ಕೊರೊನಾ ತಂದಿಡ್ತಾ ಇರೋ ಸಂಕಷ್ಟ ಊಹೆ ಮಾಡೋಕೂ ಆಗ್ತಾ ಇಲ್ಲ. ಇದು ಇಡೀ ಜಗತ್ತಿನಲ್ಲೇ ಅಲ್ಲೋಲ ಕಲ್ಲೋಲ ಎಬ್ಬಿಸಿ ಬಿಟ್ಟಿದೆ. ಒಂದು ಕಡೆ ತಾತ್ಕಾಲಿಕ ಆರ್ಥಿಕ ಸಂಕಷ್ಟ ತಂದೊಡ್ಡಿದ್ರೆ, ಮತ್ತೊಂದು ಕಡೆ ದೀರ್ಘಕಾಲೀನ ಸಮಸ್ಯೆಗಳನ್ನು ಸೃಷ್ಟಿಸ್ತಾ ಇದೆ ಕೊರೊನಾ.

ವಿಶ್ವದಲ್ಲಿ ಕೋಟಿ ಕೋಟಿ ಜನರಿಗೆ ಕೊರೊನಾ ಬಂದಿದೆ. ಲಕ್ಷ ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೂಡ ವಿಶ್ವದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದೇ ಇದೆ. ಈ ಕೊರೊನಾ ಯಾವಾಗ ಹೋಗುತ್ತಪ್ಪಾ ಅನ್ನೋ ಚಿಂತೆ ಕಾಡ್ತಾ ಇದೆ. ಆದ್ರೆ ಈ ಕೊರೊನಾ ಸೃಷ್ಟಿಸ್ತಾ ಇರೋ ಭಯ, ಕೊರೊನಾ ಸೃಷ್ಟಿಸ್ತಾ ಇರೋ ದೀರ್ಘಕಾಲೀನ ಸಮಸ್ಯೆಗಳನ್ನು ಮಾತ್ರ ಊಹಿಸಿಕೊಳ್ಳೋದಕ್ಕೂ ಆಗ್ತಾ ಇಲ್ಲ. ಅಷ್ಟೊಂದು ಸಮಸ್ಯೆಗಳನ್ನ ಸೃಷ್ಟಿಸ್ತಾ ಇದೆ ಕೊರೊನಾ.

ಕೊರೊನಾ ಕಂಟ್ರೋಲ್ ಗೆ ಲಾಕ್ ಡೌನ್ ಮಾಡಿದ್ರಿಂದ ಆರ್ಥಿಕ ನಷ್ಟವಾಗಿರಬಹುದು. ಕೋಟ್ಯಾಂತರ ಜನರ ಬದುಕು ಕಷ್ಟವಾಗಿರಬಹುದು. ಆದ್ರೆ ಇವತ್ತಲ್ಲ ನಾಳೆ ಇದು ಸುಧಾರಿಸುತ್ತೆ. ಜನ ಜೀವನ ಸಹಜ ಸ್ಥಿತಿಗೆ ಬಂದೇ ಬರುತ್ತೆ. ಆದ್ರೆ ಕೊರೊನಾದಿಂದ ತಮ್ಮವರನ್ನು ಕಳೆದುಕೊಂಡವರ ಕಷ್ಟ ಮಾತ್ರ ಕರಗುವುದಿಲ್ಲ. ನಿಮ್ಮ ಮುಂದೆ ಒಂದು ಗಂಭೀರವಾದ ವಿಚಾರವನ್ನು ಇಡ್ತಾ ಇದ್ದೇವೆ. ಕೊರೊನಾದಿಂದ ಲಕ್ಷಾಂತರ ಮಕ್ಕಳು ಅನಾಥರಾಗ್ತಾ ಇದಾರೆ. ಇದು ಹಲವು ರಾಷ್ಟ್ರಗಳನ್ನು ಕಂಗೆಡಿಸಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಬಿಟ್ಟು ತಂದೆ-ತಾಯಿ ಬಾರದ ಲೋಕಕ್ಕೆ ಹೊರಟು ಹೋದರೆ ಮಕ್ಕಳ ಗತಿ ಏನಾಗಬೇಡ. ಯೋಚಿಸಿ.

