ಲಖನೌ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆ ನಡೆಯುತ್ತಿರೋ ಹೊತ್ತಲ್ಲೇ ಸುಮಾರು 14 ವರ್ಷಗಳ ಹಿಂದೆ 2008 ಜುಲೈ ತಿಂಗಳಿನಲ್ಲಿ ಅಹಮದಾಬಾದ್ನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಕೇಸ್ ಸಂಬಂಧ ಸ್ಪೆಷಲ್ ಕೋರ್ಟ್ ತೀರ್ಪು ನೀಡಿದೆ. 49 ಅಪರಾಧಿಗಳ ಪೈಕಿ 38 ಮಂದಿಗೆ ಮರಣದಂಡನೆ ವಿಧಿಸಿ ಆದೇಸಿದೆ. ಈಗ ಬಾಂಬ್ ಬ್ಲಾಸ್ಟ್ ಮಾಡಿ 56 ಮಂದಿಗೆ ಸಾವಿಗೆ ಕಾರಣರಾದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ 38 ಮಂದಿ ಪೈಕಿ ಒಬ್ಬ ಅಪರಾಧಿಗೂ ಮತ್ತು ಸಮಾಜವಾದಿ ಪಾರ್ಟಿಗೂ ನಂಟಿದೆ ಎಂಬ ಆರೋಪ ಕೇಳಿ ಬಂದಿದೆ.
ಹೌದು, ಇದೇ ಕೇಸ್ನಲ್ಲಿ ಉತ್ತರ ಪ್ರದೇಶದ ಮೊಹಮ್ಮದ್ ಸೈಫ್ ಎಂಬಾತನಿಗೆ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಈಗಾಗಲೇ ಇದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸೈಫ್ ಕುಟುಂಬಸ್ಥರು ತೀರ್ಮಾನಿಸಿದ್ದಾರೆ. ಹೀಗಿರುವಾಗಲೇ ಅಪರಾಧಿ ಸೈಫ್ ತಂದೆ ಶಾದಾಬ್ ಅಹ್ಮದ್ ಸಮಾಜವಾದಿ ಪಕ್ಷದ ಮುಖಂಡರು ಎಂದು ತಿಳಿದು ಬಂದಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜತೆಗೆ ಶಾದಾಬ್ ಅಹ್ಮದ್ ತೆಗೆಸಿಕೊಂಡ ಹಲವು ಫೋಟೋಗಳು ವೈರಲ್ ಆಗಿವೆ.
ಇನ್ನೊಂದೆಡೆ ಈ ಸಂಬಂಧ ಮಾತಾಡಿರೋ ಸೈಫ್ ತಂದೆ ಶಾದಾಬ್ ಅಹ್ಮದ್, ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ತೀರ್ಪು ಪ್ರಕಟವಾಗಿದೆ. ಇದು ಮೇಲ್ನೋಟಕ್ಕೆ ಬಿಜೆಪಿಗೆ ಅನುಕೂಲ ಎಂದು ಗೊತ್ತಾಗುತ್ತಿದೆ. ಇಡೀ ಕೇಸ್ ರಾಜಕೀಯ ಪ್ರೇರಿತ. ಹೀಗಾಗಿ ತೀರ್ಪು ಪುನರ್ ಪರಿಶೀಲಿಸಿ ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಆರೋಪ
ಅಹಮದಾಬಾದ್ ಸರಣಿ ಬಾಂಬ್ ಸ್ಫೋಟದ ಕೇಸ್ ಅಪರಾಧಿಗಳೊಂದಿಗೆ ಅಖಿಲೇಶ್ ಯಾದವ್ ಸಮಾಜವಾದಿ ಪಾರ್ಟಿ ಸಂಪರ್ಕದಲ್ಲಿದೆ. ಬಿಜೆಪಿ ಭಯೋತ್ಪಾದನೆಯನ್ನು ವಿರೋಧಿಸುತ್ತೇವೆ, ಎಸ್ಪಿ ಮಾತ್ರ ಪೋಷಿಸಲಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖುದ್ದು ಆರೋಪಿಸಿದ್ದಾರೆ.