ಅಪ್ಪನ ಬಳಿ 5 ರೂ. ಪಡೆದು ಹೋಗಿದ್ದ ಬಾಲಕಿ ಮತ್ತೆ ಪತ್ತೆಯಾಗಿದ್ದು ಶವವಾಗಿ; ಪಕ್ಕದ ಮನೆಯಿಂದಲೇ ಬರುತ್ತಿತ್ತು ಕೆಟ್ಟ ವಾಸನೆ ! | Body Of 6 years old Girl Found In Trunk In Neighbour’s Home In Uttar Pradesh


ಅಪ್ಪನ ಬಳಿ 5 ರೂ. ಪಡೆದು ಹೋಗಿದ್ದ ಬಾಲಕಿ ಮತ್ತೆ ಪತ್ತೆಯಾಗಿದ್ದು ಶವವಾಗಿ; ಪಕ್ಕದ ಮನೆಯಿಂದಲೇ ಬರುತ್ತಿತ್ತು ಕೆಟ್ಟ ವಾಸನೆ !

ಮನೆಯ ಬಾಗಿಲನ್ನು ಮುರಿದ ಪೊಲೀಸರು

ಉತ್ತರಪ್ರದೇಶದ ಹಾಪುರ್​ ಪಟ್ಟಣದಲ್ಲಿ ನಾಪತ್ತೆಯಾದ ಆರು ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಅದೂ ಕೂಡ ಪಕ್ಕದ ಮನೆಯ ಟ್ರಂಕ್​​ (ಬಟ್ಟೆಗಳನ್ನು ಇಡುವ ಕಬ್ಬಿಣದ ಪೆಟ್ಟಿಗೆ)ನಲ್ಲಿ. ಈಕೆ ಗುರುವಾರ (ಡಿ. 2ರಂದು ಮನೆಯಿಂದ ಕಾಣೆಯಾಗಿದ್ದಳು. ಇಂದು ಬೆಳಗ್ಗೆ ನೆರೆಮನೆಯ ಟ್ರಂಕ್​​ನಲ್ಲಿ ಆಕೆಯ ಶವ ಇತ್ತು. ಮೃತ ದೇಹವನ್ನು ಪೋಸ್ಟ್​ಮಾರ್ಟಮ್​​ಗೆ ಕಳಿಸಲಾಗಿದೆ ಎಂದು ಹಾಪುರ್ ಠಾಣೆಯ ಸರ್ವೇಶ್​ ಕುಮಾರ್ ತಿಳಿಸಿದ್ದಾರೆ. ಹಾಗೇ, ಶವಪರೀಕ್ಷೆ ವರದಿಗಳು ಬರುವವರೆಗೂ ಇದು ರೇಪ್​ ಕೇಸ್​ ಹೌದೋ? ಅಲ್ಲವೋ ಎಂದು ಹೇಳಲು ಸಾಧ್ಯವಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾರೆ. 

ನಿನ್ನೆ ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ದೂರು ಬಂದಿತ್ತು. ನಾವು ಹೋಗಿ ವಿಚಾರಣೆ ನಡೆಸಿ, ಆಕೆ ಕಾಣೆಯಾದ ಸ್ಥಳದಿಂದ ತನಿಖೆ ಶುರು ಮಾಡಿದೆವು. ಬಾಲಕಿಯ ಪಕ್ಕದ ಮನೆಯಿಂದ ಒಂದು ಕೆಟ್ಟ ವಾಸನೆ ಬರುತ್ತಿತ್ತು. ಅಲ್ಲಿಗೆ ನಮ್ಮ ಪೊಲೀಸ್ ತಂಡ ಹೋಯಿತು. ಆದರೆ ಮನೆಯ ಮುಂದಿನ ಬಾಗಿಲು ಹಾಕಲ್ಪಟ್ಟಿತ್ತು. ಅದು ಲಾಕ್​ ಕೂಡ ಆಗಿತ್ತು. ನಮ್ಮ ತಂಡ ಬಾಗಿಲನ್ನು ಮುರಿದು ಒಳಹೋಯಿತು.  ಇಡೀ ಕಟ್ಟಡದೊಳಗೆ ಹುಡುಕಿದಾಗ ಟ್ರಂಕ್​​ನಲ್ಲಿ ಬಾಲಕಿಯ ಶವ ಪತ್ತೆಯಾಯಿತು. ಅದನ್ನು ವಶಪಡಿಸಿಕೊಂಡು ಪೋಸ್ಟ್​ ಮಾರ್ಟಮ್​​ಗೆ ಕಳಿಸಲಾಗಿದೆ. ಎಲ್ಲ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಮನೆಯ ಮಾಲೀಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆತನನ್ನು ವಶಕ್ಕೆ ಪಡೆಯುವ ವೇಳೆ ಪೊಲೀಸರ ಎದುರೇ ಸ್ಥಳೀಯ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿದೆ.  ಬಳಿಕ ಪೊಲೀಸರು ಆತನಿಗೆ ರಕ್ಷಣೆ ನೀಡಿ, ಕರೆದುಕೊಂಡು ಹೋಗಿ ಜೈಲಿಗೆ ಹಾಕಿದ್ದಾರೆ.

5ರೂಪಾಯಿ ಕೇಳಿದ್ದ ಬಾಲಕಿ !
ಇನ್ನು ಬಾಲಕಿ ಗುರುವಾರ ಸಂಜೆ ಸುಮಾರು 5.30ರ ಹೊತ್ತಿಗೆ ನಾಪತ್ತೆಯಾಗಿದ್ದಳು. ಅದಕ್ಕೂ ಮೊದಲು ತನ್ನ ತಂದೆಯ ಬಳಿ 5 ರೂಪಾಯಿ ಕೇಳಿದ್ದಳು. 5 ರೂಪಾಯಿ ಕೊಟ್ಟ ತಕ್ಷಣ ಮನೆಯಿಂದ ಹೊರ ನಡೆದಿದ್ದಳು. ಬಳಿಕ ವಾಪಸ್​ ಬಂದಿರಲಿಲ್ಲ. ಈ ಬಗ್ಗೆ ಬಾಲಕಿಯ ತಂದೆಯೇ ಪೊಲೀಸರ ಎದುರೇ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಇಡೀ ರಾತ್ರಿ ಆಕೆಗಾಗಿ ಹುಡುಕಿದ್ದೇನೆ. ಬಳಿಕ ಆ ಪ್ರದೇಶದಲ್ಲಿ ಹಾಕಿದ ಸಿಸಿಟಿವಿ ಕ್ಯಾಮರಾ ಫೂಟೇಜ್ ನೋಡಿದಾಗ ಪಕ್ಕದ ಮನೆಯಾತ ಅವಳನ್ನು ಬೈಕ್​ ಮೇಲೆ ಕರೆದುಕೊಂಡು ಹೋಗಿದ್ದು ಕಂಡುಬಂದಿದೆ ಎಂದು ಕೂಡ ಬಾಲಕಿಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *