ಕನ್ನಡ ಸಿನಿಮಾ ಲೋಕಕ್ಕೆ ಅದ್ಯಾರ ಶಾಪ್ ತಗುಲಿದೆಯೋ ಗೊತ್ತಿಲ್ಲ.. ಅಥವಾ ಇಲ್ಲಿನ ಮಿನುಗು ನಕ್ಷತ್ರಗಳ ಮೇಲೆ ಅದ್ಯಾರ ಕಣ್ಣು ಬೀಳುತ್ತೋ ಗೊತ್ತಿಲ್ಲ.. ಇತ್ತೀಚೆಗೆಷ್ಟೇ ಪುನೀತ್ ರಾಜ್ಕುಮಾರ್ ಅವರನ್ನು ಕನ್ನಡಿಗರು ಕಳೆದುಕೊಂಡಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಪ್ಪು ಅಗಲಿ ಇಂದಿಗೆ 12 ದಿನಗಳು. ಅವರು ಇಲ್ಲ ಅನ್ನೋದನ್ನೇ ನಂಬೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.. ಆ ನಗು.. ಅಸಂಖ್ಯಾತ ಪ್ರತಿಭಾವಂತರಿಗೆ ನೆಲೆ ಒದಗಿಸಬೇಕು ಅನ್ನೋ ಅಸಂಖ್ಯೆ ಕನಸುಗಳನ್ನು ತುಂಬಿಕೊಂಡಿದ್ದ ಆ ಕಣ್ಣುಗಳು.. ಆ ನೋಟ.. ನೊಂದವರಿಗೆ ಆಸರೆಯಾಗುತ್ತಿದ್ದ ಅಪ್ಪು ಅವರ ಆ ವಿಶಾಲ ಹೃದಯ ಇಂದಿಗೂ ಕನ್ನಡಿಗರನ್ನ ದುಃಖದ ಮಡುವಲ್ಲಿ ಮುಳುಗಿಸಿದೆ..
ದೊಡ್ಡ ಶಾಕ್
ಇತ್ತೀಚೆಗಷ್ಟೇ ಕನ್ನಡ ಚಿತ್ರ ರಂಗ ಪ್ರತಿಭಾನ್ವಿತ ಯುವ ಕಲಾವಿದರಾಗಿದ್ದ ಚಿರು ಸರ್ಜಾ, ಸಂಚಾರಿ ವಿಜಯ್ ಮತ್ತೆ ಎಲ್ಲರ ನೆಚ್ಚಿನ ಅಪ್ಪುರನ್ನ ಕಳೆದುಕೊಂಡಿದೆ.. ಇದು ಅಂತಿಂಥ ಶಾಕ್ ಅಲ್ಲ.. ಅಂಥದ್ದೇ ಒಂದು ಶಾಖ್ ಬರೋಬ್ಬರಿ 31 ವರ್ಷಗಳ ಹಿಂದೊಮ್ಮೆ ಕನ್ನಡಿಗರಿಗೆ ಆಗಿತ್ತು.. ಇಡೀ ಭಾರತೀಯ ಚಿತ್ರರಂಗ ಮಾತ್ರವಲ್ಲ ವಿಶ್ವದ ಚಿತ್ರರಂಗವೇ ಕನ್ನಡ ಚಿತ್ರರಂಗದತ್ತ ಅಚ್ಚರಿಯಿಂದ ನೋಡುವಂತೆ ಮಾಡಿದ್ದ ನಿಜವಾದ ಮಾಸ್ ಮಹಾರಾಜ ಶಂಕರ್ ನಾಗ್ ಭೀಕರ ಅಪಘಾತದಿಂದಾಗಿ ಕೇವಲ ತಮ್ಮ 35ನೇ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದರು.