ಸಾಂದರ್ಭಿಕ ಚಿತ್ರ

 ಅಮೆರಿಕಾದಲ್ಲಿ 40 ಸಾವಿರ ಮಕ್ಕಳು ಅನಾಥ
ಎಷ್ಟೋ ಮಕ್ಕಳು ತಮ್ಮ ತಂದೆಯನ್ನೋ ತಾಯಿಯನ್ನೋ ಕಳೆದುಕೊಂಡು ಬಿಟ್ಟಿದ್ದಾರೆ. ಕೆಲವು ಮಕ್ಕಳಿಗಂತೂ ತಂದೆ-ತಾಯಿ ಇಬ್ಬರೂ ಇಲ್ಲ. ಕೊರೊನಾ ಇಬ್ಬರನ್ನೂ ಬಲಿ ತೆಗೆದುಕೊಂಡು ಬಿಟ್ಟಿದೆ. ಅಮೆರಿಕಾ ಈ ಬಗ್ಗೆ ಒಂದು ಸರ್ವೇ ಮಾಡಿದೆ. ಈವರೆಗೆ ಕೊರೊನಾದಿಂದಾಗಿ ಅನಾಥರಾದ ಮಕ್ಕಳ ಸಂಖ್ಯೆ ಬರೋಬ್ಬರಿ 45 ಸಾವಿರವಂತೆ. ಒಂದೇ ದೇಶದಲ್ಲಿ ಇಷ್ಟು ಸಂಖ್ಯೆಯ ಮಕ್ಕಳು ಅನಾಥರಾಗಿದ್ದಾರೆ ಅಂದ್ರೆ ಇನ್ನು ವಿಶ್ವದಲ್ಲಿ ಅದೆಷ್ಟು ಲಕ್ಷ ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡಿರಬಹುದು ಯೋಚಿಸಿ.

ವಿಶ್ವದಲ್ಲೇ ಅತಿ ಹೆಚ್ಚು ಜನ ಸೋಂಕಿಗೆ ಒಳಗಾದ ದೇಶ ಅಮೆರಿಕಾ. ಸೋಂಕಿತರ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆ ಕಾಣಿಸಿದರೂ ಅಲ್ಲಿ ಸಾವಿನ ಪ್ರಮಾಣ ಕಡಿಮೆ ಆಗಿಲ್ಲ. ಇದೀಗ ಅಮೆರಿಕದಲ್ಲಿ ಕೋವಿಡ್ ನಿಂದ ಮೃತರಾದವರ ಸಂಖ್ಯೆ 6 ಲಕ್ಷಕ್ಕೆ ತಲುಪಿದೆ. ಈ ಮೂಲಕ ಮತ್ತೊಂದು ಕರಾಳ ದಾಖಲೆ ಅಮೆರಿಕಕ್ಕೆ ಒಲಿದಿದೆ. ಅಲ್ಲದೆ ಇದರ ಜೊತೆಗೆ ಇಷ್ಟು ಜನರ ಸಾವಿನೊಂದಿಗೆ ಅಮೆರಿಕದಲ್ಲಿ ಕನಿಷ್ಠ 45 ಸಾವಿರ ಮಕ್ಕಳು ಇದೀಗ ತಮ್ಮ ತಂದೆ-ತಾಯಿ ಮತ್ತು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ ಎಂಬ ಮತ್ತೊಂದು ದುರಂತ ಕಥೆಯೂ ಅಮೆರಿಕದ ಜಾಮ ಪೀಡಿಯಾಟ್ರಕ್ ಸಂಸ್ಥೆಯಿಂದ ಹೊರಬಿದ್ದಿದೆ. 6 ಲಕ್ಷ ಸಾವನ್ನು ಕಂಡಿರುವ ಅಮೆರಿಕದಲ್ಲಿ  45 ಸಾವಿರ ಅನಾಥ ಮಕ್ಕಳು ಎಂದರೆ, 35 ಲಕ್ಷಕ್ಕೂ ಹೆಚ್ಚು ಸಾವನ್ನು ನೋಡಿರುವ ವಿಶ್ವದಲ್ಲಿ ಎಷ್ಟು ಅನಾಥ ಮಕ್ಕಳಿರಬಹುದು ಊಹಿಸಿ.

ಸಾಂದರ್ಭಿಕ ಚಿತ್ರ

ಅಮೆರಿಕಾದಲ್ಲಿ ಕೇಸ್ ಗಳು ಹೆಚ್ಚಾಗುತ್ತಿದ್ದಂತೆ ತಡೆಗಟ್ಟುವ ನಿರ್ಬಂಧಗಳನ್ನು ಜಾರಿ ಮಾಡಿದ್ದರು, ಪಾಸಿಟಿವ್ ರೇಟ್ ನಲ್ಲಿ ಗರಿಷ್ಟ ಮಟ್ಟ ತಲುಪಿದ್ದು ಅಮೆರಿಕ ಪಾಲಿಗೆ ಸೋಂಕಿತರ ಪಟ್ಟಿಯಲ್ಲಿ ಇನ್ನೂ ಮೊದಲ ಸ್ಥಾನದಲ್ಲಿ ಇರಿಸಿದೆ. ಅದರ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚಿದ್ದು ಸಾಲು ಸಾಲು ಶವ ಸಂಸ್ಕಾರ ಮಾಡಿದ್ದೂ ಇದೆ. ಈ ಕೋವಿಡ್ ಸಣ್ಣ ಸಣ್ಣ ವಯಸ್ಸಿನ ಯುವಕರನ್ನು, ಮದುವೆ ಆದ ನವ ಜೋಡಿಗಳನ್ನು ಯಾರನ್ನೂ ಬಿಡದೆ ಮೃತ್ಯುವಿನ ದವಡೆಗೆ ನೂಕಿ ಬಿಟ್ಟಿದೆ. ಆದರೆ ಇಲ್ಲಿ ಮುಂದೇನು ಎನ್ನುವ ಯೋಚನೆಯಲ್ಲಿ ಕಂಗಾಲಾಗಿ ಕುಳಿತಿರುವುದು ಮಾತ್ರ ಹೆತ್ತ ತಂದೆ-ತಾಯಿಯನ್ನು ಕಳೆದುಕೊಂಡು ಇರುವ ಮುದ್ದು ಮಕ್ಕಳು.

ಏಷ್ಯಾದ ದೇಶಗಳಲ್ಲಿ ಚಾಲ್ತಿಯಲ್ಲಿರುವ ಅವಿಭಕ್ತ ಕುಟುಂಬಕ್ಕೆ ವಿರುದ್ಧವಾದ ಸಣ್ಣ ಕುಟುಂಬ ಪದ್ಧತಿಯೇ ಅಮೆರಿಕದಲ್ಲಿ ಹೆಚ್ಚು. ಈ ವಿಷಯವೇ ಇದೀಗ ಅಮೆರಿಕದ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದೆ. ಒಂದು ನ್ಯೂಕ್ಲಿಯರ್ ಫ್ಯಾಮಿಲಿಯಲ್ಲಿ ದಂಪತಿ ಬಿಟ್ಟರೆ ಅವರ ಮಕ್ಕಳು ಮಾತ್ರ ಇರುತ್ತಾರೆ. ಆದರೆ ಆ ದಂಪತಿಗಳು ಕಣ್ಮರೆಯಾದಾಗ, ಇಂದು ತಮ್ಮವರು ಯಾರೂ ಇಲ್ಲದೆ ಮಕ್ಕಳು ಕಂಗಾಲಾಗಿ ಹೋಗಿದ್ದಾರೆ. ಹಲವು ಮಕ್ಕಳಿಗೆ ತಮ್ಮ ಪೋಷಕರು ಸಾವನ್ನಪ್ಪಿರುವ ವಿಷಯ ಕೂಡಾ ಗೊತ್ತಿಲ್ಲ ಎನ್ನುವದು ವಿಷಾದಕರ ಮಾಹಿತಿ. ಇಂಥ ಪರಿಸ್ಥಿತಿಯಿಂದ ಮಕ್ಕಳನ್ನು ಮತ್ತೆ ಸಹಜ ಸ್ಥಿತಿಗೆ ತರುವುದು ಬಲು ಸಂಕಷ್ಟದ ಕೆಲಸ ಎಂದು ತಜ್ಞರು ಸಹ ಆತಂಕ ವ್ಯಕ್ತಪಡಿಸಿದ್ದಾರೆ.

