ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ದೂರು ದಾಖಲು   | By Two Love Movie Actor Dhanveer Gowda fan Complaint against him for assault


ಅಭಿಮಾನಿ ಮೇಲೆ ಹಲ್ಲೆ ಆರೋಪ; ನಟ ಧನ್ವೀರ್ ವಿರುದ್ಧ ದೂರು ದಾಖಲು  

ಧನ್ವೀರ್​-ಚಂದ್ರಶೇಖರ್

ನಟ ಧನ್ವೀರ್ (Actor Dhanveer)​ ಅವರಿಗೆ ಸಿಹಿ ಹಾಗೂ ಕಹಿ ಘಟನೆ ಒಂದೇ ದಿನ ನಡೆದಿದೆ. ಅವರ ನಟನೆಯ ‘ಬೈ ಟೂ ಲವ್​’ ಸಿನಿಮಾ (By Two Love Movie) ಇಂದು (ಫೆಬ್ರವರಿ 18) ತೆರೆಗೆ ಬಂದಿದೆ. ಇದರ ಜತೆಗೆ ಅವರ ವಿರುದ್ಧ ದೂರು ಕೂಡ ದಾಖಲಾಗಿದೆ. ಬೌನ್ಸರ್​ ಜತೆ ಸೇರಿ ಅಭಿಮಾನಿ ಮೇಲೆ ಹಲ್ಲೆ ಮಾಡಿದ ಆರೋಪ ಧನ್ವೀರ್ ವಿರುದ್ಧ ಕೇಳಿ ಬಂದಿದೆ. ಹಲ್ಲೆಗೆ ಒಳಗಾದ ಅಭಿಮಾನಿ ದೂರು ದಾಖಲು ಮಾಡಿದ್ದಾರೆ. ಇದರಿಂದ ನಟನಿಗೆ ಸಂಕಷ್ಟ ಎದುರಾಗಿದೆ. ಈ ಘಟನೆ ಬಗ್ಗೆ ಧನ್ವೀರ್ ಅವರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಬೆಂಗಳೂರಿನ ಎಸ್‌.ಸಿ. ರಸ್ತೆಯ ಅನುಪಮಾ ಥಿಯೇಟರ್ ಬಳಿ ಗುರುವಾರ (ಫೆಬ್ರವರಿ 17) ತಡರಾತ್ರಿ ಘಟನೆ ನಡೆದಿದೆ. ನಟ ಧನ್ವೀರ್ ವಿರುದ್ಧ ಚಂದ್ರಶೇಖರ್ ಎಂಬ ಯುವಕ ಥಳಿಸಿರುವ ಆರೋಪ ಮಾಡಿದ್ದಾರೆ. ಸ್ನೇಹಿತನ ಜೊತೆ ಊಟ ಮುಗಿಸಿ ಚಂದ್ರಶೇಖರ್ ಮನೆಗೆ ತೆರಳುತ್ತಿದ್ದರು. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಕಂಡಾಗ ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಮುಂದಾಗುತ್ತಾರೆ. ಅದೇ ರೀತಿ ಧನ್ವೀರ್ ಕಂಡಾಗ ಫೋಟೋ ತೆಗೆಸಿಕೊಳ್ಳೋಕೆ ಚಂದ್ರಶೇಖರ್ ಮುಂದಾಗಿದ್ದಾರೆ. ಅಭಿಮಾನಿಯ ಬೇಡಿಕೆಗೆ ಧನ್ವೀರ್ ಸ್ಪಂದಿಸಲಿಲ್ಲ.

ಇದು ಚಂದ್ರಶೇಖರ್​ಗೆ ಬೇಸರ ತರಿಸಿದೆ. ಆಗ ಚಂದ್ರಶೇಖರ್​ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಧನ್ವೀರ್ ಹಲ್ಲೆ ಮಾಡಿದ್ದಾರೆ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ. ಈ ವೇಳೆ ಧನ್ವೀರ್​ ಜತೆ ಬೌನ್ಸರ್ಸ್ ಕೂಡ ಸೇರಿದ್ದರು ಎನ್ನಲಾಗಿದೆ. ಹಲ್ಲೆಗೊಳಗಾದ ಚಂದ್ರಶೇಖರ್ ಉಪ್ಪಾರಪೇಟೆ ಠಾಣೆಗೆ ದೂರು ನೀಡಿದ್ದಾರೆ. ಚಂದ್ರಶೇಖರ್ ದೇಹಕ್ಕೆ ಗಾಯಗಳಾಗಿವೆ.

ದೂರಿನ ಪ್ರತಿ

ನಟ ಧನ್ವೀರ್ ಮತ್ತು ಶ್ರೀಲೀಲಾ ‘ಬೈ ಟೂ ಲವ್​’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಪ್ರೀತಿ-ಪ್ರೇಮದ ಕಥೆ ಸಿನಿಮಾದ ಹೈಲೈಟ್​ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿದೆ. ‘ಬಜಾರ್​’ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಕಾಲಿಟ್ಟವರು ಧನ್ವೀರ್. ‘ಕಿಸ್​’ ಚಿತ್ರದ ಮೂಲಕ ಶ್ರೀಲೀಲಾ ಬೇಡಿಕೆ ಹೆಚ್ಚಿಸಿಕೊಂಡರು. ಇಬ್ಬರೂ ‘ಬೈ ಟೂ ಲವ್​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಹರಿ ಸಂತೋಷ್​ ನಿರ್ದೇಶನವಿದೆ. ಸಾಧು ಕೋಕಿಲ, ರಂಗಾಯಣ ರಘು, ಅಚ್ಯುತ್​ ಕುಮಾರ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *