ಅಮೆರಿಕದ ಒತ್ತಡಕ್ಕೆ ಮಣಿದು ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ಒಪೆಕ್ ರಾಷ್ಟ್ರಗಳ ಒಪ್ಪಿಗೆ | OPEC Plus Counties agrees to go ahead with oil output rise amid of Omicron Cases Increase


ಅಮೆರಿಕದ ಒತ್ತಡಕ್ಕೆ ಮಣಿದು ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ಒಪೆಕ್ ರಾಷ್ಟ್ರಗಳ ಒಪ್ಪಿಗೆ

ಒಪೆಕ್

ನವದೆಹಲಿ: ಕಚ್ಚಾ ತೈಲದ ಉತ್ಪಾದನೆಯನ್ನು ಹೆಚ್ಚಿಸಬೇಕೆಂಬ ಅಮೆರಿಕಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ಒತ್ತಡಕ್ಕೆ ಒಪೆಕ್ ಪ್ಲಸ್ ರಾಷ್ಟ್ರಗಳು ಮಣಿದಿವೆ. ಜನವರಿಯಿಂದ ನಾಲ್ಕು ಲಕ್ಷ ಬ್ಯಾರೆಲ್ ತೈಲ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿವೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ. ಆದರೆ, ಭಾರತದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯ ಬೆಲೆಗೆ ಅನುಗುಣವಾಗಿ ಇಳಿಕೆ ಮಾಡುತ್ತಾ ಅನ್ನೋದು ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.

ಕಚ್ಚಾ ತೈಲದ ಬೆಲೆಯ ಬಗ್ಗೆ ಅಮೆರಿಕಾ ಹಾಗೂ ಸೌದಿ ಅರೇಬಿಯಾದ ನಡುವೆ ನಡೆಯುತ್ತಿದ್ದ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ ಬೀಳುವ ಲಕ್ಷಣ ಗೋಚರಿಸಿದೆ. ಒಮಿಕ್ರಾನ್ ಪ್ರಭೇದದ ಹೊಸ ಕೊರೊನಾ ವೈರಸ್ ಪತ್ತೆಯಾಗಿರುವುದರಿಂದ ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರಗಳ ಒಕ್ಕೂಟವಾದ ಒಪೆಕ್ ಈಗ ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿದೆ.

ಸೌದಿ ಅರೇಬಿಯಾ ಮತ್ತು ರಷ್ಯಾ ನೇತೃತ್ವದ ತಂಡ ಜನವರಿಯಿಂದ ದಿನಕ್ಕೆ 400,000 ಬ್ಯಾರೆಲ್‌ಗಳಷ್ಟು ತೈಲ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿವೆ. ಈ ಮೂಲಕ ಈ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಗೆ ಆಶ್ಚರ್ಯ ಉಂಟು ಮಾಡಿವೆ. ತೈಲ ಉತ್ಪಾದಿಸುವ ರಾಷ್ಟ್ರಗಳಿಗೆ ಕೊರೊನಾ ವೈರಸ್, ಕಚ್ಚಾ ತೈಲದ ಬೆಲೆಗಳನ್ನು ದುರ್ಬಲಗೊಳಿಸಿದರೂ ಸಹ ಪರಿಸ್ಥಿತಿಗಳು ಬದಲಾದರೆ ನಿರ್ಧಾರವನ್ನು ಪರಿಶೀಲಿಸಲು ಯಾವುದೇ ಕ್ಷಣದಲ್ಲಿ ಮಂತ್ರಿಗಳು ಮತ್ತೆ ಸಭೆ ಸೇರಬಹುದು ಎಂದಿದೆ. ಒಪೆಕ್ ರಾಷ್ಟ್ರಗಳು ತಮ್ಮ ಮನಸ್ಸನ್ನು ಬದಲಾಯಿಸಲು ಬಾಗಿಲು ತೆರೆದಿಟ್ಟಿವೆ.

