ಹಾವೇರಿ: ಪುನೀತ್ಗೆ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಸಚಿವ ಆನಂದ್ಸಿಂಗ್ ಸಹ ಪ್ರತಿಕ್ರಿಯಿಸಿದ್ದು, ಅಪ್ಪುಗೆ ಪದ್ಮಶ್ರೀ ನೀಡೋದಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ನಟ ಪುನೀತ್ 2000 ಇಸವಿಯಿಂದಲೂ ನನಗೆ ಪರಿಚಯ, ಆಗ ಪೊಲೀಯೋ ಜಾಹೀರಾತಿನಲ್ಲಿ ಸಮಾಜ ಸೇವಕರಾಗಿ ಗುರ್ತಿಸಿಕೊಂಡಿದ್ರು ಎಂದ ಆನಂದ್ಸಿಂಗ್, ಆಗ ನಾನು ಯಾವ ಶಾಸಕನೂ ಆಗಿರಲಿಲ್ಲ, ಸಚಿವನೂ ಆಗಿರಲಿಲ್ಲ ಆದ್ರೂ ಪೊಲೀಯೋ ವಿಚಾರವಾಗಿ ಕೆಲಸ ಮಾಡಿಕೊಟ್ಟಿದ್ರು ಎಂದರು. ಇನ್ನು ಅಪ್ಪು ಅವರು ಸಿನಿಮಾ ಜೊತೆಗೆ ಸಾಮಾಜಿಕ ಸೇವೆಗಳಲ್ಲೂ ತೊಡಗಿಸಿಕೊಂಡಿದ್ರು. ಆದರಿಂದ ಅವರಿಗೆ ಪದ್ಮಶ್ರೀ ಕೊಡುವುದರಲ್ಲಿ ತಪ್ಪಿಲ್ಲ ಎಂದಿದ್ದಾರೆ. ಅಲ್ಲದೇ ಅವರ ಸಮಾಜಸೇವೆ ನೋಡಿದ್ರೆ ನನಗೆ ನಾಚಿಕೆಯಾಗಬೇಕು ಅವರಿಗೆ ಪದ್ಮಶ್ರೀ ಕೊಡುವುದಕ್ಕೆ ನಾನು ಬೆಂಬಲ ಕೊಡ್ತೀನಿ ಎಂದಿದ್ದಾರೆ.