ಶಂಕರ್ ನಾಗ್ ನೆನಪು
ಶಂಕರ್ನಾಗ್ ಇಂದಿಗೆ ಬದುಕಿದ್ದರೆ ಅವರಿಗೆ 71 ವಸಂತಗಳು ತುಂಬುತ್ತಿದ್ದವು. ಅದೇನು ಅವಸರವಿತ್ತೋ ಗೊತ್ತಿಲ್ಲ.. ನವೆಂಬರ್ 9- 1954ರಂದು ಜನಿಸಿದ ಶಂಕರ್ನಾಗ್, ಸೆಪ್ಟಂಬರ್ 30-1990ರಂದು ತಮ್ಮ 35ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ರು. ಬದುಕಿದ್ದು ಕೇವಲ 35 ವರ್ಷವಾದ್ರೂ.. ಇಷ್ಟರಲ್ಲಿಯೇ ಬರೋಬ್ಬರಿ 99 ಸಿನಿಮಾಗಳಲ್ಲಿ ಆ್ಯಕ್ಟ್ ಮಾಡಿದ್ರು..9 ಸಿನಿಮಾಗಳನ್ನ ನಿರ್ದೇಶನ ಮಾಡಿದ್ರು. ಅದ್ರಲ್ಲೂ ಕೇವಲ 32 ವಯಸ್ಸಿನವರಾಗಿದ್ದಾಗ ನಟ ಸಾರ್ವಭೌಮ ಡಾ. ರಾಜ್ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಿದ್ರು. ಅಂದಿನ ಸಮಯದಲ್ಲಿಯೇ ಇಡೀ ವಿಶ್ವದ ಚಿತ್ರರಂಗ ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಅಂಡರ್ ವಾರ್ ಶೂಟಿಂಗ್ ಮಾಡಿ ಭೇಷ್ ಎನಿಸಿಕೊಂಡ್ರು. ಡಾ.ರಾಜ್ಕುಮಾರ್ ನಟಿಸಿದ್ದ ಒಂದು ಮುತ್ತಿನ ಕಥೆ ಚಿತ್ರ ಬಾಕ್ಸ್ಆಫೀಸ್ನಲ್ಲಿ ಸದ್ದು ಮಾಡದಿದ್ದರೂ ವಿಶ್ವಾದ್ಯಂತ ಸಿನಿಪ್ರಿಯರಿಂದ, ಸಿನಿಮಾ ವಿಮರ್ಷಕರಿಂದ ಅದ್ಭುತ ಎನ್ನುವಂಥ ಪ್ರತಿಕ್ರಿಯೆ ಪಡೆದುಕೊಂಡಿತು. ಅಷ್ಟೇ ಅಲ್ಲ.. ಕೇವಲ 27 ವರ್ಷದವರಿದ್ದಾಗಲೇ ಹಿಂದಿಯಲ್ಲಿ ಲಾಲಚ್ ಅನ್ನೋ ಸಿನಿಮಾವನ್ನ ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ರು.
ಕತೆಗಾರ
ಶಂಕರ್ನಾಗ್ ಕೇವಲ ನಟ, ನಿರ್ದೇಶಕ ಮಾತ್ರ ಆಗಿರಲಿಲ್ಲ ಅದ್ಭುತ ಕತೆಗಾರ, ಬರಹಗಾರ ಕೂಡ ಆಗಿದ್ರು. 1979ರಲ್ಲಿ ಅಂದ್ರೆ ಶಂಕರ್ನಾಗ್ಗೆ ಕೇವಲ 24 ವರ್ಷವಾಗಿದ್ದ ಅವರು ರಾಷ್ಟ್ರೀಯ ಐಕ್ಯತೆ ಬಗ್ಗೆ ಒಂದು ಕತೆ ಬರೆದಿದ್ರು. ಅದು ಮರಾಠಿಯಲ್ಲಿ 22 ಜೂನ್ 1987 ಹೆಸರಿನಲ್ಲಿ ಸಿನಿಮಾ ಕೂಡ ಆಗಿತ್ತು. ಅಷ್ಟೇ ಅಲ್ಲ ಆ ವರ್ಷ ಅದಕ್ಕೆ ಅತ್ಯುತ್ತಮ ಸಿನಿಮಾ ರಾಷ್ಟ್ರಪ್ರಶಸ್ತಿ ಕೂಡ ಬಂದಿತ್ತು. ಹೀಗೆ ಒಟ್ಟು ಹತ್ತು ಸಿನಿಮಾಗಳಿಗೆ ಅವರು ಕತೆ ಬರೆದಿದ್ದು ವಿಶೇಷವಾಗಿತ್ತು. ಅದ್ರಲ್ಲೂ ಅವರೇ ನಿರ್ದೇಶಿಸಿದ್ದ ನೋಡಿ ಸ್ವಾಮಿ ನಾವಿರೋದು ಹೀಗೆ, ಗೀತಾ, ಮಿಂಚಿನ ಓಟ ಮುಂತಾದ ಚಿತ್ರಗಳು ಇಂದಿಗೂ ನವನೂತನವಾಗಿರೋದು ವಿಶೇಷ.
ನಿರ್ಮಾಪಕ
ನಟ, ನಿರ್ದೇಶಕ, ಕತೆಗಾರ ಆಗಿದ್ದ ಶಂಕರ್ ನಾಗ್ ಸಿನಿಮಾಗಳ ನಿರ್ಮಾಪಕರಾಗಿಯೂ ಛಾಪು ಮೂಡಿಸಿದ್ರು. ಮಿಂಚಿನ ಓಟ, ಗೀತಾ, ಜನುಮ ಜನುಮದ ಅನುಬಂಧ ಇಂಥ ಮೂರು ಸಧಬಿರುಚಿಯ ಸಿನಿಮಾಗಳನ್ನ ಅವರು ನಿರ್ಮಿಸಿದ್ದು ವಿಶೇಷವಾಗಿತ್ತು.