ಮಕ್ಕಳ ನೆರವಿಗೆ ಕ್ರಮ

ಮತ್ತೊಂದೆಡೆ ಕೆಲವು ಮಕ್ಕಳಿಗೆ ತಮ್ಮ ಪೋಷಕರು ಸಾವಿಗೀಡಾಗಿದ್ದಾರೆ ಎಂಬ ವಿಚಾರವೇ ಗೊತ್ತಿಲ್ಲ. ಇನ್ನೂ ಹಲವು ಮಕ್ಕಳು ತಮ್ಮ ಪೋಷಕರ ಮೊಬೈಲ್‌ ಸಂಖ್ಯೆಗೆ ಸಂದೇಶಗಳನ್ನು ಕಳಿಸುತ್ತಿದ್ದಾರೆ. ತಂದೆ, ತಾಯಿ, ಅಣ್ಣ, ತಂಗಿ, ಚಿಕ್ಕಮ್ಮ, ಚಿಕ್ಕಪ್ಪ ಸೇರಿದಂತೆ ಇನ್ನಿತರ ಪ್ರೀತಿ-ಪಾತ್ರರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಅವರನ್ನು ಪುನಃ ಶಾಲೆಗೆ ಕರೆತರುವುದೇ ಮಾರ್ಗವಾಗಿದೆ ಎಂದು ಅಮೆರಿಕದ ಮಕ್ಕಳ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಪೋಷಕರ ಕಳೆದುಕೊಂಡ ಆಘಾತದಿಂದ ಮಕ್ಕಳು ಹೊರಬರದಿದ್ದರೆ ಕಲಿಕಾ ಸಾಮರ್ಥ್ಯ ಕುಸಿಯಲಿದೆ. ಹೀಗಾಗಿ ಶಾಲೆಗಳು ಮತ್ತು ಖಾಸಗಿ ಮಾನಸಿಕ ಸಲಹೆಗಾರರು ಇಂಥ ಮಕ್ಕಳ ನೆರವಿಗೆ ನಿಲ್ಲುವಂತೆ ಅಮೆರಿಕ ಸರ್ಕಾರ ಎನ್‌.ಜಿ.ಒ.ಗಳಿಗೆ ಕರೆ ನೀಡಿದೆ.

ಈ ಸಮಸ್ಯೆ ಅಮೆರಿಕದಲ್ಲಿ ಮಾತ್ರವಲ್ಲ. ಕೋವಿಡ್ ಎರಡನೆ ಅಲೆ ಭಾರತಕ್ಕೆ ಅಪ್ಪಳಿಸಿದಾಗಿನಿಂದಲೂ ಎಲ್ಲೆಡೆ ಸಾವು ಸಂಭವಿಸುತ್ತಲೇ ಇದೆ. ಇದರಿಂದ ಭಾರತದಲ್ಲಿ ಸಹ ಹೆಚ್ಚೆಚ್ಚು ಮಕ್ಕಳು ಅನಾಥರಾಗ್ತಾ ಇದಾರೆ. ಈಗಾಗಲೆ ಇಂಡಿಯಾದಲ್ಲಿ ಸಾವಿರ ಸಾವಿರ ಮಕ್ಕಳು ಕೋವಿಡ್ ನಿಂದ ತಮ್ಮ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಇನ್ನು ಕೆಲವರು ಸಿಂಗಲ್ ಪೇರೆಂಟ್ ಆಗಿದ್ದಾರೆ. ಈ ಮಕ್ಕಳನ್ನು ಕಾಪಾಡುವುದು ಹೇಗೆ ? ಅನಾಥ ಮಕ್ಕಳ ಪಾಲಿಗೆ ಮುಂದೇನು ಗತಿ ಎನ್ನುವ ಸಹಜ ಬೇಸರದ ಪ್ರಶ್ನೆ ನಮ್ಮ ಮುಂದಿದೆ. ಭಾರತದಲ್ಲಿ ತುಂಬು ಕುಟುಂಬಗಳು ಹೆಚ್ಚು. ಹೇಗೊ ಮಕ್ಕಳಿಗೆ ಪೋಷಕರು ಸಿಗುತ್ತಾರೆ. ಆದರೂ ಅನಾಥ ಮಕ್ಕಳ ಪರದಾಟ ತಡೆಯಲಾರದು. ಈ ಮಕ್ಕಳನ್ನು ನೋಡಿಕೊಳ್ಳುವ ಗಾರ್ಡಿಯನ್ ಗೂ ಹೊಸದೊಂದು ಹೊರೆ ಆಗಿಬಿಡಬಹುದು. ಈ ಕೊರೊನಾ ತಂದೊಡ್ಡಿದ ಸಂಕಷ್ಟ ಇದು. ಇದಕ್ಕೆ ಪರಿಹಾರ ಸರ್ಕಾರದ ಜವಾಬ್ದಾರಿಯಾಗಿದೆ.

