ಅದು ಡಾ.ರಾಜ್ ಕುಮಾರ್ ಆಸೆ.. ಅದು ಪಾರ್ವತಪ್ಪ ರಾಜ್ ಕುಮಾರ್ ಅವರ ಆಸೆ.. ಅದು ಡಾ.ಶಿವರಾಜ್ ಕುಮಾರ್ ಆಸೆ.. ಅದು ರಾಘಣ್ಣನ ಆಸೆ.. ಅದು ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಅವರ ಆಸೆ.. ಟೋಟಲ್ ಆಗಿ ಇಡೀ ರಾಜವಂಶದ ಆಸೆ ಇಡೀ ಅಭಿಮಾನಿ ದೇವರುಗಳ ಆಸೆ.. ಕೊನೆಗೂ ಆಸೆ ಈಡೇರಲೇ ಇಲ್ವಲ್ಲ ಅಂತ ಇಡೀ ಅಭಿಮಾನಿ ದೇವ ಕೋಟಿ ಕೊರಗಿದೆ ಮರುಗಿದೆ.. ಆದ್ರೆ ಇಲ್ಲೊಂದು ಆಶಾದಯಕ ಸುದ್ದಿ ದೊಡ್ಮನೆಯಿಂದ ಹೊರ ಬಂದಿದೆ.. ಒಂದೇ ಸಿನಿಮಾದಲ್ಲಿ ಶಿವಣ್ಣ , ರಾಘಣ್ಣ ಹಾಗೂ ಅಪ್ಪು ಕಾಣಿಸಿಕೊಳ್ಳಲಿದ್ದಾರೆ.. ಅರೇ ಅದ್ಹೇಗೆ ಅನ್ನೋರು ಈ ಸ್ಟೋರಿನ ಓದ್ಲೇ ಬೇಕು..
ಕೋಟಿ ಕೋಟಿ ಕನ್ನಡ ಮನಸುಗಳಿಗೆ ಏಕ್ ಧಮ್ ದೇವರ ಮೇಲೆ ಹಿಗ್ಗಾಮುಗ್ಗ ಬೇಸರವಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯಾದಾಗ. ಎಂಥೆಂಥವರಿಗೋ ಹತ್ತಾರು ಅವಕಾಶಗಳನ್ನ ನೀಡೋ ಭಗವಂತ ಗುಣವಂತ ಅಪ್ಪು ಅವರಿಗೆ ಹತ್ತು ನಿಮಿಷ ಕೊಡ್ಲಿಲ್ವಲ್ಲ ಅಂತ ದೇವರಿಗೆ ಶಾಪ ಕೊಟ್ಟಿದ್ದಾರೆ.. ಆದ್ರೇನು ಮಾಡೋದು ವಿಧಿಯ ಮುಂದೆ ಯಾರು ದೊಡ್ಡವರಲ್ಲ.. ಅಪ್ಪು ಇನ್ನಿಲ್ಲ ಅನ್ನೋದು ಅರಗಿಸಿಕೊಳ್ಳಲಾಗದೆ ಇದ್ದರು ಆ ಸತ್ಯದ ಜೊತೆಗೆ ಬಾಳಬೇಕು ಆ ನಗುಮೊಗದ ನೆನಪಿನ ಬೆಳಕಲ್ಲಿ ಬದುಕಬೇಕು.
ಅಭಿಮಾನಿಗಳ ಪಾಲಿಗಂತು ಆರಾಧಿಸೋ ದೇವರಂತೆ ಆಗಿ ಬಿಟ್ಟಿದ್ದಾರೆ ಪುನೀತ್ ರಾಜ್ ಕುಮಾರ್. ಅವರ ಸ್ಮರಣೆ ದಿನದಿಂದ ದಿನಕ್ಕೆ ಕನ್ನಡ ನಾಡಿನಲ್ಲಿ ಹೆಚ್ಚಾಗುತ್ತಲೇ ಇದೆ. ಅಭಿಮಾನಿಗಳ ಅಭಿಮಾನ ಪರಿಸ್ಥಿತಿ ಹಿಂಗಿರುವಾಗ ಅಭಿಮಾನಿಗಳಿಗೆ ತುಸು ಸಂತಸದ ವಿಚಾರವೊಂದು ದೊಡ್ಮನೆ ಪಡೆಸಾಲೆಯಿಂದ ಹೊರಬಂದಿದೆ.
