ಅಪ್ಪು ಅಗಲಿಕೆ ದುಃಖದಿಂದ ಹೊರಬಾರದ ರಾಘಣ್ಣ; ಪ್ರತಿನಿತ್ಯ ಪುನೀತ್​​ ಸಮಾಧಿಗೆ ಭೇಟಿ


ನಾವ್ಯಾರು? ಪುನೀತ್‌ ರಾಜಕುಮಾರ್‌ ಯಾರು? ನಮ್ಮ ಅವರ ಮಧ್ಯೆ ಇದ್ದಿದ್ದು ಬೆಟ್ಟದಷ್ಟು ಅಭಿಮಾನ. ನಮಗೇ ಅವರ ಸಾವು ಅರಗಿಸಿಕೊಳ್ಳೋಕೆ ಆಗ್ತಿಲ್ಲ ಅಂದ್ರೆ ಕರುಳ ಬಳ್ಳಿ ಹಂಚಿಕೊಂಡು ಹುಟ್ಟಿದ ರಾಘಣ್ಣ, ಶಿವಣ್ಣನ ಪಾಡೇನು? ಅದ್ರಲ್ಲೂ ರಾಘಣ್ಣಗೆ ಅಪ್ಪು ಅಂದ್ರೆ ದೊಡ್ಡ ಮಗ. ಪುನೀತ್‌ ಸಾವು ರಾಘಣ್ಣನ ಮನಸ್ಸಿಗೆ ಎಂದೂ ವಾಸಿಯಾಗದ ಗಾಯ ಮಾಡಿದೆ.

ಅದೆಷ್ಟೇ ಪ್ರಯತ್ನಿಸಿದ್ರೂ ಸಾಧ್ಯವಾಗ್ತಿಲ್ಲ. ಮಂದಹಾಸದ ಮಾಣಿಕ್ಯ ನಮ್ಮೊಂದಿಗಿಲ್ಲ ಅನ್ನೋ ಕಠೋರ ಸತ್ಯವನ್ನು ಸ್ವೀಕರಿಸಲು ಮನಸ್ಸು ಸಿದ್ಧವಿಲ್ಲ. ಅಪ್ಪು ಅಗಲಿಕೆಯಿಂದ ದೊಡ್ಮನೆಗಂತೂ ಬರಸಿಡಿಲೇ ಬಡಿದಂತಾಗಿದೆ. ಬಾಳಿ ಬದುಕಬೇಕಿದ್ದ ರಾಜಕುಮಾರ ವಿಧಿವಶವಾಗಿರೋದು ಕಸ್ತೂರಿ ನಿವಾಸದಲ್ಲಿ ಸೂತಕ ಮೂಡಿಸಿದೆ. ಅದ್ರಲ್ಲೂ ಅಪ್ಪುವನ್ನು ಮಗನಷ್ಟೇ ಪ್ರೀತಿಸುತ್ತಿದ್ದ ರಾಘಣ್ಣಗೆ ಇನ್ನೂ ಈ ದು:ಖದಿಂದ ಹೊರಬರಲು ಸಾಧ್ಯವಾಗ್ತಿಲ್ಲ

ಅಪ್ಪು ಅಗಲಿಕೆಯ ದು:ಖ ದೊಡ್ಮನೆ ಕುಟುಂಬಕ್ಕೆ ಇನ್ನಿಲ್ಲದಂತೆ ಕಾಡುತ್ತಿದೆ. ಅದ್ರಲ್ಲೂ ಸಹೋದರ ರಾಘವೇಂದ್ರ ರಾಜಕುಮಾರಂತೂ​ ಅಕ್ಷರಶಃ ದಿಗ್ಭಮ್ರೆಗೆ ಒಳಗಾಗಿದ್ದಾರೆ. ಒಂದು ದಿನವೂ ತಪ್ಪದಂತೆ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸುತ್ತಿದ್ದಾರೆ.

ಮನೆಮಗನಂತಿದ್ದ ಅಪ್ಪು ಮತ್ತೆಂದೂ ಮನೆಗೆ ಮರಳಲಾರ ಅನ್ನೋ ಸತ್ಯ ನೆನೆದು ನೊಂದುಕೊಳ್ಳುತ್ತಿದ್ದಾರೆ. ತಾನು ಆಸ್ಪತ್ರೆ ಸೇರಿದ್ದಾಗ ಹೋರಾಡಿ ಬದುಕುಳಿಸಿಕೊಂಡಿದ್ದ ಪ್ರೀತಿಯ ತಮ್ಮನೇ ಇಂದು ಬದುಕಿಲ್ಲ ಅನ್ನೋದನ್ನ ಸಹಿಸದೇ ರಾಘಣ್ಣನ ಮನಸ್ಸು ಸಂಕಟಪಡುತ್ತಿದೆ.

ಇದನ್ನೂ ಓದಿ: ಡಾ.ರಾಜ್​ ಕುಟುಂಬದಿಂದ ಅಪ್ಪು ಸಮಾಧಿಗೆ ವಿಶೇಷ ಪೂಜೆ; ಚಿತ್ರರಂಗದ ಗಣ್ಯರು ಭಾಗಿ

ದೊಡ್ಮನೆ ಕುಟುಂಬ ಮಾತ್ರವಲ್ಲ ಅಪ್ಪು ಅಭಿಮಾನಿಗಳು ಈ ಆಘಾತದಿಂದ ಹೊರಬಂದಿಲ್ಲ. ಕಂಠೀರವ ಸ್ಟುಡಿಯೋಗೆ ಹರಿದುಬರ್ತಿರೋ ಅಭಿಮಾನಿ ಸಾಗರವೇ ಈ ಮಾತಿಗೆ ಸಾಕ್ಷಿ. ದಿನಕಳೆದಂತೆ ಅಭಿಮಾನದ ಮಳೆ ಮತ್ತಷ್ಟು ಜೋರಾಗ್ತಿದೆ. ಜೊತೆಗಿರದ ಜೀವಕ್ಕೆ ನಮನ ಸಲ್ಲಿಸಲು ಸಹಸ್ರ ಸಹಸ್ರ ಅಭಿಮಾನಿಗಳು ಅಪ್ಪು ಸಮಾಧಿಯತ್ತ ಹೆಜ್ಜೆ ಹಾಕುತ್ತಿದ್ದಾರೆ

ಚಂದನವನದ ಬೆಟ್ಟದ ಹೂ ಬಾಡಿ 13 ದಿನ ಕಳೆದ್ರೂ ಅಭಿಮಾನದ ಹೂ ಮಾತ್ರ ಅರಳುತ್ತಲೇ ಇದೆ. ಆಕಾಶದ ಅಗಲದಷ್ಟು ಅಭಿಮಾನಕ್ಕೆ ಕಂಠೀರವ ಸ್ಟುಡಿಯೋ ಸಾಕ್ಷಿಯಾಗ್ತಿದೆ. ಅಪ್ಪು ಅಳಿದರೂ ಅವರ ನೆನಪು ಎಂದಿಗೂ ಅಳಿಯದು.

News First Live Kannada


Leave a Reply

Your email address will not be published. Required fields are marked *