ಅಪ್ಪು ಕಿರುತೆರೆಯಲ್ಲಿ ಮಿಂಚಲು ಸ್ಫೂರ್ತಿಯಾಗಿದ್ದು ಯಾರು ಗೊತ್ತಾ? ಕಿರುತೆರೆಗೆ ಪುನೀತ್​ ಎಂಟ್ರಿ ಹೇಗಿತ್ತು?


ಕನ್ನಡದ ಯುವರತ್ನ ಪುನೀತ್​ರಾಜ್​ಕುಮಾರ್​​ ಅವರು ನೀಡಿರುವ ಕೊಡುಗೆ ಒಂದಾ ಎರಡಾ..! ಬೆಳ್ಳಿಪರದೆ ಮೇಲೆ ಸೂರ್ಯನಂತೆ ಪ್ರಜ್ವಲಿಸಿದ ಪ್ರೀತಿಯ ಅಪ್ಪು ಹಿರಿತೆರೆ, ಕಿರುತೆರೆಯ ಕಲಾ ಸೇವೆ ಮಾಡಿ ಮಿಂಚಿ ಮರೆಯಾಗಿದ್ದಾರೆ. ಸದ್ಯ ಅವರ ಕಿರುತೆರೆಯ ಪ್ರಯಾಣದ ನೆನಪಿನ ಬುತ್ತಿಯನ್ನ ಬಿಚ್ಚಿ ಸವಿ ಸಿಹಿ ಕ್ಷಣಗಳನ್ನ ನಿಮಗಾಗಿ ನೀಡುತ್ತಿದ್ದೇವೆ.

ಸದಾ ಹಸನ್ಮುಖಿಯಾಗಿದ್ದ ಅಪ್ಪು ತುಂಬು ಕುಟುಂಬದಲ್ಲಿ ಬೆಳೆದ ಕುಡಿ, ಹೀಗಾಗಿ ಸಹಜವಾಗಿಯೇ ಜನರ ಒಡನಾಟಕ್ಕೆ ಮಿಡಿಯುತ್ತಿದ್ದ ಹೃದಯ. ಸಿನಿಮಾಗಳ ಮೂಲಕ ಮನೆ ಮಗನಾಗಿದ್ದ ಅಪ್ಪು ಕಿರುತೆರೆ ಮೂಲಕ ಮತ್ತಷ್ಟು ಹತ್ತಿರವಾಗಿದ್ರು. ಚಿನ್ನದಂತ ಮನಸ್ಸಿನ ನಟನನ್ನ ಬಹು ಹತ್ತಿರದಿಂದ ಕಣ್ತುಂಬಿಕೊಳ್ಳುವ ಸುವರ್ಣ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದ್ದು ಜನಪ್ರೀಯ ಶೋ ಕನ್ನಡದ ಕೋಟ್ಯಾದಿಪತಿ ಮೂಲಕ.

ಹೌದು, 12 ಮಾರ್ಚ್​ 2012ನ್ನ ಕಿರುತೆರೆ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಅಂದು ಪ್ರತಿ ಕನ್ನಡಿಗನ ಕನಸಿನ ದಾರಿ ದೀಪವಾಗಿ ಪುನೀತ್​ ಸ್ಮಾಲ್​ ಸ್ಕ್ರೀನ್​ಗೆ ಪಾದಾರ್ಪಣೆ ಮಾಡ್ತಾರೆ. ಭಾರತೀಯ ಚಿತ್ರರಂಗದ ಮೇರು ನಟ ಅಮಿತಾಬ್​ ಬಚ್ಚನ್​ ಅವರು 2000ನೇ ಇಸಿವಿಯಿಂದ ಯಶಸ್ವಿಯಾಗಿ ನಿರೂಪಿಸುತ್ತಿರುವ ಶೋ ಕೌನ್​ ಬನೇಗಾ ಕರೋಡ್​ಪತಿಯ ಕನ್ನಡ ಅವತರಣಿಕೆಯಾಗಿದ್ದ ಕನ್ನಡದ ಕೋಟ್ಯಾಧಿಪತಿ ರುವಾರಿಯಾಗ್ತಾರೆ.

ಸಿನಿಮಾದ ಪಾತ್ರಗಳ ಮೂಲಕ, ಅಲ್ಲಿ ಇಲ್ಲಿ ಸಾರ್ವಜನಕ ಫಂಕ್ಶನ್​ಗಳಲ್ಲಿ ಪುನೀತ್​ ಅವರನ್ನ ನೋಡಿದ್ದ ಅಭಿಮಾನಿಗಳಿಗೆ ಈ ಶೋ ದೊಡ್ಡ ಗಿಫ್ಟ್​​ ನೀಡುತ್ತದೆ. ಅಪ್ಪು ಅವರ ನಿಶ್ಕಲ್ಮಶ ನಗು, ಪಟ್​​ ಪಟ್​ ಮಾತುಗಳು, ಸರಳ ಸಜ್ಜನಿಕೆಯ ನಡೆ-ನುಡಿ ಎಲ್ಲವೂ ಮನೆ ಮಾತಾಗಿ ಬಿಡುತ್ತವೆ. ಆದ್ರೇ ಈ ಶೋನ ಆಫ್​ ಸ್ಕ್ರೀನ್​ನ ಇಂಟ್ರಸ್ಟಿಂಗ್​ ಸ್ಟೋರಿಯನ್ನ ನೀವು ಕೇಳಲೇಬೇಕು.

ಸದ್ಯ ಜ್ಹೀ ಕನ್ನಡದ ಬ್ಯುಸನೆಸ್​ ಹೆಡ್ ಆಗಿರುವ ರಾಘವೇಂದ್ರ ಹುನಸೂರ್​ ಅವರು ಆಗ ಸ್ಟಾರ್​ ಸುವರ್ಣದ ಕನ್ನಡದ ಕೋಟ್ಯಾಧಿಪತಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು. ಈ ಶೋನ ಹೋಸ್ಟ್​​ಗೆ ಪುನೀತ್​ರಾಜ್​ಕುಮಾರ್​ ಅವರನ್ನ ಆಯ್ಕೆ ಮಾಡ್ತಾರೆ. ಆದ್ರೇ ನಮ್ಮ ಅಪ್ಪುಗೆ ಈ ಅಪ್ರೋಚ್​ ಕೇಳಿ ಹೊಟ್ಟೆಯೋಳಗೆ ಚಿಟ್ಟೆ ಬಿಟ್ಟಂಗ್ ಆಗಿತ್ತಂತೆ. ಆಗ ಅವರಿಗೆ ಬ್ಯಾಕ್​ ಬೋನ್​ ಆಗಿ ​​ನಿಂತವರು ರಾಘಣ್ಣ.

ಇನ್ನೊಂದು ಮುಖ್ಯವಾದ ವಿಷ್ಯ ಅಂದ್ರೇ 2000ನೇ ಇಸಿವಿಯಲ್ಲಿ ಪ್ರಸಾರವಾಗ್ತಿದ್ದ ಕೌನ್​ ಬನೇ ಗಾ ಕರಡೋಪತಿ ಶೋನ್ನ ಡಾ. ರಾಜ್​ಕುಮಾರ್​ ಅವರು ತುಂಬಾ ಕುತೂಹಲದಿಂದ ಮಿಸ್ ಮಾಡದೇ ನೋಡ್ತಿದ್ರಂತೆ. ಕೆಲ ಸಲ ಅಪ್ಪು ಅವರು ಕೂಡ ಅಣ್ಣವ್ರ ಜೊತೆ ಶೋ ನೋಡ್ತಿದ್ರಂತೆ.

ನಂತರ 2012ರಲ್ಲಿ ಅಪ್ಪು ಅವರಿಗೆ ಈ ಅವಕಾಶ ಒಲಿದು ಬರುತ್ತೆ. ಆಗ ಪುನೀತ್​ ಮಾಡೋದಾ ಬೇಡ್ವಾ ಅಂತಾ ತುಂಬಾ ಯೋಚ್ನೆ ಮಾಡಿದ್ರಂತೆ. ಆಗ ಅವರು ಖ್ಯಾತ ನಿರೂಪಕ ಸಿದ್ಧಾರ್ಥ ಬಸು ಅವರಿಂದ ಸ್ಫೂರ್ತಿ ಪಡೆದು ಶೋಗಾಗಿ ಸಾಕಷ್ಟು ಹೋಂ ವರ್ಕ್ ಮಾಡಿದ್ರಂತೆ. ಬಿಗ್ ಬಿ ಶೋಗೆ ಕೂಡ ಅಪ್ಪು ಹಾಗೂ ರಾಘವೇಂದ್ರ ಹುನಸೂರು ಅವರ​ ತಂಡ ಭೇಟಿ ನೀಡಿ ಸಾಕಷ್ಟು ಮಾಹಿತಿ ಕಲೆಹಾಕಿದ್ರು. ಈ ಸಂದರ್ಭದಲ್ಲಿ ಅಪ್ಪು ಅವರನ್ನ ತುಂಬಾ ಆತ್ಮೀಯತೆಯಿಂದ ನೋಡಿಕೊಂಡಿದ್ರು ಬಿಗ್​ ಬಿ.

