ಅಭಿಮಾನಿ ದೇವರುಗಳ ಆರಾಧ್ಯ ದೈವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ. ಪುನೀತ್ ಸಮಾಧಿ ದರ್ಶನ ಪಡೆಯಲು ಜನಸಾಗರವೇ ಹರಿದಿ ಬರ್ತಿದ್ದು, ಅಪ್ಪು ಅಜರಾಮರ ಎಂದು ಸಾರಿ ಹೇಳ್ತಿದ್ದಾರೆ. ದೊಡ್ಮನೆ ಕುಟುಂಬಸ್ಥರು ಇಂದು ಅಪ್ಪು 11 ನೇ ದಿನದ ಪುಣ್ಯಸ್ಮರಣೆ ಕಾರ್ಯವನ್ನ ನಡೆಸಿದ್ದಾರೆ.
ಇಂದು ಅಪ್ಪು ಸಮಾಧಿ ದರ್ಶನಕ್ಕೆ ಬೆಟ್ಟದ ಹೂ ಚಿತ್ರದಲ್ಲಿ ನಟಿಸಿದ ಹಿರಿಯ ನಟಿ ರೂಪಾ ದೇವಿ ಆಗಮಿಸಿದ್ದರು. ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅವರು ಈ ವೇಳೆ ಭಾವುಕರಾಗಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಪ್ಪು ಅಗಲಿಕೆಯನ್ನ ನಂಬಲು ಸಾಧ್ಯವಾಗುತ್ತಿಲ್ಲ. ರಾಜ್ ಫ್ಯಾಮಿಲಿ ಜೊತೆ ಆತ್ಮೀಯ ಒಡನಾಟ ಹೊಂದಿದ್ದ ನಾನು ಅಪ್ಪುವನ್ನು ಬಾಲ್ಯದಿಂದಲೇ ನೋಡಿದ್ದೇನೆ. ಅವರು ಎಲ್ಲರ ಜೊತೆ ಎಷ್ಟು ಚೆನ್ನಾಗಿ ಬಾಂಧವ್ಯ ಹೊಂದಿದ್ದರು ದೇವರು ಯಾಕೆ ಅವರನ್ನು ಕರೆದುಕೊಂಡ ಹೋದ ಗೊತ್ತಾಗ್ತಿಲ್ಲ ಎಂದಿದ್ದಾರೆ.
ಇನ್ನು ರೂಪಾದೇವಿ ಅವರು ಅಪ್ಪು ಬಾಲನಟನಾಗಿ ಅಭಿನಯಿಸಿದ್ದ ಬೆಟ್ಟದ ಹೂ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅವರು ಗ್ರಾಮದ ಓರ್ವ ಆರೋಗ್ಯ ಸಿಬ್ಬಂದಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಜೊತೆಗೆ ಯಾರಿವನು ಚಿತ್ರದಲ್ಲಿ ಕೂಡ ಅಪ್ಪುಗೆ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.