ಪ್ಯಾನ್ ಇಂಡಿಯಾ ಹೆಸರು ತಂದ ಧಾರಾವಾಹಿ
ಶಂಕರ್ ನಾಗ್ ಸಿನಿಮಾ ಮತ್ತು ನಾಟಕದಲ್ಲಿ ಎಷ್ಟು ಛಾಪು ಮೂಡಿಸಿದ್ದರೋ.. ಅದಕ್ಕಿಂತ ಹೆಚ್ಚೇ ಎನ್ನುವಂಥ ಛಾಪನ್ನು ಅವರು ಧಾರಾವಾಹಿ ಮೂಲಕವೂ ಮೂಡಿಸಿದ್ದು ಶಂಕರ್ ನಾಗ್ ಪ್ರತಿಭೆಗೆ ಹಿಡಿದ ಕನ್ನಡಿಯಾಗಿತ್ತು. ಅನಂತ್ ನಾಗ್, ಮಾಸ್ಟರ್ ಮಂಜುನಾಥ್, ವಿಷ್ಣುವರ್ಧನ್, ಕಾಶಿ, ಮನದೀಪ್ ರಾಯ್, ರಮೇಶ್ ಭಟ್, ಗಿರೀಶ್ ಕಾರ್ನಾಡ್ ಮುಂತಾದ ಕನ್ನಡಿಗರೇ ಹೆಚ್ಚಾಗಿ ನಟಿಸಿದ್ದ, ಇಡೀ ದೇಶವೇ ತಿರುಗಿ ನೋಡುವಂಥ ಮಾಲ್ಗುಡಿ ಡೇಯ್ಸ್ ಅನ್ನೋ ಧಾರಾವಾಹಿಯನ್ನ ಅವರು ನಿರ್ದೇಶಿಸಿದ್ದೇ ಮತ್ತೊಂದು ರೋಚಕ ಘಟ್ಟ. ಕನ್ನಡಿಗ ಕಾದಂಬರಿಕಾರ ಆರ್.ಕೆ ನಾರಾಯಣ್ ಅವರ ಮಾಲ್ಗುಡಿ ಡೇಯ್ಸ್ ಹೆಸರಿನ ಕತೆಗಳನ್ನೇ ಅವರು ಕಿರುತೆರೆಗೆ ಅಳವಡಿಸಿದ್ದು ಇಂದಿಗೂ ದಾಖಲೆ ಬರೆಯುತ್ತಲೇ ಇದೆ. ಇಂದಿಗೂ ಟೆಲಿಕಾಸ್ಟ್ ಆದಾಗಲೆಲ್ಲ ಹೈಯೆಸ್ಟ್ ಟಿಆರ್ಪಿ ಪಡೆಯೋದು ಆ ಧಾರಾವಾಹಿಯ ಹೆಗ್ಗಳಿಕೆಯೇ ಸರಿ.
ಕನಸುಗಾರ-ಹೃದಯವಂತ
ಶಂಕರ್ನಾಗ್ ಅವರು ಕೇವಲ ಮನರಂಜನಾ ಕ್ಷೇತ್ರಕ್ಕಷ್ಟೇ ಸೀಮಿತವಾಗಿರಲಿಲ್ಲ.. ಬಡವರಿಗೆ ಅಗ್ಗದ ಮನೆಯನ್ನ ಹೇಗೆ ನಿರ್ಮಿಸಬಹುದು? ಅನ್ನೋ ಪ್ರಾಜೆಕ್ಟ್ ಮೇಲೆ ಸಾಕಷ್ಟು ಕಾರ್ಯ ಮಾಡಿದ್ದರು. ಜೊತೆಗೆ ನಂದಿ ಬೆಟ್ಟಕ್ಕೆ ರೋಪ್ ವೇ, ಬೆಂಗಳೂರಿಗೆ ಮೆಟ್ರೋ ರೈಲು ತರುವ ಕನಸನ್ನು ಅಂದೇ ಕಂಡಿದ್ದ ಕನಸುಗಾರ ಶಂಕರ್ನಾಗ್.. ಒಂದೆಡೆ ಸ್ಥಳೀಯ ಪ್ರತಿಭೆಗಳಿಗೆ ದೊಡ್ಡ ದೊಡ್ಡ ಕ್ಯಾನ್ವಾಸ್ ಕಲ್ಪಿಸಿಕೊಡುತ್ತಿದ್ದ ಶಂಕರ್ನಾಗ್, ಇನ್ನೊಂದೆಡೆ ಬಡವರ ಬದುಕನ್ನು ಹಸನುಗೊಳಿಸುವುದರ ಕುರಿತು ಕೂಡ ಅಷ್ಟೇ ಗಂಭೀರವಾದ ಯೋಜನೆಗಳನ್ನು ರೂಪಿಸಿದ್ದರು. ಕನ್ನಡಿಗರು ಸಿನಿಮಾ ಕಾರ್ಯಕ್ಕಾಗಿ ಹೊರರಾಜ್ಯಗಳಿಗೆ ಹೋಗಬೇಕಿದ್ದ ಸಂದರ್ಭದಲ್ಲಿ ಬೆಂಗಳೂರಿನಲ್ಲಿಯೇ ಸಂಕೇತ್ ಸ್ಟೂಡಿಯೋ ನಿರ್ಮಿಸಿ ಕನ್ನಡಿಗರ ಅಸ್ಮಿತೆಗೆ ಬಲವೊದಗಿಸಿದ್ದರು.
