ಅಮೆರಿಕಕ್ಕೂ ಸೆಡ್ಡು ಹೊಡೆದು S-400 ಖರೀದಿಸಿದ ಭಾರತ; ಶತ್ರುಗಳಿಗಷ್ಟೇ ಅಲ್ಲ, ಮಿತ್ರರಿಗೂ ಕುತೂಹಲ


ಭಾರತ ಏನೇ ಮಾಡಿದ್ರು ಕೂಡ ಅಲ್ಲಿ ಅಲ್ಲೊಂದು ಲೆಕ್ಕಚಾರ ಇರುತ್ತೆ. ಅದು ಇಡೀ ಜಗತ್ತಿಗೆ ಗೊತ್ತಿರೋ ವಿಚಾರ. ದೇಶದ ಹಿತವನ್ನ ಕಾಪಾಡಲು ಯಾರನ್ನ ಬೇಕಾದ್ರೂ ಎದುರಾಕಿಕೊಳ್ಳುತ್ತೆ ಭಾರತ. ಅದಕ್ಕೆ ದೊಡ್ಡಣ್ಣ ಏನು ಹೊರತಲ್ಲ.. ಈಗ ಆಗಿರೋದು ಕೂಡ ಅದೆ. ದೊಡ್ಡಣ್ಣ ಬೇಡಾ ಅಂತಾ ಮುನಿಸಿಕೊಂಡ್ರು ಕೂಡ ಒಂದು ಒಪ್ಪಂದವನ್ನ ಮುಂದುವರೆಸಿದೆ ಭಾರತ. ಹಾಗಾದ್ರೆ ದೊಡ್ಡಣ್ಣ ಮುನಿಸಿಗೆ ಕಾರಣವಾದ ಆ ಒಪ್ಪಂದ ಯಾವುದು? ಅಸಲಿಗೆ ದೊಡ್ಡಣ್ಣ ಭಾರತದ ಮೇಲೆ ಯಾಕೆ ಯಾವುದೇ ನಿರ್ಬಂಧ ಹೇರೋದಿಲ್ಲ? ಅದಕ್ಕೆ ಕಾರಣಗಳು ಏನಿರಬಹುದು?

ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸೌಹಾರ್ದತೆ ಎಂಥದ್ದು ಅನ್ನೋದು ಹೇಳೋದೆ ಬೇಡ.. ಹಾಗಂತ ಭಾರತವೇನು ಅಮೆರಿಕಾದೊಂದಿಗೆ ದ್ವೇಷ ಕಟ್ಟಿಕೊಂಡಿದೆ ಅಂತಲ್ಲ. ಆದ್ರೆ ಎರಡೂ ಸೂಪರ್​ ಪವರ್​​​ ರಾಷ್ಟ್ರಗಳಿಗೆ ಭಾರತದ ಅಗತ್ಯತೆ ತುಂಬಾನೆ ಇದೆ. ಈಗಾಗಲೇ ಎಲ್ಲರಿಗೂ ಗೊತ್ತಿರೋ ಹಾಗೆ ಅಮೆರಿಕಾ ಚೀನಾದ ಕಡೆ ತಿರುಗಿಯೂ ನೋಡೋದಿಲ್ಲ. ಯಾವಾಗ ಬೇಕಾದ್ರೂ ಚೀನಾ ದೊಡ್ಡಣ್ಣನ ವಿರುದ್ಧ ತಿರುಗಿ ಬೀಳಬಹುದು. ಆಗ ಭಾರತದ ನೆರವಿಲ್ಲದೆ ಅಮೆರಿಕಾ ಏನನ್ನು ಸಾಧಿಸೋಕೆ ಸಾಧ್ಯವಿಲ್ಲ. ಹಾಗಾಗಿ ಅಮೆರಿಕಾದ ವಿರೋಧವಾಗಿ ಭಾರತ ತನ್ನಿಚ್ಛೆಯಂತೆ ಏನೇ ಮಾಡಿದ್ರೂ ದೊಡ್ಡಣ್ಣ ತೆಪ್ಪಗಿರೋದು. ಅದಕ್ಕೆ ಸಾಕ್ಷಿ ಅನ್ನುವಂತೆ ಭಾರತ, ರಷ್ಯಾದೊಂದಿಗೆ ಮಾಡಿಕೊಂಡಿರೋ ಆ ಒಂದು ಒಪ್ಪಂದ. ಅದೇ ಎಸ್​​​​-400 ಮಿಸೈಲ್​ ವ್ಯವಸ್ಥೆ ಒಪ್ಪಂದ.

ಇನ್ನು ಭಾರತದ ತಾಕತ್ತು ಎಂಥದ್ದು ಅನ್ನೋದು ವಿಶ್ವಕ್ಕೆ ಇಂದು ಸಾರಿ ಸಾರಿ ಹೇಳುವ ಅವಶ್ಯಕತೆ ಇಲ್ಲ. ಅಮೆರಿಕ, ಇಸ್ರೇಲ್, ಫ್ರಾನ್ಸ್, ಯುಕೆ ಮತ್ತು ಜರ್ಮನಿ ಮಾತ್ರ ಆ್ಯಂಟಿ-ಡ್ರೋನ್ ವ್ಯವಸ್ಥೆ ಹೊಂದಿತ್ತು. ಆದ್ರೆ ನಮ್ಮ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಂದ್ರೆ ಡಿಆರ್​ಡಿಓ ಕೆಲ ತಂತ್ರಜ್ಞಾನ ಆಧರಿಸಿ, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಆ್ಯಂಟಿ-ಡ್ರೋನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿತ್ತು. ಇದು ಭಾರತದ ತಾಕತ್ತಿನ ಒಂದು ಭಾಗ ಅಂದ್ರು ತಪ್ಪಾಗೋದಿಲ್ಲ. ಬೇರೆ ದೇಶಗಳು ಏನನ್ನೆ ಅಭಿವೃದ್ಧಿ ಮಾಡಿದ್ರು ಕೂಡ ಅದಕ್ಕಿಂತ ಒಂದು ಕೈ ಮೇಲೆಂಬಂತೆ ಡಿಆರ್​ಡಿಓ ಅಭಿವೃದ್ಧಿಪಡಿಸಿ ಅದನ್ನ ಭಾರತದ ಬತ್ತಳಿಕೆಗೆ ಸೇರಿಕೊಳ್ಳುವಂತೆ ಮಾಡುತ್ತೆ.

ಇನ್ನು ಎಸ್​-400 ವಿಚಾರಕ್ಕೆ ಬರುವುದಾರೆ ರಷ್ಯಾ ನಿರ್ಮಿತ ಮಿಸೈಲ್ ವ್ಯವಸ್ಥೆಯನ್ನು ಭಾರತ ಖರೀದಿಸಲು ಮುಂದಾದರೆ ಅದು ಅಮೆರಿಕದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಹೇಳಲಾಗಿತ್ತು. ಒಂದು ವೇಳೆ ಖರೀದಿ ಮಾಡಿದ್ದೆ ಆದ್ರೆ ಭಾರತದ ವಿರುದ್ಧ ಕೆಲವೊಂದು ನಿರ್ಬಂಧವನ್ನು ಪ್ರಯೋಗಿಸುವುದಾಗಿ ಅಮೆರಿಕ ಹೇಳಿಕೊಂಡಿತ್ತು. ಆದ್ರೆ ಇದ್ಯಾವುದಕ್ಕೆ ಜಗ್ಗದ ಭಾರತ ಮಾತ್ರ ರಷ್ಯಾದಿಂದ ಎಸ್​-400 ಮಿಸೈಲ್​ ಖರೀದಿಯ ಒಪ್ಪಂದವನ್ನ ಮುಂದುವರೆಸಿತ್ತು. ಅದಕ್ಕೆ ಕಾರಣ ಭಾರತದ ವೈರಿಗಳನ್ನ ಸಮರ್ಥವಾಗಿ ಎದುರಿಸಲು ಇದು ಸಹಕಾರಿ ಆಗುತ್ತೇ ಅನ್ನೋದು.

ಭಾರತದ ಪ್ರಧಾನಿ ಮತ್ತು ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭೇಟಿ ಇದಕ್ಕೆ ಮತ್ತಷ್ಟು ಪುಷ್ಟಿ ಕೊಡುತ್ತಿದ್ದು, ಮುಂಬರುವ ದಿನಗಳಲ್ಲಿ ಭಾರತದ ಬತ್ತಳಿಕೆಗೆ ಸೇರಿಕೊಳ್ಳಲಿರುವ ಈ ಎಸ್​-400 ಮಿಸೈಲ್ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಇನ್ನು ರಷ್ಯಾ ಮಾಧ್ಯಮಗಳ ಪ್ರಕಾರ ಎಸ್​​​-400 ಮಿಸೈಲ್​ಗಳನ್ನ ಭಾರತಕ್ಕೆ ಕಳುಹಿಸುವ ಪ್ರಕ್ರಿಯೇ ಆರಂಭ ಆಗಿದ್ದು ಕೆಲವೇ ದಿನಗಳಲ್ಲಿ ಭಾರತಕ್ಕೆ ಬರಲಿದೆ. ಆದ್ರೆ ಅಂದು ಒಪ್ಪಂದ ಮಾಡಿಕೊಳ್ಳುವ ಸಂದರ್ಭದಲ್ಲಿ ಅಮೆರಿಕಾ ಬೇಡಾ ಅಂತಾ ಪಟ್ಟು ಹಿಡಿದುಕೊಂಡು ಕೂತಿದ್ದು ಯಾಕೆ?

ಮೂರು ವರ್ಷಗಳ ಹಿಂದೆ ಸಹಿ ಹಾಕಲಾಗಿತ್ತು
2018 ರ ಅಕ್ಟೋಬರ್ ನಲ್ಲಿ ರಷ್ಯಾ ಹಾಗೂ ಭಾರತ ಎಸ್‌-400 ಪೂರೈಕೆ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದು ಸುಧಾರಿತ, ದೀರ್ಘ-ಶ್ರೇಣಿಯ, ಮೇಲ್ಮೈಯಿಂದ ಗಾಳಿಗೆ ನೆಗೆಯುವ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾಗಿದೆ. ಹೇಳಬೇಕು ಅಂದ್ರೆ ಇದನ್ನ ಅಂದು ಅಮೆರಿಕಾ ಹಲವು ಲೆಕ್ಕಾಚಾರ ಇಟ್ಟುಕೊಂಡು ಬೇಡಾ ಅಂದಿತ್ತು.

ಎಸ್​​-400 ಮೊದಲ ತುಕಡಿಯನ್ನು ನಿರ್ವಹಿಸಲು ರಷ್ಯಾ ಈಗಾಗಲೇ ಭಾರತೀಯ ಸೇನಾ ಸಿಬ್ಬಂದಿಯ ಒಂದು ಗುಂಪಿಗೆ ತರಬೇತಿ ನೀಡಿದೆ. 2022ರ ಜನವರಿಯ ಆರಂಭದಲ್ಲಿ ರಷ್ಯಾದ ತಜ್ಞರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಶಸ್ತ್ರಾಸ್ತ್ರಗಳು ನೆಲೆಗೊಳ್ಳುವ ಸ್ಥಳಗಳಲ್ಲಿ ಅವುಗಳ ಹೇಗೆ ಸ್ಥಾಪನೆಯನ್ನ ಮಾಡಬೇಕು ಅನ್ನೋ ಬಗ್ಗೆ ಅವರು ಚರ್ಚೆ ನಡೆಸಲಿದ್ದಾರೆ ಎಂದು ರಷ್ಯಾದ ಸರ್ಕಾರಿ ಮಿಲಿಟರಿ ಸಂಸ್ಥೆಯೊಂದು ಹೇಳಿದೆ. ಜೊತೆಗೆ 2022ರ ಅಂತ್ಯದ ವೇಳೆಗೆ ಕ್ಷಿಪಣಿ ವ್ಯವಸ್ಥೆಗಳ ಸಾಗಾಣಿಕೆಯು ಪೂರ್ಣಗೊಳ್ಳಲಿದೆ ಎಂದು ಅದು ತಿಳಿಸಿದೆ.

ಇನ್ನು ಭಾರತ ಎಸ್​ 400 ಖರೀದಿ ಮಾಡಿದ್ರೆ ಅಮೆರಿಕಾ ಯಾಕೆ ವಿರೋಧ ವ್ಯಕ್ತ ಮಾಡುತ್ತೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡೋದು ಸಹಜ. ಇದೊಂದೆ ಅಲ್ಲಾ ಭಾರತ ಮತ್ತು ಅಮೆರಿಕ ನಡುವೆ ಇನ್ನೂ ಹಲವು ಸಂಗತಿಗಳ ವಿಚಾರದಲ್ಲಿ ಮುಸುಕಿನ ಗುದ್ದಾಟ ನಡೆಯುತ್ತಿವೆ. ಈ ಎಸ್​-400 ವಿಚಾರದಲ್ಲಿ ಎದ್ದಿರೋ ವಿರೋಧದ ಅಲೆ ಹೊಸತೇನಲ್ಲ. ಯಾಕಂದ್ರೆ ಅಮೆರಿಕಾ ವಿರೋಧ ವ್ಯಕ್ತ ಪಡಿಸೋದಕ್ಕಿಂತ ಮುನ್ನವೇ ಭಾರತ ರಷ್ಯನ್ನರೊಂದಿಗೆ 500 ಕೋಟಿ ಡಾಲರ್ ಒಪ್ಪಂದಕ್ಕೆ ಸಹಿ ಹಾಕಿತ್ತು. ಅದೇ ಸಂದರ್ಭದಲ್ಲಿ ಅಮೆರಿಕವು ತನ್ನ ಥಾಡ್ ಕ್ಷಿಪಣಿಯನ್ನು ಪೂರೈಸುವ ಪ್ರಸ್ತಾಪ ಮುಂದಿಟ್ಟಿತು.

