ಮೈಸೂರು: ಸಿಎಂ ಹುದ್ದೆ ಅನ್ನೋದು ಮೈಸೂರಿನ ದಸರಾ ಸಂದರ್ಭದಲ್ಲಿ ಅಂಬಾರಿ ಹೊರುವ ಆನೆ ಇದ್ದಂತೆ. ಅಲ್ಲಿ ತಾಯಿ ಚಾಮುಂಡಿ ಇರ್ತಾಳೆ, ಅದಕ್ಕೆ ಅದರದ್ದೇ ಆದ ಗೌರವ ಇರುತ್ತದೆ. ಅದಕ್ಕಾಗಿ ಸಿಎಂ ಆದವರು ಸಂವೇದನಾ ಶೀಲ, ಆಲೋಚನೆಯುಳ್ಳ ವ್ಯಕ್ತಿಯಾಗಿರಬೇಕು ಅಂತಾ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ಮತ್ತು ಕಾಂಗ್ರೆಸ್​ನಲ್ಲಿನ ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಯೋಗೇಶ್ವರ್.. ಅಂಬಾರಿ ಹೊರುವ ಆನೆಗೆ ಬರೀ ತೂಕ ಇದ್ದರೆ ಸಾಲದು. ಸಿಎಂ ಹುದ್ದೆ ವೈಭವ, ಪ್ರೆಸ್ಟೀಜ್‌ಗೆ ಅಲ್ಲ. ರಾಜ್ಯದ ಜನರ ಆಶೋತ್ತರಗಳನ್ನ ಈಡೇರಿಸುವಂತಿರಬೇಕು. ಬದಲಾವಣೆ ಜಗದ ನಿಯಮ.. ಅರ್ಜುನ ಅಂಬಾರಿ ಹೊತ್ತ, ಅಭಿಮನ್ಯು ಒಂದಷ್ಟು ವರ್ಷ ಹೊತ್ತ, ಬಲರಾಮ ಕೂಡ ಅಂಬಾರಿ ಹೊತ್ತ. ಅಪ್ಪ ಹೊತ್ತ ಅಂತ ಮರಿ ಆನೆಗೆ ಅಂಬಾರಿ ಹೊರಿಸೋಕೆ‌ ಆಗಲ್ಲ ಎಂದರು.

ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳೋದು..
ಸಿದ್ದರಾಮಯ್ಯ ಪದೇ ಪದೇ 25 ಪರ್ಸೆಂಟ್ ಸರ್ಕಾರ ಅಂತಾರೆ. ವೈಯಕ್ತಿಕವಾಗಿ ವಿಚಾರ ಇದ್ರೆ ರುಜುವಾತು ಮಾಡಬೇಕು. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನೆಲ್ಲ ಒಟ್ಟೊಟ್ಟಿಗೆ ಸೇರಿಸಿ ಹೇಳಬಾರದು. ವಿಜಯೇಂದ್ರಗೆ ಸರ್ಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ‌ಇಲ್ಲ. ನಮಗಾಗುವ ಚಿತ್ರಹಿಂಸೆ ಯಾರಿಗೆ ಹೇಳೋದು ಎಂದು ಬೇಸರ ವ್ಯಕ್ತಪಡಿಸಿದರು.

ನಮ್ಮ ಸರ್ಕಾರ ನಮ್ಮದೇ ಆದರೂ ನಮ್ಮ ಸರ್ಕಾರ ಇದೆ ಎಂಬ ಭಾವನೆ ನಮಗಿಲ್ಲ. ನಮ್ಮ ಸರ್ಕಾರದಲ್ಲಿ ವಿಪಕ್ಷದವರ ಕೈ ಮೇಲಾಗ್ತಿದೆ. ಜಿಪಂ, ತಾಪಂ ಮೀಸಲಾತಿ ಸರ್ಕಾರ ಮಾಡಬೇಕು. ಆದರೆ ಕುಮಾರಸ್ವಾಮಿ ಹೇಳಿದಂತೆ ಮೀಸಲಾತಿ ಮಾಡಿದ್ದಾರೆ. ಅನುಕೂಲ‌ ಬಂದಂತೆ ಮೀಸಲಾತಿ ಹಂಚಿಕೆ‌ ಮಾಡಿದ್ದಾರೆ. ಇಲ್ಲಿ ಸಾಮಾಜಿಕ ನ್ಯಾಯ ಆಗ್ತಿಲ್ಲ ಎಂದು ಸಿ.ಪಿ.ಯೋಗೇಶ್ವರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
ಶ್ರೀರಾಮುಲು ಪಿಎ ವಿರುದ್ಧ ದೂರು ವಿಚಾರಕ್ಕೆ ಪ್ರತಿಕ್ರಿಯಿಸಿ.. ಅಂಗೈ ಗುಣ್ಣಿಗೆ ಕನ್ನಡಿಯಾಕೆ? ಕರೆದು ಹೇಳಬಹುದಿತ್ತು. ದೂರು ಕೊಡುವಂತಹ ಯಾವುದೇ ಅಗತ್ಯ ಇರಲಿಲ್ಲ. ಶಾಸಕ ರಮೇಶ್ ಜಾರಕಿಹೊಳಿ ಷಡ್ಯಂತ್ರಕ್ಕೆ ಬಲಿ ಆಗಿರೋದು ನಿಜ‌. ಆದರೂ ಅವರಿಗೆ ನ್ಯಾಯ ಕೊಡಿಸುವಲ್ಲಿ ದುರುದ್ದೇಶದಿಂದ ವಿಳಂಬ ಆಗುತ್ತಿದೆ ಎಂದು ಆರೋಪಿಸಿದರು.

The post ಅಪ್ಪ ಅಂಬಾರಿ ಹೊತ್ತ ಅಂತಾ ಮರಿ ಆನೆಗೆ ಅಂಬಾರಿ ಹೊರಿಸೋಕೆ ಆಗಲ್ಲ -ಸಿ.ಪಿ. ಯೋಗೇಶ್ವರ್ appeared first on News First Kannada.

Source: newsfirstlive.com

Source link