾಂತರ ಜನರ ಉದ್ಯೋಗಕ್ಕೆ ಕುತ್ತು ಬಂದಿದೆ. ಹೀಗಿರುವಾಗ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ತಿಂಗಳುಗಟ್ಟಲೇ ಲಾಕ್ ಡೌನ್ ಆಗಿ ಬಿಟ್ಟರೆ ಜನರ ಸಂಕಷ್ಟ ಇನ್ನಷ್ಟು ಹೆಚ್ಚಾಗಲಿದೆ. ಹೀಗಾಗಿ ಅನ್ ಲಾಕ್ ಆಗಿದ್ದರೂ ಜನ ಯಾವುದೇ ಕಾರಣಕ್ಕೂ ಮುನ್ನೆಚ್ಚರಿಕೆಯನ್ನ ಮರೆಯಲೇಬಾರದು.

ಅಗತ್ಯ ಇದ್ದವರು ಮಾತ್ರವೇ ಮನೆಯಿಂದ ಹೊರಗೆ ಬನ್ನಿ
ಒಂದೊಂದು ಕಾರಣ ಹೇಳಿಕೊಂಡು ನಿತ್ಯ ಹೊರಗೆ ಬರಬೇಡಿ
ನಿತ್ಯ ಮಾರ್ಕೆಟ್, ನಿತ್ಯ ಅಂಗಡಿಗೆ ಹೋಗುವ ಅಭ್ಯಾಸ ಬಿಡಿ
ಮದುವೆ-ಸಮಾರಂಭಗಳಿಗಂತೂ ಸದ್ಯಕ್ಕೆ ಹೋಗಲೇಬೇಡಿ

ಇದು ತಜ್ಞರು ಕೊಡ್ತಾ ಇರುವ ಸಲಹೆ. ಜನ ಸಾಮಾನ್ಯರು ಇದನ್ನು ಪಾಲಿಸಿದರೆ ಎಲ್ಲರಿಗೂ ಅನುಕೂಲ. ಈಗ ಅನ್ ಲಾಕ್ ಘೋಷಣೆ ಆಗಿದೆ ಅಂತ ಎಲ್ಲರೂ ಅನಗತ್ಯವಾಗಿ ಮನೆಯಿಂದ ಹೊರಗಡೆ ಬರಬೇಕಾಗಿಲ್ಲ. ಕೆಲಸಕ್ಕೆ ಹೋಗಬೇಕಾದವರು, ಕಚೇರಿಗೆ ತೆರಳಬೇಕಾದವರು ,ತಮ್ಮದೇ ಆದ ಬ್ಯುಸಿನೆಸ್ ಮಾಡ್ತಾ ಇರೋರು ಮಾತ್ರ ಹೊರಗಡೆ ಓಡಾಡಿ. ಅದು ಬಿಟ್ಟು ದಿನವೂ ಒಂದೊಂದು ಕಾರಣ ಹೇಳಿಕೊಂಡು ಹೊರಗೆ ಹೆಚ್ಚು ಓಡಾಡ್ತಾ ಇದ್ರೆ ಅದು ಬೇರೆಯವರಿಗೆ ಮಾಡಿದ ತೊಂದರೆ ಆಗುತ್ತದೆ. ಇದರಿಂದ ನಿಜವಾಗಿಯೂ ದುಡಿಮೆ ಮಾಡಿಕೊಂಡೇ ಹೊಟ್ಟೆ ತುಂಬಿಸಿಕೊಳ್ಳಬೇಕಾದವರಿಗೆ ಸಂಕಷ್ಟ ತಂದೊಡ್ಡುತ್ತದೆ. ಯಾವಾಗ ಲಾಕ್ ಡೌನ್ ಆದರೂ ಮೊದಲು ಹೊಡೆತ ಬೀಳೋದೇ ದಿನಗೂಲಿ ಕಾರ್ಮಿಕರಿಗೆ. ಬೆಂಗಳೂರಿನಂತಹ ಮಹಾನಗರದಲ್ಲಿ ಲಕ್ಷ ಲಕ್ಷ ಜನ ಕಾರ್ಮಿಕರಿದ್ದಾರೆ. ಮತ್ತೆ ಲಾಕ್ ಡೌನ್ ಮಾಡುವಂತಹ ಪರಿಸ್ಥಿತಿ ಬಂದರೆ ಮತ್ತೆ ಈ ಲಕ್ಷ ಲಕ್ಷ ಜನ ಸಂಕಷ್ಟಕ್ಕೆ ಸಿಲುಕುತ್ತಾರೆ. ನಿತ್ಯವೂ ಮಾರ್ಕೆಟ್ ಗೆ ಹೋಗಿ ತರಕಾರಿ ತರುವ,ಅಂಗಡಿಗೆ ಹೋಗುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ, ವಾರಕ್ಕೊಮ್ಮೆ ಎರಡು ಬಾರಿ ಹೋದ್ರೆ ಸಾಕಲ್ಲ ಅಂತ ಸಲಹೆ ಕೊಡಲಾಗ್ತಿದೆ. ಇನ್ನು ಮದುವೆ ಮತ್ತಿತರೇ ಸಮಾರಂಭಗಳಿಗಂತೂ ಹೋಗಲೇಬೇಡಿ, ಇದ್ದಲ್ಲಿಂದಲೇ ಶುಭಾಶಯ ತಿಳಿಸಿ ಅಂತಿದಾರೆ ತಜ್ಞರು. ಹೆಚ್ಚು ಜನ ಸೇರೋದ್ರಿಂದ ಈ ಕೊರೊನಾ ಕಾಲದಲ್ಲಿ ಸಂತೋಷಕ್ಕಿಂತ ಮುಂದೆ ದುಃಖ ಎದುರಾಗೋದೇ ಹೆಚ್ಚು. ಜನ ಸಂಪರ್ಕದಿಂದ ಆದಷ್ಟು ದೂರ ಇರೋದೇ ಒಳಿತು.

