ಅಭಿಮಾನಿಗಳಿಗೆ ಊಟ ಮಾಡಿಸುವುದು ಅಪ್ಪುನ ಆಸೆಯಾಗಿತ್ತು, ಅವನಾಸೆಯಂತೆ ಊಟದ ಏರ್ಪಾಟು ಮಾಡಲಾಗಿದೆ: ರಾಘವೇಂದ್ರ ರಾಜಕುಮಾರ್ | It was Appu’s desire to arrange food for his fans, hence Anna Santharpane programme arranged: Raghanna


ಪುನೀತ್ ರಾಜಕುಮಾರ ನಮ್ಮನ್ನಗಲಿ 12 ದಿನಗಳು ಕಳೆದಿವೆ. ಹನ್ನೆರಡನೇ ದಿನವಾಗಿದ್ದ ಮಂಗಳವಾರ ಡಾ ರಾಜ್ ಕುಟುಂಬ ಬೆಂಗಳೂರು ಅರಮನೆ ಮೈದಾನದಲ್ಲಿ ಅಪ್ಪು ಅವರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಿತ್ತು. ಅಪ್ಪು ಅವರ ಸಾವಿರಾರು ಅಭಿಮಾನಿಗಳು ಇದರಲ್ಲಿ ಪಾಲ್ಗೊಂಡರು. ದೊಡ್ಮನೆ ಕುಟುಂಬದ ಸದಸ್ಯರೆಲ್ಲ ಅಭಿಮಾನಿಗಳಿಗೆ ಪ್ರೀತಿಯಿಂದ ಊಟ ಬಡಿಸಿದರು. ರಾಜ್ಯದ ಎಲ್ಲ ಮೂಲೆಗಳಿಂದ ಅಪ್ಪು ಆಭಿಮಾನಿಗಳು ಆಗಮಿಸಿದ್ದರು. ಎಲ್ಲರೂ ಭಾರದ ಹೃದಯದಿಂದ ಆಗಮಿಸಿ ಭಾರದ ಹೃದಯದಿಂದಲೇ ತೆರಳಿದರು. ಅಪ್ಪು ತಮ್ಮೊಂದಿಗೆ ಇಲ್ಲವೆನ್ನುವ ಅಂಶವನ್ನು ಅಭಿಮಾನಿಗಳಿಗೆ ಜೀರ್ಣಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಬಂದವರಲ್ಲಿ ಅನೇಕರು ಊಟ ಮಾಡುವ ಧಾವಂತ ತೋರದೆ, ಬಡಿಸಲು ಮುಂದಾದರು. ದೂರದ ಊರುಗಳಿಂದ ಬಂದವರು ಸಹ ಅದನ್ನೇ ಮಾಡಿದರು.

ಈ ಸಂದರ್ಭದಲ್ಲಿ ರಾಘವೇಂದ್ರ ರಾಜಕುಮಾರ್ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತಾಡಿದರು. ಮಾತು ಆರಂಭಿಸುತ್ತಿದ್ದಂತೆ ರಾಘಣ್ಣ ಬಂದವರಿಗೆಲ್ಲ ಕೃತಜ್ಞತೆ ಸಲ್ಲಿಸಿದರು. ಅಭಿಮಾನಿಗಳೆಲ್ಲ ಕಳೆದ 12 ದಿನಗಳಿಂದ ತಮ್ಮ ಕುಟುಂಬದೊಂದಿಗಿದ್ದಾರೆ. ಅಪ್ಪು ಮೇಲೆ ಅವರಿಗಿರುವ ಪ್ರೀತಿ ಅಭಿಮಾನ ಅಗಾಧವಾದದ್ದು, ಅವರ ಪ್ರೀತಿಗೆ ಬದಲಾಗಿ ಕೃತಜ್ಞತೆ ಬಿಟ್ಟರೆ ತಮ್ಮಿಂದ ಬೇರೆ ಏನೂ ಕೊಡಲಾಗದು. ಕಳೆದೆರಡು ವಾರಗಳಿಂದ ರಾಘಣ್ಣ ಅಪಾರವಾದ ನೋವು ಮತ್ತು ದುಃಖದಲ್ಲಿದ್ದರೂ ಅಭಿಮಾನಿಗಳಿಗೆ ಚೆನ್ನಾಗಿ ಊಟ ಮಾಡಿ ಜೋಪಾನವಾಗಿ ಮನೆ ಸೇರಿಕೊಳ್ಳಲು ವಿನಂತಿಸಿಕೊಂಡರು.

ಅಭಿಮಾನಿಗಳಿಗೆ ಊಟ ಮಾಡಿಸುವುದು ಅಪ್ಪು ಅವರ ಮನದಾಸೆಯಾಗಿತ್ತು, ಅವರ ಇಚ್ಛೆಯಂತೆ ಊಟದ ಏರ್ಪಾಟು ಮಾಡಲಾಗಿದೆ. ಅವರು ಕಣ್ಣುಗಳನ್ನು ದಾನ ಮಾಡಿದ್ದರಿಂದ ದೃಷ್ಟಿಮಾಂದ್ಯತೆಯಿಂದ ಬಳಲತ್ತಿದ್ದ ನಾಲ್ವರ ಬದುಕಿನಲ್ಲಿ ಬೆಳಕಾಗಿದೆ. ಅಪ್ಪು ನಮ್ಮ ನಡುವೆ ತಾನು ಮಾಡಿದ ಒಳ್ಳೆಯ ಕಾರ್ಯಗಳಿಂದ ಜೀವಂತವಾಗಿದ್ದಾನೆ ಎಂದು ರಾಘಣ್ಣ ಹೇಳಿದರು.

ಇದನ್ನೂ ಓದಿ:  ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ಅಭಿಮಾನಿಗಳ ಛೀಮಾರಿ

TV9 Kannada


Leave a Reply

Your email address will not be published. Required fields are marked *