ಶಂಕರ್-ಪುನೀತ್
ಶಂಕರ್ನಾಗ್ ಹಾಗೂ ಪುನೀತ್ ಇಬ್ಬರೂ ಕೇಲವ ಮನರಂಜನೆಕಾರರು ಆಗಿದ್ದರೆ ಜನ ಮಾನಸದಲ್ಲಿ ಬಹುಶಃ ಇಷ್ಟು ದೊಡ್ಡ ಸ್ಥಾನ ಗಳಿಸುತ್ತಿರಲಿಲ್ಲ ಅನಿಸುತ್ತೆ. ಯಾಕಂದ್ರೆ ಇಬ್ಬರೂ ಯುವಕರು.. ಇಬ್ಬರೂ ಪ್ರತಿಭಾವಂತರು.. ಇಬ್ಬರೂ ಕನಸುಗಾರರು, ಇಬ್ಬರೂ ನೊಂದವರಿಗಾಗಿ ಮಿಡಿಯುವಂಥವರು.. ಇಬ್ಬರೂ ಹೊಸ ಪ್ರತಿಭೆಗಳಿಗೆ ಮಣೆ ಹಾಕುತ್ತಿದ್ದವರು.. ಕೇವಲ ತಾವು ಬೆಳೆಯೋದಲ್ಲ ಇಡೀ ರಾಜ್ಯವನ್ನೇ ಬೆಳಸಬೇಕು.. ಕಲೆಗೆ ಪೋಷಣೆ ಸಿಗಬೇಕು ಅನ್ನೋ ಹವಣಿಕೆ ಇದ್ದವರು. ಆದ್ರೆ.. ದುರದೃಷ್ಟ ಅಂದ್ರೆ ಇದೇ ನೋಡಿ.. ಇಬ್ಬರನ್ನೂ ಕನ್ನಡಿಗರು ಅಕಾಲಿಕವಾಗಿಯೇ ಕಳೆದುಕೊಳ್ಳುವಂತಾಯಿತು. ಇಂದಿಗೆ ಅವರಿಬ್ಬರೂ ಇದ್ದಿದ್ದರೆ.. ಊಹಿಸಿನೋಡಿ.. ಕನ್ನಡ ಚಿತ್ರರಂಗ, ಕನ್ನಡಿಗರ ಸಾಮಾಜಿಕ ಸ್ಥಿತಿ ಯಾವಮಟ್ಟಕ್ಕೆ ಏರಿಕೆ ಆಗ್ತಿತ್ತು ಅಂತ. ಆ ಇಬ್ಬರೂ ಕನಸುಗಾರರ ಕನಸನ್ನ ಈಗ ಅಭಿಮಾನಿಗಳೇ ಇಡೇರಿಸಬೇಕಿದೆ.. ಸ್ಟಾರ್ವಾರ್ಗಿಂತ ಹೆಚ್ಚಾಗಿ ಸ್ಟಾರ್ ಕ್ರಿಯೇಟರ್ಸ್ಗಳ ಅವಶ್ಯಕತೆ ಇಂದು ಹಿಂದೆಂದಿಗಿಂತ ಹೆಚ್ಚು ಅವಶ್ಯಕತೆ ಇದೆ.
ವಿಶೇಷ ಬರಹ: ರಾಘವೇಂದ್ರ ಗುಡಿ, ಡಿಜಿಟಲ್ ಮೀಡಿಯಾ