ಬೆಂಗಳೂರು: ರಾಜ್ಯದಲ್ಲಿ 18 ವರ್ಷಕ್ಕಿ ಮೇಲ್ಪಟ್ಟವರಿಗೆ 3.5 ಲಕ್ಷ ಲಸಿಕೆ ಸ್ಟಾಕ್ ಇದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ 6.5 ಲಕ್ಷ ಲಸಿಕೆ ಸ್ಟಾಕ್ ಇದೆ ಅಂತಾ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಒಬ್ಬ ವ್ಯಕ್ತಿಯನ್ನ, ಸರ್ಕಾರವನ್ನ ಕೈತೋರಿಸಿ ಮಾತಾಡೋದು ಸುಲಭ. ಸಾಂಕ್ರಾಮಿಕ ಕಾಲದಲ್ಲಿ ಬೇರೆ ಯಾರಿದ್ರೂ ಹೇಗೆ ನಡ್ಕೋತಿದ್ರು ಅಂತ ಆತ್ಮಸಾಕ್ಷಿಯಿಂದ ಹೇಳಲಿ. ಅಮೆರಿಕ ಸಹ ಕಂಟ್ರೋಲ್ ಮಾಡಕ್ಕಾಗಿಲ್ಲ. ಹಾಗಂತ ಅಮೆರಿಕ ವಿಫಲ ಆಗಿದೆ ಅಂತಲ್ಲ. ಆರೋಪ ಮಾಡೋದು ಸುಲಭ, ನಾನು ಆರೋಪಗಳಿಗೆ ತಲೆ ಕೆಡಿಸಿಕೊಳ್ಳಲ್ಲ. ಸದ್ಯ ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ 3.5 ಲಕ್ಷ ಲಸಿಕೆ ಸ್ಟಾಕ್ ಇದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ 6.5 ಲಕ್ಷ ಲಸಿಕೆ ಸ್ಟಾಕ್ ಇದೆ. ಇವತ್ತು ರಾಜ್ಯದಲ್ಲಿ 480 ಸಾವು ಸಂಭವಿಸಿದೆ. ಬೆಂಗಳೂರಲ್ಲಿ 259 ಸಾವಾಗಿದೆ. ತಡವಾಗಿ ರಿಪೋರ್ಟ್ ಆಗ್ತಿರೋದು ಸಾವು ಹೆಚ್ಚಾಗಲು ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತೀ ತಾಲೂಕು ಆಸ್ಪತ್ರೆಯಲ್ಲಿ 50 ICU ಬೆಡ್ ಇವೆ. ಆದರೆ ತಲಾ 6 ವೆಂಟಿಲೇಟರ್ ಬೆಡ್ ಅಳವಡಿಸಲು ಜಿಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಸೂಚಿಸಲಾಗಿದೆ. ಪ್ರತೀ ಕೋವಿಡ್ ವಾರ್ಡ್ ಮತ್ತು ಸಿಸಿಸಿ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಆದೇಶ ಮಾಡಿದ್ದೆವು. ಕೆಲವರು ಅಳವಡಿಸಿದ್ದಾರೆ, ಕೆಲವರು ಅಳವಡಿಸಿಲ್ಲ. ಸಿಸಿ ಕ್ಯಾಮೆರಾಗಳಿದ್ರೆ ಇಲ್ಲಿಂದಲೇ ಕೂತು ನಾವು ಮಾನಿಟರ್ ಮಾಡಬಹುದು ಎಂದರು.

ಮರಣದ ಪ್ರಮಾಣ ಕೆಲ ಜಿಲ್ಲೆಗಳಲ್ಲಿ ಹೆಚ್ಚಾಗ್ತಿದೆ. ಇದಕ್ಕೆ ಕಾರಣ ತಿಳಿಯಲು ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಪಾಸಿಟಿವ್ ಬಂದ ಕೂಡಲೇ ಚಿಕಿತ್ಸೆ ಆರಂಭಿಸೋಣ ಅಂತ ನಿರ್ಧರಿಸಿದ್ದೇವೆ. ಲಕ್ಷಣ ಇದ್ದು ಟೆಸ್ಟ್​ನಲ್ಲಿ ಪಾಸಿಟಿವ್ ಬರದಿದ್ರೂ ಚಿಕಿತ್ಸೆ ಕೊಡಲು ಆದೇಶ ಮಾಡಿದ್ದೇವೆ.