ವಾರಗಳ ಕಾಲ ಸೌದಿ ಅರೇಬಿಯಾ ಹಾಗೂ ಅಮೆರಿಕಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿತ್ತು. ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ತೈಲದ ಬೆಲೆಯನ್ನು ಕಡಿಮೆ ಮಾಡಬೇಕೆಂದು ಪಟ್ಟು ಹಿಡಿದಿದ್ದರು. ಇದಕ್ಕಾಗಿ ಕಚ್ಚಾ ತೈಲದ ಉತ್ಪಾದನೆಯನ್ನು ಹೆಚ್ಚಿಸಬೇಕೆಂದು ಒಪೆಕ್ ರಾಷ್ಟ್ರಗಳಿಗೆ ಒತ್ತಾಯಿಸಿದ್ದರು. ತಮ್ಮ ಒತ್ತಾಯಕ್ಕೆ ಒಪೆಕ್ ರಾಷ್ಟ್ರಗಳು ಮಣಿಯದೇ ಇದ್ದಾಗ, ಅಮೆರಿಕಾ, ಜಪಾನ್, ಭಾರತ, ಚೀನಾ, ಉತ್ತರ ಕೊರಿಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳು ತಮ್ಮ ತೈಲ ಸಂಗ್ರಹಾಗಾರಗಳಲ್ಲಿ ತುರ್ತುಕಾಲಕ್ಕೆ ಸಂಗ್ರಹಿಸಿಟ್ಟಿದ್ದ ತೈಲವನ್ನೇ ಜನರ ಬಳಕೆಗೆ ಬಿಡುಗಡೆ ಮಾಡಲು ನಿರ್ಧರಿಸಿದ್ದವು. ಭಾರತವು 5 ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಜನರ ಬಳಕೆಗೆ ಬಿಡುಗಡೆ ಮಾಡಲು ತೀರ್ಮಾನಿಸಿತ್ತು. ಇದಾದ ಬಳಿಕ ಈಗ ಒಪೆಕ್ ರಾಷ್ಟ್ರಗಳು ಕಚ್ಚಾ ತೈಲದ ಉತ್ಪಾದನೆ ಹೆಚ್ಚಿಸಲು ನಿರ್ಧರಿಸಿವೆ. ಒಮಿಕ್ರಾನ್ ಪ್ರಭೇದದ ಕಾರಣದಿಂದ ಜಗತ್ತಿನಲ್ಲಿ ಕೆಲ ರಾಷ್ಟ್ರಗಳು ಏನಾದರೂ ಲಾಕ್ ಡೌನ್ ವಿಧಿಸಿದರೆ ತೈಲದ ಬಳಕೆ, ಬೇಡಿಕೆಗಳೆರೆಡೂ ಕುಸಿಯುತ್ತದೆ. ಹೀಗಾಗಿ, ಈಗಲೇ ಕಚ್ಚಾತೈಲದ ಉತ್ಪಾದನೆ ಹೆಚ್ಚಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿವೆ.

ಅಮೆರಿಕಾದ ಅಧಿಕಾರಿಗಳು ಈ ವಾರ ಗಲ್ಫ್‌ನಲ್ಲಿದ್ದಾರೆ. ಅವರ ಮಾತುಕತೆಗಳ ಫಲಿತಾಂಶವು ಗೇಮ್ ಚೇಂಜರ್ ಆಗಿದೆ. ಈ ಮಾತುಕತೆಗಳು ತೈಲ ನೀತಿಯ ಆಚೆಗೂ ಪರಿಣಾಮ ಉಂಟು ಮಾಡುತ್ತವೆ ಎಂದು ತಜ್ಞರು ಹೇಳಿದ್ದಾರೆ. ಎರಡೂ ಕಡೆಯವರು ಯಾವ ರಿಯಾಯಿತಿ ಪಡೆದರೂ ಎಂದು ಬಹಿರಂಗಪಡಿಸಿಲ್ಲ. ಅಮೆರಿಕಾ ನಿಯೋಗದಲ್ಲಿ ಅಮೆರಿಕಾದ ಇಂಧನ ರಾಜತಾಂತ್ರಿಕ ಅಮೋಸ್ ಹೊಚ್‌ಸ್ಟೈನ್ ಮತ್ತು ಅಂತಾರಾಷ್ಟ್ರೀಯ ಆರ್ಥಿಕ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಸೇರಿದ್ದಾರೆ. ಈ ವಾರದ ಆರಂಭದಲ್ಲಿ, ಎರಡು ದೇಶಗಳು “ಇಂಧನ ಪರಿವರ್ತನೆಯಲ್ಲಿ ಹೂಡಿಕೆ ಮಾಡಲು ಪಾಲುದಾರರಾಗಲು ಮತ್ತು 21 ನೇ ಶತಮಾನದಲ್ಲಿ ಕ್ಲೀನ್ ಎನರ್ಜಿಯ ಉತ್ಪಾದನೆಯಲ್ಲಿ ಪಾಲುದಾರರಾಗುವ ” ಬಗ್ಗೆ ಚರ್ಚಿಸಲಾಗಿದೆ ಎಂದು ಹೊಚ್‌ಸ್ಟೈನ್ ಹೇಳಿದ್ದಾರೆ.

