ಪುನೀತ್ ರಾಜ್ಕುಮಾರ್, ಜೋಗಿ ಪ್ರೇಮ್
ಪುನೀತ್ ರಾಜ್ಕುಮಾರ್ (Puneeth Rajkumar) ಜೊತೆ ‘ರಾಜ್: ದಿ ಶೋ ಮ್ಯಾನ್’ ಸಿನಿಮಾ ಮಾಡಿದ್ದವರು ನಿರ್ದೇಶಕ ಜೋಗಿ ಪ್ರೇಮ್. ಅವರ ಪತ್ನಿ ರಕ್ಷಿತಾ ಪ್ರೇಮ್ (Rachita Ram) ಅವರು ಪುನೀತ್ ಜೊತೆ ‘ಅಪ್ಪು’ ಸಿನಿಮಾದಿಂದಲೇ ಚಿತ್ರರಂಗಕ್ಕೆ ಕಾಲಿಟ್ಟವರು. ಆದರೆ ಈಗ ಈ ದಂಪತಿಯಿಂದಲೇ ಪುನೀತ್ ರಾಜ್ಕುಮಾರ್ಗೆ ಅವಮಾನ ಆಗುವಂತಹ ಘಟನೆ ನಡೆದಿದ್ದು ವಿಪರ್ಯಾಸ. ರಕ್ಷಿತಾ ಪ್ರೇಮ್ ನಿರ್ಮಾಣದ, ಪ್ರೇಮ್ (Jogi Prem) ನಿರ್ದೇಶನದ ‘ಏಕ್ ಲವ್ ಯಾ’ (Ek Love Ya) ಚಿತ್ರದ ಒಂದು ಹಾಡನ್ನು ಶುಕ್ರವಾರ (ನ.12) ಸಂಜೆ ಬೆಂಗಳೂರಿನ ಸ್ಟಾರ್ ಹೋಟೆಲ್ನಲ್ಲಿ ಬಿಡುಗಡೆ ಮಾಡಲಾಯಿತು. ಈ ವೇಳೆ ಪುನೀತ್ ರಾಜ್ಕುಮಾರ್ ಅವರಿಗೆ ನಮನ ಸಲ್ಲಿಸಲು ಇರಿಸಿದ್ದ ಫೋಟೋದ ಎದುರಿನಲ್ಲಿಯೇ ಶಾಂಪೇನ್ (Champagne) ಬಾಟಲ್ ಓಪನ್ ಮಾಡಲಾಯಿತು. ಅದೀಗ ವಿವಾದಕ್ಕೆ ಕಾರಣ ಆಗಿದ್ದು, ಘಟನೆ ಸಂಬಂಧಿಸಿದಂತೆ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ.
‘ಇದು ಇಷ್ಟು ದೊಡ್ಡ ಇಶ್ಯೂ ಆಗುತ್ತೆ ಅಂತ ನನಗೆ ಗೊತ್ತಿರಲಿಲ್ಲ. ನನ್ನಿಂದಾಗಿ ಯಾರಿಗಾದರೂ ನೋವಾಗಿದ್ದರೆ ಖಂಡಿತ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತೇನೆ. ಅಪ್ಪು ಅವರು ಬೆಡ್ ಮೇಲೆ ಮಲಗಿದ್ದಾಗ ನಾನು ಆಸ್ಪತ್ರೆಗೆ ಹೋಗಿದ್ದೆ. ಅವರ ಎರಡೂ ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೆ. ನಮ್ಮ ಅಮ್ಮ ತೀರಿಹೋದಾಗಲೂ ಸಹ ಮೊದಲು ಅವರ ಮುಖ ನೋಡಲಿಲ್ಲ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡು ಅಂತ ಕಾಲು ಹಿಡಿದುಕೊಂಡಿದ್ದೆ. ಈಗಲೂ ನನ್ನಿಂದ ಕಿಂಚಿತ್ತು ತೊಂದರೆ ಆಗಿದ್ದರೂ ಕ್ಷಮಿಸಿ ಅಂತ ಜನರಲ್ಲಿ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ ಪ್ರೇಮ್
