ಬೆಂಗಳೂರು: ಕರ್ನಾಟಕದ ಯುವರತ್ನ ನಟ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ 19 ದಿನಗಳು ಕಳೆದಿವೆ. ಕನ್ನಡ ಚಿತ್ರರಂಗದಿಂದ ಇಂದು ಅಪ್ಪು ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮ ಅರಮನೆ ಮೈದಾನದಲ್ಲಿ ಆರಂಭವಾಗಿದ್ದು, ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಪತ್ನಿ ಮಕ್ಕಳು, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಇಡೀ ಕುಟುಂಬ ಸದಸ್ಯರು ಭಾಗಿಯಾಗಿದ್ದಾರೆ. ಈ ವೇಳೆ ಪ್ರೀತಿಯ ಅಪ್ಪುರನ್ನು ನೆನೆದು ಶಿವಣ್ಣ ಕಣ್ಣೀರಿಟ್ಟಿದ್ದಾರೆ.
ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು, ತೆಲುಗು, ತಮಿಳು ಚಿತ್ರರಂಗದ ಸ್ಟಾರ್ ಕಲಾವಿದರು ಭಾಗಿಯಾಗಿದ್ದಾರೆ. ಆರಂಭದಲ್ಲಿ ಪುನೀತ್ ಅವರ ಕುರಿತಂತೆ ಸಾಕ್ಷಿ ಚಿತ್ರವನ್ನು ಪ್ರಸಾರ ಮಾಡಲಾಗಿತ್ತು. ಈ ವೇಳೆ ಪುನೀತ್ರನ್ನು ನೆನೆದ ಪತ್ನಿ ಅಶ್ವಿನಿ, ಸಹೋದರ ಶಿವರಾಜ್ಕುಮಾರ್ ಬಿಕ್ಕಿ ಬಿಕ್ಕಿ ಕಣ್ಣೀರುಟ್ಟಿದ್ದ ದೃಶ್ಯಗಳು ಅಭಿಮಾನಿಗಳ ಮನಕಲಕುವಂತೆ ಮಾಡಿತ್ತು. ಇನ್ನು ಅಪ್ಪು ಕಿರಿಯ ಪುತ್ರಿ ಅಮ್ಮನ ಹೆಗಲೆ ಮೇಲೆ ತಲೆ ಇಟ್ಟು ದುಖಿಃಸುತ್ತಿದ್ದ ದೃಶ್ಯಗಳು ಕರುಳು ಹಿಂಡುವಂತೆ ಮಾಡಿತ್ತು.
ಪುನೀತ್ ನಮನ ಸಲ್ಲಿಸಲು ಸಾಕ್ಷಿ ಚಿತ್ರ ಪ್ರದರ್ಶನದ ನಂತರ ದೀಪ ಬೆಳಗಿಸಿ, ವಿಶೇಷ ಗೀತೆಯ ಮೂಲಕ ಗೌರವ ಸಲ್ಲಿಕೆ ಮಾಡಲಾಯಿತು. ನಾಗೇಂದ್ರ ಪ್ರಸಾದ್ ಬರೆದ ಸಾಹಿತ್ಯದ ನಮನ ಗೀತೆ ಕೇಳುಗರ ಮನದಲ್ಲಿ ಅಪ್ಪುರ ಸಾವಿರ ಸಾವಿರ ನೆನಪುಗಳನ್ನು ಮೂಡುವಂತೆ ಮಾಡಿತ್ತು. ಇನ್ನು ಕಾರ್ಯಕ್ರಮದ ಆರಂಭವಾಗುತ್ತಿದಂತೆ ಮೊದಲಿಗೆ ಶ್ರೀದರ್ ಸಾಗರ್ ರಿಂದ ಸ್ಯಾಕ್ಸಫೋನ್ ವಾದ್ಯಗೋಷ್ಠಿ.. ನಂತರ ಶಕ್ತಿಧಾಮ ಮಕ್ಕಳಿಂದ ಗೀತ ನಮನ.. ನಂತರ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ಹೇಮಂತ್, ಶಮಿತಾ ಮಲ್ನಾಡ್ ಸಂಗಡಿಗರ ಗಾಯನ ಏರ್ಪಡಿಸಲಾಗಿದೆ.