ಇಂಧನ ರಾಜತಾಂತ್ರಿಕತೆಯು ಅದರಾಚೆಗೆ ಎಲ್ಲಿಯವರೆಗೆ ವ್ಯಾಪಿಸಿದೆ ಎಂಬುದು ಸ್ಪಷ್ಟವಾಗಿಲ್ಲ. ಅಧಿಕಾರ ವಹಿಸಿಕೊಂಡಾಗಿನಿಂದ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್‌ನೊಂದಿಗೆ ನೇರವಾಗಿ ಮಾತನಾಡಲು, ವ್ಯವಹರಿಸಲು ನಿರಾಕರಿಸಿದ್ದಾರೆ. ಅವರ ತಂದೆ ಕಿಂಗ್ ಸಲ್ಮಾನ್ ಅವರೊಂದಿಗೆ ಮಾತ್ರ ಮಾತನಾಡಿದ್ದಾರೆ. ತೈಲ ನೀತಿಯ ಆಚೆಗೆ, ಎರಡು ದೇಶಗಳ ಅತಿಕ್ರಮಿಸುವ ಹಿತಾಸಕ್ತಿಗಳಲ್ಲಿ ಇರಾನ್ ಮತ್ತು ಅದರ ಪರಮಾಣು ಶಕ್ತಿಯನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ.

ಒಪೆಕ್‌ಗೆ ಹೆಚ್ಚಿನ ತೈಲ ಉತ್ಪಾದನೆಗೆ ಕರೆ ನೀಡಿದ್ದಕ್ಕೆ ಸ್ಪಂದಿಸದೇ ಇದ್ದಿದ್ದರಿಂದ ಜೋ ಬೈಡೆನ್ ಕಳೆದ ತಿಂಗಳು ಯುಎಸ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್‌ನಿಂದ ಲಕ್ಷಾಂತರ ಬ್ಯಾರೆಲ್‌ಗಳನ್ನು ಬಿಡುಗಡೆ ಮಾಡಿದ್ದರಿಂದ ಅಮೆರಿಕಾ-ಒಪೆಕ್ ಕೂಟದ ಸಂಬಂಧಗಳು ಹದಗೆಟ್ಟಿದ್ದವು. ಹಣದುಬ್ಬರ ಹೆಚ್ಚಾದರೇ, ಬ್ಯಾಂಕ್‌ಗಳು ಬಡ್ಡಿದರ ಹೆಚ್ಚಳ ಮಾಡ್ತಾವೆ. ಹೀಗಾಗಿ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್, ಭಾರತ, ಇಂಗ್ಲೆಂಡ್ ನಂಥ ದೇಶಗಳನ್ನು ತಮ್ಮ ಜೊತೆಗೆ ಸೇರಿಸಿಕೊಂಡು ಒಪೆಕ್ ರಾಷ್ಟ್ರಗಳ ಮೇಲೆ ತೈಲ ಬೆಲೆ ಇಳಿಕೆಗೆ ಒತ್ತಡ ಹೇರಿದ್ದರು.

OPEC ಪ್ರತಿನಿಧಿಗಳು ತಾವು ಕೂಡ ಕಚ್ಚಾ ತೈಲ ಬೆಲೆಗಳನ್ನು ಹೆಚ್ಚಿಸುವ ಮೂಲಕ ಪ್ರತಿಕ್ರಿಯಿಸಬಹುದು ಎಂದು ಎಚ್ಚರಿಸಿದ್ದರು. ಹೊಸ ಕೋವಿಡ್ ರೂಪಾಂತರವು ಕಳೆದ ವಾರ ಬಹಿರಂಗವಾದಾಗ ಮತ್ತು ತೈಲ ಬೆಲೆಯಲ್ಲಿ ಶೇ. 20ರಷ್ಟು ಕಡಿಮೆ ಮಾಡಲು ಸಹಾಯ ಮಾಡಿದಾಗ, ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿತಗೊಳಿಸಲು ಮತ್ತೊಂದು ಉತ್ತಮ ಕಾರಣವನ್ನು ನೀಡಿತ್ತು. ಆದರೆ ಗಲ್ಫ್‌ನಲ್ಲಿನ ಮಾತುಕತೆಯ ನಂತರ, ರಾಜಿ ಮಾಡಿಕೊಳ್ಳಲಾಯಿತು. ಇದು ಮಾಸ್ಕೋಗೆ (ರಷ್ಯಾಗೂ) ಸರಿಹೊಂದುತ್ತದೆ, ಅದು ಕೂಡ ತೈಲವನ್ನು ಪಂಪ್ ಮಾಡಲು ಉತ್ಸುಕವಾಗಿತ್ತು. ಕಾರ್ಟೆಲ್ ಕ್ರಮೇಣ ಪೂರೈಕೆಯನ್ನು ಹೆಚ್ಚಿಸುವ ತನ್ನ ಮೂಲ ಯೋಜನೆಗೆ ಅಂಟಿಕೊಳ್ಳಲು ಒಪ್ಪಿಕೊಂಡಿತು. ಆದರೆ ಮಾರುಕಟ್ಟೆಗಳು ಕೆಟ್ಟದ್ದಕ್ಕೆ ತಿರುವು ಪಡೆದರೆ ತೈಲ ಉತ್ಪಾದನೆ ಕಡಿತ ಮಾಡುವ ಷರತ್ತು ಹಾಕಿವೆ.

