ತಮ್ಮ ಮುದ್ದಿನ ತಮ್ಮನನ್ನ ಕಳೆದುಕೊಂಡ ನೋವಿನಲ್ಲಿಯೂ ಶಿವಣ್ಣ, ಭಜರಂಗಿ-2 ಸಿನಿಮಾದ ಪ್ರಚಾರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮಿಂದ ನಿರ್ಮಾಪಕರಿಗೆ ಲಾಸ್ ಆಗಬಾರದು ಅನ್ನೋ ಕಾರಣಕ್ಕೆ ಥಿಯೇಟರ್ ಅಂಗಳಕ್ಕೆ ಶಿವಣ್ಣ ಧುಮುಕಿದ್ದಾರೆ.
ಶೋ ಮಸ್ಟ್ ಗೋ ಆನ್..ಇದು ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ನೇರ ಮಾತು. ಸೆಂಚುರಿ ಸ್ಟಾರ್ ಮತ್ತೊಮ್ಮೆ ಅಭಿಮಾನಿಗಳ ಜೊತೆ ಭಜರಂಗಿ-2 ಸಿನಿಮಾ ವೀಕ್ಷಿಸಿ, ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವನ್ನು ನುಂಗಿ, ಭಜರಂಗಿ-2 ಸಿನಿಮಾ ಪ್ರಚಾರಕ್ಕೆ ಶಿವಣ್ಣ ಆಗಮಿಸಿದ್ದಾರೆ. ಥಿಯೇಟರ್ ಅಂಗಳದಲ್ಲಿ ಅಪ್ಪು ಭಾವಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಸಿನಿಮಾ ಪ್ರದರ್ಶನ ಪ್ರಾರಂಭಿಸಲಾಯ್ತು.
ದೊಡ್ಡ ದೊಡ್ಡ ಸವಾಲುಗಳನ್ನ ಎದುರಿಸಿ ಥಿಯೇಟರ್ಗೆ ಲಗ್ಗೆ ಇಟ್ಟಿರೋ ಸಿನಿಮಾ ಭಜರಂಗಿ-2. ಆದ್ರೆ, ಥಿಯೇಟರ್ಗೆ ಬಂದ ಭಜರಂಗಿ-2 ಚಿತ್ರಕ್ಕೆ ಮೊದಲ ದಿನವೇ ಆಘಾತ ಕಾದಿತ್ತು. ಪುನೀತ್ ನಿಧನದ ಸುದ್ದಿ ಕೇಳಿ ಇಡೀ ಚಿತ್ರರಂಗ ಸ್ತಬ್ದವಾಗಿತ್ತು. ಏನೇ ಆದ್ರೂ, ಶೋ ಮಸ್ಟ್ ಗೋ ಆನ್ ಅಂತ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಇವತ್ತು ಅಭಿಮಾನಿಗಳ ಜೊತೆ ಸಿನಿಮಾ ನೋಡಿ, ಚಿತ್ರತಂಡಕ್ಕೆ ಸಾಥ್ ನೀಡಿದ್ರು. ನಿರ್ದೇಶಕ ಎ. ಹರ್ಷ ಸೇರಿದಂತೆ ಸಹ ಕಲಾವಿದರು ಶಿವಣ್ಣನ ಜೊತೆ ಕೆಜಿ ರಸ್ತೆಯ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ರು.
ಇನ್ನು, ಪುನೀತ್ ಅಂತ್ಯಕ್ರಿಯೆ ಬೆನ್ನಲ್ಲೇ ಸಿನಿಮಾ ಪ್ರದರ್ಶನ ಶುರುವಾದ್ರೂ, ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ, ನಿಧಾನವಾಗಿ ಥಿಯೇಟರ್ಗಳಲ್ಲಿ ಎರಡನೇ ಭಜರಂಗಿ ಹವಾ ಹೆಚ್ಚಾಗ್ತಿದೆ. ಸಿನಿಮಾ ಕಥೆ ಮುಗ್ದೇ ಹೋಯ್ತು ಅಂದುಕೊಂಡಿದ್ದ ಸಮಯದಲ್ಲಿ ಶಿವಣ್ಣ ಚಿತ್ರತಂಡಕ್ಕೆ ಆಸರೆಯಾಗಿದ್ದಾರೆ.
ಇದನ್ನೂ ಓದಿ: ಸೋನು ಸೂದ್ಗೆ ಪದ್ಮಶ್ರೀ ನೀಡದಿದ್ದಕ್ಕೆ ಫ್ಯಾನ್ಸ್ ಬೇಸರ; ‘ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ’ ಎಂದ ನಟ
ಭಜರಂಗಿ-2 ಸಿನಿಮಾವನ್ನು ಜಯಣ್ಣ, ಭೋಗೇಂದ್ರ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ನಟಿ ಭಾವನಾ, ಶೃತಿ, ಭಜರಂಗಿ ಲೋಕಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಪ್ರೇಕ್ಷಕರು, ವಿಮರ್ಶಕರಿಂದಲೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಸಿನಿಮಾ ಸಕತ್ ಸೌಂಡ್ ಮಾಡ್ತಿದೆ. ಸಹೋದರನ ಅಗಲಿಕೆಯ ನೋವಿನಲ್ಲಿದ್ದ ಶಿವಣ್ಣ, ಇಷ್ಟು ದಿನ ಸಿನಿಮಾ ಪ್ರಚಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ ಭಜರಂಗಿ-2 ಚಿತ್ರತಂಡಕ್ಕೆ ಚೈತನ್ಯ ಬಂದಂತಾಗಿದೆ.