ರಾಜ್ಯದಲ್ಲಿ ಪಾಸಿಟಿವ್ ಕೇಸ್ 5% ಕ್ಕೆ ಬರಬೇಕು ಅನ್ನೋದು ನಮ್ಮ ಉದ್ದೇಶ. ಪಾಸಿಟಿವ್ ಬಂದ ಐದು ಗಂಟೆಯೊಳಗೆ ಮೆಡಿಕಲ್ ಕಿಟ್ ಕೊಡಲು ಕ್ರಮವಹಿಸಲು ಸೂಚಿಸಲಾಗಿದೆ. ಜೊತೆಗೆ ಐಸೋಲೇಷನ್ ನಲ್ಲಿರೋರ ಮೇಲೆ ಹೆಚ್ಚಿನ ನಿಗಾ ಇಡಲು ಸೂಚಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದರ ವಸೂಲಿ ಬಗ್ಗೆ ದೂರು ಬರ್ತಿವೆ. ಡಿಹೆಚ್ಒಗಳನ್ನು ಖಾಸಗಿ ಆಸ್ಪತ್ರೆಗೆ ಭೇಟಿ ಕೊಡಲು ಸೂಚಿಸಲಾಗಿದೆ.

ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜುಗಳ ಎಲ್ಲ ಬೆಡ್​ಗಳಿಗೂ ಆಕ್ಸಿಜನ್ ಪೂರೈಸಲು ಕ್ರಮ ತಗೋತಿದ್ದೇವೆ. ಇನ್ನೂ ಎರಡು ಮೂರು ತಿಂಗಳು ಕೇಸ್ ಪ್ರಮಾಣ ಕಮ್ಮಿ ಆಗಬಹುದು. ನಮ್ಮ ಸಿದ್ಧತೆ ಎರಡು ಮೂರು ಪಟ್ಟು ಹೆಚ್ಚಾಗುತ್ತೆ. ಮೂರನೇ ಅಲೆಗೆ ಪೂರಕವಾಗಿ ನಮ್ಮ ಸಿದ್ಧತೆ ನಡೆಯುತ್ತೆ. ಮಕ್ಕಳಿಗೆ ಮೂರನೇ ಅಲೆಯಿಂದ ತೊಂದರೆ ಅಂತ ತಜ್ಞರು ಹೇಳಿದ್ದಾರೆ. ಮಕ್ಕಳ ಸಂಬಂಧ ವಿಶೇಷ ಗಮನ, ಸಿದ್ಧತೆ ಇರುತ್ತೆ ಎಂದು ಭರವಸೆ ನೀಡಿದ್ದಾರೆ.

ಹೈಕೋರ್ಟ್ ತರಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕೆಲವೊಂದು ವಿಚಾರ ನಮ್ಮ ನಿಯಂತ್ರಣದಲ್ಲಿ ಇಲ್ಲ. ನಮ್ಮ ಪ್ರಯತ್ನ ಮುಂದುವರೆದಿದೆ. ನಾವು ನಮ್ಮ ಇತಿಮಿತಿಯಲ್ಲಿ ಸಂಯಮದಿಂದ ನಡ್ಕೋತಿದ್ದೇವೆ. ಕೇಂದ್ರದ ಜೊತೆ ನಿತ್ಯ ಚರ್ಚೆ ಮಾಡ್ತಿದ್ದೇವೆ. ನಿತ್ಯ ಲಸಿಕೆ ಕೊರತೆ ಬಗ್ಗೆ ಕೇಂದ್ರದ ಜತೆ ಚರ್ಚಿಸ್ತಿದ್ದೇವೆ.

The post ‘ಅಮೆರಿಕಗೂ ಸಹ ಕೊರೊನಾ ಕಂಟ್ರೋಲ್ ಮಾಡಕ್ಕಾಗಿಲ್ಲ, ಹಾಗಂತ ಅದು ವಿಫಲವಾಗಿದೆ ಅಂತಲ್ಲ’ appeared first on News First Kannada.

Source: newsfirstlive.com

Source link