‘ಗೊತ್ತಿಲ್ಲದೇ ನಡೆದ ತಪ್ಪನ್ನು ತಿದ್ದಿ ಹೇಳಿದಾಗ ನಮಗೆ ಅರಿವಾಗುತ್ತದೆ. ಗೊತ್ತಿದ್ದೂ ನಾವು ಇಂಥ ತಪ್ಪು ಮಾಡುವುದಿಲ್ಲ. ರಕ್ಷಿತಾಗೂ ಇದು ತಿಳಿಯಲಿಲ್ಲ. ನಾವು ತುಂಬಾ ಪ್ರೀತಿ ಮಾಡುವ ವ್ಯಕ್ತಿ ಅಪ್ಪು. ಅವರ ಇಡೀ ಕುಟುಂಬದ ಜೊತೆ ಒಳ್ಳೆಯ ಆಪ್ತತೆ ಇದೆ. ಅವರಿಂದ ತುಂಬ ಕಲಿತಿದ್ದೇನೆ. ಅವರ ಜೊತೆಯಲ್ಲೇ ಬೆಳೆದುಬಂದವನು ನಾನು. ಇಂದು ನನ್ನಿಂದ ಇಂಥ ತಪ್ಪಾಗುತ್ತೆ ಅಂತ ಗೊತ್ತಿರಲಿಲ್ಲ’ ಎಂದು ಪ್ರೇಮ್ ಹೇಳಿದ್ದಾರೆ.
ರಚಿತಾ ರಾಮ್ ಪ್ರತಿಕ್ರಿಯೆ ಏನು?
ಸೋಶಿಯಲ್ ಮೀಡಿಯಾದಲ್ಲಿ ಈ ಘಟನೆ ಬಗ್ಗೆ ರಚಿತಾ ರಾಮ್ ಸಮಜಾಯಿಷಿ ನೀಡಿದ್ದಾರೆ. ‘ನಿನ್ನೆಯ ಏಕ್ ಲವ್ ಯಾ ಸಿನಿಮಾದ ಸಾಂಗ್ ಲಾಂಚ್ ಕಾರ್ಯಕ್ರಮದಲ್ಲಿ ಶಾಂಪೇನ್ ಬಾಟಲ್ ಓಪನ್ ಮಾಡಿ ಹಾಡನ್ನು ಬಿಡುಗಡೆಗೊಳಿಸಿರುವ ಬಗ್ಗೆ ನಿಮ್ಮೆಲ್ಲರಿಗೆ ಅಸಮಾಧಾನ ಆಗಿದೆ. ಆ ಬಗ್ಗೆ ದಯವಿಟ್ಟು ಕ್ಷಮೆ ಇರಲಿ. ನಾನೂ ಕೂಡ ಚಿತ್ರದ ಭಾಗವಾಗಿರುವುದರಿಂದ ಕ್ಷಮೆ ಕೇಳುತ್ತೇನೆ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ, ಆಲೋಚನೆ ಯಾವ ಕನ್ನಡಿಗರಿಗೂ ಇರುವುದಿಲ್ಲ. ಆದಾಗಿಯೂ ಉದ್ದೇಶಪೂರ್ವಕವಲ್ಲದ ತಪ್ಪನ್ನು ಅಭಿಮಾನಿಗಳು ಮನ್ನಿಸುತ್ತಾರೆಂದು ನಂಬಿದ್ದೇನೆ’ ಎಂದು ರಚಿತಾ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:
ಅಪ್ಪು ಫೋಟೋ ಮುಂದೆ ಶಾಂಪೇನ್; ತಲೆ ತಗ್ಗಿಸುವ ಕೆಲಸ ಮಾಡಿದ ಚಿತ್ರತಂಡ ಕ್ಷಮೆ ಕೇಳ್ಬೇಕು: ಸಾ.ರಾ. ಗೋವಿಂದು