ಹೀಗೇ ಶುರುವಾದ ಅವರ ಕಿರುತೆರೆ ಪ್ರಯಾಣ ದೊಡ್ಡ ಮಟ್ಟದ ಯಶಸ್ಸಿಗೆ ಕಾರಣವಾಯಿತು. ದೊಡ್ಮನೆಯ ಯುವರಾಜನಾದ್ರು ಒಂಚೂರು ಹಮ್ಮು ಬಿಮ್ಮು ಇಲ್ಲದೇ ಸಾಮಾನ್ಯ ಜನರೊಂದಿಗೆ ಬೆರತು. ಅವರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದ ಹೃದಯ ಶ್ರೀಮಂತಿಕೆಯ ಸಾಹುಕಾರ ಅಪ್ಪು.​

ಸ್ಟಾರ್​ ಸುವರ್ಣ ವಾಹಿನಿಯಲ್ಲಿ ಯಶಸ್ವಿಯಾಗಿ 2 ಆವೃತ್ತಿಯನ್ನ ಕಂಪ್ಲೀಟ್​ ಮಾಡಿತು. ನಂತರ ಕಾರಣಾಂತರಗಳಿಂದ 3ನೇ ಆವೃತ್ತಿಯನ್ನ ಅಷ್ಟೇ ಚಂದವಾಗಿ ನಟ ರಮೇಶ್​ ಅರವಿಂದ್​ ಅವರು ನಡೆಸಿಕೊಟ್ಟರು.

ತದನಂತರ ಪರಮೇಶ್ವರ್​ ಗುಂಡ್ಕಲ್​ ಅವರ ಸಾರಥ್ಯದಲ್ಲಿ ಕಲರ್ಸ್ ಕನ್ನಡದಲ್ಲಿ 4ನೇ ಆವೃತ್ತಿ ಪ್ರಸಾರವಾಯ್ತು. ಸಾಮಾನ್ಯ ಕನ್ನಡಿಗರನ್ನು ಉದ್ದೇಶಿಸಿ ಮಾಡಿದ್ದ ಶೋ ಇಷ್ಟೊಂದು ಅಭೂತಪೂರ್ವ ಯಶಸ್ಸು ಕಾಣಲು ಮುಖ್ಯ ಕಾರಣ ನಮ್ಮ ಅಪ್ಪು ಅಂದ್ರೇ ಅತೀಶಯೋಕ್ತಿಯಲ್ಲ.

ಈ ಶೋ ಬಗ್ಗೆ ಮಾತ್ನಾಡಿದ್ದ ಅಪ್ಪು, ಈ ನಿರೂಪಕನಾಗಿರುವುದಕ್ಕೆ ಖುಷಿಯಾಗ್ತಿದ್ದು, ಉತ್ಸುಕನಾಗಿದ್ದೇನೆ. ಸಾಮಾನ್ಯ ಜನರೊಂದಿಗೆ ಹತ್ತಿರದಿಂದ ಮಾತ್ನಾಡಿ ಅವರ ಬಗ್ಗೆ ತಿಳಿದುಕೊಳ್ಳಲು ನನಗೆ ಅವಕಾಶ ಸಿಕ್ಕಿದೆ ಎನ್ನುತ್ತಾ ದೊಡ್ಡ ನಗು ಚಲ್ಲಿದ್ದರು.

ಕೋಟಿ ಗೆಲ್ತಿವೋ ಬಿಡ್ತಿವೋ ಗೊತ್ತಿಲ್ಲ. ಆದ್ರೇ ಪುನೀತ್​ ಅವರನ್ನ ಒಂದ್​ ಸಾರಿ ನೋಡೊ ಭಾಗ್ಯ ಈ ಶೋನಿಂದ ಸಿಗ್ತಿದೆ ಅನ್ನೋ ಧನ್ಯತಾ ಭಾವದಿಂದ ಅದೇಷ್ಟೋ ಜನ ಹರಕೆ ಹೊತ್ತು ಬರ್ತಿದ್ರು. ಅಪ್ಪು ಕೂಡ ಅಷ್ಟೆ ಅಭಿಮಾನಿಗಳಿಗೆ ಯಾವತ್ತು ನಿರಾಶೆ ಮಾಡಿದವರಲ್ಲ. ಅವರು ಯಾರೇಯಾದ್ರೂ ಅವರನ್ನ ಪ್ರೀತಿಯಿಂದ ಅಪ್ಪುತಿದ್ದರು.

ಇಲ್ಲಿಯವರೆಗೆ 1 ಕೋಟಿ ರೂಪಾಯಿಗಳನ್ನು ಕೇವಲ ಒಬ್ಬರೇ ಗೆದ್ದಿದ್ದು, ಎರಡನೇ ಸೀಸನ್ನಿನಲ್ಲಿ ಕೊಪ್ಪಳದ ಹುಸೇನ್ ಬಾಷಾ ಎಂಬುವವರೇ 1 ಕೋಟಿ ರೂಪಾಯಿ ಗೆದ್ದವರು. ಆಗ ಹುಸೇನ್ ಅವರಿಕ್ಕಿಂತ ಅಪ್ಪು ಅವರೇ ಹೆಚ್ಚು ಟೆನ್ಶನ್​ ಆಗಿದ್ರು. ಹುಸೇನ್ ಗೆದ್ದಾಗ ಅಪ್ಪು ಮುಖದಲ್ಲಿದ್ದ ಆ ಮಿಂಚೇ ಹೇಳುತ್ತಿತ್ತು ಅವರು ಜನರೊಂದಿಗೆ ಎಷ್ಟೋ ಕನೆಕ್ಟ್​ ಆಗಿದ್ರು ಅಂತಾ.

ಗೇಮ್​ ಅಂದ್ಮೇಲೆ ಎಲ್ಲರೂ ಹಣ ಗಳಿಸೋಕೆ ಸಾಧ್ಯವಿಲ್ಲ. ಆಟದಲ್ಲಿ ಏರು ಪೇರು ಆದಗ ಪುನೀತ್​ ಸ್ಪರ್ಧಿಗಳಿಗೆ ಧೈರ್ಯ ತುಂಬಿ, ನಕ್ಕು ನಗಿಸುತ್ತಿದ್ದರು. ಜನರಿಗೆ ದೂಡ್ಡು ಗೆಲ್ಲಲು ಸಾದ್ಯವಾಗದಾಗ ಅವರ ಕಷ್ಟಕ್ಕೆ ಮಮ್ಮಲ ಮರುಗಿ ಸಹಾಯ ಹಸ್ತ ಚಾಚೂತಿದ್ದರು. ಆದ್ರೇ ಅವರು ಬದುಕಿರುವವರೆಗೂ ಬಲಗೈ ಮಾಡಿದ ದಾನ ಎಡಗೈಗೂ ಗೊತ್ತಾಗಬಾರದು ಎನ್ನುವಂತೆ ಬಾಳಿದ್ರು.

ದೊಡ್ಮನೇ ಹುಡುಗನ ದೊಡ್ಡ ಗುಣಗಳನ್ನ ಎಷ್ಟೂ ಹೇಳಿದ್ರು ಕಮ್ಮಿನೇ. ಪುನೀತ್​ ಅವರು ಜೀವಿಸಿದ ರೀತಿ ಅವರ ಜೀವನ ಪ್ರೀತಿ ಎಂದಿಗೂ ಯಾರೂ ಮರೆಯುಂತಿಲ್ಲ. ಅವರು ಕಿರುತೆರೆಗೆ ನೀಡಿದ ಕೊಡುಗೆ ಅಗಾಧ. ಇಷ್ಟು ಬೇಗ ಅವರ ಪ್ರಯಾಣವನ್ನ ನಾವು ನಿಮ್ಮ ಮುಂದೆ ಬಿಚ್ಚಿಡುವ ಪರಿಸ್ಥಿತಿ ಬರುತ್ತದೇ ಅಂತಾ ಯಾರೂ ಊಹಿಸಿರಲಿಲ್ಲ. ಅವರ ಬಗ್ಗೆ ಹೇಳಿದಷ್ಟು ಶಬ್ದಗಳ ಕೊರತೆ ಕಾಡುತ್ತದೆ ಅಂತಹ ಅದ್ಭುತ ವ್ಯಕ್ತಿತ್ವ ನಮ್ಮ ನಿಮ್ಮ ಪ್ರೀತಿಯ ಅಪ್ಪುವಿನದ್ದು.

News First Live Kannada


Leave a Reply

Your email address will not be published. Required fields are marked *