ಮೊದಲು ಜೀವ-ಆಮೇಲೆ ಜೀವನ-ಇದನ್ನು ನೆನಪಿಟ್ಟುಕೊಳ್ಳಿ
ನಮ್ಮನ್ನು ನಾವು ನಿಯಂತ್ರಿಸಿಕೊಳ್ಳದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಕೊರೊನಾ ಎರಡನೇ ಅಲೆ ಗರಿಷ್ಟ ಮಟ್ಟ ತಲುಪಿದಾಗ ಏನಾಯ್ತು ಅನ್ನೋದನ್ನು ನೋಡಿದ್ದೀರಿ. ಬೆಡ್ ಸಿಗದೇ,ಆಕ್ಸಿಜನ್ ಸಿಗದೇ ಪರದಾಡಿದ್ದನ್ನು ಇನ್ನೂ ಮರೆತಿಲ್ಲ. ಆಕ್ಸಿಜನ್ ಸಿಗದೇ ದುರಂತವೇ ನಡೆದು ಹೋಗಿತ್ತು. ಇನ್ನು ಚಿತಾಗಾರದಲ್ಲೂ ಶವ ಹೊತ್ತ ಆಂಬ್ಯುಲೆನ್ಸ್ ಗಳು ಕ್ಯೂ ನಿಂತಿದ್ದ ದೃಶ್ಯಗಳು ಇನ್ನು ಮರೆಯಲು ಆಗ್ತಾ ಇಲ್ಲ. ಹೀಗಿರುವಾಗ ಈಗ ಎರಡನೇ ಅಲೆ ತಗ್ಗಿದೆ ಅಂದ ತಕ್ಷಣ , ಅನ್ ಲಾಕ್ ಮಾಡಿದ್ದಾರೆ ಅಂದ ತಕ್ಷಣ ಮೊದಲಿನಂತೆಯೇ ಇರೋದು ಅಷ್ಟು ಸೂಕ್ತವಲ್ಲ. ಈ ಹಿಂದೆ ತಜ್ಞರು ಪದೇ ಪದೇ ಎಚ್ಚರಿಕೆ ಕೊಟ್ಟಿದ್ದರೂ ಎಚ್ಚರ ತಪ್ಪಿದ್ದೇ, ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇದ್ದಿದ್ದೇ ಎಷ್ಟೊಂದು ಆಘಾತ ತಂದು ಬಿಡ್ತು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಿರುವಾಗ ಮತ್ತೆ ಮತ್ತೆ ಅದೇ ಪರಿಸ್ಥಿತಿಯನ್ನು ತಂದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ. ಜೀವ ಮೊದಲು ಜೀವನ ಆಮೇಲೆ ಅನ್ನೋದನ್ನು ಯಾವತ್ತು ನೆನಪಿಟ್ಟುಕೊಳ್ಳಲೇಬೇಕು.