ಅಭಿಮಾನಿಗಳ ಪಾಲಿನ ಶಿವಪಾರ್ವತಿ ಸ್ವರೂಪ ಡಾ.ರಾಜ್ ಕುಮಾರ್ , ಪಾರ್ವತಮ್ಮ ರಾಜ್ ಕುಮಾರ್ ಅವರ ಮಹಾದಾಸೆಯಂತೆ ಫಸ್ಟ್ ಟೈಮ್ ಅಣ್ಣಾವ್ರ ಮೂರು ಮಕ್ಕಳು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಹಾಗಾದ್ರೆ ಯಾವುದು ಆ ಸಿನಿಮಾ..?
ಕೊನೆಗೂ ಈಡೇರುತ್ತಿದೆ ರಾಜವಂಶದ ಆ ಕನಸು !
ಒಂದೇ ಚಿತ್ರದಲ್ಲಿ ಶಿವಣ್ಣ , ರಾಘಣ್ಣ ಹಾಗೂ ಪುನೀತ್!
ಹೌದು.. ಇದು ನಿಜ.. ಒಂದೇ ಸಿನಿಮಾದಲ್ಲಿ ಡಾ.ಶಿವರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.. ಇದು ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಮಹಾದಾಸೆಯಾಗಿತ್ತು.. ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಬಹಳಷ್ಟು ಬಾರಿ ಒಂದೊಳ್ಳೆ ಕಥೆಗಾಗಿ ಕಾದಿದ್ದೇವೆ, ನಮ್ಮ ಮೂವರು ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡಬೇಕು ಎಂದುಕೊಂಡಿದ್ದೇವೆ ಎನ್ನುತ್ತಿದ್ದರು.. ಅಪ್ಪ-ಅಮ್ಮ ಇದ್ದಾಗಂತು ಆ ಅದ್ಭುತವನ್ನ ಅಭಿಮಾನಿಗಳು ನೋಡಲು ಆಗ್ಲೇ ಇಲ್ಲ.. ಅಪ್ಪು ಆಗಲಿಕೆಯ ನಂತರ ಆ ಆಸೆ ಕಮರಿಹೋಗಿತ್ತು.. ಆದ್ರೆ ತಂತ್ರಜ್ಞಾನ ಪ್ಲಸ್ ಅಭಿಮಾನದ ಜ್ಞಾನ ಒಟ್ಟಿಗೆ ಸೇರಿದ್ರೆ ಏನ್ ಬೇಕಾದ್ರು ಮಾಡಬಹುದು.. ಒಂದೇ ಸಿನಿಮಾದಲ್ಲಿ ಅಣ್ಣಾವ್ರ ಮೂವರ ಮಕ್ಕಳು ಒಂದಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ಜೇಮ್ಸ್.
ಅಪ್ಪು ಜೇಮ್ಸ್ ಚಿತ್ರದಲ್ಲಿ ಶಿವಣ್ಣ ಮತ್ತು ರಾಘಣ್ಣ!
ಜೇಮ್ಸ್ ಮೂಲಕ ಈಡೇರುತ್ತಿದೆ ದೊಡ್ಮನೆ ಆಸೆ !