ಇಕ್ಕಟ್ಟಿನಲ್ಲಿ ಸಿಲುಕಿದಂತೆ ಭಾರತ ಅಂದು ಕಂಡು ಬಂದಿದ್ದು ನಿಜವಾದ್ರೂ ಪ್ರಧಾನಿ ಮೋದಿ ದೃಢವಾಗಿ ನಿಂತು ರಷ್ಯಾದೊಂದಿಗಿನ ಒಪ್ಪಂದವನ್ನ ಮುಂದುವರೆಸಿದ್ದರು. ಅಲ್ಲದೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಒಪ್ಪಂದದಲ್ಲಿ ಯಾವುದೇ ಹಿನ್ನೆಡೆ ಆಗೋದಿಲ್ಲ ಎಂದು ಭರವಸೆ ನೀಡಿದರು. ಆ ಕ್ಷಣಕ್ಕೆ ಭಾರತ, ರಷ್ಯಾದ ಒಪ್ಪಂದವನ್ನು ಸುಲಭವಾಗಿ ರದ್ದುಗೊಳಿಸಬಹುದಿತ್ತು ಮತ್ತು ಥಾಡ್ ಅನ್ನು ಖರೀದಿಸುವ ಮೂಲಕ ಅಮೆರಿಕಾವನ್ನ ಖುಷಿಪಡಿಸಬಹುದಿತ್ತು. ಆದರೆ, ಮೋದಿ ಹಾಗೆ ಮಾಡಿ ದೊಡ್ಡಣ್ಣನನ್ನ ಮೆಚ್ಚಿಸೋ ಕೆಲಸ ಮಾಡೋದಕ್ಕೆ ಹೋಗಲಿಲ್ಲ.

ನಮ್ಮ ಬಳಿಯೇ ಥಾಡ್ ಅನ್ನ ಕೊಂಡು ಕೊಳ್ಳಬಹುದಿತ್ತು ಅಂತಾ ಕೋಪಗೊಂಡಿದ್ದ ಅಮೆರಿಕವನ್ನು ಸಮಾಧಾನಿಸಿ, ನಿಮ್ಮ ಬಳಿಗೆ ಇನ್ನೂ ಉತ್ತಮವಾಗಿ ಒಪ್ಪಂದದೊಂದಿಗೆ ಬರುತ್ತೇವೆ, ಅಲ್ಲದೇ ಮುಂದೊಂದು ದಿನ ನೋಡೋಣ ಎಂದು ಭಾರತವು ಹೇಳಬಹುದಿತ್ತು. ಆದರೆ, ಮೋದಿ ಹಾಗೆ ಮಾಡದೆ ಮೌನವನ್ನು ತಾಳಿದ್ದರು. ಆಗ ಭಾರತದ ಮೇಲೆ ಕೆಲವೊಂದು ನಿರ್ಬಂಧಗಳನ್ನ ಹೇರೋದಾಗಿ ಅಲ್ಲಿನ ಮಾಧ್ಯಮಗಳು ವರದಿಯನ್ನ ಮಾಡಿದ್ರು ಕೂಡ ಮೋದಿ ಸರ್ಕಾರ ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ.

ಒಂದು ವೇಳೆ ಅಮೇರಿಕಾವನ್ನ ಎದುರು ಹಾಕಿಕೊಂಡರೆ ಅದು ಕಾ​ಟ್ಸಾ ಅಂದ್ರೆ Countering America’s Adversaries Through Sanctions Act ಮೂಲಕ ಭಾರತವನ್ನು ನಿಯಂತ್ರಿಸುತ್ತೆ ಎಂದೇ ಭಾವಿಸಲಾಗಿತ್ತು. ಆದರೆ, ಭಾರತ ಇದಕ್ಕೆ ಜಗ್ಗಲಿಲ್ಲ. ಈಗಾಗಲೇ ಜಗತ್ತಿಗೆ ತಿಳಿದಿರುವಂತೆ ಅಮೆರಿಕದ ನಿರ್ಬಂಧಗಳನ್ನು ಎದುರಿಸುವುದು ಭಾರತಕ್ಕೆ ಹೊಸದಲ್ಲ. ಈ ಹಿಂದೆಯೂ ಅಮೆರಿಕದ ನಿರ್ಬಂಧಗಳನ್ನು ಎದುರಿಸಿದೆ.

