ಅಮೆರಿಕದ ಒಕ್ಲಾಹಾಮಾದಲ್ಲಿ ಜನರ ಮೇಲೆ ಮತ್ತೆ ಗುಂಡಿನ ದಾಳಿ: ಗುಂಡು ಹಾರಿಸಿದ ದುಷ್ಕರ್ಮಿ ಸೇರಿ ನಾಲ್ವರ ಸಾವು | Hospital Shooting in America Oklahoma 4 dead including gunman US Shootings


ಅಮೆರಿಕದ ಒಕ್ಲಾಹಾಮಾದಲ್ಲಿ ಜನರ ಮೇಲೆ ಮತ್ತೆ ಗುಂಡಿನ ದಾಳಿ: ಗುಂಡು ಹಾರಿಸಿದ ದುಷ್ಕರ್ಮಿ ಸೇರಿ ನಾಲ್ವರ ಸಾವು

ಪ್ರಾತಿನಿಧಿಕ ಚಿತ್ರ

ಒಕ್ಲಾಹಾಮ ಸಮೀಪದ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆ ಆವರಣದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದಿದ್ದಾನೆ.

ವಾಷಿಂಗ್​ಟನ್: ಅಮೆರಿಕ ಒಕ್ಲಾಹಾಮಾದ ತುಲ್​ಸಾ (Amrica Oklahoma) ಎಂಬಲ್ಲಿ ಇರುವ ಸೇಂಟ್ ಫ್ರಾನ್ಸಿಸ್ ಆಸ್ಪತ್ರೆ ಆವರಣದಲ್ಲಿ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದಿದ್ದಾನೆ. ‘ವ್ಯಕ್ತಿಯೊಬ್ಬ ರೈಫಲ್​ನೊಂದಿಗೆ 2ನೇ ಮಹಡಿಯಲ್ಲಿ ಓಡಾಡುತ್ತಿದ್ದಾನೆ ಎಂಬ ಮಾಹಿತಿ ನಮಗೆ ಬಂದಿತ್ತು. ನಾವು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಗುಂಡಿನ ಹಾರಾಟ ನಡೆದಿತ್ತು’ ಎಂದು ಪೊಲೀಸ್ ಅಧಿಕಾರಿ ಕ್ಯಾಪ್ಟನ್ ರಿಚರ್ಡ್ ಮೆಲೆನ್​ಬರ್ಗ್​ ಹೇಳಿದರು.

‘ಪೊಲೀಸರು ಸ್ಥಳಕ್ಕೆ ಭೇಟಿ ನೀಡುವ ಹೊತ್ತಿಗೆ ಕೆಲವರು ಗುಂಡೇಟಿನಿಂದ ಸಾವನ್ನಪ್ಪಿದ್ದರು. ಹಲವರಿಗೆ ಗುಂಡು ತಗುಲಿ ಗಾಯವಾಗಿತ್ತು. ಶಂಕಿತ ದುಷ್ಕರ್ಮಿ ಹೇಗೆ ಸತ್ತ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 4.52ಕ್ಕೆ ಗುಂಡು ಹಾರಾಟ ನಡೆದಿದೆ. ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಜನರನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದರು.

ಘಟನೆ ಕುರಿತು ಅಧ್ಯಕ್ಷ ಜೋ ಬೈಡೆನ್​ ಅವರಿಗೂ ಶ್ವೇತಭವನದಲ್ಲಿ ಮಾಹಿತಿ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ನಾಗರಿಕರ ಮೇಲೆ, ಮಕ್ಕಳ ಮೇಲೆ ಗುಂಡಿನ ದಾಳಿ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬಂದೂಕು ನೀತಿಯನ್ನು ಮರುಪರಿಶೀಲಿಸಬೇಕು, ಗನ್​ ಲಾಬಿಗೆ ಆಡಳಿತ ಮಣಿಯಬಾರದು ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ.

ವಾರದಲ್ಲಿ 2ನೇ ಘಟನೆ

ಅಮೆರಿಕದ ಪೂರ್ವ ಒಕ್ಲಾಹಾಮದಲ್ಲಿ (Oklahoma) ಮೇ 30ರಂದು ಉತ್ಸವದ ಮೇಲೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ. ಗುಂಡಿನ ದಾಳಿಗೆ ಬೆದರಿದ ಜನರು ಎಲ್ಲೆಂದರಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ. ಗುಂಡೇಟು ತಿಂದವರಲ್ಲಿ ಇಬ್ಬರು ಬಾಲಕರೂ ಸೇರಿದ್ದಾರೆ. ಏಳು ಮಂದಿಗೆ ಗಾಯಗಳಾಗಿವೆ. ಒಕ್ಲಾಹಾಮಾದ ತಾರ್​ಫ್ಟ್​ (Tarft) ಎಂಬಲ್ಲಿ ಸ್ಮರಣಾ ದಿನ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕೆಲವರ ನಡುವೆ ಮಾತಿನ ಚಕಮಕಿ, ಏರಿದ ದನಿಯ ವಾಗ್ವಾದ ನಡೆದಿದ್ದು ನಂತರ, ಮಧ್ಯರಾತ್ರಿಯ ವೇಳೆಗೆ ಗುಂಡಿನ ದಾಳಿ ನಡೆದಿದೆ. ಘಟನೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಒಕ್ಲಾಹಾಮ ತನಿಖಾ ದಳ ಮಾಹಿತಿ ನೀಡಿದೆ.

ಅಮೆರಿಕದ ಟೆಕ್ಸಾಸ್ ನಗರದ ಶಾಲೆಗೆ ಮೇ 25ರಂದು ನುಗ್ಗಿದ್ದ ದುಷ್ಕರ್ಮಿಯೊಬ್ಬ ಯದ್ವಾತದ್ವಾ ಗುಂಡು ಹಾರಿಸಿ, 19 ಮಕ್ಕಳೂ ಸೇರಿ 21 ಮಂದಿಯನ್ನು ಕೊಂದಿದ್ದ. ಗುಂಡಿನ ದಾಳಿ (Texas School Shooting) ನಡೆಸಿದವ ನಂತರ ಪೊಲೀಸರ ಗುಂಡಿಗೆ ಬಲಿಯಾಗಿದ್ದ. ಇನ್ನೂ 18ರ ಹರೆಯದಲ್ಲಿರುವ ಯುವಕ ಸಾಲ್ವಡೋರ್ ರಾಮೊಸ್​ ಆರೋಪಿ ಎಂದು ಪೊಲೀಸರು ಹೇಳಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *