ಅಪರೂಪಕ್ಕೆ ಕ್ಯಾಲೊಫೋರ್ನಿಯಾದಿಂದ ಹೊರಬಿದ್ದ ಹ್ಯಾರಿ-ಮೇಘನಾ ದಂಪತಿ ರಾಣಿ ಎಲಿಜಬೆತ್​ರ ಜುಬಿಲೀ ಪರೇಡಲ್ಲಿ ಪಾಲ್ಗೊಂಡರು! | Prince Harry and Meghan attend Queen’s jubilee parade but avoid limelight ARB


ಅಪರೂಪಕ್ಕೆ ಕ್ಯಾಲೊಫೋರ್ನಿಯಾದಿಂದ ಹೊರಬಿದ್ದ ಹ್ಯಾರಿ-ಮೇಘನಾ ದಂಪತಿ ರಾಣಿ ಎಲಿಜಬೆತ್​ರ ಜುಬಿಲೀ ಪರೇಡಲ್ಲಿ ಪಾಲ್ಗೊಂಡರು!

ಮೇಘನಾ ಮತ್ತು ಪ್ರಿನ್ಸ್ ಹ್ಯಾರಿ

ಬ್ರಿಟನ್ನಿನ ವೃತ್ತಪತ್ರಿಕೆಗಳು ದಿ ಡೈಲಿ ಮೇಲ್ ಮತ್ತು ದಿ ಸನ್ ರಾಯಲ್ ದಂಪತಿಗಳ ಹಲವಾರು ಪೋಟೋಗಳನ್ನು ಪ್ರಕಟಿಸಿವೆ. ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲಿ 40-ವರ್ಷ-ವಯಸ್ಸಿನ ಮೇಘನ್ ಮತ್ತು ಹ್ಯಾರಿ ತಮ್ಮ ಮಕ್ಕಳನ್ನು ಪ್ರೀತಿ-ಅಕ್ಕರೆ ಮತ್ತು ತಮಾಷೆಯಾಗಿ ಗದರುತ್ತಿರುವ ಫೋಟೋಗಳು ಪ್ರಕಟವಾಗಿವೆ.

ಲಂಡನ್: ಬ್ರಿಟನ್ನಿನ ಪಟ್ಟದರಸಿ ಎಲಿಜಬೆತ್ (Queen Elizabeth) ಅವರು ಸಾಮ್ರಾಜ್ಞಿಯಾಗಿ 70 ವರ್ಷಗಳನ್ನು ಪೂರೈಸಿದ ಹಿನ್ನೆಯಲ್ಲಿ ಅಯೋಜಿಸಲಾಗಿದ ಸಂಭ್ರಮಾಚರಣೆಗಳಲ್ಲಿ (ಜುಬಿಲಿ ಪರೇಡ್) ಪ್ರಿನ್ಸ್ ಹ್ಯಾರಿ (Prince Harry) ಮತ್ತು ಅವರ ಪತ್ನಿ ಮೇಘನ್ ಮಾರ್ಕ್ಲೆ (Meghan Markle) ಪಾಲ್ಗೊಂಡರಾದರೂ ಲೈಮ್ ಲೈಟ್ ನಿಂದ ದೂರ ಉಳಿಯುವ ಪ್ರಯತ್ನ ಮಾಡುತ್ತಿದ್ದಿದ್ದು ಸ್ಪಷ್ಟವಾಗಿ ಗೊತ್ತಾಗುತಿತ್ತು. ಕ್ಯಾಲಿಫೋರ್ನಿಯಾದಿಂದ ಅಪರೂಪಕ್ಕೊಮ್ಮೆ ಬ್ರಿಟನ್ ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ದಂಪತಿ ಬಕಿಂಗ್ಹ್ಯಾಮ್ ಅರಮನೆಗೆ ಹತ್ತಿರದ ಪರೇಡ್ ಮೈದಾನ ಎದುರಿರುವ ಒಂದು ಕಟ್ಟಡದ ಮೇಲೆ ನಿಂತು ರಾಣಿಯ ಬರ್ತಡೇ ಪರೇಡ್ ಮತ್ತು ಟ್ರೂಪಿಂಗ್ ದಿ ಕಲರ್ ವೀಕ್ಷಿಸಿದರು.

ಬ್ರಿಟನ್ನಿನ ವೃತ್ತಪತ್ರಿಕೆಗಳು ದಿ ಡೈಲಿ ಮೇಲ್ ಮತ್ತು ದಿ ಸನ್ ರಾಯಲ್ ದಂಪತಿಗಳ ಹಲವಾರು ಪೋಟೋಗಳನ್ನು ಪ್ರಕಟಿಸಿವೆ. ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲಿ 40-ವರ್ಷ-ವಯಸ್ಸಿನ ಮೇಘನ್ ಮತ್ತು ಹ್ಯಾರಿ ತಮ್ಮ ಮಕ್ಕಳನ್ನು ಪ್ರೀತಿ-ಅಕ್ಕರೆ ಮತ್ತು ತಮಾಷೆಯಾಗಿ ಗದರುತ್ತಿರುವ ಫೋಟೋಗಳು ಪ್ರಕಟವಾಗಿವೆ.

ಅಮೇರಿಕಾದ ಮಾಜಿ ಟೆಲಿವಿಷನ್ ತಾರೆ ಮೇಘನ್, ಹ್ಯಾರಿಯ ಕಸಿನ್ ಮತ್ತು ಶೋ ಜಂಪಿಂಗ್ನಲ್ಲಿ ಒಲಂಪಿಕ್ ಪದಕ ಗೆದ್ದಿರುವ ಜರಾ ಟಿಡಾಲ್ ಅವರ ಮೂರು ಮಕ್ಕಳೊಂದಿಗೆ ಹರಟುತ್ತಿರುವ ಚಿತ್ರಗಳು ಸಹ ಪತ್ರಕೆಗಳಲ್ಲಿ ಪ್ರಕಟವಾಗಿವೆ.

ಬ್ರಿಟಿಷ್ ಸೇನೆಯ ಮಾಜಿ ಕ್ಯಾಪ್ಟನ್ 37-ವರ್ಷ-ವಯಸ್ಸಿನ ಹ್ಯಾರಿ ದಟ್ಟಬಣ್ಣದ ಸೂಟು ಧರಿಸಿ ಪೋಟೋಗಳಲ್ಲಿ ಕಂಗೊಳಿಸುತ್ತಿದ್ದಾರೆ. ಸಾಮಾನ್ಯವಾಗಿ ಇಂಥ ಸಂದರ್ಭಗಳಲ್ಲಿ ಹ್ಯಾರಿಯ ಸಹೋದರ ವಿಲಿಯಮ್ ಮತ್ತು ತಂದೆ ಚಾರ್ಲ್ಸ್ ಅವರ ಹಾಗೆ ಅಲಂಕೃತ ಮಿಲಿಟರಿ ಯೂನಿಫಾರ್ಮ್ ಧರಿಸುವ ಉಸಾಬರಿಗೆ ಅವರು ಹೋಗಿಲ್ಲ.

ಮಹಾರಾಣಿ ಎಲಿಜಬೆತ್ ಅವರ ಸೋದರ ಸಂಬಂಧಿ ಮತ್ತು ಕೆಂಟ್ ನ ಡ್ಯೂಕ್ ಪ್ರಿನ್ಸ್ ಎಡ್ವರ್ಡ್ ಅವರೊಂದಿಗೆ ಹ್ಯಾರಿ ಲೋಕಾಭಿರಾಮವಾಗಿ ಮಾತಾಡುತ್ತಿರುವ ಪೋಟೋಗಳು ಸಹ ಕಾಣಿಸುತ್ತಿವೆ. ಸನ್ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ ಹ್ಯಾರಿ ಮತ್ತು ಮೇಘನ್ ಸಂಭ್ರಮಾಚರಣೆಯ ಥಳಕು-ಬಳಕಿನಿಂದ ದೂರ ಉಳಿಯಲು ಪ್ರಯತ್ನಿಸಿದರು.

ಶನಿವಾರದಂದು ಒಂದು ವರ್ಷದವಳಾಗಲಿರುವ ದಂಪತಿಗಳ ಕಿರಿ ಮಗು ಲಿಲಿಬೆಟ್ ಮತ್ತು ಅವಳ 3-ವರ್ಷದ ಸಹೋದರ ಆರ್ಚೀಯನ್ನು ಮಾಧ್ಯಮಗಳ ಕಣ್ಣುಗಳಿಂದ ಬಚಾವ್ ಪ್ರಯತ್ನವನ್ನು ಅವರು ಮಾಡುತ್ತಿದ್ದರು. ಮಕ್ಕಳು ಕೆಮೆರಾಗಳಿಗೆ ಭಾಗಶಃ ಕಾಣುತ್ತಿದ್ದರೆ ಅದೇ ರೂಮಿಲ್ಲಿ ನಡೆಯುತ್ತಿದ್ದ ಪರೇಡನ್ನು ಹ್ಯಾರಿ ದಂಪತಿ ವೀಕ್ಷಿಸುತ್ತಿದ್ದರು.

ರಾಜಮನೆತನದ ಹಿರಿಯ ಸದಸ್ಯರು ಆಚರಣೆಯಲ್ಲಿ ಪಾಲ್ಗೊಂಡಿರಲಿಲ್ಲ. ಅಲ್ಲಿ ಕಂಡವರೆಂದರೆ ವಿಲಿಯಂ ಪತ್ನಿ ಕೇಟ್ ಮಿಡ್ಲ್ಟನ್, ಅವರ ಮೂವರು ಮಕ್ಕಳು ಮತ್ತು ಹ್ಯಾರಿ ಹಾಗೂ ವಿಲಿಯಂ ಅವರ ಕಸಿನ್ಗಳಾಗಿರುವ ಯೂಜಿನೀ ಮತ್ತು ಬೀಟ್ರೈಸ್.

ಹ್ಯಾರಿ ಮತ್ತು ಮೇಘನ್ ಅವರ ಜೀವನ ಚರಿತ್ರೆ ಬರೆಯುತ್ತಿರುವ ಒಮಿಡ್ ಸ್ಕೋಬಿ ಅವರು ಕಳೆದ ವಾರ ಪತ್ರಕರ್ತರಿಗೆ ನೀಡಿರುವ ಮಾಹಿತಿ ಪ್ರಕಾರ ಅವರಿಬ್ಬರು ಶುಕ್ರವಾರ ಸೆಂಟ್ ಪೌಲ್ಸ್ ಚರ್ಚ್ ನಲ್ಲಿ ನಡೆಯಲಿರುವ ಕೃತಜ್ಞತಾ ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಟೈಮ್ಸ್ ವರದಿಯ ಪ್ರಕಾರ ಮಹಾರಾಣಿಯವರು ಮೊದಲ ಬಾರಿಗೆ ತಮ್ಮ ಮರಿ ಮೊಮ್ಮಗಳು ಲಿಲಿಬೆಟ್ ಅನ್ನು ನೋಡಲಿದ್ದಾರೆ. ರಾಣಿ ಎಲಿಜಬೆತ್ ಮತ್ತು ತಾತ ಪ್ರಿನ್ಸ್ ಚಾರ್ಲ್ಸ್ ಲಿಲಿಬೆಟ್ ಹುಟ್ಟಿದಾಗಿನಿಂದ ಇದುವರೆಗೆ ನೋಡೇ ಇಲ್ಲ.

ಲೈಂಗಿಕ ಹಗರಣಗಳಲ್ಲಿ ಸಿಕ್ಕು ಹೆಸರು ಕೆಡಿಸಿಕೊಂಡಿರುವ ರಾಣಿಯ ಮಧ್ಯದ ಪುತ್ರ ಪ್ರಿನ್ಸ್ ಌಂಡ್ರ್ಯೂ ಜುಬಿಲಿ ಸಂಭ್ರಮಾಚರಣೆಯಲ್ಲಿ ಕಾಣಿಸಲಿಲ್ಲ.

ಅರಸೊತ್ತಿಗೆಯ ಕರ್ತವ್ಯಗಳಿಂದ ದೂರ ಸರಿಸಿದ ಬಳಿಕ ಪ್ರಿನ್ಸ್ ಌಂಡ್ರ್ಯೂ ಈ ವರ್ಷದ ಆರಂಭದಲ್ಲಿ ಯುಎಸ್ನಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಲೈಂಗಿಕ ಪ್ರಕರಣವೊಂದನ್ನು ಇತ್ಯರ್ಥಗೊಳಿಸಿಕೊಂಡರು.

ರಾಜಮನೆತನದ ಪ್ರತಿನಿಧಿಗಳಾಗಿ ಕರ್ತವ್ಯನಿರತರಾಗಿರುವವರಿಗೆ ಮಾತ್ರ ಬಾಲ್ಕನಿಯಲ್ಲಿ ಅವಕಾಶ ಕಲ್ಪಿಸಬೇಕೆಂದು ರಾಣಿ ಎಲಿಜಬೆತ್ ಬಯಸಿದ್ದರಿಂದ ಹ್ಯಾರಿ, ಮೇಘನ್ ಮತ್ತು ಌಂಡ್ರ್ಯೂಗೆ ಅಲ್ಲಿ ಅವಕಾಶವಿರಲಿಲ್ಲ.

