ಶಿವಮೊಗ್ಗ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹಿನ್ನೆಲೆ ಅರಣ್ಯ ಇಲಾಖೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಕೆ ಮಾಡಿದೆ. ಸಕ್ರೆಬೈಲು ಮರಿಯಾನೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಪುನೀತ್ ಅವರ ಹೆಸರನ್ನೇ ಇಟ್ಟಿದ್ದಾರೆ.
ಶಿವಮೊಗ್ಗದ ಗಾಜನೂರು ಸಮೀಪದ ಸಕ್ರೆಬೈಲು ಆನೆ ಬಿಡಾರದ ನೇತ್ರಾ ಆನೆ ಕಳೆದ ಎರಡು ವರ್ಷದ ಹಿಂದೆ ಗಂಡು ಮರಿಯಾನೆ ಜನ್ಮ ನೀಡಿತ್ತು. ಪುನೀತ್ ರಾಜ್ಕುಮಾರ್ ಅವರು ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ವನ್ಯಜೀವಿ ಸಂಬಂಧಿತ ಸಾಕ್ಷ್ಯಚಿತ್ರದ ಚಿತ್ರೀಕರಣಕ್ಕೆ ಸಕ್ರೆಬೈಲಿಗೆ ಪುನೀತ್ ರಾಜ್ಕುಮಾರ್ ಆಗಮಿಸಿದ್ದರು. ಕೆಲ ತಿಂಗಳ ಹಿಂದೆಯಷ್ಟೇ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿ ಮರಿಯಾನೆಯನ್ನು ಕಂಡು ಪ್ರೀತಿಯಿಂದ ಮುದ್ದಾಡಿದ್ದರು.
ಸದ್ಯ ನೇತ್ರಾ ತಾಯಿ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಬಿಡಾರದ ಸಿಬ್ಬಂದಿ ಮಾಡುತ್ತಿದ್ದು, ಇದನ್ನು ವೀನಿಂಗ್ ಪ್ರಕ್ರಿಯೆ ಎಂದು ಕರೆಯುತ್ತಾರೆ. ಈ ವೇಳೆ ಮರಿಯಾನೆಗೆ ಹೆಸರು ಇಡೋ ಸಾಂಪ್ರದಾಯವಿದೆ.. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ಆನೆಗೆ ಹೆಸರು ಸೂಚಿಸಲು ತಿಳಿಸಿದ್ದರು. ಒಂದು ವಾರದಿಂದ ಪ್ರಚಾರ ನಡೆಸಿದ ಬಳಿಕ ಎಲ್ಲರೂ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ಇಡುವಂತೆ ಸಲಹೆ ನೀಡಿದ್ದರು. ಏಕೆಂದರೆ ಕಳೆದ ತಿಂಗಳು ಕ್ಯಾಪ್ಗೆ ಪುನೀತ್ ಅವರು ಬಂದಿದ್ದರು. ಆಗ ಅವರನ್ನು ನೋಡಲು 10-15 ಸಾವಿರ ಸಾರ್ವಜನಿಕರು ಆಗಮಿಸಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ. ಆದ್ದರಿಂದ ಅವರ ನೆನಪಿಗಾಗಿ ಪುನೀತ್ ರಾಜ್ಕುಮಾರ್ ಹೆಸರನ್ನೇ ಇಟ್ಟು, ಸಿಹಿ ಹಂಚಿಕೆ ಮಾಡಿದ್ದೇವೆ ಎಂದು ಸಕ್ರೆಬೈಲು ಬಿಡಾರದ ಅಧಿಕಾರಿ ತಿಳಿಸಿದ್ದಾರೆ.
ನೇತ್ರಾಳಿಂದ ಬೇರ್ಪಟ್ಟ ಅಪ್ಪು ಮರಿಯಾನೆ ಮಾವುತರ ಹಿಡಿತಕ್ಕೆ ಸಿಲುಕಲು ತುಂಬಾ ಸತಾಯಿಸಿತು. ಅಂತಿಮವಾಗಿ ಕಾಲು ಮತ್ತು ಕುತ್ತಿಗೆಗೆ ಸೆಣಬಿನ ಹಗ್ಗದಿಂದ ಬಿಗಿದು, ಕ್ರಾಲ್ ನಿಂದ ಸೆಕ್ರೆಬೈಲು ಬಿಡಾರಕ್ಕೆ ಕರೆತರಲಾಯಿತು. ಯಶಸ್ವಿಯಾದ ವೀನಿಂಗ್ ಗೆ ವೈಲ್ಡ್ ಟಸ್ಟರ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಶ್ರೀಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಡಾರದಲ್ಲಿ ಹಬ್ಬದ ವಾತಾವರಣ
ತಾಯಿ ಮರಿಯನ್ನು ಬೇರ್ಪಡಿಸುವುದು ದುಃಖದ ವಿಷಯವಾದರೂ ಬಿಡಾರದ ಸಿಬ್ಬಂದಿಗಳ ಪಾಲಿಗೆ ಅದು ಹಬ್ಬದ ದಿನ. ತಾಯಿ ಆನೆಯಿಂದ ಮತ್ತು ಮರಿಯಾನೆಯನ್ನು ಬೇರ್ಪಡಿಸುವಾಗ ಬಿಡಾರದ ಆನೆಗಳ ಸಹಾಯ ಅತಿಮುಖ್ಯ. ಮಾವುತ- ಕಾವಾಡಿಗಳ ಜಾಣ್ಮೆ ಸೂಕ್ಷ್ಮ ಪ್ರಜ್ಞೆ ಸಹ ಅಷ್ಟೆ ಪ್ರಮುಖ ಪಾತ್ರವಹಿಸುತ್ತದೆ. ಈಗ ನೇತ್ರಾಳಿಂದ ಬೇರ್ಪಟ್ಟ ಅಪ್ಪು ಮರಿಯಾನೆ ಒಂದು ರೀತಿಯಲ್ಲಿ ಪುನೀತ್ ಗೆ ಮರುಜನ್ಮ ನೀಡಿದೆ. ಸಕ್ರೆಬೈಲಿಗೆ ಬರುವ ಪ್ರವಾಸಿಗರಿಗೆ ಇನ್ನು ಅಪ್ಪು ಮರಿಯಾನೆ ತನ್ನ ತುಂಟಾಟ ಚೆಲ್ಲಾಟದಲ್ಲಿಯೇ ಎಲ್ಲರ ಗಮನ ಸೆಳೆಯಲಿದೆ.