ಮಕ್ಕಳ ರಕ್ಷಣೆ ಹೇಗೆ?
ಅಮೆರಿಕನ್ನರು ಅನಾಥರಾದ ಮಕ್ಕಳನ್ನು ಕಾಪಾಡುವುದಕ್ಕೆ ಎಲಿಜಿಬಲ್ ದಂಪತಿಗಳಿಗೆ ದತ್ತು ಸ್ವೀಕರಿಸಲು ಕರೆ ನೀಡಿದೆ. ಇನ್ನುಳಿದ ಎಷ್ಟೋ ಮಕ್ಕಳಿಗೆ ಅಮೆರಿಕ ಸರ್ಕಾರ ಸ್ಕೂಲಿಂಗ್ ಮುಗಿಸಿ ಯಾವುದಾದರೊಂದು ಕೌಶಲ್ಯ ರೂಢಿಸಿಕೊಳ್ಳುವವರೆಗೆ ಸರ್ಕಾರದ ಜವಾಬ್ದಾರಿ ಎನ್ನುವಂತಹ ನಿರ್ಧಾರ ಮಾಡಿದೆ. ಮಕ್ಕಳು ಎಂದರೆ ಪಾಲನೆ ಪೋಷಣೆ ಹೆಚ್ಚಿರುತ್ತದೆ. ಈ ಕಾರಣದಿಂದ ಆದಷ್ಟು ಮಕ್ಕಳನ್ನು ದೇಶದ ಹಲವರಿಗೆ ದತ್ತು ನೀಡುವುದಾಗಿ ಪ್ಲಾನ್ ಮಾಡಿದ್ದಾರೆ.

ಮಕ್ಕಳ ಕಳ್ಳಸಾಗಾಣಿಕೆ ಭೀತಿ
ಇನ್ನು ಭಾರತದಲ್ಲಿ ಕೋವಿಡ್ನಿಂದ ಅನಾಥರಾದ ಮಕ್ಕಳು ಇನ್ನೊಂದು ರೀತಿಯ ಸಮಸ್ಯಗೆ ಒಳಗಾಗಿದ್ದಾರೆ. ಅದು ಮಕ್ಕಳ ಕಳ್ಳ ಸಾಗಾಣಿಕೆ. ಈ ಆಘಾತಕಾರಿ ಮಾಹಿತಿ ತಮಿಳುನಾಡಿನ ತಜ್ಞರೊಬ್ಬರು ಹೊರ ಹಾಕಿದ್ದಾರೆ. ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಬಗ್ಗೆ ಸೋಷಿಯ್ ಮೀಡಿಯಾದಲ್ಲಿ ಸಂದೇಶಗಳು ಹೊರ ಬಂದಿದ್ದವು. ಈ ಸಂದೇಶವನ್ನು ಹಿಡಿದು ಮಕ್ಕಳ ಕಳ್ಳರು, ಆ ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿ ಮಕ್ಕಳನ್ನು ಕಳ್ಳಸಾಗಣಿಕೆ ಮಾಡಲು ಪ್ಲಾನ್ ಮಾಡುತ್ತಿದ್ದಾರೆ, ಇದರಿಂದ ಜೋಪಾನವಾಗಿ ಇರಬೇಕೆಂದು ಸಲಹೆ ನೀಡಿದ್ದಾರೆ.

ಭಾರತದಲ್ಲಿ ಕೈಗೊಂಡಿರೋ ಕ್ರಮವೇನು?
ಭಾರತದಲ್ಲಿ ಅನಾಥರಾದ ಮಕ್ಕಳ ಪಾಲನೆ ಪೋಷಣೆ ಬಹುಮುಖ್ಯ ಎನ್ನುವುದನ್ನು ಭಾರತ ಸರ್ಕಾರ ಪರಿಗಣಿಸಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಯಾ ರಾಜ್ಯ ಸರ್ಕಾರದ ಮಕ್ಕಳ ಕಲ್ಯಾಣ ಇಲಾಖೆಗೆ ಸೂಚನೆ ನೀಡಿದೆ.

  • ಅದರಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಕೋವಿಡ್ ಸೋಂಕಿನಿಂದ ಪಾಲಕರನ್ನು ಕಳೆದುಕೊಂಡ ನಿರ್ಗತಿಕ ಮಕ್ಕಳಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಸಚಿವಾಲಯ ಪ್ರಕಟಣೆ ಹೊರಡಿಸಿದೆ.
  • ಈ ನಿಯಮಾವಳಿಗಳ ಪ್ರಕಾರ ಯಾವುದೇ ಮಗು ಕೊರೊನಾ ಕಾರಣಕ್ಕೆ ಹೆತ್ತವರನ್ನು ಅಥವಾ ಪಾಲಕರಿಬ್ಬರನ್ನೂ ಕಳೆದುಕೊಂಡಲ್ಲಿ, ಆ ಮಕ್ಕಳನ್ನು 24 ಗಂಟೆಯ ಒಳಗಾಗಿ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗಿಸಬೇಕು.
  • ಇದಾದ ಬಳಿಕ ಮಕ್ಕಳಿಗೆ ಪೋಷಕ ಸೇವೆ ಹಾಗೂ ವಸತಿ ಕಲ್ಪಿಸಲಾಗುವುದು ಎಂದು ಸಚಿವಾಲಯ ಸ್ಪಷ್ಟ ಪಡಿಸಿದೆ.
  • ಅಲ್ಲದೆ ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ಮೇಲೆ ನಿಗಾ ಇಡಲು ಮಕ್ಕಳ ಕಲ್ಯಾಣ ನಿಧಿಗೆ ಸೂಚನೆ ನೀಡಿದೆ.

ಆಂಧ್ರ ಪ್ರದೇಶದಲ್ಲಿ ಈ ವಿಷಯವಾಗಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಹತ್ತರವಾದ ಘೋಷಣೆಯನ್ನು ಮಾಡಿದ್ದಾರೆ. ಈ ರೀತಿ ಅನಾಥರಾದ ಮಕ್ಕಳ ಹೆಸರಲ್ಲಿ 10 ಲಕ್ಷ ರೂಪಾಯಿಯ ಫಿಕ್ಸೆಡ್ ಡೆಪಾಸಿಟ್ ಮಾಡಲಾಗುತ್ತಿದೆ. ಅಲ್ಲದೆ ಅದರಲ್ಲಿ ಬರುವ ಮಾಸಿಕ ಬಡ್ಡಿಯನ್ನು ಆ ಅನಾಥ ಮಗುವಿನ ಪಾಲನೆ ಮಾಡುವವರಿಗೆ ಕೊಡಲು ನಿರ್ಧಾರ ಮಾಡಿದ್ದಾರೆ. ಇನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಈ ಮಕ್ಕಳಿಗಾಗಿ ಆರು ಅಧಿಕಾರಿಗಳ ಟೀಂ ರಚನೆ ಮಾಡಿದೆ. ಈ ಅನಾಥ ಮಕ್ಕಳಿಗೆ ತಮ್ಮ 21 ವಯಸ್ಸಿನ ವರೆಗೆ ಮುಖ್ಯಮಂತ್ರಿ ಕೋವಿಡ್ ಜನ್ ಕಲ್ಯಾಣ್ ಯೋಜನೆ ಅಡಿ 1500ರೂಗಳ ಪಿಂಚಿಣೆ ಘೋಷಣೆ ಮಾಡಿದೆ. ಅಲ್ಲದೆ ಪಿ.ಹೆಚ್.ಡಿ ಮಾಡುವವರೆಗೂ ಆ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಎನ್ನುವ ಒಳ್ಳೆ ಹೆಜ್ಜೆ ಹಿಡಿದಿದೆ.

ಇನ್ನು ಕರ್ನಾಟಕದಲ್ಲೂ ಇಂತಹ ನಿರ್ಗತಿಕ ಮಕ್ಕಳಿಗಾಗಿಯೇ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದರ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಮಹತ್ವದ ಘೋಷಣೆ ಮಾಡಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಅನಾಥವಾದ ಮಕ್ಕಳ ಪೋಷಣೆಗೆ ಸರ್ಕಾರ ಸಿದ್ದವಾಗಿದೆ, ಬಾಧಿತ ಮಕ್ಕಳ ವಸತಿಗಾಗಿ ರೆಸಿಡೆನ್ಸಿಯಲ್ ಶಾಲೆ ಮೀಸಲಿಡಲಾಗುತ್ತದೆ. 6 ವರ್ಷದೊಳಗಿನ ಮಕ್ಕಳ ಆರೈಕೆಗೆ ವಿಶೇಷ ಕ್ವಾರೆಂಟೈನ್ ಸೌಲಭ್ಯ, ವಿಶೇಷ ದತ್ತು ಸಂಸ್ಥೆಗಳನ್ನು ಗೊತ್ತು ಪಡಿಸಲಾಗುವುದು. ಅಲ್ಲದೆ ಪುನರ್ವಸತಿಗೆ ಸರ್ಕಾರ 1098 ಎಂಬ ಸಹಾಯವಾಣಿ ತಂದಿದ್ದು, ಹಿರಿಯ ಐಎಎಸ್ ಅಧಿಕಾರಿ ಮೋಹನ್ ರಾಜ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದ್ದು, ಇಂಥ ಮಕ್ಕಳಿಗೆ ಕೌಟುಂಬಿಕ ವಾತಾವರಣ ಒದಗಿಸುವುದು ಸಚಿವೆಯಾಗಿ ನನ್ನ ಹಾಗೂ ನಮ್ಮ ಇಲಾಖೆ ಹಾಗೂ ನಮ್ಮ ಸರ್ಕಾರದ ಕರ್ತವ್ಯ ಎಂದಿದ್ದಾರೆ.

