ಬೆಂಗಳೂರು: ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ. ಇದೇ ವೇಳೆ ಅಪ್ಪು ಸಾವಿನ ಕುರಿತು ತನಿಖೆ ನಡೆಸಬೇಕು ಎಂಬ ಅಭಿಮಾನಿಗಳ ಒತ್ತಾಯದ ಬಗ್ಗೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ನಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಭಾವನೆ ನಮ್ಮಲ್ಲಿ ಇದೆ. ಇಡೀ ಕರ್ನಾಟಕ, ನಾವು ಅವರೊಂದಿಗೆ ಇದ್ದೇವೆ ಅಂತ ಹೇಳಿದ್ದು, ಮುಂಬರುವ ಕಾರ್ಯಕ್ರಮಗಳಲ್ಲಿ ಅವರ ಕುಟುಂಬಸ್ಥರಿಗೆ ಸಿಗಬೇಕಾದ ಸಹಕಾರ ಸರ್ಕಾರದಿಂದ ಸಿಗಲಿದೆ ಎಂದು ಕುಟುಂಬಸ್ಥರಿಗೆ ಹೇಳಿದ್ದೇವೆ. ಫಿಲ್ಮ್ ಚೇಂಬರ್ ಅವರು ಇದೇ ತಿಂಗಳ 16 ರಂದು ಒಂದು ಕಾರ್ಯಕ್ರಮ ಮಾಡುತ್ತಿದ್ದಾರೆ. ನಾಳೆ ಈ ಬಗ್ಗೆ ಒಂದು ಸಭೆಯನ್ನು ಮಾಡುತ್ತಿದ್ದಾರೆ. ಸಭೆ ನಂತರ ಅವರಿಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ಅವರಿಗೆ ಸರ್ಕಾರದ ವತಿಯಿಂದ ಬೇಕಾದ ಭದ್ರತೆ ಸೇರಿದಂತೆ ಇತರೇ ಸೌಲಭ್ಯ ನೀಡುತ್ತೇವೆ. ಸರ್ಕಾರ ನಡೆಸಿಕೊಟ್ಟ ಕಾರ್ಯಕ್ರಮಗಳ ಬಗ್ಗೆಯೂ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ. ಅದಕ್ಕೆ ನಮ್ಮ ಕರ್ತವ್ಯ, ಪ್ರೀತಿ ವಿಶ್ವಾಸದಿಂದ ಎಲ್ಲಾ ಕೆಲಸ ಮಾಡಿದ್ದೇವೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಸಾವಿನ ಬಗ್ಗೆ ತನಿಖೆ ನಡೆಯುತ್ತಾ..?
ಈ ಬಗ್ಗೆ ತನಿಖೆ ಮಾಡೋದು, ಬಿಡೋದು ನಿರ್ಧಾರ ಮಾಡೋದು ಅವರ ಕುಟುಂಬ ಸದಸ್ಯರಿಗೆ ಬಿಟ್ಟಿದ್ದು, ಈಗ ಅವರ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಆ ವಿಚಾರದ ಬಗ್ಗೆ ಹೆಚ್ಚು ಚರ್ಚೆ ನಡೆಸಿಲ್ಲ ಅನ್ನಿಸುತ್ತಿದೆ. ಈ ಬಗ್ಗೆ 16ನೇ ತಾರೀಖಿನ ನಂತರ ಅವರೊಂದಿಗೆ ಚರ್ಚೆ ಮಾಡಿ, ತೀರ್ಮಾನ ಮಾಡುತ್ತೇವೆ.
ಅಪ್ಪು ಅವರ ವಿಚಾರದಲ್ಲಿ ಎಲ್ಲರಿಗೂ ಸರ್ವ ಸಮ್ಮತವಾದ ವ್ಯಕ್ತಿತ್ವ ಹೊಂದಿದ್ದರು. ಆದ್ದರಿಂದ ಯಾವುದೇ ನಿರ್ಣಯ ತೆಗೆದುಕೊಂಡರು ಕೂಡ ಸರ್ವ ಸಮ್ಮತವಾಗಿರುತ್ತದೆ. ಜನರ ಹಾಗೂ ಪುನೀತ್ ಅವರ ಅಭಿಮಾನಿಗಳು ಆಶಯದಂತೆಯೇ ಇರುತ್ತದೆ ಸ್ಪಷ್ಟಪಡಿಸಿದರು.