ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಮನ್ನಣೆ ಪಡೆದುಕೊಳ್ತಿದೆ. ಕಳೆದ ಬಾರಿ ಜನವರಿಯಲ್ಲಿ ‘ಅಟ್ಲಾಂಟ ಅಂತಾರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಅಮೃತಮತಿ ಸಿನಿಮಾಗೆ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ಪ್ರಶಸ್ತಿ ಲಭಿಸಿತ್ತು. ಇದೀಗ ಇತ್ತೀಚೆಗೆ ನಡೆದ ‘ಲಾಸ್​ ಏಂಜಲೀಸ್​ ಸನ್​ ಅಂತಾರಾಷ್ಟ್ರೀಯ ಚಿತ್ರೋತ್ಸವ’ದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಜೊತೆ ಅತ್ಯುತ್ತಮ ಚಿತ್ರಕಥೆ ರಚನೆಗಾಗಿ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರಶಸ್ತಿ ಲಭಿಸಿದೆ.

 

13ನೇ ಶತಮಾನದ ಜನ್ನ ಕವಿಯ ಯಶೋಧರ ಚರಿತೆಯನ್ನ ಆಧರಿಸಿ ಮಾಡಿರುವ ‘ಅಮೃತಮತಿ’ ಸಿನಿಮಾ, ಇಲ್ಲಿಯವರೆಗೆ ಹತ್ತು ಅಂತಾರಾಷ್ಟ್ರೀಯ ಚಿತ್ರೋತ್ಸವದ ಸ್ಪರ್ಧಾ ವಿಭಾಗಕ್ಕೆ ಆಯ್ಕೆಯಾಗಿದೆ. ‘ಅಮೃತಮತಿ’ ಪಾತ್ರದಲ್ಲಿ ನಟಿ ಹರಿಪ್ರಿಯ ಕಾಣಿಸಿಕೊಂಡಿದ್ದು, ಈಗಾಗಲೇ ಎರಡು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂಚರ ಪುಟ್ಟಣ್ಣ ಪ್ರೊಡಕ್ಷನ್​​ ಬ್ಯಾನರ್​ನಡಿಯಲ್ಲಿ ಪುಟ್ಟಣ್ಣ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಈ ಬಗ್ಗೆ ಖುಷಿ ಹಂಚಿಕೊಂಡಿರುವ ನಿರ್ದೇಶಕ ಬರಗೂರು ರಾಮಚಂದ್ರಪ್ಪ, ‘ನನಗೆ ಬಹಳಷ್ಟು ಪ್ರಶಸ್ತಿಗಳು ಬಂದಿವೆ. ಆದ್ರೆ ಇಲ್ಲಿಯವರೆಗೂ ನಾನು ರಚಿಸಿದ ಚಿತ್ರಕಥೆಗೆ ಪ್ರಶಸ್ತಿ ಬಂದಿರಲಿಲ್ಲ. ಲಾಸ್​ ಏಂಜಲೀಸ್​ ಸನ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಈ ಪ್ರಶಸ್ತಿ ಬಂದಿರೋದು ಬಹಳ ಖುಷಿ ಕೊಟ್ಟಿದೆ. ಈ ಪ್ರಶಸ್ತಿಯನ್ನ ನಮ್ಮ ಅಮೃತಮತಿ ಚಿತ್ರತಂಡಕ್ಕೆ ನಾನು ಅರ್ಪಿಸುತ್ತೇನೆ. ಈ ಮೂಲಕ ಇಡೀ ಚಿತ್ರತಂಡದ ಸಹಕಾರವನ್ನ ಗೌರವಿಸುತ್ತೇನೆ’ ಅಂದಿದ್ದಾರೆ.

ಯಶೋಧರನ ಪಾತ್ರದಲ್ಲಿ ಬಹುಭಾಷಾ ನಟ ಕಿಶೋರ್​ ನಟಿಸಿದ್ದು, ಸುಂದರ್​ರಾಜ್​, ಪ್ರಮೀಳಾ ಜೋಷಾಯ್​, ತಿಲಕ್​, ಸುಪ್ರಿಯಾ ರಾವ್, ವತ್ಸಲಾ ಮೋಹನ್​, ಅಂಬರೀಶ್​ ಸಾರಂಗಿ, ಭೂಮಿಕಾ ಲಕ್ಷ್ಮೀನಾರಾಯಣ ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

‘ಅಮೃತಮತಿ’ಗೆ ಸಂಕಲನಕಾರರಾಗಿ ಸುರೇಶ್​ ಅರಸು, ಛಾಯಾಗ್ರಾಹಕರಾಗಿ ನಾಗರಾಜ ಆದವಾನಿ, ಸಂಗೀತ ನಿರ್ದೇಶಕರಾಗಿ ಗಾಯಕಿ ಶಮಿತಾ ಮಲ್ನಾಡ್​, ನೃತ್ಯ ಸಂಯೋಜಕರಾಗಿ ತ್ರಿಭುವನ್​ ಹಾಗೂ ಕಲಾ ನಿರ್ದೇಶಕರಾಗಿ ರಮೇಶ್​ ಚಂದ್ರ ಕೆಲಸ ಮಾಡಿದ್ದಾರೆ. ಮುಂಬೈನ ಸಂಸ್ಥೆಯೊಂದು ಪ್ರದರ್ಶನದ ಹಕ್ಕುಗಳನ್ನ ಪಡೆದಿದ್ದು, ಕೊರೊನಾ ಕಡಿಮೆಯಾದ ಮೇಲೆ ಅಮೃತಮತಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

The post ‘ಅಮೃತಮತಿ’ ಸಿನಿಮಾಗೆ ಮತ್ತೊಂದು ಗರಿ; ಲಾಸ್​ ಏಂಜಲೀಸ್​ ಸನ್​ ಫಿಲ್ಮ್​ ಫೆಸ್ಟ್​​ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ appeared first on News First Kannada.

Source: newsfirstlive.com

Source link