ಪುನೀತ್ ರಾಜ್ ಕುಮಾರ್ ಅಭಿನಯದ ಕಟ್ಟ ಕಡೆಯ ಮೂರು ಸಿನಿಮಾಗಳಲ್ಲೊಂದು ಜೇಮ್ಸ್. ಚೇತನ್ ಕುಮಾರ್ ನಿರ್ದೇಶನದಲ್ಲಿ ಜೇಮ್ಸ್ ಸಿನಿಮಾ ಮೂಡಿಬರುತ್ತಿದೆ. ಅಪ್ಪು ಅವರ ಬರ್ತ್ಡೇ ನೆನಪಿನಾರ್ಥ ಮಾರ್ಚ್ 17ನೇ ತಾರೀಖ್ ಸಿನಿಮಾವನ್ನ ರಿಲೀಸ್ ಮಾಡಲು ಯೋಜನೆಯಲ್ಲಿರುವ ಜೇಮ್ಸ್ ತಂಡ ಡಾ.ರಾಜ್ ಕುಟುಂಬದ ಜೊತೆ ಸೇರಿ ಒಂದು ಮಹತ್ತರ ನಿರ್ಧಾರವನ್ನ ಗೈಗೊಂಡಿದೆ. ಅಪ್ಪು ನಟಿಸಿರುವ ಜೇಮ್ಸ್ ಸಿನಿಮಾದಲ್ಲಿ ಶಿವಣ್ಣ ಮತ್ತು ರಾಘಣ್ಣನವರನ್ನ ತೋರಿಸಲು ಪ್ಲಾನ್ ಮಾಡಲಾಗುತ್ತಿದೆ.
ಜೇಮ್ಸ್ ಸಾಂಗ್ ಒಂದರಲ್ಲಿ ಶಿವಣ್ಣ-ರಾಘಣ್ಣ!
ದೊಡ್ಮನೆ ಜೊತೆ ಕನ್ನಡ ಚಿತ್ರರಂಗದ ಸ್ಟಾರ್ಸ್!
ತನ್ನ ತಂದೆ ತಾಯಿ ಆಸೆಯನ್ನ ಜೇಮ್ಸ್ ಸಿನಿಮಾದ ಮೂಲಕವಾದ್ರು ಈಡೇರಿಸಬೇಕು ಅನ್ನೋ ನಿರ್ಧಾರಕ್ಕೆ ಸಹೋದರರಾದ ಶಿವಣ್ಣ ರಾಘಣ್ಣ ಬಂದಿದ್ದಾರೆ. ಜೇಮ್ಸ್ ಸಿನಿಮಾದ ಹಾಡು ಒಂದರಲ್ಲಿ ಶಿವಣ್ಣ ಮತ್ತು ರಾಘಣ್ಣ ಕಾಣಿಸಿಕೊಳ್ಳೋ ಪ್ಲಾನ್ ಮಾಡಲಾಗುತ್ತದೆ. ಜೊತೆಗೆ ಕನ್ನಡದ ಸ್ಟಾರ್ ನಟರು ಅಪ್ಪು ಅವರ ಆತ್ಮೀಯರನ್ನು ಹಾಡೊಂದರಲ್ಲಿ ಕುಣಿಸುವ ಮಾತುಕಥೆಗಳು ನಡೆಯುತ್ತಿವೆ. ಇದೊಂದು ಸರ್ಪ್ರೈಸ್ ಪ್ಲಸ್ ಎಮೋಷನಲ್ ಎಲಿಮೇಂಟ್ ಆಗಿದ್ದು ಶೀಘ್ರದಲ್ಲೇ ಒಂದು ಸ್ಪಷ್ಟ ಮಾಹಿತಿ ಚಿತ್ರತಂಡದಿಂದ ಸಿಗಲಿದೆ.
ಅಣ್ಣಾವ್ರ ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡಬೇಕು ಅನ್ನೋ ಆಸೆ ಕಳೆದ ಮೂವತ್ತು ವರ್ಷಗಳಿಂದ ಅಭಿಮಾನಿಗಳಲ್ಲಿದೆ. ಡಾ.ರಾಜ್, ಶಿವಣ್ಣ, ರಾಘಣ್ಣ ಮತ್ತು ಅಪ್ಪು ಅವರು ಬೇರೆ ಬೇರೆ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಮೂವರು ಒಟ್ಟಿಗೆ ಕಾಣಿಸಿಕೊಂಡಿಲ್ಲ. ಆದ್ರೀಗ ಅಣ್ಣಾವ್ರ ಮಕ್ಕಳು ಒಟ್ಟಿಗೆ ತೋರಿಸುವ ಜವಾಬ್ದಾರಿಯನ್ನ ಜೇಮ್ಸ್ ಸಿನಿ ಬಳಗ ಹೊತ್ತುಕೊಂಡಿರೋದು ನಿಜಕ್ಕೂ ವಿಶೇಷ.