ಅಂಗವಿಕಲ ಹಿರಿಯರಿಗೆ ಹ್ಯಾರಿ ಆಯೋಜಿಸುವ ಇನ್ವಿಕ್ಟಸ್ ಗೇಮ್ಸ್ ನ ಇತ್ತೀಚಿನ ಆವೃತ್ತಿಯ ನಂತರ ಅವರು ಮೇಘನ ಜೊತೆ ರಾಣಿ ಎಲಿಜಬೆತ್ ಅವರನ್ನು ವಿಂಡ್ಸರ್ ಕ್ಯಾಸಲ್ ನಲ್ಲಿ ಭೇಟಿಯಾಗಿದ್ದರು. ಅರಮನೆಯ ಆವರಣದಲ್ಲಿ ಅವರಿಬ್ಬರು ಬಹಳ ದಿನಗಳಿಂದ ಕಾಣದಿರುವುದರಿಂದ ಅವರ ಜನಪ್ರಿಯತೆ ಗಣನೀಯ ಪ್ರಮಾಣದಲ್ಲಿ ಕುಗ್ಗಿದೆ.

2018ರಲ್ಲಿ ಮದುವೆಯಾದ ಹ್ಯಾರಿ ಮತ್ತು ಮೇಘನ್ ಅವರನ್ನು ಬ್ರಿಟಿಷ್ ಅರಸೊತ್ತಿಗೆಯ ಆಧುನಿಕ ಮುಖಗಳು ಎಂದು ಬಣ್ಣಿಸಲಾಗುತ್ತದೆ. ಮಾರ್ಚ್ 2020ರಲ್ಲಿ ಅವರಿಬ್ಬರು ಮುಂಚೂಣಿಯ ರಾಯಲ್ ಕರ್ತವ್ಯಗಳನ್ನು ತೊರೆದು ಯುಕೆಯಿಂದ ಕ್ಯಾಲಿಫೋರ್ನಿಯಾಗೆ ಶಿಫ್ಟ್ ಆದರು. ಅವರ ಈ ನಡೆಯನ್ನು ‘ಮೆಗ್ಜಿಟ್’ ಎಂದು ಉಲ್ಲೇಖಿಸಲಾಗುತ್ತದೆ.

ಅದಾದ ಮೇಲೆ ಯುಎಸ್ ಖ್ಯಾತ ಟಿವಿ ಪ್ರಸೆಂಟರ್ ಓಪ್ರಾ ವಿನ್ಫ್ರೀ ಅವರಿಗೆ ನೀಡಿದ ಸ್ಪೋಟಕ ಸಂದರ್ಶನವೊಂದರಲ್ಲಿ ರಾಯಲ್ ಫ್ಯಾಮಿಲಿ ಕೆಲವರು ಜನಾಂಗೀಯ ನಿಂದನೆ ಮಾಡುತ್ತಾರೆ ಅಂತ ದಂಪತಿ ಹೇಳಿದ್ದರು. ಅದರೆ ಹೆಸರುಗಳನ್ನು ಮಾತ್ರ ಬಹಿರಂಗಗೊಳಿಸಲಿಲ್ಲ. ತನ್ನ ಸಹೋದರ ಮತ್ತು ತಂದೆ ರಾಯಲ್ ಬದುಕಿನ ಕಟ್ಟುಪಾಡುಗಳಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ ಎಂದು ಹ್ಯಾರಿ ಹೇಳಿದ್ದರು.

ಅದಾದ ಬಳಿಕ ಹ್ಯಾರಿ ಮತ್ತು ಮೇಘನ್ ದೈತ್ಯ ಒಟಿಟಿ ವೇದಿಕೆಗಳಾಗಿರುವ ನೆಟ್ ಫ್ಲಿಕ್ಸ್ ಮತ್ತು ಸ್ಪೋಟಿಫೈ ಜೊತೆ ಭಾರಿ ಮೊತ್ತದ ಕಂಟ್ರ್ಯಾಕ್ಟ್ಗಳಿಗೆ ಸಹಿ ಹಾಕಿದ್ದಾರೆ.
ಈ ವರ್ಷದ ಅಂತ್ಯದಲ್ಲಿ ಹ್ಯಾರಿ ಅವರು ತಮ್ಮ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಲಿದ್ದು ಅದು ರಾಯಲ್ ಕುಟುಂಬವನ್ನು ಮತ್ತಷ್ಟು ಮುಜುಗುರಕ್ಕೆ ದೂಡಲಿದೆ ಎನ್ನಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

TV9 Kannada


Leave a Reply

Your email address will not be published. Required fields are marked *