ಈ ಅನಾಥ ಮಕ್ಕಳ ಪೋಷಣೆ ಜೊತೆಗೆ ದೇಶದೆಲ್ಲೆಡೆ ಮೂರನೇ ಅಲೆಯ ಭೀತಿ ಎದುರಾಗಿದೆ. ಈ ಕಾರಣದಿಂದ ಎಲ್ಲ ರಾಜ್ಯಗಳಲ್ಲೂ ಮಕ್ಕಳ ವಿಶೇಷ ಪಿಡಿಯಾಟ್ರಿಕ್ ಕೋವಿಡ್ ಕೇರ್ ಸೆಂಟರ್ ಗಳು ಸಿದ್ದವಾಗುತ್ತಿದೆ. ಸೋಂಕು ನಿಯಂತ್ರಣಕ್ಕಾಗಿ ಶಾಲೆಗಳಲ್ಲೂ ಎಲ್ಲರೂ ಮಾಸ್ಕ್‌ ಧರಿಸುವಿಕೆ, ವಿದ್ಯಾರ್ಥಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ನಡೆದಿದೆ. ಅಲ್ಲದೆ ಅನಾಥ ಮಕ್ಕಳಿಗೆ ತರಗತಿಗಳಲ್ಲೇ ಮಧ್ಯಾಹ್ನದ ಊಟ ಮಾಡುವ ವ್ಯವಸ್ಥೆಗಳು ಸಿದ್ದವಾಗಿದೆ ಆದರೆ ಈ ಎಲ್ಲಾ ವಿದ್ಯಮಾನಗಳು ಅನಾಥ ಮಕ್ಕಳಲ್ಲಿ ಆತಂಕ ಮತ್ತು ಖಿನ್ನತೆಯನ್ನು ದೂರವಾಗಿಸಲು ಎಂದು ಮಕ್ಕಳ ತಜ್ಞರು ಹೇಳಿದ್ದಾರೆ.

ಈ ವೈರಸ್ ತನ್ನ ರೂಪವನ್ನು ಎಲ್ಲೆಡೆ ಪ್ರಸರಿಸುವುದಲ್ಲದೆ ಮುಗ್ಧ ಮಕ್ಕಳನ್ನು ಅನಾಥರನ್ನಾಗಿ ಮಾಡಿದೆ. ಸರ್ಕಾರ ಏನೇ ಘೋಷಣೆಗಳನ್ನು ಮಾಡಿದರೂ ಅಂತಹ ಮಕ್ಕಳಿಗೆ ಫೋಷಕ ಪ್ರೀತಿಯನ್ನು ತುಂಬಿಸಲು ಕಷ್ಟ. ಈ ಎಲ್ಲ ಅನಾಥ ಮಕ್ಕಳು ಧೈರ್ಯದಿಂದ ಇರಲಿ, ಸರ್ಕಾರದ ಅನುದಾನಗಳು ಸರಿಯಾದ ಸಮಯಕ್ಕೆ ಆ ಮಕ್ಕಳಿಗೆ ಸಿಗಲಿ ಎಂದು ಪ್ರಾರ್ಥಿಸೋಣ.

The post ಅಮೆರಿಕಾದಲ್ಲಿ ಕೊರೊನಾದಿಂದ ಅನಾಥರಾದ ಮಕ್ಕಳ ಸಂಖ್ಯೆ 45,000 appeared first on News First Kannada.

Source: newsfirstlive.com

Source link