3ನೇ ಅಲೆಗೆ ಅನ್ ಲಾಕ್ ಮಾಡಿದ್ದೇ ನಾಂದಿಯಾಗಬಾರದು
ಮೂರನೇ ಅಲೆಗೇ ಆಹ್ವಾನ ಕೊಡುವಂತೆ ಮಾಡಬಾರದು

ಕೊರೊನಾ ಮೊದಲ ಅಲೆ ತಗ್ಗಿದ ಮೇಲೆ ಸದ್ದಿಲ್ಲದೇ ಎರಡನೇ ಅಲೆ ಬಂದು ಬಿಟ್ಟಿತ್ತು. ಎರಡೇ ತಿಂಗಳಿನಲ್ಲಿ ಕೊರೊನಾ ಗ್ರಾಫ್ ಏರಿಕೆಯಾಗಿ ಬಿಟ್ಟಿತ್ತು. ತಿಂಗಳು ಕಳೆಯೋದ್ರೊಳಗೆ ನಿತ್ಯ ಸಾವಿರ ಸಾವಿರ ಕೇಸ್ ಗಳು ಬರತೊಡಗಿದ್ದವು. ದೇಶದಲ್ಲಂತೂ ನಿತ್ಯದ ಕೇಸ್ ಗಳ ಸಂಖ್ಯೆಯೇ 4 ಲಕ್ಷದ ಗಡಿ ದಾಟಿ ಬಿಟ್ಟಿತ್ತು. ಇನ್ನು ಕರ್ನಾಟಕದಲ್ಲಿ 50 ಸಾವಿರದ ಆಸು ಪಾಸಿಗೆ ಹೋಗಿ ತಲುಪಿ ಬಿಟ್ಟಿತ್ತು. ಆಗ ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ. ಇದನ್ನೆಲ್ಲ ಮರೆತು ಮತ್ತೆ ಮುನ್ನೆಚ್ಚರಿಕೆ ತೆಗೆದುಕೊಳ್ಳೋದನ್ನು ಬಿಟ್ಟು ಬಿಟ್ರೆ ಅದೇ ಮೂರನೇ ಅಲೆಗೆ ನಾಂದಿಯಾಗಿ ಬಿಡಬಹುದು. ಅನ್ ಲಾಕ್ ಮಾಡಿದ್ದೇ ಮೂರನೇ ಅಲೆಗೆ ನಾಂದಿಯಾಗಿ ಬಿಡಬಾರದು. ಮೂರನೇ ಅಲೆಗೆ ಅಹ್ವಾನ ಕೊಡುವಂತೆ ಮಾಡಬಾರದು. ಅದರಲ್ಲೂ ಈಗ ಕೊರೊನಾ ರೂಪಾಂತರಿ ತಳಿಗಳು ಹೆಚ್ಚಾಗ್ತಾ ಇದ್ದು ಅದೆಷ್ಟು ಅಪಾಯ ತರುತ್ತೆ ಅನ್ನೋದನ್ನು ಈಗಲೇ ಹೇಳಲು ಸಾಧ್ಯವಾಗ್ತಾ ಇಲ್ಲ. ಮೂರನೇ ಅಲೆಗೆ ಇದೇ ರೂಪಾಂತರಿ ತಳಿಯ ವೈರಸ್ಸೇ ಕಾರಣವಾಗಬಹುದು ಅಂತಿದಾರೆ ತಜ್ಞರು. ಹೀಗಾಗಿ ಇದನ್ನೆಲ್ಲ ಗಮನಿಸಿಯೇ ಬದುಕು ಕಟ್ಟಿಕೊಳ್ಳಬೇಕಾಗಿದೆ.

ಕೊರೊನಾ ಜಗತ್ತಿನ ಯಾವ ಮೂಲೆಯನ್ನೂ ಬಿಟ್ಟಿಲ್ಲ. ಮೌಂಟ್ ಎವರೆಸ್ಟ್ ಗೂ ಕೂಡ ತಲುಪಿ ಬಿಟ್ಟದೆ. ಈಗಂತೂ ಮೃಗಾಲಯದಲ್ಲಿರುವ ಸಿಂಹ-ಆನೆಗಳಿಗೂ ಕೊರೊನಾ ಬರ್ತಾ ಇದೆ. ಹೀಗಿದ್ದಾಗ ಲಸಿಕೆಯ ಎರಡನೇ ಡೋಸ್ ಕಂಪ್ಲೀಟ್ ಆಗೋವರೆಗಂತೂ ಹೆಚ್ಚು ಮುುನ್ನೆಚ್ಚೆರಿಕೆಯನ್ನು ತೆಗೆದುಕೊಳ್ಳಲೇಬೇಕು. ಕೊರೊನಾ ಗರಿಷ್ಟ ಮಟ್ಟ ತಲುಪಿದ್ದಾಗ ಯಾವ ರೀತಿ ಮುಂಜಾಗ್ರತೆಯನ್ನು ಕೈಗೊಳ್ತಾ ಇದ್ರೋ ಅದೇ ರೀತಿ ಮುಂಜಾಗ್ರತೆಯನ್ನೂ ಈಗಲೂ ವಹಿಸಬೇಕಾಗಿದೆ.

ಅನ್ ಲಾಕ್ ಅಂತ ಎಲ್ಲೂ ಎಚ್ಚರ ತಪ್ಪದಿರಿ. ಇದೊಂದು ಅಗ್ನಿ ಪರೀಕ್ಷೆ ಅಂತಾನೇ ಭಾವಿಸಿಕೊಂಡು ಪಾಸಾಗಿ. ಇಲ್ಲವಾದರೆ ಮುಂದೆ ಮತ್ತೆ ಸಂಕಷ್ಟದ ದಿನಗಳನ್ನು ನೋಡಲೇಬೇಕಾಗುತ್ತೆ.

The post ಅನ್​ಲಾಕ್ ಅಗ್ನಿಪರೀಕ್ಷೆ ಎದುರಿಸಿ ಕೊರೊನಾ ಗೆಲ್ಲಬೇಕಿದೆ.. ಇಲ್ಲದಿದ್ರೆ ಮತ್ತೆ ಲಾಕ್..? appeared first on News First Kannada.

Source: newsfirstlive.com

Source link