ಕರುನಾಡ ಮನೆ ಮಗ ಅಪ್ಪು ಅಗಲಿದ ನಂತರವೂ ಜೀವಂತ ಅನ್ನೋ ಸತ್ಯ ಶಾಶ್ವತ. ಕಣ್ಣುಗಳನ್ನ ದಾನ ಮಾಡೋ ಮೂಲಕ ಪುನೀತ್ ಸಾರ್ಥಕತೆ ಮೆರೆದ್ರು. ನಾಲ್ಕು ಜನ್ರ ಬದುಕಿಗೆ ಬೆಳಕಾಗಿದ್ದ ಅಪ್ಪು ಕಣ್ಣುಗಳು ಈಗ ಇನ್ನೂ ಹಲವರ ಕತ್ತಲು ನೀಗಿಸಲಿವೆ.
ಡಾ. ರಾಜ್ಕುಮಾರ್ ಕಣ್ಣು ದಾನದ ಬಳಿಕ ದೊಡ್ಮನೆ ಕುಟುಂಬದ ಮತ್ತೊಂದು ಯುವರತ್ನ ಪುನೀತ್ ಕೂಡ ನೇತ್ರದಾನದ ಮೂಲಕ ಈಗಾಗಲೇ ನಾಲ್ವರ ಬಾಳಿಗೆ ಬೆಳಕಾಗಿದ್ದಾನೆ. ಇದೀಗ ಮತ್ತೆ ಪುನೀತ್ ಕಣ್ಣಿನ ಇನ್ನುಳಿದ ಭಾಗಗಳ ಮೂಲಕ ಮತ್ತೆ 10 ಜನರಿಗೆ ದೃಷ್ಠಿ ನೀಡೋದಕ್ಕೆ ವೈದ್ಯ ಲೋಕ ಹೆಜ್ಜೆ ಇಟ್ಟಿದೆ.
ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗಾತ್ಮಕ ಸಾಹಸಕ್ಕೆ ಕೈ ಹಾಕಿರೋ ಬೆಂಗಳೂರಿನ ನಾರಾಯಣ ನೇತ್ರಾಲಯ ಸಕಲ ಸಿದ್ಧತೆಯಲ್ಲಿ ತೊಡಗಿದೆ. 10 ಜನರಿಗೆ ದೃಷ್ಠಿ ನೀಡೋದಕ್ಕೆ ಆರಪೇಷನ್ಗೆ ಅಣಿಯಾಗಿದೆ. ಈಗಾಗಲೇ ಕಣ್ಣಿನ ಕಾರ್ನಿಯಾದಿಂದ 4 ಜನರಿಗೆ ದೃಷ್ಠಿಯಾಗಿರೋ ಪುನೀತ್ ಕಣ್ಣುಗಳ ಸ್ಟೆಮ್ ಸೆಲ್ಸ್ ಬಳಸಿ ಮತ್ತೆ 10 ಜನರ ದೃಷ್ಠಿಗೆ ನೆರವಾಗೋ ಸಾಹಸಕ್ಕೆ ನಾರಾಯಣ ನೇತ್ರಾಲಯ ಮುಂದಾಗಿದೆ. ಕಣ್ಣಿಗೆ ಸುಣ್ಣ, ಆ್ಯಸಿಡ್ ಬಿದ್ದು ದೃಷ್ಠಿ ಕಳೆದುಕೊಂಡವರಿಗೆ ಸ್ಟೆಮ್ ಸೆಲ್ಸ್ನಿಂದ ದೃಷ್ಠಿ ನೀಡೋ ಬಗ್ಗೆ ವೈದ್ಯ ತಂಡ ಸಜ್ಜಾಗಿದೆ.
ಇದನ್ನೂ ಓದಿ: ಅಪ್ಪು ಕಂಡ ಕನಸು ಅವರ ಜೊತೆ ಕನಸಾಗಿಯೇ ಹೋಯ್ತು.. ಪುನೀತ್ ದೂರದೃಷ್ಟಿ ಎಷ್ಟರ ಮಟ್ಟಿಗಿತ್ತು ಗೊತ್ತಾ?
ಸಾವಿನಲ್ಲೂ ಸಾರ್ಥ್ಯಕತೆ ಮೆರೆದ ನಟ ಪುನೀತ್ ನಿಜಕ್ಕೂ ಕರುನಾಡಿನ ಮಗ ಅನ್ನಿಸಿಕೊಂಡಿದ್ದಾರೆ. ಪುನೀತ್ ನೇತ್ರದಾನದಿಂದ ಪ್ರೇರೇಪಿತಗೊಂಡ ಎಷ್ಟೋ ಜನ್ರು ನೇತ್ರದಾನ ಮಾಡುತ್ತಿದ್ದಾರೆ. ಪುನೀತ್ ಅಸುನೀಗಿದ ಅಕ್ಟೋಬರ್ 29ರ ನಂತರದಿಂದ ಇಲ್ಲಿವರೆಗೆ 6 ಸಾವಿರದಷ್ಟು ಜನ್ರು ನೇತ್ರದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ 78 ಜನ್ರು ನೇತ್ರದಾನ ಮಾಡಿದ್ದಾರೆ. ಇದು ದಾಖಲೆ ಪ್ರಮಾಣದ ಬೆಳವಣಿಗೆ ಅಂತ ನೇತ್ರ ತಜ್ಞ ಡಾ.ಯತೀಶ್ ಹೇಳಿದ್ದಾರೆ.
ಒಟ್ಟಿನಲ್ಲಿ ಸಿನಿಮಾಗಳಾಚೆಗೂ ಸಾಮಾಜಿಕ ಕಾರ್ಯಗಳ ಮೂಲಕ ಜನರೊಂದಿಗೆ ಬೆರೆತ ಅಪ್ಪು ಸಾವಿನ ನಂತರವೂ ನಮ್ಮನ್ನೆಲ್ಲ ನೋಡಲಿದ್ದಾರೆ ಅನ್ನೋ ವಾಸ್ತವವೇ ರೋಮಾಂಚಕ.