ಅಮೇರಿಕಾ ಎಸ್​​-400 ರಕ್ಷಣಾ ವ್ಯವಸ್ಥೆಗೆ ಹೆದರುತ್ತಿರೋದು ಯಾಕೆ?
ಅಮೆರಿಕ ತನ್ನ ಎಫ್-22 ಮತ್ತು ಎಫ್-35 ಎರಡು ಸ್ಟೆಲ್ತ್ ಕ್ರಾಫ್ಟ್‌ಗಳು, ಎಸ್-400ರ ಬಳಿ ಸುಳಿಯುವುದನ್ನು ಬಯಸುವುದಿಲ್ಲ. ಏಕೆಂದರೆ ಈ ವಾಯು ರಕ್ಷಣಾ ಕವಚವು ಈ ಎರಡನ್ನೂ ಪತ್ತೆ ಹಚ್ಚಿ ದುರ್ಬಲಗೊಳಿಸಬಹುದು ಎಂದು ಹೇಳಲಾಗುತ್ತದೆ. ತಮ್ಮ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ರಷ್ಯನ್ನರಿಗೆ ಸಹಾಯ ಮಾಡುವುದು ಅಮೆರಿಕದ ಹಿತಾಸಕ್ತಿಯಲ್ಲ.

ಭಾರತವು ರಷ್ಯಾದ ಎಸ್-400 ಖರೀದಿಸುವುದಕ್ಕಿಂತ ಚೀನಾದ ವೃದ್ಧಿಯನ್ನು ವ್ಯೂಹಾತ್ಮಕವಾಗಿ ಎದುರಿಸುವುದು ಅಮೆರಿಕಕ್ಕೆ ಮುಖ್ಯವಾಗಿದೆ. ಹಾಗಾಗಿ ಭಾರತಕ್ಕೆ ನಿರ್ಬಂಧಗಳು ಅಥವಾ ದಂಡ ವಿಧಿಸುವ ಮೂಲಕ ಅಪಾಯವನ್ನು ಎಳೆದುಕೊಳ್ಳಲು ಅಮೆರಿಕಾ ಸಿದ್ಧವಿಲ್ಲ. ಅದಲ್ಲದೆ, ಭಾರತ ಸರ್ಕಾರವು ಪ್ರಜಾಪ್ರಭುತ್ವವಾದಿಗಳು ಮತ್ತು ಗಣರಾಜ್ಯವಾದಿಗಳು ಎರಡರೊಂದಿಗೂ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದೆ.

ಸಾಧ್ಯವಾದರೆ, ಭಾರತಕ್ಕೆ ವಿನಾಯಿತಿ ನೀಡಿ ಮತ್ತು ಅದರ ಬಗ್ಗೆ ಪ್ರಾಕ್ಟಿಕಲ್​ ಆಗಿ ಯೋಚನೆ ಮಾಡಿ ಎಂದು ಭಾರತವು ಅಮೆರಿಕಕ್ಕೆ ನಯವಾಗಿಯೇ ಉತ್ತರವನ್ನು ಕೊಟ್ಟಿದೆ. ಹಾಗಾಗಿ ಅಮೆರಿಕವು ಏನು ಯೋಚಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಚಿಂತಿಸದೆ ಭಾರತವು ರಷ್ಯಾದಿಂದ ಎಸ್-400 ಖರೀದಿಸಿದೆ.

ಅಮೆರಿಕಾಗೆ ಇಲ್ಲಾ ಅಂತಾ ಮೋದಿ ಹಿಂದೇಟನ್ನ ಹಾಕಿಲ್ಲ. ದೇಶದ ಹಿತಕ್ಕಾಗಿ ಯಾವ ನಿರ್ಧಾರವನ್ನ ತೆಗೆದುಕೊಂಡರೆ ಸೂಕ್ತ ಅಂತಾ ಅನ್ನಿಸುತ್ತೋ ಅದನ್ನೆ ಮಾಡ್ತಾರೆ. ಈ ಎಸ್​​​-400 ವಿಚಾರದಲ್ಲಿ ಆಗಿರೋದು ಕೂಡ ಅದೆ. ಆದ್ರೆ ಅಮೆರಿಕಾ ಕೋಪಗೊಂಡರು ಕೂಡ ಅದನ್ನ ವ್ಯಕ್ತಪಡಿಸೋದಕ್ಕೆ ಆಗದೆ ತೆಪ್ಪಗಾಗಿದೆ. ಯಾಕಂದ್ರೆ ಭಾರತದ ಪವರ್ ಅಂಥದ್ದು.

News First Live Kannada


Leave a Reply

Your email address will not be published. Required fields are marked *