OPECನ ನಿರ್ಧಾರವನ್ನು ಅಮೆರಿಕಾ ಸ್ವಾಗತಿಸಿತು. ಸೌದಿ ಅರೇಬಿಯಾವನ್ನು ವಿಶೇಷವಾಗಿ ಉಲ್ಲೇಖಿಸಿತ್ತು. ಬೆಲೆಯ ಒತ್ತಡವನ್ನು ಪರಿಹರಿಸಲು ಸಹಾಯ ಮಾಡಲು ನಮ್ಮ ಪಾಲುದಾರರಾದ ಸೌದಿ ಅರೇಬಿಯಾ, ಯುಎಇ ಮತ್ತು ಇತರ ಒಪೆಕ್ ಮತ್ತು ಉತ್ಪಾದಕರೊಂದಿಗೆ ಇತ್ತೀಚಿನ ವಾರಗಳಲ್ಲಿ ನಿಕಟ ಸಮನ್ವಯವನ್ನು ನಾವು ಪ್ರಶಂಸಿಸುತ್ತೇವೆ ಎಂದು ಶ್ವೇತಭವನದ ವಕ್ತಾರ ಜೆನ್ ಪ್ಸಾಕಿ ಸಭೆಯ ನಂತರ ಹೇಳಿದರು.

ಸಭೆಗೆ ಹೋಗುವಾಗ ಮಂತ್ರಿಗಳು ಸಭೆಯ ಬಗ್ಗೆ ಮಾತನಾಡದೇ ಮೌನವಾಗಿದ್ದರು. ಸಭೆಯಲ್ಲಿ ಪ್ರತಿನಿಧಿಗಳು ತೈಲ ಬೇಡಿಕೆಯ ಮೇಲೆ ಓಮಿಕ್ರಾನ್ ಒಡ್ಡಿದ ಅನಿಶ್ಚಿತತೆಯನ್ನು ಒತ್ತಿ ಹೇಳಿದರು. ಅವರು ಕೊನೆಯ ಗಳಿಗೆಯಲ್ಲಿ ನಿರ್ಧಾರವನ್ನು ಮುಂದೂಡಿದರು.

ಜಾಗತಿಕ ತೈಲ ಮಾನದಂಡದ ಪ್ರಕಾರ, ಕಚ್ಚಾ ತೈಲ ದರವು OPEC + ಒಪ್ಪಂದದ ನಂತರ ಶೇ. 4.6ರಷ್ಟು ಕುಸಿದಿದೆ. ಆದರೆ, ವ್ಯಾಪಾರಿಗಳು ಒಪ್ಪಂದದಲ್ಲಿ ಹೊರಬರುವ ಷರತ್ತಿನ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದರಿಂದ ಆ ನಷ್ಟವನ್ನು ಚೇತರಿಸಿಕೊಂಡರು. ಬ್ರೆಂಟ್ ಒಂದು ಬ್ಯಾರೆಲ್‌ಗೆ ಶೇ. 2.3ರಷ್ಟು ಅಂದರೆ 70.48 ಡಾಲರ್​ಗೆ ಏರಿಕೆ ಕಂಡು ದಿನದ ವಹಿವಾಟು ಅನ್ನು ಕೊನೆಗೊಳಿಸಿತು.

ಒಪೆಕ್ ಪ್ಲಸ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸುವ ನಿರ್ಧಾರವನ್ನು ಯಾವುದೇ ಎಚ್ಚರಿಕೆ ನೀಡದೇ ಬದಲಾವಣೆ ಮಾಡಬಹುದು ಎಂದು ಹೇಳಿವೆ. 2022ರ ಜನವರಿ 4ರಂದು ಒಪೆಕ್ ಪ್ಲಸ್ ರಾಷ್ಟ್ರಗಳ ಸಭೆ ನಡೆಯಲಿದೆ.

TV9 Kannada


Leave a Reply

Your email address will not be published. Required fields are marked *